ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ವಂಚಿತ ಕೆ.ಆರ್‌.ಪೇಟೆ ತಾಲ್ಲೂಕು

ಗ್ರಾಮೀಣ ರಸ್ತೆಗಳ ದುಸ್ಥಿತಿ, ಅಸಮರ್ಪಕ ವಿದ್ಯುತ್‌ ಪೂರೈಕೆ, ವಸತಿ ಗೃಹಗಳಲ್ಲಿ ಮಹಿಳಾ ಪದವಿ ಕಾಲೇಜು
Last Updated 17 ಏಪ್ರಿಲ್ 2018, 9:52 IST
ಅಕ್ಷರ ಗಾತ್ರ

ಮಂಡ್ಯ: ನನಗುದಿಗೆ ಬಿದ್ದ ಹೊಸಹೊಳಲು ಮೇಲ್ಗಾಲುವೆ ಯೋಜನೆ, ಹೇಮಾವತಿ ನೀರು ಕಾಣದ ನಾಲೆಗಳು, ಗ್ರಾಮೀಣ ರಸ್ತೆಗಳ ದುರವಸ್ಥೆ, ಅಸಮರ್ಪಕ ವಿದ್ಯುತ್‌ ಪೂರೈಕೆ, ನಾಶವಾಗುತ್ತಿರುವ ತೆಂಗು, ಕೆರೆಯೊಳಗೆ ಮುಳುಗಿದ ಸಾರಿಗೆ ಬಸ್‌ನಿಲ್ದಾಣ, ನೀರಾವರಿ ಇಲಾಖೆ ವಸತಿ ಗೃಹದಲ್ಲಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜು...ಇವೇ ಮುಂತಾದ ಪ್ರಮುಖ ಸಮಸ್ಯೆಗಳು ಕೆ.ಆರ್‌.ಪೇಟೆ ತಾಲ್ಲೂಕನ್ನು ಕಾಡುತ್ತಿವೆ.

ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದಿರುವ ಕೆ.ಆರ್‌.ಪೇಟೆ ತಾಲ್ಲೂಕಿನ ಜನರು ಅನುಭವಿಸುತ್ತಿರುವ ಸಮಸ್ಯೆಗಳು ಒಂದಲ್ಲ, ಎರಡಲ್ಲ. ಸದಾ ಬರಗಾಲ ಅನುಭವಿಸುವ ಅಲ್ಲಿಯ ಗ್ರಾಮಗಳಿಗೆ ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಇತ್ತ ಕೆ.ಆರ್‌.ಎಸ್‌ ಜಲಾಶಯದ ನೀರು ಇಲ್ಲ, ಅತ್ತ ಹೇಮಾವತಿ ಜಲಾಶಯದ ನೀರೂ ಇಲ್ಲ. ಒಂದು ರೀತಿಯ ತ್ರಿಶಂಕು ಸ್ಥಿತಿ. ನಾಲೆಗಳಿದ್ದರೂ ನೀರು ಹರಿಯುವುದಿಲ್ಲ. ಹಾಸನ ಜಿಲ್ಲೆಯನ್ನು ದಾಟಿ ಹೇಮಾವತಿ ಹರಿದು ಬರುವಷ್ಟರಲ್ಲಿ ರೈತರ ಸ್ಥತಿ ಅಧೋಗತಿ ತಲುಪುತ್ತದೆ.

ಹೇಮಾವತಿ ನೀರಿನಿಂದ ವಂಚಿತರಾದ ಅಚ್ಚುಕಟ್ಟಿನ ರೈತರಿಗಾಗಿ ಕಳೆದ ‘ಹೊಸಹೊಳಲು ಮೇಲ್ಗಾಲುವೆ ಯೋಜನೆ’ ರೂಪಿಸಲಾಗಿತ್ತು. ಕೆ.ಆರ್‌.ಪೇಟೆ ಕೃಷ್ಣ ಅವರು ಯೋಜನೆಯ ರೂವಾರಿಯಾಗಿದ್ದರು. ನಂತರ ಅವರು ಲೋಕಸಭಾ ಸದಸ್ಯರಾಗಿ ದೆಹಲಿ ಸೇರಿದ ನಂತರ ಯೋಜನೆ ಹಳ್ಳ ಹಿಡಿಯಿತು. ಎಲ್ಲಾ ಪಕ್ಷಗಳ ಶಾಸಕರು ಈ ಯೋಜನೆ ಹೆಸರು ಹೇಳಿಕೊಂಡೇ ಅಧಿಕಾರ ಅನುಭವಿಸಿದ್ದಾರೆ. ಆದರೆ ರೈತರ ಬಹುಕಾಲದ ಬೇಡಿಕೆ ಈಡೇರಿಲ್ಲ. ಹೊಸಹೊಳಲು ಕೆರೆಯ ನೀರನ್ನು ಕಾಲುವೆಗಳ ಮೂಲಕ ಮೆಣಸ, ಅಗ್ರಹಾರ ಬಾಚಹಳ್ಳಿ ಭಾಗದ 5 ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಉದ್ದೇಶ ಯೋಜನೆಗೆ ಇದೆ. ಎರಡು ದಶಕದಿಂದ ಯೋಜನೆಗೆ ಮುಕ್ತಿ ನೀಡಲು ಸಾಧ್ಯವಾಗಿಲ್ಲ.

ನಾಲೆಗಳಿಗೆ ನೀರಿಲ್ಲ:
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಹೇಮಾವತಿ ಬಲದಂಡೆ, ಎಡದಂತೆ ನಾಲೆಗಳಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಾಲುವೆ ಕಾಮಗಾರಿಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಅಲ್ಲಿ ನೀರು ಹರಿಸುವ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ರೈತರು ದೂರುತ್ತಾರೆ. ನಾಲೆ ನಿರ್ಮಿಸಿ ಹಲವು ವರ್ಷಗಳಾದರೂ ಒಂದೇ ಒಂದು ಬಾರಿ ನೀರು ಹರಿಯದ ಹಲವು ಉದಾಹರಣೆಗಳಿವೆ. ಈ ಬಾರಿ ಕೆಲವು ಕೆರೆಗಳನ್ನು ತುಂಬಿಸಲಷ್ಟೇ ಸಾದ್ಯವಾಗಿದೆ. ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಒಂದು ಬೆಳೆ ಬೆಳಯಲು ಶಕ್ತರಾಗಿದ್ದಾರೆ. ಆದರೆ ನಾಲಾ ಅಚ್ಚುಕಟ್ಟಿನಲ್ಲಿರುವ ರೈತರು ನೀರನ್ನೇ ಕಂಡಿಲ್ಲ.

‘ಜನಪ್ರತಿನಿಧಿಗಳು, ಎಂಜಿನಿಯರ್‌ ಗಳಲ್ಲಿರುವ ಇಚ್ಛಾಶಕ್ತಿಯ ಕೊರತೆಯಿಂದ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ತಾಂತ್ರಿಕ ತಿಳಿವಳಿಕೆ ಇಲ್ಲದವರು ಎಂಜಿನಿಯರ್‌ಗಳಾಗಿದ್ದಾರೆ. ನಮ್ಮ ಶಾಸಕರಿಗೆ ಇತಿಹಾಸ, ಅಂಕಿ ಅಂಶಗಳ ಅರಿವಿಲ್ಲ. ಸುಮ್ಮನೇ ಜೋರಾಗಿ ಮಾತನಾಡುವುದಷ್ಟೇ ಅವರಿಗೆ ಗೊತ್ತು. ಒಂದು ಯೋಜನೆಯನ್ನು ರೂಪಿಸಿದ ನಂತರ ಅದರ ಮಹತ್ವ, ಪರಿಣಾಮಗಳ ಅರಿವು ಅವರಿಗೆ ಇರಬೇಕು. ಆದರೆ ನಮ್ಮ ನಮ್ಮ ಜನಪ್ರತಿನಿಧಿಗಳಿಗೆ ಯಾವ ನೀರಾವರಿ ಯೋಜನೆಗಳ ಮಾಹಿತಿಯೂ ಇಲ್ಲ. ಹೀಗಾಗಿ ನೀರಾವರಿ ಯೋಜನೆಗಳಿಗೆ ಜೀವ ಬರುತ್ತಿಲ್ಲ’ ಎಂದು ರೈತಸಂಘದ ಮುಖಂಡ ಎಂ.ವಿ.ರಾಜೇಗೌಡ ಹೇಳಿದರು.

ನಾಲೆ ಮುಚ್ಚುತ್ತಿರುವ ರೈತರು:
ಕೆ.ಆರ್‌.ಪೇಟೆ ತಾಲ್ಲೂಕಿನ ಹಲವೆಡೆ ರೈತರು ನಾಲೆಗಳನ್ನು ಮುಚ್ಚಿದ್ದಾರೆ. ಹೇಮಾವತಿ ನೀರು ಹರಿದು ಬರುತ್ತದೆ ಎಂಬ ಆಸೆಯಿಂದ ಅವರು ನಾಲೆಗೆ ಜಾಗ ಕೊಟ್ಟಿದ್ದರು. ಆದರೆ ನೀರು ಬಾರದ ಕಾರಣ ವ್ಯರ್ಥವಾಗುತ್ತಿದ್ದ ಭೂಮಿ ಉಳಿಸಿಕೊಳ್ಳುವ ಉದ್ದೇಶದಿಂದ ನಾಲೆ ಮುಚ್ಚಿದ್ದಾರೆ. ‘ಬೂಕನಕೆರೆ ಹೋಬಳಿಯ 64ನೇ ವಿತರಣಾ ನಾಲೆ ನಿರ್ಮಿಸಿ ಹಲವು ವರ್ಷಗಳೇ ಉರುಳಿವೆ. ಅಲ್ಲಿ ಒಮ್ಮೆಯೂ ನೀರು ಹರಿದ ಉದಾಹರಣೆ ಗಳಿಲ್ಲ. ಹೀಗಾಗಿ ಆ ಭಾಗದ ರೈತರು ನಾಲೆಯನ್ನು ಮುಚ್ಚಿ ಜಮೀನು ಮಾಡಿಕೊಂಡಿದ್ದಾರೆ’ ಎಂದು ರೈತ ವೆಂಕಟೇಶ್ ಹೇಳಿದರು.

ಗ್ರಾಮೀಣ ರಸ್ತೆಗಳ ದುರವಸ್ಥೆ :
ಮಂಡ್ಯ ಮತ್ತು ಬೇರ‍್ಯ ನಡುವೆ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಪಾಂಡವಪುರ, ಗಂಜಿಗೆರೆ, ಸೋಮನಹಳ್ಳಿ ಮಾರ್ಗವಾಗಿ ರಸ್ತೆ ನಿರ್ಮಾಣಗೊಂಡಿದ್ದರೆ ಪ್ರಯಾಣಿಕರು ನೂರಾರು ಕಿ.ಮೀ ಪ್ರಯಾಣ ಮಾಡುವ ಅವಸ್ಥೆ ತಪ್ಪುತ್ತಿತ್ತು. ಯೋಜನೆಯ ಬಗ್ಗೆ ಮಾತುಗಳು ಕೇಳಿ ವ್ಯಾಪಕವಾಗಿ ಕೇಳಿಬಂದರೂ ಕಾಮಗಾರಿ ಆರಂಭವಾಗಲಿಲ್ಲ. ಇದಲ್ಲದೆ ತಾಲ್ಲೂಕಿನಲ್ಲಿ ಗ್ರಾಮೀಣ ರಸ್ತೆಗಳ ದುರವಸ್ಥೆಯಿಂದಾಗಿ ಜನರು ಹೈರಾಣಾಗಿದ್ದಾರೆ.

‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಅಡಿ ರಸ್ತೆ ನಿರ್ಮಾಣ ಮಾಡಿರುವುದಾಗಿ ಶಾಸಕರು ಭಾಷಣ ಮಾಡುತ್ತಾರೆ. ಆದರೆ ರಸ್ತೆಗಳು ಎಲ್ಲಿವೆ ಎಂಬ ಬಗ್ಗೆ ಹುಡುಕಾಡಬೇಕಾಗಿದೆ. ಗ್ರಾಮೀಣ ರಸ್ತೆಗಳು ಉತ್ತಮವಾಗಿಲ್ಲದ ಕಾರಣ ಶಾಲಾ–ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಖಾಸಗಿ ವಾಹನಗಳು ಹಾಳಾಗುತ್ತಿವೆ. ಸರಿಯಾದ ಸಮಯಕ್ಕೆ ಸಾರಿಗೆ ಸಂಸ್ಥೆ ಬಸ್‌ಗಳೂ ಬರುತ್ತಿಲ್ಲ’ ಎಂದು ಕೆ.ಆರ್‌.ಪೇಟೆಯ ಶಿವಶಂಕರ್‌ ಹೇಳಿದರು.

ಅಸಮರ್ಪಕ ವಿದ್ಯುತ್‌:
ಇಡೀ ಜಿಲ್ಲೆಯಲ್ಲಿ ಕೆ.ಆರ್‌.ಪೇಟೆ ತಾಲ್ಲೂಕು ಅತೀ ಹೆಚ್ಚು ಕೊಳವೆ ಬಾವಿಗಳನ್ನೊಂದಿದೆ. ಆದರೆ ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದಾಗಿ ಕೊಳವೆ ಬಾವಿಗಳು ಜೀವ ಕಳೆದುಕೊಂಡಿವೆ. ಎಲ್ಲಾ ಹೋಬಳಿ ಕೇಂದ್ರದಲ್ಲೂ ವಿದ್ಯುತ್‌ ವಿತರಣಾ ಘಟಕ ಸ್ಥಾಪಿಸಲಾಗಿದೆ. ರೈತರು ಬೆಳೆಗಳಿಗೆ ನೀರು ಹಾಯಿಸಲು ಹಗಲು–ಇರುಳು ಎನ್ನದೇ ಕಷ್ಟಪಡಬೇಕಾಗಿದೆ. ರಾತ್ರಿಯ ವೇಳೆಯಲ್ಲಿ ತ್ರಿಪೇಸ್‌ ವಿದ್ಯುತ್‌ ಪೂರೈಕೆ ಮಾಡುವ ಕಾರಣ ರೈತರು ರಾತ್ರಿಇಡೀ ನಿದ್ದೆಗೆಟ್ಟು ಬೆಳೆ ಉಳಿಸಿಕೊಳ್ಳಲು ಮುಂದಾಗುತ್ತಾರೆ.

ಕೆರೆಯಲ್ಲಿ ಮುಳುಗಿದ ಸಾರಿಗೆ ಬಸ್‌ ನಿಲ್ದಾಣ:
ಅವೈಜ್ಞಾನಿಕ ಯೋಜನೆ ರೂಪಿಸಿ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ಮಾಡಿರುವ ಪರಿಣಾಮವಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ಬಸ್‌ ನಿಲ್ದಾಣ ಸಾಕ್ಷತ್‌ ಕೆರೆಯಾಗುತ್ತದೆ. ಮೊದಲು ಆ ಜಾಗ ಕೆರೆಯೇ ಆಗಿತ್ತು.ಅಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಅಧಿಕಾರಿಗಳು, ಮಳೆ ಬಂದರೆ ಇಲ್ಲಿ ನೀರು ಹರಿದು ಬರುತ್ತದೆ ಎಂಬ ಸಾಮಾನ್ಯ ಯೋಚನೆಯನ್ನೂ ಮಾಡದೆ ನಿಲ್ದಾಣ ನಿರ್ಮಿಸಿದ್ದಾರೆ. ಹೀಗಾಗಿ ಮಳೆ ಬಂದಾಗ ನಿಲ್ದಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.

‘ಇತ್ತೀಚೆಗೆ ಸುತ್ತಲು ಕಾಲುವೆ ನಿರ್ಮಿಸಿ ನೀರು ಹರಿದು ಹೋಗುವಂತೆ ಮಾಡಿದ್ದಾರೆ. ಆದರೆ ಮೊದಲು ಮಳೆ ಬಂದಾಗ ಜನರು ಜನರು ನಿಲ್ದಾಣದಿಂದ ಹೊರಗೆ ಹೋಗುತ್ತಿದ್ದರು. ಒಂದು ಸಣ್ಣ ಮಳೆ ಬಂದರೂ ನಿಲ್ದಾಣವಿಡೀ ಜಲಾವೃತವಾಗುತ್ತಿತ್ತು. ಈಗ ದೊಡ್ಡ ಮಳೆ ಬಂದರೆ ಮಾತ್ರ ನಿಲ್ದಾಣದಲ್ಲಿ ನೀರು ತುಂಬಿಕೊಳ್ಳುತ್ತದೆ’ ಎಂದು ಕೆ.ಆರ್‌.ಪೇಟೆಯ ವ್ಯಾಪಾರಿ ರಾಮಚಂದ್ರ ಹೇಳಿದರು.

ವಸತಿ ನಿಲಯದಲ್ಲಿ ಕಾಲೇಜು:
ಹೇಮಾವತಿ ಎಡದಂಡೆ ನಾಲಾ ವಸತಿ ಗೃಹಗಳಲ್ಲಿ ಕಳೆದ ಒಂದು ದಶಕದಿಂದಲೂ ಮಹಿಳಾ ಪ್ರಥಮ ದರ್ಜೆ ಕಾಲೇಜು ನಡೆಯುತ್ತಿದೆ. ಸ್ವಂತ ಕಟ್ಟಡ ಒದಗಿಸುವಂತೆ ವಿದ್ಯಾರ್ಥಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇಲ್ಲಿಯ ಜನಪ್ರತಿನಿಧಿಗಳು ಉನ್ನತ ಶಿಕ್ಷಣ ಇಲಾಖೆಗೆ ಒತ್ತಡ ತಂದು ಸ್ವಂತ ಕಟ್ಟಡಕ್ಕೆ ಕಾಲೇಜನ್ನು ಸ್ಥಳಾಂತರಿಸುವ ಕೆಲಸ ಮಾಡಿಲ್ಲ ಎಂದ ಸಾರ್ವಜಕನಿಕರು ಆರೋಪಿಸುತ್ತಾರೆ.

ಅಭಿವೃದ್ಧಿಯಲ್ಲಿ ಹಿಂದುಳಿದ ತಾಲ್ಲೂಕು

‘ಕಳೆದ ಐದು ವರ್ಷಗಳಿಂದ ತಾಲ್ಲೂಕಿನಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ನಡೆದಿಲ್ಲ. ಅಭಿವೃದ್ಧಿ ಎಂದಾಗ ಐದು ವರ್ಷಗಳ ಹಿಂದಕ್ಕೆ ಹೋಗಬೇಕಾಗಿದೆ. ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಶಾಸಕರು ಎಲ್ಲೆಲ್ಲೂ ಹೇಳುತ್ತಿದ್ದಾರೆ. ಆದರೆ ಹುಡುಕಿದರೂ ಆ ಕೆಲಸಗಳು ಸಿಕ್ಕುವುದಿಲ್ಲ. ಅಭಿವೃದ್ಧಿ ಶೂನ್ಯ ಸ್ಥಿತಿ ನಮ್ಮ ತಾಲ್ಲೂಕನ್ನು ಕಾಡುತ್ತಿದೆ. ಹೇಮಾವತಿ ನಾಲೆಗಳಿಗೆ ಒಂದು ಹನಿ ನೀರನ್ನೂ ಹರಿಸಲು ಸಾಧ್ಯವಾಗಿಲ್ಲ. ಅನುದಾನ ತರುವಲ್ಲಿ ಶಾಸಕರು ಹಿಂದೆ ಬಿದ್ದಿದ್ದಾರೆ. ಜೆಡಿಎಸ್‌ ಮುಖಂಡರಲ್ಲೇ ಈ ಬಗ್ಗೆ ಅಸಮಾಧಾನವಿದೆ. ಒಂದು ಹಳ್ಳಿಗೆ ಹೋಗಿ ಬರಲು ಒಂದು ಗಂಟೆ ಬೇಕು. ಅಷ್ಟರಮಟ್ಟಿಗೆ ರಸ್ತೆಗಳು ಹಾಳಾಗಿ ಹೋಗಿವೆ. ಬರಪೀಡಿತ ಪ್ರದೇಶವಾಗಿರುವ ಕೆ.ಆರ್‌.ಪೇಟೆಗೆ ನೀರಾವರಿ ಯೋಜನೆ ತರಬಹುದಾಗಿತ್ತು. ಆದರೆ ಶಾಸಕರು ಯಾವ ಕೆಲಸವನ್ನೂ ಮಾಡಲಿಲ್ಲ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಹೇಳಿದರು.

ಅಲ್ಪಸಂಖ್ಯಾತರ ವಸತಿ ಶಾಲೆ ಸ್ಥಾಪನೆ

‘ಕೆ.ಆರ್.ಪೇಟೆ ತಾಲ್ಲೂಕಿನ ಆದಿಹಳ್ಳಿ ಗ್ರಾಮದಲ್ಲಿ ನವೋದಯ ಮಾದರಿಯ ಅಲ್ಪಸಂಖ್ಯಾತರ ವಸತಿ ಶಾಲೆ ಸ್ಥಾಪಿಸಿದ್ದಾರೆ. ಇದು ಇಡೀ ಜಿಲ್ಲೆಯಲ್ಲಿರುವ ಏಕೈಕ ಅಲ್ಪಸಂಖ್ಯಾತರ ವಸತಿ ಶಾಲೆಯಾಗಿದೆ. ಇಷ್ಟೇ ಅಲ್ಲದೆ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಿಸಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪರಿಶಿಷ್ಟ ಜಾತಿ ಯೋಜನೆ (ಎಸ್‌ಸಿಪಿ) ಅಡಿಯಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪಿಸಿದ್ದು ಡಯಾಲಿಸಿಸ್‌ಗಾಗಿ ಬೆಂಗಳೂರು, ಮೈಸೂರು ನಗರಗಳಿಗೆ ಹೋಗುವುದನ್ನು ತಪ್ಪಿಸಲಾಗಿದೆ. ಜನಿವಾರ ಕೆರೆಯಿಂದ ನೀರು ತಂದು ಸಂತೇಬಾಚಹಳ್ಳಿ ಹೋಬಳಿ ವ್ಯಾಪ್ತಿಯ ಎಂಟು ಕೆರೆಗಳನ್ನು ತುಂಬಿಸಲಾಗಿದೆ. ಇದು ತಾಲ್ಲೂಕಿನಲ್ಲಿ ಪ್ರಮುಖ ನೀರಾವರಿ ಯೋಜನೆ’ ಎಂದು ಜೆಡಿಎಸ್‌ ಮುಖಂಡ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್‌.ದೇವರಾಜು ಹೇಳಿದರು.

ನಾಲೆಗಳಿಗೆ ನೀರು ಹರಿಸಿಲ್ಲ

ಹೇಮಾವತಿ ನಾಲೆಗಳಿಗೆ ಸಾವಿರ ಕ್ಯುಸೆಕ್‌ ನೀರು ಹರಿಸಿದರೆ ತಾಲ್ಲೂಕಿಗೆ ಸಾಕಾಗುತ್ತದೆ. ನಮ್ಮ ಶಾಸಕರು ಅಷ್ಟು ನೀರು ತರಲು ಸಶಕ್ತರಾಗಿಲ್ಲ. ಅಧಿಕಾರಿಗಳು ಜಲಚರಗಳ ಉಳಿವಿಗಾಗಿ 100 ಕ್ಯುಸೆಕ್‌ ನೀರು ಬಿಡುತ್ತಾರೆ. ಅದು ಕುಡಿಯುವುದಕ್ಕೂ ಸಾಲುವುದಿಲ್ಲ. ನೀರು ತರುವ ಪ್ರಯತ್ನ ಮಾಡುವಲ್ಲಿ ನಮ್ಮ ತಾಲ್ಲೂಕಿನ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲಾಗಿದ್ದಾರೆ – ಎಂ.ವಿ.ರಾಜೇಗೌಡ, ರೈತ ಹೋರಾಟಗಾರ.

ರೈತರ ಮೈತುಂಬಾ ಸಾಲ

ತಾಲ್ಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಕಬ್ಬು ಭತ್ತ ಬೆಳೆದರೂ ಮೈತುಂಬಾ ಸಾಲ ಹೊತ್ತಿದ್ದಾರೆ. ಅವರಿಗೆ ಯೋಗ್ಯ ಮಾರ್ಗದರ್ಶನ ಸಿಗುತ್ತಿಲ್ಲ. ಕೃಷಿ, ವ್ಯಾಪಾರದಿಂದ ಮೊಸಕ್ಕೊಳಗಾಗುತ್ತಲೇ ಇದ್ದಾರೆ. ಸರಿಯಾದ ಬೆಲೆ ಸಿಗಬೇಕು. ಮಧ್ಯವರ್ತಿಗಳು ಇರಬಾರದು. ಸರ್ಕಾರ ನಿರತರವಾಗಿ ಕೃಷಿಗೆ 24 ಗಂಟೆ ವಿದ್ಯುತ್ ನೀಡಬೇಕು – ನಂದಿನಿ ಜಯರಾಂ, ರೈತನಾಯಕಿ.

ನೀರಾವರಿ ಕನಸು ನನಸಾಗಿಲ್ಲ

ಬೂಕನಕೆರೆ ಹೋಬಳಿಗೆ ನೀರುಣಿಸುವ ಹೊಸಹೊಳಲು ಮೇಲ್ಗಾಲುವೆ ಕಾಮಗಾರಿ ಎರಡು ದಶಕಗಳಿಂದಲೂ ಕುಂಟುತ್ತಾ ಸಾಗಿದೆ. ಇದರಿಂದ ಬಳ್ಳೇಕೆರೆ, ನಾಟನಹಳ್ಳಿ.ಬೂಕನಕೆರೆ ಭಾಗದ ಸಾವಿರಾರು ರೈತರು ನೀರಿಗಾಗಿ ಚಾತಕಪಕ್ಷಿಯಂತೆ ಕಾಯುತಿದ್ದಾರೆ – ಬಳ್ಳೇಕೆರೆ ಸುರೇಶ್, ಟಿಎಪಿಸಿಎಂಎಸ್ ಉಪಾಧ್ಯಕ್ಷರು.

ಸುಸಜ್ಜಿತ ಗ್ರಂಥಾಲಯವಿಲ್ಲ

ಕೆ.ಆರ್.ಪೇಟೆ ಪಟ್ಟಣ ದೊಡ್ಡ ಹಳ್ಳಿಯಂತಿದೆ. ಬಡಾವಣೆಗಳು ಸಮಗ್ರವಾಗಿ ಅಭಿವೃದ್ಧಿಯಾಗಬೇಕಿದೆ. ರಸ್ತೆ, ಉದ್ಯಾನವನ ನಿರ್ಮಾಣವಾಗಬೇಕು. ಒಳಚರಂಡಿ ವ್ಯವಸ್ಥೆ ಸುಧಾರಿಸಬೆಕು. ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗಬೇಕು – ಕೆ.ಆರ್.ಸವಿತಾ ರಮೇಶ್, ಲೇಖಕಿ.

ಮೂಲ ಸೌಕರ್ಯ ಕೊರತೆ

ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ನೂರಾರು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಪದವಿಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಅವರಿಗೆ ಅಲ್ಲಿ ಕೂರಲು ಸ್ವಂತ ಕಟ್ಟಡವೇ ಇಲ್ಲ. ಮೂಲ ಸೌಕರ್ಯದ ಕೊರತೆಯಿದೆ. ಸರ್ಕಾರ ಎಚ್.ಎಲ್.ಬಿಸಿ ವಸತಿ ಸಮುಚ್ಚಯದಲ್ಲಿ ಕಾಲೇಜು ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು – ಕೆ.ಆರ್.ಪುಟ್ಟಸ್ವಾಮಿ, ಕೆ.ಆರ್‌.ಪೇಟೆ.

ದಲಿತ ಭವನ ಬೇಡಿಕೆ ಈಡೇರಲಿ

ಕೆ.ಆರ್.ಪೇಟೆ ಪಟ್ಟಣದಲ್ಲಿ ದಲಿತ ಜನಾಂಗದವರಿಗಾಗಿ ಭವನ ನಿರ್ಮಿಸಲು ನಿವೇಶನ ನೀಡಬೇಕೆಂದು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ ನಿವೇಶನ ಸಿಕ್ಕಿರಲಿಲ್ಲ. ಈಚೆಗೆ ಭವನ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಯಾವುದೇ ಅಡೆತಡೆ ಮಾಡದೆ ಭವನಗಳನ್ನು ನಿರ್ಮಿಸಿಕೊಡಬೇಕು – ಮಾಕವಳ್ಳಿ ಸಣ್ಣಯ್ಯ, ದಲಿತ ಮುಖಂಡರು.

ಕನಸಾದ ಬಯಲು ರಂಗಮಂದಿರ

ಇಡೀ ಪಟ್ಟಣದಲ್ಲಿ ಒಂದೇ ಒಂದು ಸುಸಜ್ಜಿತ ಬಯಲುರಂಗಮಂದಿರವಿಲ್ಲ. ಇದರಿಂದಾಗಿ ಸಾಹಿತ್ಯ, ಸಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಲು ಪರದಾಡುವಂತಾಗಿದೆ – ಕೆ.ಎಸ್ ಸೋಮಶೇಖರ್, ಕೆ.ಆರ್‌.ಪೇಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT