ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗಾಗಿ ಸ್ಥಳೀಯರಿಗೆ ಆದ್ಯತೆ; ಕ್ಷೇತ್ರ ಬದಲಾವಣೆ

ಕಬ್ಬಲಿಗ ಸಮಾಜದ ಸಾಯಿಬಣ್ಣ ಬೋರಬಂಡಾಗೆ ಟಿಕೆಟ್; ವೆಂಟಕರೆಡ್ಡಿ ಮುದ್ನಾಳಗೆ ಯಾದಗಿರಿ ಟಿಕೆಟ್
Last Updated 17 ಏಪ್ರಿಲ್ 2018, 11:28 IST
ಅಕ್ಷರ ಗಾತ್ರ

ಯಾದಗಿರಿ: ಗೆಲ್ಲಲೇ ಬೇಕು ಎನ್ನುವ ಹಟಕ್ಕೆ ಬಿದ್ದಿರುವ ಬಿಜೆಪಿ ವರಿಷ್ಠರು ಗುರುಮಠಕಲ್‌ ಮತ್ತು ಯಾದಗಿರಿ ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಯ ತಂತ್ರಕ್ಕೆ ಮೊರೆ ಹೋಗಿದೆ.

ಕೋಲಿ ಸಮಾಜದ ಸಾಯಿಬಣ್ಣ ಬೋರಬಂಡಾ ಅವರಿಗೆ ಗುರುಮಠಕಲ್‌ ಕ್ಷೇತ್ರದಲ್ಲಿಯೂ, ಗುರುಮಠಕಲ್‌ನಲ್ಲಿ ಸ್ಪರ್ಧಿಸುತ್ತಿದ್ದ ಹಿರಿಯ ಮುಖಂಡ ವೆಂಟಕರೆಡ್ಡಿ ಮುದ್ನಾಳ ಅವರನ್ನು ಯಾದಗಿರಿ ಮತಕ್ಷೇತ್ರದಲ್ಲಿಯೂ ಸ್ಪರ್ಧಿಸುವಂತೆ ಬಿಜೆಪಿ ಮಾಡಿದೆ.

ವೆಂಕಟರೆಡ್ಡಿ  ಯಾದಗಿರಿಯವರು. ರಾಜಕೀಯ ಹಿನ್ನೆಲೆ ಇರುವ ಕುಟುಂಬದವರು. ಇವರ ತಂದೆ ವಿಶ್ವನಾಥರೆಡ್ಡಿ ಮುದ್ನಾಳ ಶಾಸಕರಾಗಿದ್ದರು. ಹಾಗಾಗಿ, ಸ್ಥಳೀಯವಾಗಿ ವೆಂಕಟರೆಡ್ಡಿ ಮುದ್ನಾಳ ಸಾಕಷ್ಟು ವರ್ಚಸ್ಸು ಹೊಂದಿದ್ದಾರೆ.

ಸಹೋದರ ಡಾ.ವೀರಬಸಂತರಡ್ಡಿ ಅವರು ಯಾದಗಿರಿ ಮತಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎನ್ನುವ ಕಾರಣಕ್ಕೆ ವೆಂಕಟರೆಡ್ಡಿ ಮುದ್ನಾಳ ಅವರು ಯಾದಗಿರಿ ಬಿಟ್ಟು ಗುರುಮಠಕಲ್‌ನತ್ತ ಮುಖ ಮಾಡಿದ್ದರು. ಯಾದಗಿರಿ ಕ್ಷೇತ್ರದಿಂದ ಡಾ.ವೀರಬಸಂತರಡ್ಡಿ ಮುದ್ನಾಳ ಒಮ್ಮೆ ಶಾಸಕರಾದ ಮೇಲೆ ವೆಂಕಟರೆಡ್ಡಿ ಮುದ್ನಾಳ ತಮ್ಮ ಗಮನವನ್ನು ಸಂಪೂರ್ಣ ಗುರುಮಠಲ್ ಮತಕ್ಷೇತ್ರದತ್ತ ಕೇಂದ್ರೀಕರಿಸಿದರು.

ಕೋಲಿ ಮತ್ತು ಕುರುಬ ಸಮಾಜದವರು ಹೆಚ್ಚಿರುವ ಗುರುಮಠಕಲ್ ಮತಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ 2013 ರ ಚುನಾವಣೆಯಲ್ಲಿ 30 ಸಾವಿರ ಮತ ಪಡೆದಿದ್ದರು. ಅಲ್ಪಮತಗಳಿಂದ ಗೆಲುವು ಕೈ ತಪ್ಪಿತ್ತು. ಈ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎನ್ನುವ ಕಾರಣಕ್ಕೆ ವೆಂಕಟರಡ್ಡಿ ಮುದ್ನಾಳ ಕಾಂಗ್ರೆಸ್‌ನ ಬಹುತೇಕ ಮುಖಂಡರನ್ನು ಬಿಜೆಪಿಯತ್ತ ಸೆಳೆದುಕೊಂಡಿದ್ದರು. ಆದರೆ, ಬಿಜೆಪಿ ವರಿಷ್ಠರು ಮತಕ್ಷೇತ್ರ ಬದಲಾಯಿಸುವ ಮೂಲಕ ಕಾರ್ಯಕರ್ತರಿಗೆ ಆಘಾತವನ್ನು ಉಂಟು ಮಾಡಿದಿದ್ದಾರೆ.

ಕ್ಷೇತ್ರ ಬದಲಾವಣೆ ಹಿಂದಿನ ಲೆಕ್ಕಾಚಾರ:

ಮುದ್ನಾಳ ಸಹೋದರರ ಜತೆಗೆ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಸೈದಾಪುರದ ಡಾ.ಭೀಮಣ್ಣ ಮೇಟಿ, ಇತ್ತೀಚೆಗೆ ಪಕ್ಷ ಸೇರ್ಪಡೆಯಾದ ಯಾದಗಿರಿಯ ಲಲಿತಾ ಅನಪೂರ ಅವರು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಎಲ್ಲರೂ ಗೆಲುವಿಗಾಗಿ ಜಾತಿ ಲೆಕ್ಕಾಚಾರವನ್ನು ಬಿಜೆಪಿ ವರಿಷ್ಠರಿಗೆ ಒಪ್ಪಿಸಿ ಬಂದಿದ್ದರು. ಇದನ್ನು ಗಮನಿಸಿರುವ ವರಿಷ್ಠರು ಮತಕ್ಷೇತ್ರ ಬದಲಾವಣೆಯ ತಂತ್ರವನ್ನು ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಗುರುಮಠಕಲ್‌ನಲ್ಲಿ ವೆಂಟಕರೆಡ್ಡಿ ಮುದ್ನಾಳ ಅವರಿಗೆ ಟಿಕೆಟ್‌ ನೀಡಿದರೆ ಕೋಲಿ ಸಮಾಜದ ಮುಖಂಡ ಸಾಯಿಬಣ್ಣ ಬೋರಬಂಡಾ ಬಂಡಾಯ ಏಳುತ್ತಾರೆ. ಯಾದಗಿರಿಯಲ್ಲಿ ವರ್ಚಸ್ಸು ಇಲ್ಲದ ಡಾ.ವೀರಬಸಂತರೆಡ್ಡಿ ಅವರಿಗೆ ಟಿಕೆಟ್‌ ನೀಡಿದರೆ ಹೊಸಬರು ದಂಗೆ ಏಳುತ್ತಾರೆ. ಒಂದು ವೇಳೆ ಹೊಸಬರಿಗೆ ಮಣೆ ಹಾಕಿದರೆ ಡಾ.ವೀರಬಸಂತರೆಡ್ಡಿ ಪಕ್ಷೇತರರಾಗಿಯೂ ಸ್ಪರ್ಧಿಸಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಬಹುದು. ವೆಂಕಟರೆಡ್ಡಿ ಮುದ್ನಾಳರಿಗೆ ಟಿಕೆಟ್ ನೀಡುವುದರಿಂದ ಸಹೋದರರು ಸರಿ ಹೋಗಬಹುದು. ಉಳಿದ ಟಿಕೆಟ್‌ ಆಕಾಂಕ್ಷಿಗಳನ್ನು ಪಕ್ಷ ಸಂಘಟನೆ ಮಾಡುವಂತೆ ಸೂಚಿಸಬಹುದು ಎಂಬುದು ವರಿಷ್ಠರ ಲೆಕ್ಕಾಚಾರವಾಗಿದೆ ಎಂದು ಬಿಜೆಪಿ ವಲಯಲ್ಲಿ ಕೇಳಿಬರುತ್ತಿದೆ.

ಹೋರಾಟಕ್ಕೆ ಸಿಕ್ಕ ಫಲ

ಕೋಲಿ ಸಮಾಜದ ಸಾಯಿಬಣ್ಣ ಬೋರಬಂಡಾ ಹಲವು ವರ್ಷ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಹಿಂಬಾಲಕರಾಗಿದ್ದವರು. ಅಲ್ಲಿ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

ಬಿಜೆಪಿಗೆ ಬಂದ ನಂತರ ಅವರು ಶಾಶ್ವತ ನೀರಾವರಿ ಹೋರಾಟ ಸಮಿತಿ ರಚಿಸಿದರು. ಗುರುಮಠಕಲ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 402 ಕೆರೆಗಳಿಗೆ ನೀರು ತುಂಬಿಸುವ ಕನಸು ಹೊತ್ತು ಹಳ್ಳಿಹಳ್ಳಿಗಳಲ್ಲಿ ಸಂಘಟನೆ ಮಾಡಿದರು. ಗುರುಮಠಕಲ್‌ನಲ್ಲಿ ಇದುವರೆಗೂ ಹೊರಗಿನವರಿಗೆ ಅಧಿಕಾರ ನೀಡಿದ್ದೀರಿ ಎಂದು ಜನರಿಗೆ ಎಚ್ಚರಿಸಿದ್ದರು.

45 ವರ್ಷ ರಾಜಕೀಯ ಜೀವನ ಕೊಟ್ಟ ಗುರುಮಠಕಲ್‌ನಲ್ಲಿ ಖರ್ಗೆಯವರದ್ದು ಎರಡು ಕೋಣೆಯ ಮನೆ ಇಲ್ಲ; ಈಗಿರುವ ಶಾಸಕ ಬಾಬುರಾವ ಚಿಂಚನಸೂರ ಕೂಡ ಚಿತ್ತಾಪುರದವರು. ನಾನು ಇದೇ ನೆಲದವನು ಎಂದು ಜನರಿಗೆ ಮನವರಿಕೆ ಮಾಡುವ ಮೂಲಕ ಬಿಜೆಪಿ ಹಿಂದುಳಿದ ಮತ್ತು ಸ್ಥಳೀಯರಿಗೆ ಟಿಕೆಟ್ ನೀಡಲೇಬೇಕು ಎಂದು ಪ್ರಬಲವಾಗಿ ಧ್ವನಿ ಎತ್ತಿದ್ದರು. ಅವರ ಹೋರಾಟದ ಫಲ ಎಂಬಂತೆ ಬಿಜೆಪಿ ಅವರಿಗೆ ಟಿಕೆಟ್‌ ನೀಡಿದೆ.

ಇಲ್ಲೂ ಕೂಡ ಬಿಜೆಪಿ ವರಿಷ್ಠರ ಜಾತಿ ಲೆಕ್ಕಾಚಾರ ನಡೆದಿದೆ. ಬಾಬುರಾವ ಚಿಂಚನಸೂರ ಕೋಲಿ ಸಮಾಜದವರು. ಬಿಜೆಪಿ ಅನ್ಯ ಜಾತಿಯವರಿಗೆ ಆದ್ಯತೆ ನೀಡುವುದರಿಂದ ಫಲಿತಾಂಶ ವ್ಯತಿರಿಕ್ತವಾಗಬಹುದು. ಹಾಗಾಗಿ, ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಲಾಗಿದೆ ಎನ್ನಲಾಗುತ್ತಿದೆ.

ವೀರಬಸಂತರೆಡ್ಡಿಗೆ ಟಿಕೆಟ್ ಕೈತಪ್ಪಿದ್ದು ಏಕೆ?

ಹಿರಿಯ ಮುಖಂಡ ಡಾ.ವೀರಬಸಂತರೆಡ್ಡಿ ಮುದ್ನಾಳ ಅವರು ಪಕ್ಷ ಸಂಘಟನೆಯಲ್ಲಿ ಸರಿಯಾಗಿ ಗುರುತಿಸಿಕೊಂಡಿಲ್ಲ. ಕಾರ್ಯಕರ್ತರೊಂದಿನ ಒಡನಾಟದ ಕೊಂಡಿ ಕೂಡ ಕಳಚಿಕೊಂಡಿದ್ದಾರೆ. ಇದರಿಂದಾಗಿ ಮತಕ್ಷೇತ್ರದಲ್ಲಿ ವರ್ಚಸ್ಸು ಕುಸಿದಿದೆ ಎನ್ನುವ ಕಾರಣಕ್ಕೆ ಈ ಬಾರಿ ಟಿಕೆಟ್ ಕೈತಪ್ಪಿದೆ ಎಂಬುದಾಗಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ವೆಂಕಟರೆಡ್ಡಿ ಮುದ್ನಾಳ ಗುರುತಿಸಿಕೊಂಡಿರುವುದು ಕೂಡ ವೀರಬಂತರೆಡ್ಡಿ ಅವರ ಟಿಕೆಟ್‌ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಟಿಕೆಟ್‌ ಪಡೆದವರು

ಸುರಪುರ–ನರಸಿಂಹ ನಾಯಕ (ರಾಜೂಗೌಡ)

ಶಹಾಪುರ–ಗುರುಪಾಟೀಲ ಶಿರವಾಳ

ಯಾದಗಿರಿ–ವೆಂಕಟರಡ್ಡಿ ಮುದ್ನಾಳ

ಗುರುಮಠಕಲ್‌– ಸಾಯಿಬಣ್ಣ ಬೋರಬಂಡಾ

**

ಬಿಜೆಪಿ ಹಿಂದುಳಿದ, ಶೋಷಿತರ ಧ್ವನಿಗೆ ಬೆಂಬಲ ನೀಡುತ್ತದೆ ಎಂಬುದಕ್ಕೆ ನಾನೇ ನಿದರ್ಶನ. ಇಲ್ಲಿನ ರಾಜಕೀಯ ಪರಿಸ್ಥಿತಿ ವರಿಷ್ಠರಿಗೆ ಮನವರಿಕೆ ಮಾಡಿದ್ದೆ – ಸಾಯಿಬಣ್ಣ ಬೋರಬಂಡಾ, ಗುರುಮಠಕಲ್ ಬಿಜೆಪಿ ಅಭ್ಯರ್ಥಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT