ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಬಿಜೆಪಿ ನೇರ ಸ್ಪರ್ಧೆ

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಗದಗ ಕ್ಷೇತ್ರದಲ್ಲಿ ಅನಿಲ್‌ ಮೆಣಸಿನಕಾಯಿಗೆ ಟಿಕೆಟ್‌
Last Updated 17 ಏಪ್ರಿಲ್ 2018, 8:11 IST
ಅಕ್ಷರ ಗಾತ್ರ

ಗದಗ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದ್ದು ನಿರೀಕ್ಷೆಯಂತೆ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ರಾಮಣ್ಣ ಲಮಾಣಿ, ರೋಣ ಕ್ಷೇತ್ರದಲ್ಲಿ ಕಳಕಪ್ಪ ಬಂಡಿ ಮತ್ತು ನರಗುಂದ ಕ್ಷೇತ್ರದಲ್ಲಿ ಸಿ.ಸಿ ಪಾಟೀಲ ಅವರಿಗೆ ಟಿಕೆಟ್‌ ಲಭಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಗದಗ ಮತ ಕ್ಷೇತ್ರದಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರಿಗೆ ಟಿಕೆಟ್ ಕೈತಪ್ಪಿದೆ.

2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡನೆ ಸ್ಥಾನ ಪಡೆದು ಗಮನ ಸೆಳೆದಿದ್ದ ಅನಿಲ್‌ ಮೆಣಸಿನಕಾಯಿ ಅವರಿಗೆ ಟಿಕೆಟ್‌ ಲಭಿಸಿದೆ.

ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌.ಕೆ.ಪಾಟೀಲ ಅವರ ಸ್ಪರ್ಧೆಯಿಂದ ಗದಗ ಮತಕ್ಷೇತ್ರ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಅವರ ಎದುರಾಳಿ ಯಾರು ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ರಾಜು ಕುರಡಗಿ ಸೇರಿದಂತೆ ಒಟ್ಟು 8 ಮಂದಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದರು.

ಇವರೆಲ್ಲರಿಗೂ ಟಿಕೆಟ್‌ ಕೈತಪ್ಪಿದೆ. ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಭೀಮಸಿಂಗ್‌ ರಾಠೋಡ ಮತ್ತು ಕಳೆದ ಬಾರಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗಮನ ಸೆಳೆದಿದ್ದ ಜಯಶ್ರೀ ಹಳ್ಳೆಪ್ಪನವರ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದರು. ಇವರಿಬ್ಬರಿಗೆ ಪಕ್ಷ ಮಣೆ ಹಾಕಿಲ್ಲ.

ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಅಂದರೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳಲ್ಲಿ ವಿಜಯದ ಬಾವುಟ ಹಾರಿಸಿತು.

ಆ ವರ್ಷ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಎಚ್‌.ಕೆ ಪಾಟೀಲ ಅವರು, ಶ್ರೀಶೈಲಪ್ಪ ಬಿದರೂರ ಅವರ ವಿರುದ್ಧ ಪರಾಭವಗೊಂಡಿದ್ದರು.

2013ರಲ್ಲಿ ಚುನಾವಣೆ ನಡೆಯುವಾಗ ಬಿಜೆಪಿ ಅಧಿಕಾರದಲ್ಲಿದ್ದರೂ ಪಕ್ಷ ಹೀನಾಯವಾಗಿ ಸೋತಿತ್ತು. ಬಿ.ಎಸ್‌. ಯಡಿಯೂರಪ್ಪ ಕಟ್ಟಿದ್ದ ಕೆಜೆಪಿ ಹಾಗೂ ಶ್ರೀರಾಮುಲು ಸ್ಥಾಪಿಸಿದ್ದ ಬಿಎಸ್ಆರ್ ಕಾಂಗ್ರೆಸ್‌ ಜಿಲ್ಲೆಯಲ್ಲಿ ಕಮಲ ಮುದುಡುವಲ್ಲಿ ಪ್ರಮುಖ ಕಾರಣವಾಗಿತ್ತು.

ಆದರೆ, ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅನಿಲ್‌ ಮೆಣಸಿನಕಾಯಿ 36,478 ಮತಗಳನ್ನು ಪಡೆಯುವ ಮೂಲಕ ಎಚ್‌.ಕೆ ಪಾಟೀಲ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಠೇವಣಿ ಕಳೆದುಕೊಂಡಿದ್ದರು.

ಬಂಡಾಯ ಹಾಗೂ ರೈತ ಚಳವಳಿ ಮೂಲಕ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗಿದ್ದ ನರಗುಂದ ಮತ ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಶಾಸಕರಾಗಿ, ಸಚಿವ ಸ್ಥಾನ ಅಲಂಕರಿಸಿದ್ದ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿ.ಸಿ.ಪಾಟೀಲ ಅವರಿಗೆ ಅವರಿಗೆ ಟಿಕೆಟ್‌ ಲಭಿಸಿದೆ.

ಐದು ಬಾರಿ ಶಾಸಕರಾಗಿರುವ ಕಾಂಗ್ರೆಸ್‌ನ ಬಿ.ಆರ್‌. ಯಾವಗಲ್‌ ಅವರು ಅವರಿಗೆ ಪ್ರತಿಸ್ಪರ್ಧಿ. ರೋಣ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು, ಒಮ್ಮೆ ಸೋತಿರುವ ಮಾಜಿ ಸಚಿವ ಕಳಕಪ್ಪ ಬಂಡಿಗೆ ಟಿಕೆಟ್‌ ಖಾತ್ರಿಯಾಗಿದೆ. ಕಾಂಗ್ರೆಸ್‌ನ ಹಾಲಿ ಶಾಸಕ ಜಿ.ಎಸ್.ಪಾಟೀಲ ಅವರ ಪ್ರತಿಸ್ಪರ್ಧಿ.

ದೇವಾಲಯ ದರ್ಶನ: ಟಿಕೆಟ್‌ ಖಾತ್ರಿಯಾದ ಬೆನ್ನಲ್ಲೇ ಅನಿಲ್‌ ಮೆಣಸಿನಕಾಯಿ ಬೆಂಬಲಿಗರೊಂದಿಗೆ ಸೋಮವಾರ ಸಂಜೆ ನಗರದಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮೆಣಸಿನಕಾಯಿ ಅವರ ಅಭಿಮಾನಿ ಗಳು ಸಂಭ್ರಮಾಚರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT