ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಕಾನ್‍ಗಳಾಚೆಗೆ...

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

– ರಮೇಶ ಅರೋಲಿ, ದೆಹಲಿ

‘ಬಸವನೆಂದರೆ ಪಾಪ ದೆಸೆಗಟ್ಟಿ ಓಡುವುದಯ್ಯಾ’ ಎಂಬ ಮಾತಿದೆ. ಬಹುಶಃ ತಳ ಸಮುದಾಯಗಳು ತಮ್ಮನ್ನು ಕೇಡು ಆಚರಣೆಗಳಿಂದ ದೂರ ಇಟ್ಟುಕೊಳ್ಳಲು ಭಾವನಾತ್ಮಕವಾಗಿ ಹೀಗೆ ಬಸವನೊಂದಿಗೆ ಬೆಸೆದುಕೊಂಡಿವೆ. ಅನೇಕ ಚಲನಶೀಲ ಸಾಂಸ್ಕೃತಿಕ ವ್ಯಕ್ತಿತ್ವಗಳನ್ನು ತಮ್ಮ ತಮ್ಮ ಸ್ವತ್ತಾಗಿಸಿಕೊಳ್ಳುವ ಭರದಲ್ಲಿ; ಅಂಥವರ ಬೋಧನೆಗಳನ್ನು ಗಾಳಿಗೆ ತೂರಿ ಕೇವಲ ಅವರನ್ನು ಐಕಾನ್‍ಗಳಾಗಿ ಅಷ್ಟೇ ಒಪ್ಪುವ ಒಂದು ಜನಪ್ರಿಯ ಸಂಪ್ರದಾಯ ನಮ್ಮ ನಗರ ಪ್ರದೇಶಗಳಲ್ಲಿದೆ. ಅಂಥವರು ‘ವಿಚಾರ’ವಾಗಿ ಎದುರಾದಾಗ ಅವರಿಂದ ಪರಾರಿಯಾಗುವ ಪರಂಪರೆ ಕೂಡ ನಮ್ಮದಾಗುತ್ತಿದೆ. ಹೀಗಾಗಿ ನನ್ನ ನಿಜದ (ಕಲ್ಪನೆಯಲ್ಲ) ‘ಬಸವಣ್ಣ’ ಇಂದಿಗೂ ಜೀವಂತ ಇರುವುದು ಜಾತ್ರೆಯ ಪಳೆಯುಳಿಕೆಯಂತಹ ಈ ನೆಲದ ಗ್ರಾಮೀಣ ಸಮುದಾಯಗಳ ಕೂಡು ಬದುಕಿನಲ್ಲಿ. ಹೊಟ್ಟೆ ಪಾಡಿಗೆ ‘ಕಾಯಕವೇ ಕೈಲಾಸ’ ಅಂತ ಊರಿನ ಚರಂಡಿಗಿಳಿಯುವ ಒಬ್ಬ ಪಟ್ಟಣವಾಸಿ ಅಮಾಯಕನ ಅಂಗೈಯಲ್ಲಿ ಬಸವ ಉಳಿದಿದ್ದಾನೆ.

ಗುಡಿ-ಗುಂಡಾರದ ಅನ್ನದಾನ ಕಾರ್ಯಕ್ರಮಗಳನ್ನು ‘ಸ್ಪಾನ್ಸರ್’ ಪಡೆದು ಮಾಡುವ ಸ್ಥಿತಿಗೆ ತಲುಪಿರುವ ಇಂದಿನ ಈ ಮಾರುಕಟ್ಟೆ ಪ್ರಭಾವದ ದಿನಗಳಲ್ಲಿ, ಆಧುನಿಕತೆ ಕೇವಲ ಸರಕಿನ ರೂಪದಲ್ಲಿ ನಮ್ಮ ಮೈ ಹೊಕ್ಕಂತೆ ಕಾಣುತ್ತದೆ. ನಮ್ಮ ತಲೆ ಮತ್ತು ಹೃದಯ ಇನ್ನೂ ಬಸವನ ಕಾಲದ ಜಿಡ್ಡುಬಿದ್ದ ಸ್ಥಿತಿಯಲ್ಲೇ ಇವೆ. ಅವುಗಳಲ್ಲಿ ಇನ್ನಾದರು ಫ್ಲೆಕ್ಸ್‌ಗಳಲ್ಲಿ ಸಿನಿತಾರೆಯರಂತೆ ಮಿನುಗುವ, ಫೋಟೊ ಫ್ರೇಮ್‍ನಲ್ಲಿ ಬಂಧಿಯಾದ ಬಸವಣ್ಣನ ಬದುಕಿನ ಸರಳ ಮಾತು ಆತನನ್ನು ‘ಸಾಂಸ್ಕೃತಿಕ ಬಂಡವಾಳ’ವನ್ನಾಗಿ ಮಾಡಿಕೊಂಡ ಪ್ರತಿಯೊಬ್ಬರಿಗೂ ತಲುಪಬೇಕಿದೆ. ಇದೇ ನನ್ನ ನಿಜದ ಬಸವತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT