ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗಾಡಿಯಾ ಲಾಭ ಪಡೆದವರು ಮಾತನಾಡಲಿ

ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆಗ್ರಹ;
Last Updated 17 ಏಪ್ರಿಲ್ 2018, 5:34 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರವೀಣ ತೊಗಾಡಿಯಾ ಅವರಿಂದ ಲಾಭ ಪಡೆದಿರುವ ಬಿಜೆಪಿ ನಾಯಕರು ಮೌನ ವಹಿಸಿರುವುದೇಕೆ? ಅವರು ಮೂಡಿಸಿದ ಹಿಂದುತ್ವದ ಜಾಗೃತಿಯಿಂದಲೇ ಸಂಸದರಾಗಿ ಆಯ್ಕೆಯಾಗಿರುವ ಸುರೇಶ ಅಂಗಡಿ ಮಾತನಾಡುತ್ತಿಲ್ಲವೇಕೆ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಪ್ರಶ್ನಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ವಿಎಚ್‌ಪಿ ಕಟ್ಟಿ ಬೆಳೆಸುವಲ್ಲಿ ತೊಗಾಡಿಯಾ ಅವರ ಶ್ರಮ ಅಪಾರವಾಗಿದೆ. ನನ್ನನ್ನೂ ಸೇರಿಸಿದಂತೆ ಸಾವಿರಾರು ಜನ ಹಿಂದೂ ಕಾರ್ಯಕರ್ತರನ್ನು ತಯಾರು ಮಾಡಿದ್ದಾರೆ. ಹಿಂದುತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇದರ ಲಾಭವು ನೇರವಾಗಿ ಬಿಜೆಪಿಗೆ ದಕ್ಕಿದೆ. ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕೂಡ ತೊಗಾಡಿಯಾ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಈಗ ಅವರ ಬಗ್ಗೆ ತುಟಿಬಿಚ್ಚುತ್ತಿಲ್ಲ’ ಎಂದು ಆರೋಪಿಸಿದರು.

ಆರ್‌ಎಸ್‌ಎಸ್‌ ಪ್ರಮುಖರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹಿಂಬಾಲಕರು ತೊಗಾಡಿಯಾ ಅವರಿಗೆ ಇಲ್ಲಸಲ್ಲದ ಕಿರುಕುಳ ನೀಡಿದ್ದಾರೆ. ವಿಎಚ್‌ಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ತೊಗಾಡಿಯಾ ಬೆಂಬಲಿಗನನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ. ಇದರಿಂದ ಮನನೊಂದ ತೊಗಾಡಿಯಾ ಕಾರ್ಯಾಧ್ಯಕ್ಷ ಸ್ಥಾನ ತೊರೆದಿದ್ದಾರೆ. ಅವರು ಮಾಡಿದ ತಪ್ಪಾದರೂ ಏನು? ಅವರೇನು ಮುಖ್ಯಮಂತ್ರಿ ಸ್ಥಾನ ಕೇಳಿದ್ದರಾ? ರಾಜ್ಯಸಭಾ ಸದಸ್ಯತ್ವ ಕೇಳಿದ್ದರಾ? ಎಂದು ಟೀಕಿಸಿದರು.

‘ಕಳೆದ 32 ವರ್ಷಗಳಿಂದ ತಮ್ಮ ವೈದ್ಯ ವೃತ್ತಿಯನ್ನು ಬಿಟ್ಟು,ಆಸ್ಪತ್ರೆಯನ್ನು ತೊರೆದು ತೊಗಾಡಿಯಾ ಅವರು ಹಿಂದೂ ಧರ್ಮ ಪ್ರಚಾರದಲ್ಲಿ ತೊಡಗಿದ್ದರು. ಬಿಜೆಪಿ ಅಧಿಕಾರಕ್ಕೇರಿದ ನಂತರ ಚುನಾವಣೆ ವೇಳೆ ಆಶ್ವಾಸನೆ ನೀಡಿದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ದೇಶದಾದ್ಯಂತ ಗೋ ಹತ್ಯೆ ನಿಷೇಧ ಹಾಗೂ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದೆ ತಪ್ಪಾ’ ಎಂದು ಪ್ರಶ್ನಿಸಿದರು.

ಉಪವಾಸಕ್ಕೆ ಬೆಂಬಲ: ‘ತಮ್ಮ ವಿರುದ್ಧ ನಡೆದಿರುವ ಚಟುವಟಿಕೆಗಳನ್ನು ಖಂಡಿಸಿ ತೊಗಾಡಿಯಾ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಇದಕ್ಕೆ ಬೆಂಬಲವಾಗಿ ನಾನು ಕೂಡ ಬೆಂಗಳೂರಿನಲ್ಲಿ ಉಪವಾಸ ನಡೆಸಲಿದ್ದೇನೆ’ ಎಂದು ಹೇಳಿದರು.

ಶಿವಸೇನೆಗೆ ಬೆಂಬಲ: ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಜೊತೆಗೂಡಿ ಶ್ರೀರಾಮ ಸೇನೆ ಕಣಕ್ಕಿಳಿಯಲಿದೆ. ರಾಜ್ಯದಲ್ಲಿ ಕನಿಷ್ಠ 100 ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ನುಡಿದರು. ‘ಬೆಳಗಾವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪಿಗೆ ಬದ್ಧರಾಗಿರುತ್ತೇವೆ’ ಎಂದರು.

ಘೋರಿಯಿಂದ ಬಂದಿದ್ದಾರೆ: ಚಿತ್ರನಟ ಪ್ರಕಾಶ ರೈ ಅವರು, ಪರ್ತಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯ ನಂತರ ಘೋರಿಯಿಂದ ಎದ್ದುಬಂದವರಂತೆ ಮಾತನಾಡುತ್ತಿದ್ದಾರೆ.

ಕಲ್ಬುರ್ಗಿ ಹಾಗೂ ಗೌರಿ ಅವರ ಹತ್ಯೆಯು ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದಿದ್ದು, ಪ್ರಕಾಶ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ವಿರುದ್ಧ ಮಾತನಾಡಬೇಕಾಗಿತ್ತು. ಕಾಂಗ್ರೆಸ್‌ ಏಜೆಂಟರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT