ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು ಷಡಕ್ಷರಿಗೆ ಕೈಕೊಟ್ಟ ಕಾಂಗ್ರೆಸ್‌!

ಮುಖ್ಯಮಂತ್ರಿ, ಜಯಚಂದ್ರ ಕೈ ಮೇಲು, ಸಂಸದ, ಕೆಪಿಸಿಸಿ ಅಧ್ಯಕ್ಷರ ಮಾತಿಗೂ ಕಿಮ್ಮತ್ತು, ಹೊಸಬರಿಗೆ ಮಣೆ
Last Updated 16 ಏಪ್ರಿಲ್ 2018, 11:26 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಎಲ್ಲ ಹನ್ನೊಂದು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಪಟ್ಟಿ ಬಿಡುಗಡೆಯಾಗಿದೆ. ಅಚ್ಚರಿದಾಯಕ ಬೆಳವಣಿಗೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಬಿ.ನಂಜಾಮರಿ ಅವರಿಗೆ ಟಿಕೆಟ್‌ ಸಿಕ್ಕಿದೆ. ಹಾಲಿ ಶಾಸಕ ಕೆ.ಷಡಕ್ಷರಿ ಟಿಕೆಟ್‌ ವಂಚಿತರಾಗಿದ್ದಾರೆ.ಷಡಕ್ಷರಿಗೆ ಟಿಕೆಟ್ ತಪ್ಪಿದ್ದಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗರು ತಿಪಟೂರಿನಲ್ಲಿ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಪಟ್ಟಿಯನ್ನು ಗಮನಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಜಿಲ್ಲೆಯ ಟಿಕೆಟ್ ಹಂಚಿಕೆಯಲ್ಲಿ ತಮ್ಮದೇ ಆದ ಪ್ರಭಾವ ಬೀರಿರುವುದು ದಟ್ಟವಾಗಿ ಕಾಣುತ್ತದೆ. ಎಲ್ಲರೂ ಅವರವರ ಹಿಂಬಾಲಕರಿಗೆ ಟಿಕೆಟ್‌ ಕೊಡಿಸುವ ಮೂಲಕ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ.

ಹಾಗೆ ನೋಡಿದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸ್ವಲ್ಪ ಹಿನ್ನಡೆಯಾದಂತೆ ಕಂಡುಬಂದಿದೆ. ತಿಪಟೂರು ಶಾಸಕ ಕೆ.ಷಡಕ್ಷರಿ ಅವರಿಗೆ ಟಿಕೆಟ್‌ ತಪ್ಪಿರುವ ಹಿಂದೆ ಮುಖ್ಯಮಂತ್ರಿ ಕೈವಾದ ಇದೆ. ಕಾಂಗ್ರೆಸ್‌ ಪಕ್ಷ, ಮುಖ್ಯಮಂತ್ರಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಷಡಕ್ಷರಿ ಸೋಲುತ್ತಾರೆ. ಹೀಗಾಗಿ ಅವರಿಗೆ ಟಿಕೆಟ್‌ ಇಲ್ಲ ಎಂಬ ಗುಸುಗಸು ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಅವರ ಅನಾರೋಗ್ಯ ವಿಷಯವೂ ಮುನ್ನೆಲೆಗೆ ಬಂದಿತ್ತು. ಷಡಕ್ಷರಿಗೆ ಟಿಕೆಟ್‌ ತಪ್ಪಿದರೆ ಅವರು ಸೂಚಿಸಿದವರಿಗೆ ಕೊಡಬಹುದು. ಇಲ್ಲವೇ ತಿಪಟೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಶಿಧರ್‌ ಅವರಿಗೆ ಸಿಗಬಹುದು. ಇದಕ್ಕೆ ಕೆಪಿಸಿಸಿ ಅಧ್ಯಕ್ಷರು, ಸಂಸದರು ಬಲವಾಗಿ ನಿಲ್ಲುತ್ತಾರೆ ಎಂದು ನಂಬಲಾಗಿತ್ತು.

ಕೊಬ್ಬರಿ ಮಾರುಕಟ್ಟೆ, ಕೊಬ್ಬರಿ ದರ ನಿರ್ಧಾರದಲ್ಲಿ ಹಿಡಿತ ಹೊಂದಿರುವ ಬಿ.ನಂಜಾಮರಿ ಕೆಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದರು.ಈ ಹಿಂದೆ ಅವರು ಒಮ್ಮೆ ಬಿಜೆಪಿಯಿಂದ ಮತ್ತೊಮ್ಮೆ ಜನತಾದಳದಿಂದ ಶಾಸಕರಾಗಿದ್ದವರು.

ಏಕಾಏಕಿ ಮತ್ತೆ ರಾಜಕೀಯ ಅಖಾಡಕ್ಕೆ ಧುಮುಕಿದ್ದರು. ಪ್ರಚಾರ ಕೂಡ ನಡೆಸಿದ್ದರು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ಹೊಂದಿರುವ ಆಪ್ತ ಸಂಬಂಧ ಅವರಿಗೆ ಜೆಡಿಎಸ್‌ ಟಿಕೆಟ್‌ ಸಿಗಬಹುದು ಎಂದು ನಂಬಲಾಗಿತ್ತು. ಆದರೆ ಲೋಕೇಶ್ವರ್ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿತ್ತು.

ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಕಡೆಯಿಂದಲೂ ನಂಜಾಮರಿ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದದ್ದು ಗುಟ್ಟಾಗಿ ಉಳಿದಿರಲಿಲ್ಲ. ಕೊನೆಗೂ ಅವರು ಕಾಂಗ್ರೆಸ್‌ನಿಂದ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸ್ಥಳೀಯ ಕಾಂಗ್ರೆಸ್‌ ನಾಯಕರಿಗೆ ಅಚ್ಚರಿ ಮುಟ್ಟಿಸಿದೆ.

ಇನ್ನೂ ಚಿಕ್ಕನಾಯಕನಹಳ್ಳಿಯಲ್ಲಿ ತಮ್ಮ ಪುತ್ರ ಸಂತೋಷ್‌ ಜಯಚಂದ್ರ ಅವರಿಗೆ ಟಿಕಟ್‌ ಕೊಡಿಸುವ ಮೂಲಕ ಸಚಿವ ಟಿ.ಬಿ.ಜಯಚಂದ್ರ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಶಾಸಕ ಕೆ.ಎನ್‌.ರಾಜಣ್ಣ ಮತ್ತು ಜಯಚಂದ್ರ ಅವರ ನಡುವೆ ಹಾವು–ಮುಂಗಸಿ ಸಂಬಂಧವಿದೆ. ಚಿಕ್ಕನಾಯಕಹಳ್ಳಿ ಕ್ಷೇತ್ರಕ್ಕೆ ಕಳೆದ ಸಲ ಟಿಕೆಟ್‌ಗೆ ಪೈಪೋಟಿ ನಡೆಸಿದ್ದ ಕೆ.ಎನ್‌.ರಾಜಣ್ಣ ಪುತ್ರ ಈ ಸಲ ತುಮಕೂರು ಗ್ರಾಮಾಂತರಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ಅವರಿಗೆ ಟಿಕೆಟ್‌ ಪಡೆಯಲು ಸಾಧ್ಯವಾಗಿಲ್ಲ. ಜಿಲ್ಲೆಯ ರಾಜಕೀಯದಲ್ಲಿ ಒಬ್ಬಂಟಿಯಾದವರಂತೆ ಕಾಣುತ್ತಿದ್ದ ಜಯಚಂದ್ರ ಸರಿಯಾಗಿಯೇ ಶಾಕ್‌ ನೀಡಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಜಯಚಂದ್ರ, ಚಿಕ್ಕನಾಯಕನಹಳ್ಳಿ  ಕ್ಷೇತ್ರದಲ್ಲಿ ಅವರ ಪುತ್ರ ಸಂತೋಷ್‌ ಹೀಗೆ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ತಂದೆ–ಮಗನ ಸ್ಪರ್ಧೆ ಈ ಸಲದ ಚುನಾವಣೆಯ ವಿಶೇಷವಾಗಿದೆ. ಇದು ಪರಸ್ಪರ ಕ್ಷೇತ್ರಗಳ ಮೇಲೆ ಯಾವ  ರೀತಿಯ ಪರಿಣಾಮ ಬೀರಲಿದೆ ಎಂಬುದು ಚುನಾವಣಾ ಫಲಿತಾಂಶ ನಂತರ ಗೊತ್ತಾಗಲಿದೆ.

ಇಲ್ಲಿ ಪಕ್ಷದಲ್ಲಿ ಸಕ್ರಿಯವಾಗಿದ್ದ, ಗೊಲ್ಲ ಸಮುದಾಯದ ಮುಖಂಡ, ಕಳೆದ ಸಲ ಸ್ಪರ್ಧಿಸಿ ಸೋತಿದ್ದ ಸಾಸಲು ಸತೀಶ್‌ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿ
ದ್ದಾರೆ. ಸಾಮಾಜಿಕ  ನ್ಯಾಯದಡಿ ತಮಗೆ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂದು ಸತೀಶ್‌ ನಂಬಿದ್ದರು. ಡಾ.ಜಿ.ಪರಮೇಶ್ವರ್‌, ಎಸ್‌.ಪಿ.ಮುದ್ದಹನುಮೇಗೌಡ ಅವರು ಸತೀಶ್‌ ಪರ ಇದ್ದರು. ಆದರೆ ಇಲ್ಲಿ ಈ ಇಬ್ಬರ ಮುಖಂಡರ ಮಾತುಗಳು ನಡೆದಂತೆ ತೋರುತ್ತಿಲ್ಲ. ’ಮಗನ ಟಿಕೆಟ್‌ಗೆ ಲಾಬಿ ಮಾಡುವುದಿಲ್ಲ’ ಎಂದು ಹೇಳುತ್ತಿದ್ದ ಜಯಚಂದ್ರ ಮೆಲ್ಲಗೆ ಟಿಕೆಟ್‌ ಪಡೆದು ನಗೆ ಬೀರಿದ್ದಾರೆ.

ಕಳೆದ ಸಲದ ಚುನಾವಣೆಯಲ್ಲಿ ಠೇವಣೆ ಕಳೆದುಕೊಂಡಿದ್ದ ಯಾರಿಗೂ ಟಿಕೆಟ್‌ ಕೊಡುವುದಿಲ್ಲ ಎಂಬ ನಿಯಮಕ್ಕೆ ಕಾಂಗ್ರೆಸ್‌ ಅಂಟಿಕೊಂಡಂತೆ ಕಾಣುತ್ತಿದೆ. ಈ ಕಾರಣದಿಂದ ಸತೀಶ್‌ ಟಿಕೆಟ್‌ ಕಳೆದುಕೊಂಡಿರಲೂಬಹುದು.

ತುಮಕೂರು ಗ್ರಾಮಾಂತರ ಕ್ಷೇತ್ರ, ತುರುವೇಕೆರೆ, ಪಾವಗಡ  ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷರು, ಸಂಸದರು ಹೇಳಿದವರಿಗೆ ಟಿಕೆಟ್‌ ನೀಡಲಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಕೆಜೆಪಿಯಿಂದ ಬಂದ ರಾಯಸಂದ್ರ ರವಿಕುಮಾರ್ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದು ಕಾಂಗ್ರೆಸ್‌ನಲ್ಲಿ ಅತೃಪ್ತಿಗೆ ಕಾರಣವಾಗಬಹುದು.

ಮಗನಿಗೆ ಟಿಕೆಟ್‌ ಸಿಗದ ಕಾರಣ ಶಾಸಕ ಕೆ.ಎನ್‌.ರಾಜಣ್ಣ, ಟೂಡಾ ಮಾಜಿ ಅಧ್ಯಕ್ಷ, ಕುರುಬ ಮುಖಂಡ ಶಿವಮೂರ್ತಿ, ಮಾಜಿ ಶಾಸಕ ಎಸ್‌.ನಿಂಗಪ್ಪ, ಸಂಸದರ ಆಪ್ತ,  ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜ್‌ ಅಸಮಾಧಾನ ಹೊರಹಾಕಬಹುದು. ಇವರಲ್ಲಿ ಈಗಾಗಲೇ ನಿಂಗಪ್ಪ, ದೇವರಾಜ್‌ ಬಹಿರಂಗವಾಗಿಯೇ ಪಕ್ಷದ ಮುಖಂಡರ ವಿರುದ್ಧ ಕೆಂಡಕಾರಿದ್ದಾರೆ.

ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅವರಿಗೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚೆನ್ನಿಗಪ್ಪ ಅನುಕೂಲ ಮಾಡಿಕೊಡಬೇಕು. ಅದಕ್ಕೆ ಬದಲಿಯಾಗಿ ಗ್ರಾಮಾಂತರದಲ್ಲಿ ಲಿಂಗಾಯತ ಅಭ್ಯರ್ಥಿಗೆ  ಟಿಕೆಟ್‌ ನೀಡಿ ಜೆಡಿಎಸ್‌ನ ಗೌರಿಶಂಕರ್‌ಗೆ ಅನುಕೂಲ ಮಾಡಿಕೊಡಬೇಕು ಎಂದು ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ರಾಯಸಂದ್ರ ರವಿ ಅವರಿಗೆ ಟಿಕೆಟ್‌ ಕೊಡುತ್ತಾರೆ ಎಂದು ಮೊದಲಿನಿಂದಲೂ ಕ್ಷೇತ್ರದಲ್ಲಿ ಸುದ್ದಿ ಹರಡಿತ್ತು. ಅದೀಗ ನಿಜವಾದಂತೆ ತೋರುತ್ತಿದೆ.

ತುರುವೇಕೆರೆ ಕ್ಷೇತ್ರದಲ್ಲಿ ಹಲವಾರು ಆಕಾಂಕ್ಷಿಗಳಿದ್ದರು. ಹಿರಿಯ ಮುಖಂಡ ಚೌದ್ರಿ ರಂಗಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಇಲ್ಲೂ ಸಂಸದರು ಹಾಗೂ ಕೆಪಿಸಿಸಿ ಅಧ್ಯಕ್ಷರ ಮಾತು ನಡೆದಿದೆ.

ಕುತೂಹಲ ಕೆರಳಿಸಿದ್ದ ಪಾವಗಡ ಟಿಕೆಟ್‌ ಹಂಚಿಕೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮಾತು ನಡೆದಂತೆ ಕಾಣುತ್ತಿಲ್ಲ. ಇಲ್ಲಿ ಕ್ರೆಡಲ್‌ ನಿರ್ದೇಶಕರಾಗಿ, ಈಚೆಗೆ ಸ್ವಯಂ ನಿವೃತ್ತಿ ಪಡೆದಿದ್ದ ಬಲರಾಂ ಅವರಿಗೆ ಶಿವಕುಮಾರ್‌ ಟಿಕೆಟ್‌ ಕೊಡಿಸಲು ಪ್ರಯತ್ನಿಸಿದ್ದರು. ತಾಲ್ಲೂಕಿನಲ್ಲಿ ಏಷ್ಯಾದಲ್ಲೆ ಅತಿ ದೊಡ್ಡದಾದ ಸೋಲಾರ್‌ ಪಾರ್ಕ್‌ ನಿರ್ಮಾಣವಾಗುತ್ತಿರುವ ಹಿಂದೆ ಬಲರಾಂ  ಇದ್ದರು.  ಶಿವಕುಮಾರ್‌ ಜತೆ ಆಪ್ತರಾಗಿದ್ದರು. ಸಚಿವರು ಟಿಕೆಟ್‌ ಕೊಡಿಸುತ್ತಾರೆಂಬ ನಂಬಿಕೆಯಲ್ಲೇ ಕೆಲಸಕ್ಕೆ ಸ್ವಯಂ ನಿವೃತ್ತಿ ಪಡೆದಿದ್ದರು. ಆದರೆ ಪರಮೇಶ್ವರ್‌ ಹಾಗೂ ಮುದ್ದಹನುಮೇಗೌಡರು ವೆಂಕಟರಮಣಪ್ಪ ಅವರ ಪರ ನಿಂತಿದ್ದರು.

ಕುಣಿಗಲ್‌ ಕ್ಷೇತ್ರದ ವಿಷಯಕ್ಕೆ ಬಂದಾಗ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಅವರ ಮಾತು ನಡೆದಿದೆ. ಮೊನ್ನೆಯಷ್ಟೆ ವಕೀಲರನ್ನು ಭೇಟಿ ಮಾಡಿದ್ದ ಡಿ.ಕೆ.ಸುರೇಶ್‌ ’ಹೊಸಮುಖವನ್ನು ಪರಿಚಯಿಸುತ್ತೇವೆ. ಬೆಂಬಲ ಕೊಡಿ’ ಎಂದು ಹೇಳಿದಾಗಲೇ ಅವರ ಸಂಬಂಧಿ ಡಾ.ರಂಗನಾಥ್ ಅವರಿಗೆ ಟಿಕೆಟ್‌ ಸಿಗುವುದು ಖಚಿತವಾಗಿ ಹೋಗಿತ್ತು.ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ಅವರಿಂದ ಬಂಡಾಯದ ಸಾಧ್ಯತೆ ಇದೆ.

ಇನ್ನೂ ಗುಬ್ಬಿಯಲ್ಲಿ ಬಾಲಾಜಿ ಕುಮಾರ್‌ ಅವರಿಗೆ ಟಿಕೆಟ್‌ ನೀಡಿರುವ ಹಿಂದೆಯೂ ಸಂಸದರು, ಕೆಪಿಸಿಸಿ ಅಧ್ಯಕ್ಷರು ಇದ್ದಾರೆ. ವಕೀಲ ಪ್ರಸನ್ನಕುಮಾರ್‌, ಕಳೆದ ಸಲ ಸೋತಿದ್ದ ಹೊನ್ನಗಿರಿಗೌಡ ಅವರು ಟಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಇನ್ನೂ ನಿರೀಕ್ಷೆಯಂತೆ, ತುಮಕೂರು ನಗರಕ್ಕೆ ರಫೀಕ್‌ ಅಹಮದ್‌, ಕೊರಟಗೆರೆಗೆ ಡಾ.ಜಿ.ಪರಮೇಶ್ವರ್‌, ಮಧುಗಿರಿಗೆ ಕೆ.ಎನ್‌.ರಾಜಣ್ಣ  ಅವರಿಗೆ  ಟಿಕೆಟ್‌  ಸಿಕ್ಕಿದೆ.

ಮುಳುವಾದ ಅಳಿಯ!

ಕೆ.ಷಡಕ್ಷರಿ ಅವರಿಗೆ  ಟಿಕೆಟ್‌ ಕೈ ತಪ್ಪಲು ಅವರ ಅಳಿಯ ಅಭಿಷೇಕ್‌  ಕಾರಣ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಅಭಿಷೇಕ್‌ ಇದ್ದಾರೆ. ಇದು ಮುಖ್ಯಮಂತ್ರಿ ಸಿಟ್ಟಿಗೆ ಕಾರಣವಾಗಿತ್ತು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದರು. ’ಅಭಿಷೇಕ್‌ ಅವರು  ಚುನಾವಣೆಯಿಂದ ಹಿಂದೆ ಸರಿಯಲು ಹೇಳುವಂತೆ ಷಡಕ್ಷರಿ ಅವರಿಗೆ ಮುಖ್ಯಮಂತ್ರಿ ಕೇಳಿಕೊಂಡಿದ್ದರು. ಅಳಿಯ ತಮ್ಮ ಮಾತು ಕೇಳುವುದಿಲ್ಲ ಎಂದು ಷಡಕ್ಷರಿ ಹೇಳಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT