ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ, ಸೇಡಂ: ಹಳಬರಿಗೆ ಮಣೆ; ಉತ್ತರಕ್ಕೆ ಬಿ.ಜಿ. ಪಾಟೀಲ ಪುತ್ರ

ಗ್ರಾಮೀಣ, ಚಿಂಚೋಳಿ, ಚಿತ್ತಾಪುರ ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಕಗ್ಗಂಟು
Last Updated 17 ಏಪ್ರಿಲ್ 2018, 8:57 IST
ಅಕ್ಷರ ಗಾತ್ರ

ಕಲಬುರ್ಗಿ: ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ ಅವರ ಪುತ್ರ ಚಂದ್ರಕಾಂತ ಪಾಟೀಲ ಅವರಿಗೆ ಕಲಬುರ್ಗಿ ಉತ್ತರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.ಆ ಮೂಲಕ ಬಿಜೆಪಿ ಸಹ ಕುಟುಂಬ ರಾಜಕೀಯಕ್ಕೆ ಅಸ್ತು ಎಂದಿದೆ.

ಜೇವರ್ಗಿ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಹಾಗೂ ಸೇಡಂ ಕ್ಷೇತ್ರದಲ್ಲಿ ರಾಜಕುಮಾರ ಪಾಟೀಲ ತೆಲ್ಕೂರ್‌ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ದೊಡ್ಡಪ್ಪಗೌಡ ಮೂರನೇ ಬಾರಿ ಕಣಕ್ಕಿಳಿಯಲಿದ್ದಾರೆ. ಸೋಲಿನಲ್ಲಿಯೂ ಹ್ಯಾಟ್ರಿಕ್‌ ಸಾಧಿಸಿರುವ ರಾಜಕುಮಾರ ಅವರಿಗೆ ಇದು ನಾಲ್ಕನೇ ಅವಕಾಶ. ಟಿಕೆಟ್‌ ನಿರೀಕ್ಷೆಯಲ್ಲಿದ್ದ ಅವರು ಈಗಾಗಲೇ ಸೇಡಂ ಕ್ಷೇತ್ರದಲ್ಲಿ ‘ಯಾತ್ರೆ’ಯನ್ನೂ ನಡೆಸಿದ್ದರು.

ಕಲಬುರ್ಗಿ ಉತ್ತರ ಕ್ಷೇತ್ರಕ್ಕೆ ಬಿಜೆಪಿ ರಾಜ್ಯ ಘಟಕದ ಸಹ ವಕ್ತಾರ, ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ನಮೋಶಿ, ಸೇಡಂಗೆ ರಾಜಗೋಪಾಲರೆಡ್ಡಿ ಮುದಿರಾಜ್‌ ಅವರೂ ಬಿಜೆಪಿ ಟಿಕೆಟ್‌ಗೆ ತೀವ್ರ ಕಸರತ್ತು ನಡೆಸಿದ್ದರು.

ಕಗ್ಗಂಟು: ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಳ್ಳಲು ಮಾಜಿ ಸಚಿವ ರೇವೂ ನಾಯಕ ಬೆಳಮಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಮತ್ತಿಮೂಡ, ಚಿಂಚೋಳಿ ಕ್ಷೇತ್ರದಿಂದ ಮಾಜಿ ಸಚಿವ ಸುನೀಲ್‌ ವಲ್ಲ್ಯಾಪುರೆ, ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವನ್‌ ಯಾಕಾಪುರ, ಸುಭಾಸ ರಾಠೋಡ ಹಾಗೂ ಚಿತ್ತಾಪುರದಲ್ಲಿ ಮಾಜಿ ಶಾಸಕ ವಾಲ್ಮೀಕ್‌ ನಾಯಕ್‌ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ ಚವಾಣ್‌ ಅವರ ಮಧ್ಯೆ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಮೊದಲ ಪಟ್ಟಿ: ಕಲಬುರ್ಗಿ ದಕ್ಷಿಣಕ್ಕೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಅಫಜಲಪುರಕ್ಕೆ ಮಾಲೀಕಯ್ಯ ಗುತ್ತೇದಾರ, ಆಳಂದಕ್ಕೆ ಸುಭಾಸ ಗುತ್ತೇದಾರ ಅವರಿಗೆ ಈಗಾಗಲೇ ಮೊದಲ ಪಟ್ಟಿಯಲ್ಲಿಯೇ ಟಿಕೆಟ್‌ ಘೋಷಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಒಬ್ಬರು ಲಿಂಗಾಯತರು, ಇಬ್ಬರು ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡಲಾಗಿತ್ತು. ಈಗ ಟಿಕೆಟ್‌ ಘೋಷಣೆಯಾಗಿರುವ ಮೂವರೂ ಲಿಂಗಾಯತರು.

‘ಕುಟುಂಬ’ದ ಎದುರಾಳಿಗಳು ಬದಲು

ಕಲಬುರ್ಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ನ ದಿವಂಗತ ಖಮರುಲ್‌ ಇಸ್ಲಾಂ ವಿರುದ್ಧ ಬಿ.ಜಿ.ಪಾಟೀಲ ಅವರು ಕಣಕ್ಕಿಳಿದಿದ್ದರು. ಈಗ ಖಮರುಲ್‌ ಅವರ ಪತ್ನಿ ಕನೀಜ್ ಫಾತಿಮಾ ಮತ್ತು ಬಿ.ಜಿ. ಪಾಟೀಲ ಅವರ ಪುತ್ರ ಚಂದ್ರಕಾಂತ ಅವರು ಎದುರಾಳಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT