ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ ಹಾಕಲು ಹೈಡ್ರಾಲಿಕ್‌ ಲಿಫ್ಟ್‌

ಸಿದ್ಧೇಶ್ವರ ಸಂಸ್ಥೆಯಿಂದ ₹ 11 ಲಕ್ಷ ವೆಚ್ಚದಲ್ಲಿ ಬಸವೇಶ್ವರ ವೃತ್ತ ನವೀಕರಣ
Last Updated 16 ಏಪ್ರಿಲ್ 2018, 11:50 IST
ಅಕ್ಷರ ಗಾತ್ರ

ವಿಜಯಪುರ: ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದ ನವೀಕರಣ ಕಾಮಗಾರಿ ಭರದಿಂದ ಸಾಗಿದೆ.ವಿಜಯಪುರದ ಪ್ರತಿಷ್ಠಿತ ಸಿದ್ಧೇಶ್ವರ ಸಂಸ್ಥೆ ಈ ವೃತ್ತದ ನವೀಕರಣ, ನಿರ್ವ ಹಣೆಯ ಜವಾಬ್ದಾರಿಯನ್ನು ವರ್ಷದ ಹಿಂದೆಯೇ ಮಹಾನಗರ ಪಾಲಿಕೆ ಆಡಳಿತದಿಂದ ಪಡೆದಿದ್ದು, ಬಸವ ಜಯಂತಿ ಹೊಸ್ತಿಲಲ್ಲಿ ಬಿರುಸಿನಿಂದ ಕಾಮಗಾರಿ ಕೈಗೊಂಡಿದೆ.

₹ 11 ಲಕ್ಷ ಅಂದಾಜು ವೆಚ್ಚದಲ್ಲಿ ವೃತ್ತದ ನವೀಕರಣ ಕಾಮಗಾರಿ ನಡೆದಿದೆ. ಅಶ್ವಾರೂಢ ಬಸವೇಶ್ವರರ ಪಂಚಲೋಹದ ಮೂರ್ತಿ ಹೊರತು ಪಡಿಸಿ, ಉಳಿದ ಎಲ್ಲವನ್ನೂ ಈಗಾಗಲೇ ಬದಲಿಸಲಾಗಿದೆ. ಮೊದಲಿದ್ದ ಉದ್ಯಾನ ವನ್ನು ತೆರವುಗೊಳಿಸಿ, ವಿನೂತನ ವಿನ್ಯಾಸದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಿದ್ಧೇಶ್ವರ ಸಂಸ್ಥೆಯ ಛೇರ್‌ಮನ್‌ ಬಸಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಏ. 18ರ ಬುಧವಾರ ಬಸವ ಜಯಂತಿಯಿದೆ. ಈ ವೇಳೆಗೆ ಯಾವುದೇ ಕಾರಣಕ್ಕೂ ನವೀಕರಣ ಕಾಮಗಾರಿ ಪೂರ್ಣಗೊಳ್ಳಲ್ಲ. ಆದರೆ ವೃತ್ತದ ಸುತ್ತಲೂ ಗ್ರಾನೈಟ್‌ ಅಳವಡಿಕೆ, ಉದ್ಯಾನ ನಿರ್ಮಾಣ, ಹುಲ್ಲು ಹಾಸು ಹಾಕುವುದು ಸೇರಿದಂತೆ ಅಲಂಕಾರಿಕ ಹೂವಿನ ಗಿಡಗಳಿಂದ ವೃತ್ತವನ್ನು ಸುಂದರಗೊಳಿಸಲಾಗುವುದು.

ತಾತ್ಕಾಲಿಕವಾಗಿ ವಿದ್ಯುತ್‌ ದೀಪಗಳನ್ನು ಅಳವಡಿಸಿ ವೃತ್ತ ಕಂಗೊಳಿಸುವಂತೆ ಮಾಡಲಾಗುವುದು’ ಎಂದರು. ‘ನಗರದಲ್ಲಿ ಇತಿಹಾಸ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಮೊದಲ ಬಾರಿಗೆ ಮೂರ್ತಿ ಪಕ್ಕ ಹೈಡ್ರಾಲಿಕ್‌ ಲಿಫ್ಟ್‌ ಅಳ ವಡಿಸುತ್ತಿದ್ದೇವೆ. ಗುಜರಾತ್‌ನ ಅಹಮದಾಬಾದ್‌ನ ತಂತ್ರಜ್ಞರು ಈ ಕೆಲಸದಲ್ಲಿ ನಿರತರಾಗಿದ್ದು, ಬಸವ ಜಯಂತಿ ಸಂದರ್ಭವೇ ಇದನ್ನು ಅನಾವರಣಗೊಳಿಸಲಾಗುವುದು.

ಒಮ್ಮೆ ಐವರು ಈ ಲಿಫ್ಟ್‌ನ ಮೂಲಕ ಮೇಲೇರಿ ಮಹಾತ್ಮ ಬಸವೇಶ್ವರರ ಪ್ರತಿಮೆ ಮುಟ್ಟಿ ನಮಿಸಬಹುದು. ಮಾಲಾರ್ಪಣೆ ಮಾಡಲು ಅವಕಾಶವಿದೆ. ನಂತರ ಇದರ ಮೂಲಕವೇ ಕೆಳಗಿಳಿದು ಉಳಿದವರಿಗೆ ಅವಕಾಶ ನೀಡಬಹುದು. ಬಟನ್‌ ಮೂಲಕ ಲಿಫ್ಟ್‌ ನಿಯಂತ್ರಿಸಲಾಗುವುದು’ ಎಂದರು.

‘ವೃತ್ತದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗುವುದು. ಈ ಕೆಲಸವನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿಯ ನುರಿತ ಪರಿಣಿತರಿಗೆ ಈಗಾಗಲೇ ನೀಡಿದ್ದೇವೆ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ನೂತನ ವಿನ್ಯಾಸದಲ್ಲಿ ಉದ್ಯಾನ ಸೃಷ್ಟಿಸಲಿದ್ದಾರೆ. ಆದರೆ ಇಲ್ಲಿ ನೀರಿನ ಕಾರಂಜಿ ಅಳವಡಿಸಲ್ಲ. ಉದ್ಯಾನ ನಿರ್ವಹಣೆಗಾಗಿ ಮಾತ್ರ ನೀರನ್ನು ಬಳಸಲಿದ್ದೇವೆ. ಬಸವ ಜಯಂತಿ ಬಳಿಕ ಶಾಶ್ವತ ವಾಗಿ ಬಣ್ಣ ಬಣ್ಣದ ವಿದ್ಯುತ್ ದೀಪ ಅಳವಡಿಸಿ, ರಾತ್ರಿ ಮೇಳೆ ಬಸವೇಶ್ವರರ ಮೂರ್ತಿ ಕಂಗೊಳಿಸುವಂತೆ ಮಾಡಲಾಗುವುದು’ ಎಂದು ಹಿರೇಮಠ ತಿಳಿಸಿದರು.

‘ಒಂದೂವರೆ ತಿಂಗಳಿನಿಂದ ನವೀಕರಣ ಕೆಲಸ ನಡೆದಿದೆ. ಹಗಲು ಜನದಟ್ಟಣೆ, ವಾಹನ ದಟ್ಟಣೆ ಹೆಚ್ಚಿರು ವುದರಿಂದ ಕಾಮಗಾರಿ ಕಷ್ಟಸಾಧ್ಯ. ರಾತ್ರಿ ಬೆಳಕಿನ ಅಭಾವದಿಂದ ಕಾಮಗಾರಿ ನಡೆಸಲಾಗುತ್ತಿಲ್ಲ. ಜಯಂತಿ ಮುಗಿದ ಬಳಿಕವೂ ಕಾಮಗಾರಿ ನಡೆಸಿ, ತಿಂಗಳೊಳಗೆ ನವೀಕರಣ ಕೆಲಸ ಪೂರ್ಣ
ಗೊಳಿಸಲಾಗುವುದು’ ಎಂದರು.

‘ಜಯಂತ್ಯುತ್ಸವ ಬಳಿಕ ಪಾಲಿಶ್‌’

‘ಬಸವೇಶ್ವರರ ಅಶ್ವಾರೂಢ ಮೂರ್ತಿ ಪಂಚಲೋಹದ್ದು. ಬಿಸಿಲು, ಮಳೆ ದೂಳಿನಿಂದ ತನ್ನ ಹೊಳಪು ಕಳೆದುಕೊಂಡಿದೆ. ಇದರ ಮೇಲೆ ಪದರಗಟ್ಟಿರುವ ದೂಳಿನ ಹಕ್ಕನ್ನು ತೆಗೆಯುವುದು ತುಂಬಾ ಸೂಕ್ಷ್ಮ ಕೆಲಸ. ಇದನ್ನು ನಿರ್ಮಿಸಿದವರಿಗೆ ಈ ಕೆಲಸದ ಜವಾಬ್ದಾರಿ ನೀಡಿರುವೆವು. ಮುಂಬಯಿಯ ಸಾರಂಗ ಬ್ರದರ್ಸ್‌ ಇದಕ್ಕೆ ಸಮ್ಮತಿಸಿದ್ದು, ಬಸವ ಜಯಂತಿ ಬಳಿಕ ತಮ್ಮ ನುರಿತ ಕೆಲಸಗಾರರನ್ನು ಬಳಸಿಕೊಂಡು 22 ದಿನ ಪದರನ್ನು ತೆರವುಗೊಳಿಸಿ, ನಂತರ ಬಣ್ಣ ಬಳಿಯುತ್ತಾರೆ’ ಎಂದು ಬಸಯ್ಯ ಹೇಳಿದರು.

**

ಒಂದೂವರೆ ದಶಕದ ಬಳಿಕ ನವೀಕರಣ ನಡೆದಿದೆ. ಜನಾಕರ್ಷಿಸುವಂತೆ ಅಭಿವೃದ್ಧಿಗೊಳಿಸಲಿ. ನೀರಿನ ಕಾರಂಜಿ, ಕಣ್ಮನ ತಣಿಸುವ ವಿದ್ಯುತ್‌ ದೀಪಾಲಂಕಾರವಿರಲಿ – ಈರಣ್ಣ ಸಕ್ರಿ, ವಿಜಯಪುರ ನಿವಾಸಿ.

**

ವೃತ್ತ ನವೀಕರಣದ ಜತೆಯಲ್ಲೇ ವಚನಗಳನ್ನು ಉಲ್ಲೇಖಿಸುವ ಕೆಲಸ ನಡೆದರೆ ಒಳ್ಳೆಯದು. ವೃತ್ತದ ಸುತ್ತ ಜಾಹೀರಾತು ಫಲಕ ಅಳವಡಿಸದಂತೆ ಪಾಲಿಕೆ ಕ್ರಮಕೈಗೊಳ್ಳಲಿ – ಅರವಿಂದ ಸಬರದ, ವಿಜಯಪುರ ನಿವಾಸಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT