ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಮುತ್ಸದ್ದಿಯಲ್ಲ!

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಆತ್ಮವೇ ಇಲ್ಲದವರ ಛದ್ಮವೇಷಗಳ ವಂಚನೆಯ ಆಟ’ (ಪ್ರ.ವಾ., ಏ. 17) ಎಂಬ ಬರಹದಲ್ಲಿ ಲೇಖಕರು ಗಾಂಧೀಜಿ ಹೆಸರು ಉಲ್ಲೇಖಿಸಿರುವುದು ಅನುಚಿತ. ಅದರಲ್ಲೂ ವಾಚಾಳಿಯೊಬ್ಬನ ಆಟ- ಮಾಟಗಳನ್ನು ಗಾಂಧೀಜಿ ಎಂಬ ಕೋಲಿನಲ್ಲಿ ಅಳೆಯಹೋಗಿರುವುದು, ಎ.ಕೆ. ರಾಮಾನುಜನ್‌ರ ‘ಅಂಗುಲದ ಹುಳ’ ಕೋಗಿಲೆ ಗಾನವನ್ನು ಅಳೆಯಹೋದಂತೆಯೇ ಸರಿ!

ಮಹಾತ್ಮ ಗಾಂಧಿ ವಾಚಾಳಿಯಲ್ಲ. ಹೋಗಲಿ, ನೆಹರೂ ಅಥವಾ ನಾವು ಕಂಡಿರುವ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ. ನರಸಿಂಹರಾವ್‌ ಅವರಂಥ ಮಾತುಗಾರನೂ ಅಲ್ಲ. ರಾಜಕೀಯದಲ್ಲಂತೂ ಅಂಬೇಡ್ಕರ್, ಇಂದಿರಾ ಗಾಂಧಿ, ವಿ.ಪಿ. ಸಿಂಗ್ ಅಂಥವರಿರಲಿ, ಎಚ್.ಡಿ. ದೇವೇಗೌಡರೊಂದಿಗೂ ಹೋಲಿಸಲಾಗದು. ಇಷ್ಟಕ್ಕೂ ಗಾಂಧೀಜಿ ರಾಜಕೀಯಕ್ಕೆ ಬಂದದ್ದೇ ಆಕಸ್ಮಿಕ. ‘ಶಕ್ತಿ ರಾಜಕಾರಣ’ (ಪವರ್‌ ಪಾಲಿಟಿಕ್ಸ್‌) ದಲ್ಲಂತೂ ಅವರು ಎಂದೂ ಭಾಗವಹಿಸಿದ್ದಿಲ್ಲ. ವೈಸರಾಯ್ ಇರ‍್ವಿನ್‌ರೊಡನೆ ಮಾಡಿಕೊಂಡ ಒಪ್ಪಂದದ ಕಾರಣಕ್ಕೆ ಅವರು ತಮ್ಮ ನೆಚ್ಚಿನ ಶಿಷ್ಯವರ್ಗದ ಟೀಕೆ ಅಷ್ಟೇ ಅಲ್ಲ, ನಿಂದನೆಗೂ ಗುರಿಯಾಗಿದ್ದರು. ಅದರಿಂದ ಅವರು ನೊಂದುಕೊಂಡರೇ ಹೊರತು, ಮೊಂಡು ವಾದದಿಂದ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳಹೋಗಲಿಲ್ಲ. ಅವರದು ಆದರ್ಶ. ಅದೂ ದೇಶದ ಆಡಳಿತ ನಡೆಸಲು ಸಾಧ್ಯವಾಗಲಾರದಂತಹ ಎತ್ತರದ ಆದರ್ಶ.

ಒಂದು ಬಾರಿಯೇನೋ ಬಾಬಾಸಾಹೇಬರು, ಗಾಂಧೀಜಿಯ ಜೀವಾಪಾಯವನ್ನು ತಪ್ಪಿಸಲು, ಅವರ ಆಗ್ರಹಕ್ಕೆ ಮಣಿದಿರಬಹುದು. ಆದರೆ ಗಾಂಧೀಜಿ ಇನ್ನೂ ದೀರ್ಘಾಯುಷಿಯಾಗಿ, ಸ್ವತಂತ್ರ ಭಾರತದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಹೋಗಿದ್ದರೆ, ಇಂತಹ ರಾಜಿಸಂಧಾನಗಳು ಪದೇಪದೇ ಸಾಧ್ಯವಾಗುತ್ತಿದ್ದುದು ಅನುಮಾನವೇ. ಅಂತೂ ಹೇಗೋ ಏನೋ ಅಂತಹ ಪ್ರಶ್ನೆ ಉದ್ಭವಿಸುವ ಅವಕಾಶವೇ ಉಂಟಾಗಲಿಲ್ಲ! ಸ್ವಾತಂತ್ರ್ಯ ಸಂಘರ್ಷದಲ್ಲಿ ಗಾಂಧೀಜಿಯದು ನಿರ್ಣಾಯಕ ಪಾತ್ರ. ಸತ್ಯದ ಜತೆಗಿನ ಅವರ ಜೀವನದುದ್ದದ ಪ್ರಯೋಗದಲ್ಲಿ, ಸ್ವಾತಂತ್ರ್ಯ ಹೋರಾಟ ಒಂದು ಭಾಗವಾಗಿತ್ತೇ ಹೊರತು, ಅದೇ ಅವರ ಗುರಿಯಾಗಿರಲಿಲ್ಲ.

ಗಾಂಧೀಜಿಯನ್ನು ಸಂತನನ್ನಾಗಿ, ಫಕೀರನನ್ನಾಗಿ ನೋಡುವುದು ಹೆಚ್ಚು ಉಚಿತವಾದೀತೇ ಹೊರತು ಮುತ್ಸದ್ದಿಯಾಗಿ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT