ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ, ಕಾಣಿಕೆಗೆ ಮತ ಮಾರಿಕೊಳ್ಳದಿರಿ: ಸಿಇಒ

ಜಿ. ಪಂ. ಸಭಾಂಗಣದಲ್ಲಿ ಮತದಾನ ಜಾಗೃತಿ ಕಾರ್ಯಾಗಾರದಲ್ಲಿ ಸಿಇಒ ಹೇಳಿಕೆ
Last Updated 17 ಏಪ್ರಿಲ್ 2018, 9:29 IST
ಅಕ್ಷರ ಗಾತ್ರ

ಕೊಪ್ಪಳ: ‘ಮತವನ್ನು ಹಣ, ಅಥವಾ ಕಾಣಿಕೆ ನೀಡುವಂತಹ ಆಮಿಷಗಳಿಗೆ ಮತ ಮಾರಿಕೊಳ್ಳದಂತೆ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ವತಿಯಿಂದ ಸಂಜೀವಿನಿ, ಎನ್‍ಆರ್‌ಎಲ್‍ಎಂ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಗಳ ಸಂಯೋಜಕರ ಮತದಾನ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಸಮಾಜದ ಮನಸ್ಥಿತಿ ಬದಲಾವಣೆಯಲ್ಲಿ ಮಹಿಳಾ ಘಟಕಗಳು ಬಹಳಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಶೌಚಾಲಯ ನಿರ್ಮಾಣ ಸಂದರ್ಭದಲ್ಲಿಯೂ ಇಂತಹ ಘಟಕಗಳು ಜನರ ಮನವೊಲಿಸುವಲ್ಲಿ ಪರಿಣಾಮಕಾರಿಯಾಗಿದ್ದು, ಜಿಲ್ಲೆ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಲು ತಮ್ಮದೇ ಆದ ಕೊಡುಗೆಯನ್ನು ಮಹಿಳಾ ಘಟಕಗಳು ನೀಡಿವೆ. ಇದೀಗ ಚುನಾವಣೆಯಲ್ಲಿ ಮತದಾರರಿಗೆ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮಹಿಳೆಯರು ಬದ್ಧತೆ ಪ್ರದರ್ಶಿಸುವ ಕಾಲ ಕೂಡಿ ಬಂದಿದೆ’ ಎಂದರು.

ಪಿಂಕ್‌ ಮತಗಟ್ಟೆ

‘ಮನೆಗಳಲ್ಲಿ ತಮ್ಮ ಮನೆಯ ಕಾರ್ಯದಲ್ಲಿ ಸದಾ ನಿರತರಾಗಿರುವ ಮಹಿಳೆಯರು, ಮತದಾನ ಜಾಗೃತಿಗೆ ಗ್ರಾಮೀಣ ಪ್ರದೇಶಗಳಲ್ಲಿ ಏರ್ಪಡಿಸಲಾಗುತ್ತಿರುವ ಮತದಾನ ಯಂತ್ರ, ವಿವಿ ಪ್ಯಾಟ್ ಕಾರ್ಯವಿಧಾನ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳದಿರುವುದು ಕಂಡುಬಂದಿದೆ. ಹೀಗಾಗಿ ಮಹಿಳೆಯರಿಗೆ ಸ್ಥಳೀಯವಾಗಿ ಸುಶಿಕ್ಷಿತ ಮಹಿಳೆಯರೇ ನೈತಿಕ ಮತದಾನ ಕುರಿತು ಅರಿವು ಮೂಡಿಸಬೇಕು. ಮಹಿಳೆಯರಲ್ಲಿ ನೈತಿಕ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ತಲಾ ಒಂದು ಮತಗಟ್ಟೆಯನ್ನು ಮಾದರಿ ಮತಗಟ್ಟೆಗಳನ್ನಾಗಿ ನಿರ್ಮಿಸಲಾಗುತ್ತಿದೆ. ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು, ಸಹಾಯಕ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೊಡಗೂಡಿ ಎಲ್ಲರೂ ಮಹಿಳೆಯರೇ ಇರುತ್ತಾರೆ. ಇದನ್ನು ಪಿಂಕ್ ಮತಗಟ್ಟೆ ಎಂದು ಕರೆಯಲಾಗುತ್ತಿದ್ದು, ಇದರಲ್ಲಿ ವಿಶೇಷ ವ್ಯವಸ್ಥೆಗಳನ್ನೂ ಕೂಡ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ನಿರ್ದೇಶಕ ಶರಣಪ್ಪ, ಕುಷ್ಟಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಇದ್ದರು.

**

ಮತಕ್ಕಾಗಿ ಆಮಿಷವೊಡ್ಡುವುದು ಅಥವಾ ಪಡೆಯುವುದು ಕೂಡ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಇದು ಶಿಕ್ಷಾರ್ಹ ಅಪರಾಧ. ಇಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಮಹಿಳೆಯರು ಜಾಗೃತಿ ಮೂಡಿಸಬೇಕು – ವೆಂಕಟರಾಜಾ, ಸಿಇಒ, ಜಿಲ್ಲಾ ಪಂಚಾಯಿತಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT