ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಚಿವ ಕೆ.ಎನ್.ಗಡ್ಡಿ ರಾಜೀನಾಮೆ ಘೋಷಣೆ

ಕಾಂಗ್ರೆಸ್ ಟಿಕೆಟ್ ತಪ್ಪಿದ್ದಕ್ಕೆ ಬೇಸರ
Last Updated 17 ಏಪ್ರಿಲ್ 2018, 7:20 IST
ಅಕ್ಷರ ಗಾತ್ರ

ನವಲಗುಂದ: ‘ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕಳೆದ 30 ವರ್ಷಗಳಿಂದ ಹೆಚ್ಚು ಒತ್ತುಕೊಟ್ಟು ಹಗಲಿರುಳು ದುಡಿದಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಟಿಕೆಟ್ ಕೊಡುವ ಭರವಸೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಪಕ್ಷದ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡು ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಮಾಜಿ ಸಚಿವ ಕೆ.ಎನ್.ಗಡ್ಡಿ ಎಂದು ಸೋಮವಾರ ತಿಳಿಸಿದರು.

‘ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಲ್ಲರೂ ನನಗೆ ಟಿಕೆಟ್ ಕೊಡುವಂತೆ ಹೈಕಮಾಂಡ್ ಮುಂದೆ ಒಪ್ಪಿಕೊಂಡಿದ್ದರು. ಈಗ ಟಿಕೆಟ್ ಸಿಕ್ಕಿರುವ ವಿನೋದ ಅಸೂಟಿ ಕೂಡ ಮೊದಲು ನನ್ನನ್ನೇ ಬೆಂಬಲಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಎಲ್ಲರೂ ಮಾತಿಗೆ ತಪ್ಪಿದ್ದರಿಂದ ನನಗೆ ಟಿಕೆಟ್ ಸಿಗಲಿಲ್ಲ. ಕಳೆದ ಮೂರು ಚುನಾವಣೆಗಳಲ್ಲಿಯೂ ನಾನು ಸೋತಿದ್ದೆ. ಅದಕ್ಕೆ ಕಾರಣಗಳು ಬೇರೆ ಇದ್ದವು. ಆದರೆ ಈ ಚುನಾವಣೆಯಲ್ಲಿ ಅನುಕಂಪದ ಆಧಾರ ಹಾಗೂ ಎಲ್ಲ ಸಮಾಜದವರು ನನ್ನನ್ನೆ ಬೆಂಬಲಿಸಿ ಗೆಲ್ಲಿಸುತ್ತೇವೆಂದು ಭರವಸೆ ನೀಡಿದ ಕಾರಣ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ’ ಎಂದು ಹೇಳಿದರು.

‘15 ವರ್ಷಗಳಿಂದ ನಾನು ಸೋತಿದ್ದರೂ, ಪಕ್ಷದ ಸಂಘಟನೆ ಬಿಟ್ಟಿರಲಿಲ್ಲ. ನನ್ನ ಕೈಲಾದಷ್ಟು ಹಣ ಖರ್ಚು ಮಾಡಿಕೊಂಡು ಗ್ರಾಮ ಪಂಚಾಯ್ತಿ ಚುನಾವಣೆಯಿಂದ ಹಿಡಿದು ಜಿಲ್ಲಾ ಪಂಚಾಯ್ತಿ ಚುನಾವಣೆಯವರೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದೇನೆ. ಇದೇ ಕಾರಣದಿಂದ ಇಂದು ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆ, ತಾಲ್ಲೂಕು ಪಂಚಾಯ್ತಿ, ಮೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ನಮ್ಮ ವಶದಲ್ಲಿವೆ. ಇದು ನಾನು ಕಾಂಗ್ರೆಸ್ ಪಕ್ಷಕ್ಕೆ ಮಾಡಿದ ಸೇವೆಯಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಪಕ್ಷದ ಸಂಘಟನೆಗಾಗಿ ಒತ್ತುಕೊಡದ, ಈಗ ಬಂದ ಯುವಕರಿಗೆ ಆದ್ಯತೆ ಕೊಡುತ್ತಾರೆಂದರೆ ನನ್ನಿಂದ ಸಹಿಸಿಕೊಳ್ಳಲಾಗುವುದಿಲ್ಲ. ಟಿಕೆಟ್ ಸಿಕ್ಕಿರುವ ವಿನೋದ ಅಸೂಟಿ ನಮ್ಮ ಹತ್ತಿರದ ಸಂಬಂಧಿಯೇ ಆಗಿರಬಹುದು. ನಾನು ಯಾವತ್ತು ಅವನಿಗೆ ಟಿಕೆಟ್ ಕೊಡುವಂತೆ ಹೈಕಮಾಂಡ್ ಬಳಿ ಹೇಳಿಲ್ಲ. ಇದು ಉಹಾಪೋಹ ಮಾತ್ರ’ ಎಂದು ಸ್ಪಷ್ಟಪಡಿಸಿದರು.

‘ಯಾರಿಗೆ ಟಿಕೆಟ್ ಕೊಟ್ಟರು ಒಗ್ಗಟ್ಟು ಪ್ರದರ್ಶನ ಮಾಡುವುದಾಗಿ ಈ ಹಿಂದೆ ಹೈಕಮಾಂಡ್ ಬಳಿ ಮಾತು ಕೊಟ್ಟಿದ್ದಿರಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಲ್ಲರೂ ನನ್ನನ್ನೇ ಬೆಂಬಲಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರ ಅಭಿಪ್ರಾಯ ಭಿನ್ನವಾದ ಕಾರಣ ಟಿಕೆಟ್ ತಪ್ಪಿತು. ಇದರಿಂದಾಗಿ ನಾನು ಬೇಸತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಕೆ.ಎನ್.ಗಡ್ಡಿ ತಿಳಿಸಿದರು.

‘ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ನನ್ನ ಬೆಂಬಲಿಗರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಯಾವುದೇ ಕಾರಣಕ್ಕೂ ಬೇಸತ್ತಿರುವ ನನ್ನ ಬೆಂಬಲಿಗರನ್ನು ಬಿಟ್ಟುಕೊಡುವುದಿಲ್ಲ. ಅವರ ನಿರ್ಧಾರವೇ ಅಂತಿಮ. ಅವರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದ ಎಲ್ಲ ಜನರ, ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇರಿಸುತ್ತೇನೆ’ ಎಂದು ಹೇಳಿದರು.

ಕೆ.ಎನ್.ಗಡ್ಡಿ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ಪಕ್ಷದಲ್ಲಿ ಸಂಚಲನ ಉಂಟಾಯಿತು. ವಿನೋದ ಅಸೂಟಿ ಬೆಂಬಲಿಗರು ಗಡ್ಡಿಯವರಿಗೆ ರಾಜೀನಾಮೆ ಕೊಡದಂತೆ ಕಾಲು ಮುಗಿದು ಕೇಳಿಕೊಂಡರು. ‘ನಿಮ್ಮ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿ ನಮ್ಮದೇನು ಅಭ್ಯಂತರವಿಲ್ಲ’ ಎಂದರು. ಇದಕ್ಕೆ ಒಪ್ಪದ ಗಡ್ಡಿ ಪರ ಕೆಲ ಬೆಂಬಲಿಗರು ‘ವಿನೋದ ಅಸೂಟಿ ಇನ್ನು ಚಿಕ್ಕವನಾಗಿದ್ದು ಈ ಬಾರಿ ಚುನಾವಣೆಯಲ್ಲಿ ಗಡ್ಡಿಯವರಿಗೆ ಬೆಂಬಲಿಸಲಿ. ಮುಂದಿನ ಚುನಾವಣೆಗೆ ವಿನೋದ ಅಸೂಟಿಯವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸೋಣ’ ಎಂದರು.

ಚುನಾಯಿತ ಪ್ರತಿನಿಧಿಗಳ ರಾಜೀನಾಮೆ ಸಂಭವ

‘ಕೆ.ಎನ್.ಗಡ್ಡಿಯವರು ರಾಜೀನಾಮೆ ನೀಡಿರುವ ಹಿನ್ನೆಯಲ್ಲಿ ಪುರಸಭೆ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಹಾಗೂ ಪಕ್ಷದ ಪದಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಮಂಗಳವಾರ ರಾಜೀನಾಮೆ ಸಲ್ಲಿಸುವ ಸಂಭವ ಹೆಚ್ಚಾಗಿದೆ’ ಎಂದು ನವಲಗುಂದ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT