ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಇನ್ನೂ ಕಗ್ಗಂಟಾಗಿ ಉಳಿದ ಮಂಗಳೂರು

ಪುತ್ತೂರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಅಸಮಾಧಾನ
Last Updated 17 ಏಪ್ರಿಲ್ 2018, 10:00 IST
ಅಕ್ಷರ ಗಾತ್ರ

ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಪ್ರಕಟಿಸಿದ ಬಳಿಕವೂ ಮಂಗಳೂರು ನಗರ ಪ್ರದೇಶ ಬಿಜೆಪಿ ಪಾಲಿಗೆ ಕಗ್ಗಂಟಾಗಿಯೇ ಉಳಿದಿದೆ. ನಗರದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಮಲ ಪಾಳೆಯಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹಾಲಿ ಶಾಸಕ ಎಸ್‌.ಅಂಗಾರ ಅವರಿಗೆ ಮಾತ್ರ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಪ್ರಕಟಿಸಲಾಗಿತ್ತು. ಸೋಮವಾರ 82 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಅದರಲ್ಲಿ ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ ಮತ್ತು ಪುತ್ತೂರು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಮಂಗಳೂರು (ಉಳ್ಳಾಲ), ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ. ಮೂರೂ ಕ್ಷೇತ್ರಗಳಲ್ಲಿ ಈಗ ಕಾಂಗ್ರೆಸ್‌ ಶಾಸಕರಿದ್ದಾರೆ. ಸಚಿವ ಯು.ಟಿ.ಖಾದರ್‌, ಶಾಸಕರಾದ ಜೆ.ಆರ್‌.ಲೋಬೊ ಮತ್ತು ಬಿ.ಎ.ಮೊಹಿಯುದ್ದೀನ್ ಬಾವ ಅವರನ್ನು ಮಣಿಸುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳ ಕೊರತೆ ಬಿಜೆಪಿಯನ್ನು ಬಲವಾಗಿ ಕಾಡುತ್ತಿದೆ. ಕಾಂಗ್ರೆಸ್‌ ವಶದಿಂದ ಈ ಕ್ಷೇತ್ರಗಳನ್ನು ಕಿತ್ತುಕೊಳ್ಳಬಲ್ಲ ಹುರಿಯಾಳುಗಳಿಗಾಗಿ ಕೊನೆಯ ಕ್ಷಣದಲ್ಲೂ ಹುಡುಕಾಟ ಮುಂದುವರಿದಿದೆ.

ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್‌ ಎದುರು ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಚಂದ್ರಹಾಸ ಉಳ್ಳಾಲ್‌ ಈ ಬಾರಿಯೂ ಪ್ರಬಲ ಆಕಾಂಕ್ಷಿ. ಸಂತೋಷ್‌ ಬೋಳಿಯಾರ್‌, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ ಕೂಡ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡ ರಹೀಂ ಉಚ್ಚಿಲ್‌ ಅವರನ್ನು ಕಣಕ್ಕಿಳಿಸಿ ಖಾದರ್‌ ಅವರನ್ನು ಮಣಿಸುವ ಯೋಚನೆಯೂ ಪಕ್ಷದ ಕೆಲವು ಮುಖಂಡರಲ್ಲಿದೆ.

ಮಂಗಳೂರು ಉತ್ತರ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿ ಸತ್ಯಜಿತ್‌ ಸುರತ್ಕಲ್‌ ಅವರನ್ನು ಮಂಗಳೂರು ಕ್ಷೇತ್ರಕ್ಕೆ ಕಳುಹಿಸುವ ಪ್ರಯತ್ನಕ್ಕೂ ಬಿಜೆಪಿ ನಾಯಕರು ಕೈ ಹಾಕಿದ್ದಾರೆ. ಸತ್ಯಜಿತ್‌ ನಿರಾಕರಿಸುತ್ತಿದ್ದು, ಉಳಿದ ನಾಲ್ವರು ಆಕಾಂಕ್ಷಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಪಕ್ಷದ ಪಾಲಿಗೆ ಕಗ್ಗಂಟಾಗಿಯೇ ಉಳಿದಿದೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಲೋಬೊ ಅವರನ್ನು ಮಣಿಸುವಂತಹ ವರ್ಚಸ್ವೀ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಡುತ್ತಿದೆ. ದಕ್ಷಿಣ ಮಂಡಲ ಬಿಜೆಪಿ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್‌ ಮತ್ತು ಬದರೀನಾಥ ಕಾಮತ್‌ ಹೆಸರು ಹಲವು ದಿನಗಳಿಂದ ಚಾಲ್ತಿಯಲ್ಲಿ ಇತ್ತು. ಹಿಂದೆ ಈ ಕ್ಷೇತ್ರ ಪ್ರತಿನಿಧಿಸಿದ್ದ ಹಿರಿಯ ಮುಖಂಡ ಎನ್‌.ಯೋಗೀಶ್ ಭಟ್‌ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದರು. ಆದರೆ, ಸಂಘ ಪರಿವಾರ ಮತ್ತು ಪಕ್ಷದ ಒಂದು ಬಣ ಅವರನ್ನೇ ಕಣಕ್ಕಿಳಿಸುವಂತೆ ಪಟ್ಟು ಹಿಡಿದಿವೆ. ಇದರಿಂದ ಕೆಲವು ದಿನಗಳಿಂದ ಈಚೆಗೆ ಅವರ ಹೆಸರು ಮುನ್ನೆಲೆಗೆ ಬಂದಿದೆ. ಇದರಿಂದಾಗಿ ಬಿಜೆಪಿ ಇಲ್ಲಿ ಕಾದು ನೋಡುವ ತಂತ್ರದ ಮೊರೆ ಹೋಗಿದೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಹಿಯುದ್ದೀನ್‌ ಬಾವ ಎದುರು ಆರ್ಥಿಕವಾಗಿಯೂ ಶಕ್ತಿ ಇರುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಈ ವಿಚಾರದಲ್ಲಿ ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್‌ ಮುಂಚೂಣಿಯಲ್ಲಿದ್ದಾರೆ. ಆದರೆ, ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ಡಾ.ವೈ.ಭರತ್ ಶೆಟ್ಟಿ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಮೂವರ ನಡುವೆ ಒಮ್ಮತ ಮೂಡದೇ ಇರುವುದರಿಂದ ಟಿಕೆಟ್‌ ಘೋಷಣೆ ಮಾಡದಂತಹ ಇಕ್ಕಟ್ಟು ಪಕ್ಷದ ನಾಯಕರಿಗೆ ಎದುರಾಗಿದೆ.

ಅಸಮಾಧಾನದ ಹೊಗೆ:

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ರಾಜೇಶ್ ನಾಯಕ್ ಉಳಿಪಾಡಿ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಅಲ್ಲಿ ಬಿಜೆ‍ಪಿ ಟಿಕೆಟ್‌ ಬಯಸಿದವರ ಸಂಖ್ಯೆ ಕಡಿಮೆ ಇದ್ದುದ್ದರಿಂದ ಅಭ್ಯರ್ಥಿ ಘೋಷಣೆ ಬಳಿಕ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಆದರೆ, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೊಗೆಯಾಡಲಾರಂಭಿಸಿದೆ.

ಪುತ್ತೂರಿನಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಅವರಿಗೆ ಮತ್ತೆ ಟಿಕೆಟ್‌ ನೀಡಲಾಗಿದೆ. ಅಲ್ಲಿ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಉದ್ಯಮಿ ಅಶೋಕ್‌ಕುಮಾರ್‌ ರೈ ಕೋಡಿಂಬಾಡಿ ಆಪ್ತ ವಲಯದಲ್ಲಿ ಅಸಮಾಧಾನ ಹಂಚಿಕೊಂಡಿದ್ದಾರೆ. ಅವರ ಪರವಾಗಿ ಸಾಮಾಜಿಕ ಜಾಲ ತಾಣಗಳಲ್ಲೂ ಸಂದೇಶಗಳು ಹರಿದಾಡುತ್ತಿವೆ. ಟಿಕೆಟ್‌ ದೊರೆಯದೇ ಇರುವುದರಿಂದ ಬೇಸತ್ತು ಕಾಂಗ್ರೆಸ್‌ನತ್ತ ವಾಲಬಹುದು ಎಂಬ ವದಂತಿಯೂ ಹಬ್ಬಿದೆ.

ಬೆಳ್ತಂಗಡಿಯಲ್ಲಿ ಶಾಸಕ ಕೆ.ವಸಂತ ಬಂಗೇರ ಎದುರು ಕಣಕ್ಕಿಳಿಯಲು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ ಪೂಂಜ ಮತ್ತು ಕಳೆದ ಬಾರಿಯ ಅಭ್ಯರ್ಥಿ ರಂಜನ್‌ ಗೌಡ ನಡುವೆ ಭಾರಿ ಪೈಪೋಟಿ ಇತ್ತು. ಈಗ ಹರೀಶ್‌ ಪೂಂಜ ಕೈ ಮೇಲಾಗಿದೆ. ರಂಜನ್‌ ಗೌಡ ಕೂಡ ಆಪ್ತ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಡುಬಿದಿರೆ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದ ಉಮಾನಾಥ್‌ ಕೋಟ್ಯಾನ್‌ ಅವರಿಗೆ ಮತ್ತೆ ಟಿಕೆಟ್‌ ಲಭಿಸಿದೆ. ಬಿಲ್ಲವರ ಮತಗಳ ಮೇಲೆ ಕಣ್ಣಿಟ್ಟು ಅವರಿಗೆ ಅವಕಾಶ ನೀಡಲಾಗಿದೆ. ಅಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಈಶ್ವರ ಕಟೀಲ್‌, ಡಾ.ಸುಧೀರ್‌ ಹೆಗ್ಡೆ ಇನ್ನೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT