ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ: ವಿಶ್ವಸಂಸ್ಥೆವರೆಗೆ ಹೋರಾಟ

ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ
Last Updated 18 ಏಪ್ರಿಲ್ 2018, 5:34 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಂಸತ್ತಿನಲ್ಲಿ ದೊರಕಿದ ನಂತರ ವಿಶ್ವ ಮಾನ್ಯತೆ ಪಡೆಯಲು ವಿಶ್ವಸಂಸ್ಥೆಯವರೆಗೂ ಹೋರಾಟ ನಡೆಸಲಾಗುವುದು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಜಾಗತಿಕ ಲಿಂಗಾಯತ ಮಹಾಸಭೆ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿದರು. ‘ಬುದ್ಧನ ಪ್ರೀತಿ, ಅಂಬೇಡ್ಕರ್‌ ಅವರ ಸಮಾನತೆ ಹಾಗೂ ಗಾಂಧಿಯ ಶಾಂತಿಯ ಮಂತ್ರ ಎಲ್ಲವನ್ನೂ ಲಿಂಗಾಯತ ಧರ್ಮ ಒಳಗೊಂಡಿದೆ. ಈ ಧರ್ಮಕ್ಕೆ ವಿಶ್ವ ಮಾನ್ಯತೆ ಸಿಗಲೇಬೇಕಾಗಿದೆ’ ಎಂದರು.

‘ಈ ಹಿಂದೆ ಬೌದ್ಧ, ಜೈನ್‌, ಸಿಖ್‌ ಧರ್ಮದವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಕ್ಕಾಗ ಎಲ್ಲರೂ ಸ್ವಾಗತ ಮಾಡಿದರು. ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ, ಕನ್ನಡಿಗ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ವಿರೋಧ ವ್ಯಕ್ತವಾಗುತ್ತಿದೆ’ ಎಂದರು.

‘ಯಾವುದೋ ಪಕ್ಷದ ಜೊತೆ ಅಂಟಿಕೊಂಡಿರುವವರು ಹಾಗೂ ಗುಲಾಮರು ಮಾತ್ರ ನಾವು ಆರಂಭಿಸಿರುವ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವರ ವಿರೋಧವನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ಮಾಡಿ, ಮಾನ್ಯತೆ ಪಡೆದೇ ತೀರುತ್ತೇವೆ’ ಎಂದು ಹೇಳಿದರು.

‘ಪ್ರಜಾತಂತ್ರದ ವ್ಯವಸ್ಥೆಯಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿಕೊಡಲಾಗಿದೆ. ಬಸವಣ್ಣ ಹಾಗೂ ಲಿಂಗಾಯತ ಧರ್ಮದ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿ ಕೇಂದ್ರ ಸರ್ಕಾರ ಕೂಡ ಮಾನ್ಯತೆ ನೀಡೇ ನೀಡುತ್ತದೆ ಎನ್ನುವ ವಿಶ್ವಾಸ ನಮಗಿದೆ. ಮಾನ್ಯತೆ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಪುನರುಚ್ಚರಿಸಿದರು.

ಧಾರ್ಮಿಕ ಗುಲಾಮಗಿರಿ: ಆರ್ಥಿಕ ಗುಲಾಮಗಿರಿ ಸಹಿಸಿಕೊಳ್ಳಬಹುದು. ಸಾಮಾಜಿಕ ಗುಲಾಮಗಿರಿಯನ್ನು ನಿರ್ಲಕ್ಷ್ಯ ಮಾಡಬಹುದು. ಆದರೆ, ಧಾರ್ಮಿಕ ಗುಲಾಮಗಿರಿ ಅತ್ಯಂತ ಅಪಾಯಕಾರಿ. ಧಾರ್ಮಿಕ ಗುಲಾಮಗಿರಿ ಮನುಷ್ಯನನ್ನು ಕುಬ್ಜನನ್ನಾಗಿಸುತ್ತದೆ. ತಾವೇ ಶ್ರೇಷ್ಠ, ಉಳಿದವರು ಕನಿಷ್ಠ ಎನ್ನುವ ಮನೋಭಾವ ಒಳ್ಳೆಯದಲ್ಲ. ಮಠದ ಸ್ವಾಮೀಜಿಗಳು ಶ್ರೇಷ್ಠರು, ಭಕ್ತರು ಕನಿಷ್ಠ ಎನ್ನುವ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ನಾವು ಹಿಂದೂ ಧರ್ಮದ ಗುಲಾಮರಲ್ಲ. ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಅಸ್ಮಿತೆ ಇದೆ. ಬಸವಣ್ಣನವರು ಕಾಯಕ ಜೀವಿಗಳಿಗಾಗಿ 12ನೇ ಶತಮಾನದಲ್ಲಿಯೇ ಸ್ವತಂತ್ರ ಧರ್ಮವನ್ನು ಸ್ಥಾಪಿಸಿದ್ದರು.ಆದರೆ, ಅರಿವಿನ ಕೊರತೆಯಿಂದಾಗಿ ಹಿಂದೂಗಳ ಜೊತೆ ಸೇರಿಕೊಂಡಿದ್ದೇವೆ. ಆದರೆ, ಈಗ ಅರಿವು ಮೂಡಿದೆ’ ಎಂದರು. ‘ಇಷ್ಟು ದಿನಗಳವರೆಗೆ ಹಿಂದೂಗಳ ಗುಲಾಮರಾಗಿ ಬಸವಣ್ಣನ ಜಯಂತಿ ಆಚರಿಸುತ್ತಿದ್ದೆವು. ಆದರೆ, ಈಗ ಮೊದಲ ಬಾರಿಗೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಅನುಯಾಯಿಗಳಾಗಿ ಸ್ವತಂತ್ರವಾಗಿ ಆಚರಿಸುತ್ತಿದ್ದೇವೆ. ಮನಸ್ಸಿಗೆ ಸಮಾಧಾನ ತಂದಿದೆ’ ಎಂದು ಹೇಳಿದರು. ನೇಗಿನಹಾಳದ ಬಸವ ಸಿದ್ಧಲಿಂಗ ಸ್ವಾಮೀಜಿ, ಶೇಗುಣಸಿ ಮಹಾಂತದೇವರು, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಕೆ.ಬಸವರಾಜ, ಉಪನ್ಯಾಸಕ ಶ್ರೀಶೈಲ ಹೆಬ್ಬಳ್ಳಿ, ಲಿಂಗಾಯತ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ ತೆಲಸಂಗ, ಆರ್‌.ಪಿ. ಅಪರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT