ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರದಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆ

ಗುಟುಕು ನೀರಿಗಾಗಿ ಗ್ರಾಮಸ್ಥರ ಪರದಾಟ
Last Updated 17 ಏಪ್ರಿಲ್ 2018, 8:13 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಗದಗ ಜಿಲ್ಲೆ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಕಟ್ಟಕಡೆಯ ಗ್ರಾಮವಾಗಿರುವ ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಲ್ಲಾಪುರದಲ್ಲಿ ನೀರಿನ ಸಮಸ್ಯೆ ಉಲ್ಭಣಿಸಿದ್ದು ನಿತ್ಯ ಗುಟುಕು ನೀರಿಗಾಗಿ ಇಲ್ಲಿನ ಗ್ರಾಮಸ್ಥರು ಇನ್ನಿಲ್ಲದ ಬವಣೆ ಪಡುತ್ತಿದ್ದಾರೆ.

ಗ್ರಾಮದಲ್ಲಿ ಪಂಚಾಯ್ತಿಗೆ ಸೇರಿದ ಕೇವಲ ಎರಡು ಕೊಳವೆ ಬಾವಿಗಳು ಇದ್ದು ಅವುಗಳ ನೀರೂ ಪಾತಾಳ ಸೇರಿದೆ. ಹೀಗಾಗಿ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮದ ಪ್ರವೇಶ ದ್ವಾರದಲ್ಲಿ ಒಂದು ಹಾಗೂ ಲಂಬಾಣಿ ತಾಂಡಾದಲ್ಲಿನ ಕೊಳವೆ ಬಾವಿಗಳು ಸದ್ಯ ಊರ ಜನರ ದಾಹವನ್ನು ತಣಿಸುತ್ತಿವೆ. ಆದರೆ ವಿದ್ಯುತ್‌ ಕೈಕೊಟ್ಟಾಗ ಕೊಳವೆ ಬಾವಿಗಳು ಬಂದಾಗುತ್ತವೆ. ಹೀಗಾಗಿ ಊರಿನ ಎಲ್ಲರಿಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ.

‘ನೀರ ತರಾಕಂತನ ದಿನಾ ಒಂದಾಳು ನಿಲ್ಲಬೇಕಾಗೇತ್ರಿ. ಆದರೂ ಸಾಕಾಗುವಷ್ಟು ನೀರು ಬರವಲ್ದು. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೇಳಿ ಹೇಳಿ ಸಾಕಾಗೇತ್ರಿ’ ಎಂದು ನಾಗನಗೌಡ ಹರಕುಣಿ, ರಮೇಶ ಅಕ್ಕೂರ, ಬಸವರಾಜ ಅಕ್ಕೂರ, ಜುಂಜುನಗೌಡ ನರಸಮ್ಮನವರ, ಶೇಖರಪ್ಪ ಅಕ್ಕೂರ, ರಾಮಚಂದ್ರಪ್ಪ ಲಮಾಣಿ, ಶಾಂತನಗೌಡ ನರಸಮ್ಮನವರ, ಗಣೇಶ ಲಮಾಣಿ, ನಿಂಗಪ್ಪ ಕಡೇಮನಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಲಕ್ಷ್ಮೇಶ್ವರ ತಾಲ್ಲೂಕಿನ ಯಲ್ಲಾಪುರದ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಸಧ್ಯ ಡಿಬಿಒಟಿ ಯೋಜನೆಯಡಿ ಪೈಪ್‌ಲೈನ್‌ ಹಾಕಲಾಗುತ್ತಿದ್ದು ಅದು ಪೂರ್ಣಗೊಂಡ ನಂತರ ಗ್ರಾಮಕ್ಕೆ ನೀರಿನ ಸಮಸ್ಯೆ ಬಗೆ ಹರಿಯಲಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ವೈ. ಗುರಿಕಾರ ಹೇಳುತ್ತಾರೆ.

ಐದು ಜನ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದು ಅವರು ಊರಿನ ನೀರಿನ ಬವಣೆ ಪರಿಹರಿಸಲು ಪ್ರಯತ್ನ ಮಾಡಬೇಕಾಗಿದೆ. ‘ಒಂದ್ಸಲ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಕಟ್ಟಿ ಹಾಕಿದರ ಆವಾಗ ಅವರಿಗೆ ನಮ್ಮ ಸಂಕಟಾ ಏನಂತ ಗೊತ್ತಾಗತೈತಿ. ಹ್ಯಂಗಿದ್ದರೂ ಇಲೆಕ್ಷನ್‌ ಬಂದೇತಿ. ನಮ್ಮ ಸಮಸ್ಯೇನ ಯಾರ ಪರಿಹಾರ ಮಾಡ್ತಾರ ಅವರಿಗೆ ಓಟು ಕೊಡ್ತೇವಿ’ ಎಂದು ಯಲ್ಲಾಪುರದ ಜನರು ಸಿಟ್ಟು ಹೊರ ಹಾಕುತ್ತಾರೆ. ಸದ್ಯಕ್ಕೆ ಗ್ರಾಮ ಪಂಚಾಯ್ತಿಯವರು ಟ್ಯಾಂಕರ್‌ ಮೂಲಕ ನೀರ ಕೊಟ್ರ ಚಲೋ ಅಕ್ಕೈತ್ರಿ’ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT