ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿಯಲ್ಲಿ ತೊಯ್ಯುತ್ತಿರುವ ರಾಜಕಾರಣ

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ; ಗಣಿ ದೂಳು, ತೆಂಗು ಬೆಳೆಗಾರರ ಗೋಳು, ಎಲ್ಲರೂ ಭಗೀರಥರಾದರೂ ನೀರು ಮಾತ್ರ ಬರಲಿಲ್ಲ
Last Updated 16 ಏಪ್ರಿಲ್ 2018, 11:34 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಹೇಮಾವತಿ ನೀರಿನ ವಿಚಾರವಾಗಿ ಸುಳ್ಳು, ಗಣಿ ದೂಳು, ತೆಂಗು ಬೆಳೆಗಾರರ ಗೋಳು ಹಾಗೂ ಅಕ್ರಮ ಮರಳು ದಂಧೆ ಈ ನಾಲ್ಕು ಅಂಶಗಳ ಸುತ್ತ ಚಿಕ್ಕನಾಯಕನಹಳ್ಳಿ ವಿಧಾನಸಭೆ ಚುನಾವಣೆ 20 ವರ್ಷಗಳಿಂದಲೂ ಗಿರಕಿ ಹೊಡೆಯುತ್ತಿದೆ.

ಕುತೂಹಲ ಎಂದರೆ ಈ ನಾಲ್ಕು ಅಂಶಗಳೂ ಅಂತರ ಸಂಬಂಧ ಹೊಂದಿವೆ. ಅಂತರ್ಜಲ ಕುಸಿತ, ಪ್ರಕೃತಿ ನಾಶ, ಗುಡಿ ಕೈಗಾರಿಕೆಗಳ ನಾಶ, ಯುವ ಶಕ್ತಿಯ ದುರ್ಬಳಕೆ, ಭ್ರಷ್ಟಾಚಾರ ಹೀಗೆ ತಾಲ್ಲೂಕಿನ ಹಲವು ಪ್ರತಿಕೂಲ ಬೆಳವಣಿಗೆಗಳಿಗೆ ‘ನೀರು ರಾಜಕಾರಣ’ ಪರೋಕ್ಷವಾಗಿ ಕಾರಣವಾಗಿದೆ.

ತಾಲ್ಲೂಕಿಗೆ ಹೇಮಾವತಿ ನೀರು ತರುವ ವಿಷಯ ಹಲವು ವರ್ಷಗಳಿಂದಲೂ ಚುನಾವಣೆ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹೇಮಾವತಿ ತಂದ ಸಾಧನೆ ನಮ್ಮ ಪಕ್ಷದ್ದು, ಹೇಮೆ ಹರಿಸಿದ ಭಗೀರಥ ನಾನೇ ಎಂದು ಜಾಹೀರಾತುಗಳ ಮೂಲಕ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಿಪರ್ಯಾಸ ಎನ್ನುವಂತೆ 10 ವರ್ಷಗಳಿಂದ ಹೇಮಾವತಿ ಕಾಮಗಾರಿ ಎಲ್ಲಿ ಆರಂಭವಾಗಿದೆಯೋ ಅಲ್ಲೇ ನಿಂತಿದೆ. ಹೇಮಾವತಿ ನೀರು ಬರುತ್ತದೆ ನಮ್ಮ ಬದುಕು ಹಸನಾಗುತ್ತದೆ ಎಂದು ರೈತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

‘ಹೇಮಾವತಿ ಯೋಜನೆ ಜಾರಿಗೆ ಪ್ರಯತ್ನಿಸಿದವರು ಇಂದು ನೇಪಥ್ಯಕ್ಕೆ ಸರಿದಿದ್ದಾರೆ. ಅಂದು ನದಿ ನೀರು ಯೋಜನೆ ಜಾರಿಗೊಳಿಸುವ ಶಕ್ತಿ, ಬಲ ಇದ್ದರೂ ಕೈಚೆಲ್ಲಿ ಕುಳಿತವರು, ತಾಂತ್ರಿಕ ಕಾರಣ ಮುಂದಿಟ್ಟು ಹೇಮಾವತಿ ತರಲು ಅಸಾಧ್ಯ ಎಂದವರು, ಹೇಮಾವತಿಯನ್ನು ತಾಲ್ಲೂಕಿಗೆ ತರಬಹುದು ಎಂಬ ಆಲೋಚನೆಯನ್ನೇ ಮಾಡದವರು ಇಂದು ‘ಹೇಮಾವತಿ’ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಇದು ವಿಪರ್ಯಾಸ’ ಎಂದು ತಾಲ್ಲೂಕಿಗೆ ಹೇಮಾವತಿ ನದಿ ನೀರು ತರಲು ಪ್ರಯತ್ನಿಸಿದವರಲ್ಲಿ ಒಬ್ಬರಾದ ಬಿ.ಲಕ್ಕಪ್ಪ ನೋವಿನಿಂದ ನುಡಿಯುವರು.

‘1979ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ಎನ್.ಬಸವಯ್ಯ ಅವರು 11 ತಿಂಗಳು ಭಾರಿ ಮತ್ತು ಸಣ್ಣ ನೀರಾವರಿ ಸಚಿವರಾಗಿದ್ದರು. ಆ ಅವಧಿಯಲ್ಲಿ ಪ್ರಯತ್ನ ನಡೆಸಿದ್ದರೆ 30 ವರ್ಷಗಳ ಹಿಂದೆಯೇ ನೀರು ಲಭ್ಯವಾಗಿರುತ್ತಿತ್ತು. 1986ರಲ್ಲಿ ಜಿ.ಎಸ್‌.ಬಸವರಾಜ್‌, ಕುಂದರನಹಳ್ಳಿ ರಮೇಶ್‌ ನೇತೃತ್ವದಲ್ಲಿ ಅಪ್ನಾಸ್ ಎಂಬ ನೀರಾವರಿ ಹೋರಾಟ ಸಮಿತಿ ಪ್ರಾರಂಭಿಸಿದೆವು. ಕಾವೇರಿ ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದ ಮಾದೇಗೌಡ ಅವರನ್ನು ಚಿಕ್ಕನಾಯಕನಹಳ್ಳಿಗೆ ಕರೆಸಿ ನಿರಂತರ ಸಭೆ ನಡೆಸಿದೆವು. ಹೋರಾಟಗಳನ್ನು ಮಾಡಿದೆವು. 1990ರಲ್ಲಿ ಚಿಕ್ಕನಾಯಕನಹಳ್ಳಿಯಿಂದ ರಾಜಭವನಕ್ಕೆ ಪಾದಯಾತ್ರೆ ಮಾಡಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೆವು. ಅಂದಿನ ರಾಜ್ಯಪಾಲರ ಸಲಹೆ ಮೇರೆಗೆ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆವು. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಆ ಎಲ್ಲ ಪ್ರಯತ್ನಗಳು ಮಣ್ಣು ಪಾಲಾದವು’ ಎಂದು ಹೋರಾಟದ ದಾರಿಯನ್ನು ಬಿಚ್ಚಿಟ್ಟರು.

ನೀರಾವರಿ ತಜ್ಞ ಪರಮಶಿವಯ್ಯ ಅವರು ನೇತ್ರಾವತಿ ನದಿಯಿಂದ ತುಮಕೂರು, ದೊಡ್ಡಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರು ತರುವ ಯೋಜನೆ ರೂಪಿಸಿದ್ದರು. ಈ ಯೋಜನೆಯಿಂದ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಸಾಧ್ಯತೆ ಇತ್ತು. ಅದೇ ಯೋಜನೆಯನ್ನು ಅಲ್ಪ ಬದಲಾವಣೆ ಮಾಡಿ ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಈ ಎತ್ತಿನಹೊಳೆ ಯೋಜನೆ ಚಿಕ್ಕನಾಯಕನಹಳ್ಳಿ ಮೂಲಕವೇ ಹಾದು ಹೋಗುತ್ತಿದ್ದರೂ ಯಾವುದೇ ಲಾಭ ಆಗುತ್ತಿಲ್ಲ. ಈ ಕುರಿತು ಯಾವ ರಾಜಕಾರಣಿಗಳೂ ಚಕಾರ ಎತ್ತುತ್ತಿಲ್ಲ. ಆದರೂ ಹೇಮಾವತಿ ಕುಡಿಯುವ ನೀರಿನ ಯೋಜನೆ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

2004ರಲ್ಲಿ ಎಚ್.ಕೆ.ಪಾಟೀಲ್ ಹೇಮಾವತಿ ಕುಡಿಯುವ ನೀರಿನ ಯೋಜನೆ ಸರ್ವೆ ಕಾರ್ಯಕ್ಕೆ ಅನುಮತಿ ನೀಡಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸರ್ವೆಗೆ ₹ 3.5 ಲಕ್ಷ ಬಿಡುಗಡೆ ಆಯಿತು. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಹಣ ಬಿಡುಗಡೆಗೊಳಿಸಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿತು.

ಕಾಮಗಾರಿ ಪ್ರಾರಂಭವಾಗಿ 9 ವರ್ಷ ತುಂಬಿದ್ದರೂ ಅರ್ಧ ಕೆಲಸ ಮುಗಿದಿಲ್ಲ. ಯೋಜನೆ ಪ್ರಾರಂಭವಾಗಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ತಮ್ಮದೇ ಕೊಡುಗೆ ನೀಡಿವೆ. ಆದರೆ ಸ್ಥಳೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಆದರೂ ಸ್ಥಳೀಯ ನಾಯಕರು ಯೋಜನೆಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಇದು ತಾಲ್ಲೂಕಿನ ರೈತರಿಗೆ ರಾಜಕಾರಣಿಗಳು ಮಾಡುತ್ತಿರುವ ದ್ರೋಹ ಎಂದು ನೀರಾವರಿ ಹೋರಾಟಗಾರ ಶರತ್‌ಕುಮಾರ್‌ ದೂರುವರು.

ಪೆಮ್ಮಲದೇವರಹಳ್ಳಿ-ತಿಮ್ಲಾಪುರ ಕೆರೆ ಮಾರ್ಗ, ಗೋಪಾಲನಹಳ್ಳಿ-ಹಾಲ್ಕುರಿಕೆ ಹಾಗೂ ಗ್ಯಾರೇಹಳ್ಳಿ-ಚಿಕ್ಕನಾಯಕನಹಳ್ಳಿ ಮಾರ್ಗವಾಗಿ 3 ಕವಲುಗಳಲ್ಲಿ ಹೇಮಾವತಿ ನಾಲಾ ಯೋಜನೆ ನಿರ್ಮಾಣವಾಗುತ್ತಿದೆ. ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ 10 ವರ್ಷವಾದರೂ ಅರ್ಧ ಪೂರ್ಣವಾಗಿಲ್ಲ. ಕಾಲ ಮಿತಿಯಲ್ಲಿ ಕಾಮಗಾರಿ ಮುಗಿದಿದ್ದರೆ ತಾಲ್ಲೂಕಿನ ರೈತರ ಸಾವಿರಾರು ಎಕರೆ ತೆಂಗಿನ ತೋಟಗಳು ಬರಕ್ಕೆ ತುತ್ತಾಗುತ್ತಿರಲಿಲ್ಲ. ಅಂತರ್ಜಲ ಮಟ್ಟ ಸಾವಿರ ಅಡಿ ಕೆಳಕ್ಕೆ ಇಳಿಯುತ್ತಿರಲಿಲ್ಲ ಎಂದರು.

ಹಂದನಕೆರೆ, ಹುಳಿಯಾರು ಹಾಗೂ ಕಂದಿಕೆರೆ ಹೋಬಳಿಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತರುತ್ತೇವೆ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಮರೆತು ಸುಮ್ಮನಾಗುತ್ತಾರೆ ಎಂದು ತಾಲ್ಲೂಕಿನ ಜನರು ಅಸಮಾಧಾನ ವ್ಯಕ್ತಪಡಿಸುವರು.

ಹೇಮಾವತಿಯನ್ನು ಸುವರ್ಣಮುಖಿ ಹಳ್ಳದ ಮೂಲಕ ಗುರುತ್ವಾಕರ್ಷಣೆಯಲ್ಲಿ ಬೋರನಕಣಿವೆ ಜಲಾಶಯಕ್ಕೆ ತೆಗೆದುಕೊಂಡು ಹೋಗುವ ಯೋಜನೆ ಇದೆ. ಆದರೆ ಈ ಭಾಗದಲ್ಲಿ ನಡೆದಿರುವ ಅಕ್ರಮ ಮರಳು ದಂಧೆ ನೀರ ದಾರಿಯನ್ನು ಛಿದ್ರಗೊಳಿಸಿದೆ. ಈ ಭಾಗದಲ್ಲಿ ಅಕ್ರಮ ಮರಳು ಸಾಗಣೆ ಇಂದಿಗೂ ನಿರಂತರವಾಗಿ ನಡೆದಿದೆ. ಹಾಲ್ಕುರಿಕೆಯಿಂದ ಬೋರನಕಣಿವೆ ಜಲಾಶಯದ ವರೆಗೆ ಸಾವಿರಾರು ಹೆಕ್ಟೇರ್ ತೆಂಗಿನ ತೋಟ ಅಕ್ರಮ ಮರಳು ದಂಧೆಗೆ ಬಲಿಯಾಗಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಿದ್ದ ಜನಪ್ರತಿನಿಧಿಗಳು ಮರಳು ಲೂಟಿಕೋರರ ಬೆನ್ನಿಗೆ ನಿಂತಿದ್ದಾರೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಬಟ್ಟರಹಳ್ಳಿ ಮಲ್ಲಿಕಾರ್ಜುನ್ ದೂರುವರು.

ತಾಲ್ಲೂಕಿನಲ್ಲಿ 2003ರಿಂದ 2010ರ ವರೆಗೆ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆದಿದೆ. ಕಬ್ಬಿಣ ಅದಿರು ಗಣಿಗಾರಿಕೆ ಚುನಾವಣೆಗಳಲ್ಲಿ ಹಣದ ಹರಿವಿಗೆ ಕಾರಣವಾಗಿದೆ. ಒಟ್ಟು 15 ಕಂಪನಿಗಳು ಗಣಿಗಾರಿಕೆ ನಡೆಸಿವೆ. ಗಣಿ ಕಂಪನಿ ಮಾಲೀಕರು ಹೊರಗಿನವರು. ಅಕ್ರಮ ಗಣಿಗಾರಿಕೆ ಸುಗಮವಾಗಿಸಿಕೊಳ್ಳಲು ಸ್ಥಳೀಯ ರಾಜಕಾರಣಿಗಳು ಹಾಗೂ ಯುವಕರಿಗೆ ಹಣ ನೀಡಿದ್ದರು. ಇಲ್ಲಿನ ಜನಪ್ರತಿನಿಧಿಗಳು ವಿವೇಚನ ಬಳಸಿ ಉಕ್ಕಿನ ಘಟಕ ಸ್ಥಾಪಿಸಿದ್ದರೆ ನೂರಾರು ಯುವಕರಿಗೆ ಉದ್ಯೋಗ ಸೃಷ್ಟಿಸಬಹುದಿತ್ತು. ಆದರೆ ಇದು ಆಗಲಿಲ್ಲ. ಗಣಿಗಾರಿಕೆಯಿಂದ ಪ್ರಕೃತಿ ಮೇಲೆ ಆಗಿರುವ ದುಷ್ಪರಿಣಾಮವನ್ನು ಒಂದು ಶತಮಾನ ಪ್ರಯತ್ನಿಸಿದರೂ ಸರಿಪಡಿಸಲು ಸಾಧ್ಯವಾಗುವುದಿಲ್ಲ ಎಂದು ಹೆಸರು ಹೇಳಲು ಒಪ್ಪದ ನಾಗರಿಕರೊಬ್ಬರು ಹೇಳುವರು.

ಚುನಾವಣಾ ಲಾಭ ಪಡೆಯುವುದು ತಪ್ಪು

ನೀರಾವರಿ ಯೋಜನೆಗಳು ತಾಲ್ಲೂಕಿಗೆ ತರುವಲ್ಲಿ ಹಲವು ಹೋರಾಟಗಾರರ ಶ್ರಮ ಇದೆ. ಈ ವಿಚಾರವನ್ನು ಚುನಾವಣೆ ಲಾಭಕ್ಕೆ ಪಡೆಯುವುದು ತಪ್ಪು. ಕಾಂಗ್ರೆಸ್‌ನಲ್ಲಿ  ಇದ್ದು, ಯೋಜನೆಗೆ ಶ್ರಮಿಸಿದ್ದ ಮಾಜಿ ಸಂಸದ ಬಸವರಾಜು ಈಗ ಬಿಜೆಪಿಯಲ್ಲಿ ಇದ್ದಾರೆ ಎನ್ನುವರು ಶರತ್‌ ಕುಮಾರ್. ಎಸ್.ಎಂ.ಕೃಷ್ಣ ಕಾಂಗ್ರೆಸ್ ಸರ್ಕಾರ ಸರ್ವೆ ಕಾರ್ಯಕ್ಕೆ ಅನುಮತಿ ನೀಡಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸರ್ವೆ ಕಾರ್ಯಕ್ಕೆ ಹಣ ಬಿಡುಗಡೆಯಾಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಕಾಮಗಾರಿ ಪ್ರಾರಂಭಕ್ಕೆ ಕಾರಣವಾಗಿದೆ ಎಂದರು – ದೇವರಹಳ್ಳಿ ಧನಂಜಯ

ಜೀವ ವೈವಿಧ್ಯ ನಾಶ

ಬಳ್ಳಾರಿ ಬಿಟ್ಟರೆ ರಾಜ್ಯದಲ್ಲೇ ಹೆಚ್ಚು ಗಣಿಗಾರಿಕೆ ನಡೆದಿರುವುದು ಚಿಕ್ಕನಾಯಕನಹಳ್ಳಿಯಲ್ಲಿ. ಅಕ್ರಮ ಗಣಿಗಾರಿಕೆಯಿಂದ ಜೀವ ವೈವಿಧ್ಯ ತಾಣವಾದ ತೀರ್ಥಪುರ ಮೀಸಲು ಅರಣ್ಯ ನಾಶವಾಗಿದೆ. ಇಲ್ಲಿ ನೂರಾರು ನೀರ ಕಾರಂಜಿಗಳು ಬತ್ತಿವೆ. ಅಪರೂಪದ ಪ್ರಾಣಿ, ಪಕ್ಷಿ ಹಾಗೂ ವೃಕ್ಷ ವೈವಿಧ್ಯ ನಾಶವಾಗಿದೆ. ಗಣಿ ಅಕ್ರಮದ ಬಗ್ಗೆ ಯಾವ ರಾಜಕಾರಣಿಯೂ ಧ್ವನಿ ಎತ್ತಲಿಲ್ಲ ಎಂಬುದು ಸತ್ಯ ಎಂದು ನುಡಿಯುವರು ಹೋರಾಟಗಾರ್ತಿ ಎನ್.ಇಂದಿರಮ್ಮ.

ಹೊಸ ಸಾಧ್ಯತೆ ಮುಸುಕು

ಹಾಲು ಉತ್ಪಾದಕ ಸಹಕಾರ ಸಂಘಗಳ ಮಾದರಿಯಲ್ಲಿ ತಾಲ್ಲೂಕಿನ ತೆಂಗು ಬೆಳೆಗಾರರು ಹಾಗೂ ಕುರಿ ಸಾಕಾಣಿಕೆದಾರರು ಒಗ್ಗಟ್ಟಾಗುತ್ತಿರುವುದು ರೈತರ ಉಳಿವಿನ ದೃಷ್ಟಿಯಿಂದ ಮುಖ್ಯ ಬೆಳವಣಿಗೆ. ಇದರಿಂದ ರೈತ ಹಾಗೂ ಅಸಂಘಟಿತ ವಲಯಗಳಿಗೆ ಬಲ‌ ಬರುತ್ತಿದೆ. ಬಹು ದೊಡ್ಡ ಸಂಖ್ಯೆಯಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಕೃಷಿ ಹಾಗೂ ಕುರಿ ಸಾಕಾಣಿಕೆ ಉದ್ಯೋಗಗಳ ಕಡೆ ಯುವಕರನ್ನು ಸೆಳೆಯುವ ಹೊಸ ಮಾದರಿ ಉತ್ತಮವಾದುದು. ಇದನ್ನು ಅರಿಯದ ತಾಲ್ಲೂಕಿನ ರಾಜಕಾರಣ ಹೊಸ ಸಾಧ್ಯತೆಗಳನ್ನು ಮುಸುಕಾಗಿಸಿದೆ ಎಂದು ತೆಂಗು ಬೆಳೆಗಾರರ ಸಂಘಟಕ ಅಣೇಕಟ್ಟೆ ವಿಶ್ವನಾಥ್ ಹೇಳಿದರು.

**

ಹೇಮಾವತಿ ನಾಲಾ ಕಾಮಗಾರಿ ಚುರುಕುಗೊಳಿಸಲು ಸಿ.ಬಿ.ಸುರೇಶ್‌ಬಾಬು ಪ್ರಯತ್ನಿಸುತ್ತಿದ್ದಾರೆ. ಆದರೆ ವಿರೋಧಿಗಳು ಅಡ್ಡಗಾಲು ಹಾಕುತ್ತಿದ್ದಾರೆ – ಚಂದ್ರಶೇಖರ್ ಶೆಟ್ಟಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ.

**

ಜೆ.ಸಿ.ಮಾಧುಸ್ವಾಮಿ ಪ್ರಜ್ಞಾವಂತರು. ಅವರನ್ನು ಗೆಲ್ಲಿಸಿದರೆ ಹೇಮಾವತಿ ನಾಲಾ ಸಮಸ್ಯೆ, ಗಣಿಗಾರಿಕೆ ಹಾಗೂ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುತ್ತದೆ – ಎಚ್.ಆರ್.ಶಶಿಧರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT