ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿನಿಂದ ಚುನಾವಣಾ ಕಣದಲ್ಲಿ ಹೋರಾಟ

ಕಾರ್ಯಕರ್ತರು, ಪ್ರಮುಖರ ಸಭೆಯ ಬಳಿಕ ಕೇಂದ್ರ ಸಚಿವ ಅನಂತಕುಮಾರ ಹೆಗಡೆ
Last Updated 17 ಏಪ್ರಿಲ್ 2018, 9:05 IST
ಅಕ್ಷರ ಗಾತ್ರ

ಕಾರವಾರ: ಚುನಾವಣಾ ಟಿಕೆಟ್ ನಿರೀಕ್ಷಿಸಿದ್ದ ಕೆಲವರಿಗೆ ಬೇಸರವಾಗಿದೆ. ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ತಮ್ಮ ಭಾವನೆಗಳನ್ನು ಪ್ರಕಟಿಸಿದ್ದಾರೆ. ಈಗ ಎಲ್ಲವೂ ಸರಿಯಾಗಿದ್ದು, ಪಕ್ಷದ ಕಾರ್ಯಕರ್ತರು ಏಕ ಮನಸ್ಸಿನಲ್ಲಿ, ಹುಮ್ಮಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರ ಸಭೆಯ ಬಳಿಕ  ಸುದ್ದಿಗಾರರ ಜತೆ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಹೆಚ್ಚಿದೆಯಲ್ಲ ಎಂದು ಪತ್ರಕರ್ತರು ಕೇಳಿದಾಗ, ‘ಈ ವಿಚಾರದಲ್ಲಿ ನನಗೆ ಖುಷಿಯಾಗುತ್ತಿದೆ. ಒಂದು ಕಾಲದಲ್ಲಿ ಅಭ್ಯರ್ಥಿಗಳನ್ನು ಹುಡುಕಿಕೊಂಡು ಹೋಗಬೇಕಿತ್ತು. ಆದರೆ, ಈಗ ಹಲವರು ತಮ್ಮ ಆಸಕ್ತಿ ತೋರ್ಪಡಿಸುತ್ತಿದ್ದಾರೆ. ಪಕ್ಷದಲ್ಲಿ ಇರುವ ಎಲ್ಲರೂ ಪ್ರಬುದ್ಧ ರಾಜಕಾರಣಿಗಳು. ಎಲ್ಲರೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

ಟಿಕೆಟ್ ಸಿಗದ ಕಾರಣ ಅಸಮಾಧಾನ ವ್ಯಕ್ತಪಡಿಸಿದ್ದ ಗಣಪತಿ ಉಳ್ವೇಕರ್ ಅವರಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಸಂಘಟನೆ ಬಲಪಡಿಸುವ ವಿಶೇಷ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದರು.

ದಿನೇಶ್ ಗುಂಡೂರಾವ್ ವಿರುದ್ಧ ಟೀಕೆ:

‘ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಚಪ್ಪಲಿಯಿಂದ ಹೊಡೆಯಿರಿ’ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿರುದ್ಧ ಸಚಿವ ಹೆಗಡೆ ಟೀಕಾಪ್ರಹಾರ ಮಾಡಿದರು.

‘ಅವರ ಹೇಳಿಕೆ ಅವರ ಹಾಗೂ ಕಾಂಗ್ರೆಸ್‌ನ ಸಂಸ್ಕೃತಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ನಡೆದ ಹಿಂದೂಪರ ವಿವಿಧ ಸಂಘಟನೆಗಳ 24ಕ್ಕೂ ಹೆಚ್ಚು ಕಾರ್ಯಕರ್ತರು ಹೇಗೆ ಕೊಲೆಯಾದರು ಎಂಬುದನ್ನು ಅವರ ಮಾತುಗಳು ಸ್ಪಷ್ಟಪಡಿಸುತ್ತವೆ. ಅವರು ತಮ್ಮ ಹೇಳಿಕೆಗೆ ಖೇದ ವ್ಯಕ್ತಪಡಿಸಿದ್ದಾರೆ. ಇಂತಹ ಮಾತುಗಳು ಮರುಕಳಿಸಿದರೆ ಮುಂದೆ ಪ್ರಜಾಸತ್ತಾತ್ಮಕ ರೀತಿಯಲ್ಲೇ ಉತ್ತರ ನೀಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷವು ಈಗಾಗಲೇ ನೈತಿಕವಾಗಿ ಕಂಗೆಟ್ಟಿದ್ದು, ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಆದ್ದರಿಂದ ಈಗಿನ ಶಾಸಕರು, ಸಚಿವರ ಕುಟುಂಬ ಸದಸ್ಯರಿಗೇ ಟಿಕೆಟ್ ನೀಡಲಾಗಿದೆ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT