ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ನಂಬಿ ಕೆಟ್ಟ ಮಾದಿಗರು

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ ಸ್ಥಿತಿಗತಿ ಮತ್ತು ಅವುಗಳ ವೃತ್ತಿಯ ಹಿನ್ನೆಲೆ ನೋಡಿದಾಗ ಈ ಸಮುದಾಯದ ಹೆಚ್ಚಿನವರು ಭೂರಹಿತ ಕೃಷಿಕಾರ್ಮಿಕರು, ಉಳುಮೆಗಾರರು, ಪೌರಕಾರ್ಮಿಕರು, ಚಮ್ಮಾರರು ಹಾಗೂ ಇನ್ನೂ ಅನೇಕ ಗೌರವರಹಿತ ಮಲಿನ ವೃತ್ತಿಗಳಲ್ಲಿ ತೊಡಗಿರುವುದನ್ನು

ಕಾಣಬಹುದು. ಯಾವ ಸಮುದಾಯವೂ ಇಂಥ ವೃತ್ತಿಗಳನ್ನು ಸ್ವಯಂ ಆಸಕ್ತಿಯಿಂದ ಮಾಡುವುದಿಲ್ಲ. ಇಂತಹ ನತದೃಷ್ಟ ಸಮುದಾಯದವರ ಸಬಲೀಕರಣಕ್ಕೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಈ ಸಮುದಾಯದ ಜನರ ಬದುಕಿನಲ್ಲಿ ಅಂಥ ಗಮನಾರ್ಹವಾದ ಬದಲಾವಣೆಗಳು ಕಾಣಿಸುತ್ತಿಲ್ಲ.

ವಿಶೇಷ ಯೋಜನೆಗಳನ್ನು ರೂಪಿಸಿ, ಈ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 1980ರಲ್ಲಿ ಇಂದಿರಾ ಗಾಂಧಿ ಅವರು ಒಂದು ಅಧ್ಯಯನ ಮಾಡಿಸಿದ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗಾಗಿ ವಿಶೇಷ ಘಟಕ ಉಪಯೋಜನೆ ಜಾರಿಗೊಳಿಸುವುದು ಅವರ ಉದ್ದೇಶವಾಗಿತ್ತು. ಪರಿಶಿಷ್ಟ ಜಾತಿಗಳಲ್ಲಿ 14 ಸಾಂಪ್ರದಾಯಿಕ ವೃತ್ತಿಗಳನ್ನು ಗುರುತಿಸಲಾಗಿತ್ತು. ಇಂಥ ವೃತ್ತಿ ಮಾಡುವ ಜನರು ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದ್ದರು. ಅಂಥ 3.76 ಕೋಟಿ ಜನರಲ್ಲಿ ಚಮ್ಮಾರರು, ಪೌರಕಾರ್ಮಿಕರು ಮತ್ತು ಸತ್ತ ಪ್ರಾಣಿಗಳ ಮೂಳೆ ಸಂಗ್ರಹಿಸುವವರು ಶೇ 61ರಷ್ಟು ಜನರಿದ್ದರು.

ಬೇರೆಬೇರೆ ರಾಜ್ಯಗಳಲ್ಲಿ ಬೇರೆಬೇರೆ ಹೆಸರುಗಳಿಂದ ಗುರುತಿಸಿಕೊಳ್ಳುವ ಈ ಚಮ್ಮಾರರದ್ದು ಅಸ್ಪೃಶ್ಯ ಸಮುದಾಯ (ಕರ್ನಾಟಕದಲ್ಲಿ ಇವರು ಮಾದಿಗರು ಎಂದು ಗುರುತಿಸಿಕೊಂಡಿದ್ದಾರೆ). 1971ರ ಜನಸಂಖ್ಯೆ ಪ್ರಕಾರ ಆಂಧ್ರಪ್ರದೇಶದಲ್ಲಿ 21.73 ಲಕ್ಷ, ಬಿಹಾರದಲ್ಲಿ 18.95 ಲಕ್ಷ, ಗುಜರಾತಿನಲ್ಲಿ 3.06 ಲಕ್ಷ, ಕರ್ನಾಟಕದಲ್ಲಿ 4.09 ಲಕ್ಷ, ಮಧ್ಯಪ್ರದೇಶದಲ್ಲಿ 25.07 ಲಕ್ಷ, ಮಹಾರಾಷ್ಟ್ರದಲ್ಲಿ 5.53 ಲಕ್ಷ, ತಮಿಳುನಾಡಿನಲ್ಲಿ 8 ಲಕ್ಷ, ಪಂಜಾಬ್-ಹರಿಯಾಣದಲ್ಲಿ 15.98 ಲಕ್ಷ, ರಾಜಸ್ಥಾನದಲ್ಲಿ 14.79 ಲಕ್ಷ, ಉತ್ತರ ಪ್ರದೇಶದಲ್ಲಿ 86.93 ಲಕ್ಷ, ಪಶ್ಚಿಮ ಬಂಗಾಳದಲ್ಲಿ 4.01 ಲಕ್ಷ ಮತ್ತು ದೆಹಲಿಯಲ್ಲಿ 1.25 ಲಕ್ಷ ಮಂದಿ ಈ ಸಮುದಾಯದ ಜನರಿದ್ದರು.

ದುಡಿಮೆಗಾರರ ಒಟ್ಟು ಲೆಕ್ಕದಲ್ಲಿ ಅಂದು ಕರ್ನಾಟಕದಲ್ಲಿ 4.09 ಲಕ್ಷ ಚಮ್ಮಾರರು ಅರ್ಥಾತ್‌ ಮಾದಿಗರಿದ್ದರು. ಈಗ ಈ ಸಂಖ್ಯೆ 20 ಲಕ್ಷ ದಾಟಿದೆ. ಈ ರಾಜ್ಯದಲ್ಲಿ ಚಮ್ಮಾರ ಮತ್ತು ಪೌರಕಾರ್ಮಿಕ ವೃತ್ತಿ ಅವಲಂಬಿತ ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಭಾಷಿಕ ಮಾದಿಗ ಮತ್ತು ಅದರ ಉಪಜಾತಿಗಳು ಅಧಿಕವಾಗಿವೆ. ಆದರೆ, 1979ರಿಂದ ಈ ಸಮುದಾಯ ಸೂಕ್ತ ರಾಜಕೀಯ ಪ್ರಾತಿನಿಧ್ಯವಿಲ್ಲದೆ ದನಿ ಸತ್ತ ಸಮುದಾಯವಾಗಿದೆ.

ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿದ ವರದಿಯ ಜಾರಿಗಾಗಿ ಮಾದಿಗ ಮತ್ತು ಅದರ ಉಪಜಾತಿಗಳು ಬೀದಿಗಿಳಿದಾಗ, ಕಾಂಗ್ರೆಸ್‌ ಪಕ್ಷ ಅನೇಕ ಭರವಸೆಗಳನ್ನು ನೀಡಿತ್ತು. ಅದರಲ್ಲಿ ಆದಿಜಾಂಬವ ನಿಗಮ ಸ್ಥಾಪಿಸುವ ಭರವಸೆ ಮಾತ್ರ ಈಡೇರಿದೆ. ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಪಕ್ಷ ಮೌನವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌  ಕೂಡ ಇದೇ ನೀತಿ ಅನುಸರಿಸಿವೆ. ಹಾಗಾಗಿ ರಾಜ್ಯದ ರಾಜಕೀಯ ಬಾವುಟದಲ್ಲಿ ಮಾದಿಗರು ಇದ್ದರೂ, ಈ ಬಾರಿಯ ಚುನಾವಣೆಯಲ್ಲಿ ಅವರು ಕಣ್ಮರೆ ಆಗುವ ಸೂಚನೆಗಳು ಕಾಣಿಸುತ್ತಿವೆ. ಪರಿಶಿಷ್ಟ ಜಾತಿಗೆ ಮೀಸಲಿರುವ ಎಲ್ಲ 36 ಸ್ಥಾನಗಳನ್ನು ಯಾವುದಾದರೂ ಒಂದೇ ಜಾತಿಯವರಿಗೆ ನೀಡಿದರೂ ಆಕ್ಷೇಪಣೆಗಳಿಲ್ಲ. ಆದರೆ ಅದಕ್ಕೊಂದು ರಾಜಕೀಯ ಸಮರ್ಥನೆ ಇರಬೇಕಲ್ಲವೇ? ಆ ದಿಕ್ಕಿನಲ್ಲಿ ಕಾಂಗ್ರೆಸ್‌ ಆಗಲೀ, ಇತರ ರಾಜಕೀಯ ಪಕ್ಷಗಳಾಗಲೀ ಚಿಂತನೆ ನಡೆಸಿಲ್ಲ.

ರಾಜಕೀಯ ಪಕ್ಷಗಳಿಂದ ಮಾದಿಗರಿಗೆ ಅನ್ಯಾಯವಾಗಿದ್ದರೆ ಅದಕ್ಕೆ ಆಯಾ ಪಕ್ಷದಲ್ಲಿರುವ ಈ ಸಮಾಜದ ನಾಯಕರ ಪೊಳ್ಳುತನವೇ ಕಾರಣ ಅಂದರೆ ತಪ್ಪಾಗದು. ಮೀಸಲು ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸುವ ಶಕ್ತಿ ಇವರಿಗೆ ಇಲ್ಲ ಎಂಬುದು ರಾಜಕೀಯ ಪಕ್ಷಗಳ ಭಾವನೆ. ಆದರೆ, ಸಾಮಾನ್ಯ ಮತ್ತು ಪರಿಶಿಷ್ಟ ಪಂಗಡಗಳ ಕ್ಷೇತ್ರಗಳಲ್ಲಿ ಅವರು ಮತದಾನ ಮಾಡುವುದಿಲ್ಲವೇ? ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುವ ಮಾದಿಗ ಸಮುದಾಯದ ಕಾರ್ಯಕರ್ತರು ಈ ಸಾರಿ ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಪಕ್ಷದಿಂದ ಟಿಕೆಟ್‌ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅಂತಹ ಅಭಿಮಾನಿಗಳಿಂದು ಕಣ್ಣೀರನ್ನೂ ಹಾಕಲಾಗದ ಸ್ಥಿತಿಯಲ್ಲಿದ್ದಾರೆ. ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲಿ ಈ ಸಮುದಾಯದವರೇ ಇಲ್ಲ ಎಂದು ಕಾಂಗ್ರೆಸ್‌ ತೀರ್ಮಾನಿಸಿದಂತಿದೆ. ರಾಜ್ಯಸಭಾ ಸ್ಥಾನವೊಂದನ್ನು ನೀಡಿದ ಕಾಂಗ್ರೆಸ್‌, ಈ ಸಮುದಾಯದವರಿಗೆ 7 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಗಬಹುದಾಗಿದ್ದ ಅವಕಾಶವನ್ನು ತಪ್ಪಿಸಿದೆ.

ರಾಜಕೀಯ ಪಕ್ಷಗಳು ಮಾದಿಗರಿಗೆ ರಾಜಕೀಯ ಪ್ರಾತಿನಿಧ್ಯ ನೀಡದೆ ಅಪಮಾನ ಮಾಡುತ್ತಿರುವುದು ಆರೋಗ್ಯಕರ ಮತ್ತು ಉತ್ತಮ ಪ್ರಜಾಪ್ರಭುತ್ವದ ಲಕ್ಷಣ ಅಲ್ಲ. ಈ ರಾಜ್ಯದ ರಾಜಕಾರಣದಲ್ಲಿ ಮಾದಿಗ ಮತ್ತು ಅದರ ಉಪಜಾತಿಗಳಿಗೆ ಎಲ್ಲಾ ರಾಜಕೀಯ ಪಕ್ಷಗಳೂ ನಂಬಿಕೆದ್ರೋಹ ಎಸಗುತ್ತಾ ಬಂದಿವೆ.

ವಿಧಾನಸಭೆ ಮಾತ್ರವಲ್ಲ, 30 ಜಿಲ್ಲಾ ಪಂಚಾಯಿತಿ, 175 ತಾಲ್ಲೂಕು ಪಂಚಾಯಿತಿ ಮತ್ತು 275 ನಗರ ಸ್ಥಳೀಯ ಸಂಸ್ಥೆಗಳಲ್ಲೂ ಮಾದಿಗರ ಪ್ರಾತಿನಿಧ್ಯ ಗಂಭೀರ ಪ್ರಮಾಣದಲ್ಲಿ ಕುಸಿದಿದೆ. ಒಟ್ಟಾರೆ, ಮಾದಿಗರಿಗೆ ಮೊದಲು ಕಾಂಗ್ರೆಸ್‌ ದ್ರೋಹ ಬಗೆಯಿತು. ತದನಂತರ ಜನತಾ ಪರಿವಾರದ ಸರದಿ. ಈಗ ಬಿಜೆಪಿಯೂ ಇದೇ ಹಾದಿಯಲ್ಲಿ ಸಾಗಿದೆ. ಹೊಲೆಯ ಸಮುದಾಯ ಹೊಂದಿರುವ ಶೈಕ್ಷಣಿಕ ಮತ್ತು ಆರ್ಥಿಕ ಸಬಲತೆಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ನಡುಗುತ್ತಿವೆ. ವಿವಿಧ ಪಕ್ಷಗಳಲ್ಲಿರುವ ಮಾದಿಗ ಮತ್ತು ಅದರ ಉಪಜಾತಿಗಳ ನಾಯಕರಲ್ಲಿ ಬದ್ಧತೆ, ಹೊಣೆಗಾರಿಕೆ ಮತ್ತು ಆತ್ಮಸಾಕ್ಷಿಯ ಕೊರತೆಯನ್ನು ಮೇಲ್ವರ್ಗದ ಮತ್ತು ಪರಿಶಿಷ್ಟ ಜಾತಿಯ ಕೆಲವು ರಾಜಕಾರಣಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಆದ್ದರಿಂದ ಮಾದಿಗರು ಅಧೀನ ಮತ್ತು ಶರಣಾಗತಿಯ ರಾಜಕೀಯ ಪರಾವಲಂಬಿಗಳಾಗಿ ನರಳುತ್ತಿದ್ದಾರೆ. ಒಂದರ್ಥದಲ್ಲಿ ಮಾದಿಗರು ಸಾಮಾಜಿಕವಾಗಿ ಎಲ್ಲರಿಗೂ ಅಸ್ಪೃಶ್ಯರಾಗಿದ್ದಾರೆ. ಅತಿ ಹಿಂದುಳಿದ ಮತ್ತು ಕೆಲವು ಪರಿಶಿಷ್ಟ ಜಾತಿ ಜನರಿಗೆ ‘ನವ ಬಹಿಷ್ಕೃತ’ರಾಗಿದ್ದಾರೆ. ‘ಕುಂತಿ ಮಕ್ಕಳಿಗೆ ಕೌರವರ ರಾಜ್ಯದಲ್ಲಿ ನೆಮ್ಮದಿ ಇಲ್ಲ’ ಅನ್ನುವಂಥ ಸಾಮಾಜಿಕ ಸ್ಥಿತಿ ಮಾದಿಗರದ್ದು.

* ದಾಸನೂರು ಕೂಸಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT