ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಸರಗಳವು ತರಬೇತಿ ಪಡೆದಿದ್ದ!

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರಗಳವು ಮಾಡುತ್ತಿದ್ದ ಆರೋಪದಡಿ ಸುಹೇಲ್ ಪಾಷಾ (23) ಎಂಬಾತನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ರಾಮಮೂರ್ತಿನಗರದ ಎನ್‌.ಆರ್.ಐ ಲೇಔಟ್ ನಿವಾಸಿಯಾದ ಈತನನ್ನು ಮೊಬೈಲ್‌ ಕಳವು ಪ್ರಕರಣದಲ್ಲಿ ಈ ಹಿಂದೆಯೇ ಮೈಸೂರು ಪೊಲೀಸರು ಬಂಧಿಸಿದ್ದರು. ಅಲ್ಲಿಯ ಜೈಲಿನಲ್ಲಿ ಕೆಲ ತಿಂಗಳು ಬಂದಿಯಾಗಿದ್ದ ಆರೋಪಿ, ಸಹಕೈದಿಗಳಿಂದ ಸರಗಳವು ಬಗ್ಗೆ ತರಬೇತಿ ಪಡೆದಿದ್ದ. ಜಾಮೀನು ಮೇಲೆ ಹೊರಬಂದ ನಂತರ, ಕೃತ್ಯ ಎಸಗಲಾರಂಭಿಸಿದ್ದ ಎಂದು ಪೊಲೀಸರು ಹೇಳಿದರು.

ಆಟೊ ಚಾಲಕನಾಗಿದ್ದ ಈತ, ಸಹಚರ ಇಮ್ರಾನ್ ಪಾಷಾ ಎಂಬಾತನೊಂದಿಗೆ ಸೇರಿಕೊಂಡು ಕೃತ್ಯ ಎಸಗುತ್ತಿದ್ದ. ಆರೋಪಿಯ ಬಂಧನದಿಂದ ರಾಮಮೂರ್ತಿನಗರ, ಹೆಣ್ಣೂರು, ಬಾಣಸವಾಡಿ ಹಾಗೂ ನಂದಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 7 ಸರಗಳವು ಪ್ರಕರಣಗಳು ಪತ್ತೆಯಾಗಿವೆ. ₹10 ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದೇವೆ ಎಂದರು.

‘ಜನರು ಹೆಚ್ಚು ಸೇರುವ ಸ್ಥಳಗಳಲ್ಲಿ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿ, ಆ ಮೊಬೈಲ್‌ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣವನ್ನು ಮೋಜು–ಮಸ್ತಿಗೆ ಖರ್ಚು ಮಾಡುತ್ತಿದ್ದ. ಜೈಲಿಗೆ ಹೋಗಿದ್ದ ವೇಳೆ ಆತನಿಗೆ ಸರಗಳ್ಳರ ಪರಿಚಯವಾಗಿತ್ತು.’

‘ಸರಗಳವು ಹೇಗೆ ಮಾಡಬೇಕು? ಮಾಡಿದ ನಂತರ ಪರಾರಿಯಾಗುವುದು ಹೇಗೆ? ಕದ್ದ ಚಿನ್ನದ ಸರಗಳನ್ನು ಯಾರಿಗೆ ಮಾರಾಟ ಮಾಡಬೇಕು? ಎಂಬುದನ್ನು ಸರಗಳ್ಳರು ಸುಹೇಲ್‌ಗೆ ಹೇಳಿಕೊಟ್ಟಿದ್ದರು. ಜೈಲಿನಿಂದ ಹೊರಬರುತ್ತಿದ್ದಂತೆ ಬೈಕ್‌ ಖರೀದಿಸಿದ್ದ ಆರೋಪಿ, ಅದರಲ್ಲೇ ನಗರ ಸುತ್ತಾಡಿ ಕೃತ್ಯ ಎಸಗುತ್ತಿದ್ದ. ಆತನ ಸಹಚರ ಇಮ್ರಾನ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT