ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ ಬಗ್ಗೆಯೂ ಶಂಕೆ

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾ, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಲಕ್ಷಾಂತರ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಪಡೆದುಕೊಂಡು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಾವ ಬೀರಲು ಬಳಸಿಕೊಂಡಿತ್ತು ಎಂಬ ವಿವಾದವು ವಿಶ್ವದಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿದೆ. ಈ ಕುರಿತು ಬಳಕೆದಾರರಿಂದ ವ್ಯಾಪಕವಾಗಿ ಆಕ್ಷೇಪವೂ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಫೇಸ್‌ಬುಕ್‌ ಒಡೆತನದ ಮತ್ತೊಂದು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌, ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಎಷ್ಟು ಸುರಕ್ಷಿತವಾಗಿ ನೋಡಿಕೊಳ್ಳುತ್ತಿದೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ತಕ್ಷಣಕ್ಕೆ ಸಂದೇಶ ಕಳುಹಿಸುವ ಮಾಧ್ಯಮವಾಗಿ ಬಳಕೆದಾರರಲ್ಲಿ ಭಾರಿ ಜನಪ್ರಿಯವಾಗಿರುವ ವಾಟ್ಸ್‌ಆ್ಯಪ್‌ ಅನ್ನು ಭಾರತದಲ್ಲಿ 20 ಕೋಟಿ ಜನರು ಬಳಸುತ್ತಿದ್ದಾರೆ. ಆದರೆ, ಈ ಆ್ಯಪ್‌ ತಾನು ಹೇಳಿಕೊಂಡಷ್ಟು ಸುರಕ್ಷಿತವಾಗಿಲ್ಲ ಎಂಬ ಮಾತನ್ನು  ಮಾಹಿತಿ ತಂತ್ರಜ್ಞಾನದ ಪರಿಣತರು ಹೇಳುತ್ತಿದ್ದಾರೆ.

ಈ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವ ಸಂದರ್ಭದಲ್ಲಿ ಕಂಡು ಬರುವ ಬಳಕೆದಾರರ ಒಪ್ಪಂದದಲ್ಲಿ ಇರುವ ಅಂಶಗಳನ್ನು ಪರಿಶೀಲಿಸಿದರೆ, ವೈಯಕ್ತಿಕ ಮಾಹಿತಿಗೆ ಕನ್ನ ಹಾಕಿದರೂ ಅದರ ವಿರುದ್ಧ ಯಾವ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳದ ನಿಯಮಗಳು ಅದರಲ್ಲಿ ಅಡಕವಾಗಿವೆ.

2014ರಲ್ಲಿ ಫೇಸ್‌ಬುಕ್‌ ಈ ಆ್ಯಪ್‌ ಅನ್ನು ಖರೀದಿಸಿದ್ದು, ವಿಶ್ವದಾದ್ಯಂತ ನೂರು ಕೋಟಿ ಮಂದಿ ಬಳಸುತ್ತಿದ್ದಾರೆ.

‘ಪರಸ್ಪರರ ನಡುವಣ ಸಂವಹನವನ್ನು ಗೂಢಲಿಪಿಗೆ ಪರಿವರ್ತಿಸಲಾಗುತ್ತದೆ. ಹೀಗಾಗಿ ಇದು ಅತ್ಯಂತ ಸುರಕ್ಷಿತ ಎಂದು ಕಂಪನಿ ಹೇಳಿಕೊಂಡರೂ, ಕರೆಗಳ ವಿವರ, ಮೆಟಾಡೇಟಾ ಮುಂತಾದಗಳನ್ನು ಸಂಗ್ರಹಿಸುವ ಎಲ್ಲ ಸಾಧ್ಯತೆಗಳೂ ಇವೆ’ ಎಂದು ಅಮೆರಿಕದ ತಂತ್ರಜ್ಞಾನ ಉದ್ಯಮಿ ಮತ್ತು ಶಿಕ್ಷಣ ತಜ್ಞ ವಿವೇಕ್‌ ವಾಧ್ವಾ ಎಚ್ಚರಿಸಿದ್ದಾರೆ.

ತನ್ನ ಬಳಕೆದಾರರ ಗುರುತು ಮತ್ತು ಅವರು ಬಳಸುವ ಸಾಧನದ ವಿವರಗಳನ್ನು ಫೇಸ್‌ಬುಕ್‌ ಜತೆ ಹಂಚಿಕೊಳ್ಳಲಾಗಿದೆ ಎಂದು ವಾಟ್ಸ್‌ಆ್ಯಪ್‌ ಹೇಳಿಕೊಂಡಿದೆ.

‘ಅತಿ ಹೆಚ್ಚು ಆತಂಕಗೊಳಿಸುವ ವಿಷಯವೆಂದರೆ ವಾಟ್ಸ್‌ಆ್ಯಪ್‌ನ ಗುಂಪು ಸಂವಹನ ಆಯ್ಕೆಯಲ್ಲಿ ಇದೆ. ಗುಂಪಿನ ಯಾವುದೇ ಸದಸ್ಯ ಯಾರ ಅನುಮತಿಯೂ ಇಲ್ಲದೆ ಇನ್ನೊಬ್ಬ ಸದಸ್ಯನ ಮೊಬೈಲ್‌ ಸಂಖ್ಯೆ ಪಡೆದುಕೊಳ್ಳಬಹುದು. ಆ ಮೂಲಕ ನಿರ್ದಿಷ್ಟ ಸದಸ್ಯರನ್ನು ಗುರಿಯಾಗಿಸಿಕೊಂಡು, ಕರೆ ಮಾಡುವ ಅಥವಾ ವೈಯಕ್ತಿಕ ಸಂದೇಶ ಕಳುಹಿಸುವ ಮೂಲಕ ಶೋಷಿಸಬಹುದು’ ಎಂದು ವಾಧ್ವಾ ವಿವರಿಸಿದ್ದಾರೆ.

‘ಈ ರೀತಿ ಸುಲಭವಾಗಿ ಮೊಬೈಲ್‌ ಸಂಖ್ಯೆಗಳು ದೊರೆಯುವುದರಿಂದ ಫೇಸ್‌ಬುಕ್‌ ಬಳಕೆದಾರರಿಗೆ ಇರುವುದಕ್ಕಿಂತ ಹೆಚ್ಚು ಅಪಾಯ ವಾಟ್ಸ್‌ಆ್ಯಪ್‌ನ ಗುಂಪು ಸಂವಹನ ಆಯ್ಕೆಯಲ್ಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಖಾಸಗಿತನ ಮತ್ತು ಸುರಕ್ಷತೆ ನಮ್ಮ ವಂಶವಾಹಿಯಲ್ಲೇ ಇದೆ ಎಂಬ ಕಂಪನಿಯ ಮಾತನ್ನು ಬಳಕೆದಾರರು ಬಲವಾಗಿ ನಂಬಿರುತ್ತಾರೆ. ಆದರೆ ವಾಸ್ತವವೇ ಬೇರೆ ಇದೆ. ಆ್ಯಪ್‌ ವಿನ್ಯಾಸದಲ್ಲೇ ಹಲವಾರು ದೋಷಗಳಿವೆ’ ಎಂದು ಅವರು ಆರೋಪಿಸಿದ್ದಾರೆ.

ಸಾರ್ವಜನಿಕ ಸಂಪರ್ಕ ಬಳಸಿ ಅಥವಾ ನೇರವಾಗಿ ಗ್ರೂಪ್‌ ಅಡ್ಮಿನ್‌ ಹೊಸ ಸದಸ್ಯರನ್ನು ಗುಂಪಿಗೆ ಸೇರಿಸಬಹುದು. ಆಗ ಇಂತಹ ಹೆಸರಿನ ಹೊಸ ಸದಸ್ಯರನ್ನು ಗುಂಪಿಗೆ ಸೇರಿಸಲಾಗಿದೆ ಎಂಬ ಸೂಚನೆ ಬರುತ್ತದೆ. ಅದರಲ್ಲಿ ಆ ಸದಸ್ಯನ ಹೆಸರು ಅಥವಾ ಮೊಬೈಲ್‌ ಸಂಖ್ಯೆ ಮಾತ್ರ ಇರುತ್ತದೆ. ಆದರೆ ಅವರು ಯಾರು ಎಂಬ ಸಂಪೂರ್ಣ ಮಾಹಿತಿ ಇರುವುದಿಲ್ಲ. ಗುಂಪಿಗೆ ಸೇರ್ಪಡೆಯಾದಾಗಿನಿಂದ ಗುಂಪಿನಲ್ಲಿ ಆಗುವ ಚರ್ಚೆ, ಮಾತುಕತೆಯನ್ನು ದಾಖಲಿಸಿಕೊಳ್ಳಬಹುದು. ಇ–ಮೇಲ್‌ ಮಾಡಿಕೊಳ್ಳಬಹುದು. ಗುಂಪಿನ ಎಲ್ಲ ಸದಸ್ಯರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು’ ಎನ್ನುತ್ತಾರೆ ವಾಧ್ವಾ.

‘ದಿನಗಳೆದಂತೆ ದೊಡ್ಡದಾಗಿ ಬೆಳೆದಿದ್ದ ವಾಟ್ಸ್‌ಆ್ಯಪ್‌ ಗುಂಪೊಂದರಲ್ಲಿ ನನ್ನ ಮಗುವಿನ ಬಗ್ಗೆ ಚರ್ಚಿಸಿದ್ದೆ. ಅದಾದ ನಂತರ ಕೆಲ ಅಪರಿಚಿತರು ನನ್ನ ಮಕ್ಕಳನ್ನು ಸಂಪರ್ಕಿಸಬಹುದೇ ಎಂದು ಬಳಕೆದಾರರೊಬ್ಬರು ನನ್ನ ಬಳಿ  ಆತಂಕ ಹಂಚಿಕೊಂಡಿದ್ದರು’ ಎಂದು ವಾಟ್ಸ್‌ಆ್ಯಪ್‌ ಗುಂಪು ಸಂವಹನದಿಂದ ಆಗುವ ತೊಂದರೆಗಳನ್ನು ಉದಾಹರಣೆ ಸಹಿತ ವಾಧ್ವಾ ವಿವರಿಸಿದ್ದಾರೆ.

‘ವಾಟ್ಸ್‌ಆ್ಯಪ್‌ ಎರಡು ಮುಖ ಹೊಂದಿದೆ. ಒಂದು ಫೇಸ್‌ಬುಕ್‌ ಜತೆ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುವುದು. ಇನ್ನೊಂದು, ಗೂಢಲಿಪಿಯನ್ನು ಸಾಮಾನ್ಯ ಭಾಷೆಗೆ ಪರಿವರ್ತಿಸುವುದಿಲ್ಲ (ಡಿಕ್ರಿಪ್ಟ್‌) ಎಂದು ಸುಳ್ಳು ಹೇಳುವುದು’ ಎಂದು ಅವರು ತಿಳಿಸಿದ್ದಾರೆ.

’ವಿಶ್ವದ ಶೇ 25ಕ್ಕಿಂತ ಹೆಚ್ಚು ಮಂದಿ ಉಚಿತವಾಗಿ ದೊರೆಯುವ ವಾಟ್ಸ್‌ಆ್ಯಪ್‌ನ ಸೇವೆಗಳನ್ನು ಬಳಸುತ್ತಿದ್ದಾರೆ. ಈ ಸೇವೆಗಳನ್ನು ಒದಗಿಸಲು, ಉದ್ಯೋಗಿಗಳಿಗೆ ಸಂಬಳ, ಆ್ಯಪ್‌ ನಿರ್ವಹಣೆ, ಬೌದ್ಧಿಕ ನೀತಿಗಳ ಹಕ್ಕುಗಳ ತಯಾರಿಕೆ ಮುಂತಾದವಕ್ಕೆ ಸಾಕಷ್ಟು ಖರ್ಚಾಗುತ್ತದೆ. ಬಳಕೆದಾರರ ಮಾಹಿತಿ ಸಂಗ್ರಹಿಸಿ, ಫೇಸ್‌ಬುಕ್‌ ಸೇರಿದಂತೆ ಇತರರ ಜತೆ ಹಂಚಿಕೊಳ್ಳುವ ಮೂಲಕ ವಾಟ್ಸ್‌ಆ್ಯಪ್‌ ಹಣ ಗಳಿಸುತ್ತಿದೆ’ ಎಂದು ನ್ಯೂಯಾರ್ಕ್‌ನಲ್ಲಿರುವ ಅಟಾರ್ನಿ ರವಿ ಬಾತ್ರಾ ತಿಳಿಸಿದ್ದಾರೆ.

‘ಆಧುನಿಕ ಡಿಜಿಟಲ್‌ ಲೋಕದಲ್ಲಿ ಉಚಿತವಾಗಿ ಸೇವೆಗಳು ಲಭ್ಯವಾಗಲು ಪ್ರತಿ ಬಳಕೆದಾರನ ಮಾಹಿತಿಯ ಕಳ್ಳತನವೇ ಮೂಲ. ಬೆರಳಚ್ಚು ಅಥವಾ ಇನ್ನಿತರ ವಂಶವಾಹಿಗಳಿಂದಾಗಿ ಪ್ರತಿ ವ್ಯಕ್ತಿಯೂ ಭಿನ್ನ. ಅದೇ ರೀತಿ ವ್ಯಕ್ತಿಯ ಬದುಕು, ವೃತ್ತಿ, ಆಸಕ್ತಿ, ವರ್ತನೆ ಮುಂತಾದ ವಿಷಯಗಳೂ ಬೆರಳಚ್ಚಿನಷ್ಟೇ ವಿಶಿಷ್ಟ. ಹೀಗಾಗಿ ನಿಮ್ಮ ಮಾಹಿತಿ ಸಂಗ್ರಹದಿಂದ ಹೆಚ್ಚಿನ ಲಾಭವಿದೆ. ನಿಮಗೆ ಯಾವಾಗ ಏನು ಬೇಕು ಎಂಬುದನ್ನು ನಿಮಗಿಂತ ಮೊದಲೇ ಸಂಬಂಧಿಸಿದ ಕಂಪೆನಿಗಳು ತಿಳಿದುಕೊಳ್ಳುತ್ತವೆ’ ಎಂದು ಬಾತ್ರಾ ವಿವರಿಸಿದ್ದಾರೆ.

ವಾಟ್ಸ್‌ಆ್ಯಪ್‌ನ ಬಳಕೆದಾರ ಒಪ್ಪಂದದ ಬಗ್ಗೆ ಮಾತನಾಡಿರುವ ಬಾತ್ರಾ, ‘ಯಾವುದೇ ವ್ಯಾಜ್ಯಗಳಿದ್ದರೂ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವ ಬದಲು ಮಧ್ಯಸ್ಥಿಕೆದಾರನ ನ್ಯಾಯತೀರ್ಮಾನಕ್ಕೆ ಬದ್ಧವಾಗಿರುವುದನ್ನು ಉಲ್ಲೇಖಿಸಿದೆ. ಒಂದು ವೇಳೆ ಬಳಕೆದಾರ ನ್ಯಾಯಾಲಯದ ಮೆಟ್ಟಿಲೇರಿದರೆ ಸಮಯ ಮತ್ತು ದುಡ್ಡು ವ್ಯರ್ಥವಾಗುತ್ತದಷ್ಟೇ’ ಎಂದು ತಿಳಿಸಿದ್ದಾರೆ.

ಬಳಕೆದಾರರ ಒಪ್ಪಂದದಲ್ಲಿ ಏನಿದೆ

ಭಾರತದ ಬಳಕೆದಾರ, ವಾಟ್ಸ್‌ಆ್ಯಪ್‌ ಬಳಸುವಾಗ ‘ನಮ್ಮ ಸೇವೆಗಳನ್ನು ಬಳಸಲು ನಿಮಗೆ ಇಚ್ಛೆ ಇದ್ದಲ್ಲಿ, ನೀವು ನಮ್ಮ ಸೇವೆಗಳನ್ನು ಬಳಸಿಕೊಂಡು ಅಪ್‌ಲೋಡ್‌ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ ಅಥವಾ ಸ್ವೀಕರಿಸುವ ಸಂದೇಶ, ಮಾಹಿತಿಯನ್ನು ವಿಶ್ವದಾದ್ಯಂತ, ಹಕ್ಕುಸ್ವಾಮ್ಯರಹಿತವಾಗಿ, ಇನ್ನೊಬ್ಬರಿಗೆ ವರ್ಗಾಯಿಸಲು, ಪುನರ್‌ ಮುದ್ರಣ ಮಾಡಲು, ಹಂಚಿಕೊಳ್ಳಲು ಅನುಮತಿ ನೀಡಬೇಕು’ ಎಂಬ ಒಪ್ಪಂದಕ್ಕೆ ಬದ್ಧನಾಗಿರಬೇಕು.
**
ವ್ಯಾಜ್ಯ ಇತ್ಯರ್ಥ
ನಮ್ಮ ಸೇವೆಗೆ, ಷರತ್ತುಗಳಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯಗಳಿದ್ದರೂ, ನೀವು ಯಾವುದೇ ದೇಶದವರಾಗಿದ್ದರೂ ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಲಯ ಅಥವಾ ಸ್ಯಾನ್‌ ಮಾಟಿಯೊದ ರಾಜ್ಯ ನ್ಯಾಯಾಲಯದಲ್ಲಿಯೇ ಇತ್ಯರ್ಥಪಡಿಸಿಕೊಳ್ಳಬೇಕು.

ಅಂದರೆ ಎಂತಹ ವ್ಯಾಜ್ಯವೇ ಇದ್ದರೂ ವೀಸಾ ಪಡೆದುಕೊಂಡು ಅಮೆರಿಕೆಗೆ ಹೋಗಿ, ವಿಚಾರಣೆ ಮುಗಿಯುವವರೆಗೂ ಅಲ್ಲಿದ್ದು, ನ್ಯಾಯ ಪಡೆದುಕೊಂಡು ಬರಬೇಕು. ವಾಸ್ತವವಾಗಿ ಇವೆಲ್ಲ ಸಾಧ್ಯವಾಗದೆ ಇರುವುದರಿಂದ ಭಾರತದ ಯಾವ ಬಳಕೆದಾರನೂ ವಾಟ್ಸ್‌ಆ್ಯಪ್‌ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿಲ್ಲ.

ಇಂತಹ ಷರತ್ತುಗಳಿಂದಲೇ ಮಾಹಿತಿ ಕದಿಯುವ ಆ್ಯಪ್‌ಗಳ ವಿರುದ್ಧ ಇದುವರೆಗೂ ಕಠಿಣ ಕ್ರಮಗಳನ್ನು ಕೈಗೊಳ್ಳಲು ಆಗಿಲ್ಲ ಎಂದೂ ಐ.ಟಿ ಪರಿಣತರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT