ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ, ಶರಣರು, ಇಂದಿನ ಶಾಸಕರು

Last Updated 18 ಏಪ್ರಿಲ್ 2018, 7:42 IST
ಅಕ್ಷರ ಗಾತ್ರ

12ನೇ ಶತಮಾನದಲ್ಲಿ ಬಸವಣ್ಣನವರು ರೂಪಿಸಿದ ‘ಅನುಭವ ಮಂಟಪ’ವು ವಿಶ್ವಕ್ಕೆ ಮಾದರಿಯಾದ ಸಂಸತ್ತು. ಅಲ್ಲಿ ಅಲ್ಲಮ ಪ್ರಭು ಅಧ್ಯಕ್ಷರಾಗಿದ್ದರು. 770 ಅಮರಗಣಂಗಳು ಇದ್ದರು. ಸಾಮಾಜಿಕ ಕೊಡುಗೆ, ಸಚ್ಛಾರಿತ್ರ್ಯ, ಸಮಾನತೆ ಮತ್ತಿತರ ಶ್ರೇಷ್ಠ ವಿಚಾರಗಳ ಕುರಿತು ಸೈದ್ಧಾಂತಿಕ ಮತ್ತು ತಳ ಸಮುದಾಯದ ಆಲೋಚನೆಗಳು ವಿಫುಲವಾಗಿದ್ದವು. ಶರಣರೇ ಸಚಿವ ಸಂಪುಟದ ಸಚಿವರಾಗಿದ್ದರು. ಯಾವುದೇ ವಿಚಾರ ಅಥವಾ ವಚನ ಮಂಡನೆಗೆ ಮೊದಲು ಚನ್ನಬಸವಣ್ಣನವರು ಪರಿಶೀಲಿಸಬೇಕಿತ್ತು. ಮಂಟಪವು ಸತ್ಯ, ಶುದ್ಧ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೂಡಿತ್ತು.

ಬಸವಣ್ಣನವರಿಗೆ ಏಕತೆ, ಸಮಾನತೆ ಮತ್ತು ಸರ್ವೋದಯವೇ ಬಹು ಮುಖ್ಯವಾಗಿತ್ತು. ‘ಆಸೆ ಎನ್ನುವುದು ರಾಜರಿಗೇ ಹೊರತು ಶರಣರಿಗಲ್ಲ’ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಪ್ರತಿಯೊಬ್ಬರಲ್ಲಿ ನಡೆ– ನುಡಿಯ ಸ್ವಚ್ಛತೆ ಇತ್ತು. ಅಂತರಂಗ ಶುದ್ಧವಿದ್ದ ವ್ಯಕ್ತಿಯಿಂದ ಮಾತ್ರ ಬಾಹ್ಯ ಸ್ವಚ್ಛತೆ ಮತ್ತು ಅಭಿವೃದ್ಧಿ ಸಾಧ್ಯ ಎಂಬುದು ನಿಚ್ಚಳವಾಗಿತ್ತು. ‘ವಚನ’ ಸಂವಿಧಾನದ ಮೂಲಕವೇ ಜಾತಿ, ವರ್ಣ ಹಾಗೂ ವರ್ಗಗಳ ಭೇದಭಾವ ಮರೆತು ಒಂದಾಗಿದ್ದರು. ಮಾನವೀಯ ಮೌಲ್ಯ ಪ್ರಧಾನವಾಗಿತ್ತು.

‘ದಯವಿಲ್ಲದ ಧರ್ಮ ಅದಾವುದಯ್ಯ...’ ‘ಕಳ ಬೇಡ, ಕೊಲ ಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ...’
‘ಇವ ನಮ್ಮವ, ಇವ ನಮ್ಮವ...’ ಎಂಬಿತ್ಯಾದಿ ವಚನಗಳೇ ನಿಯಮಾವಳಿ– ಕಾನೂನು ಆಗಿತ್ತು.

ಈ ಆದರ್ಶವು 21ನೇ ಶತಮಾನದಲ್ಲೂ ಮೂಡಬೇಕಾಗಿದೆ. ವಿಧಾನಸಭೆಗೆ ಹೋಗುವವರು ಸಂಪತ್ತಿನ ಆಸೆ ಮೀರಬೇಕಾಗಿದೆ. ಆದರೆ, ಇಂದು ಮಾನವೀಯತೆಯ ಮೌಲ್ಯಕ್ಕಿಂತ ಹೆಚ್ಚಾಗಿ ಕಾಂಚಣಕ್ಕೆ ಮತ ಮಾರಾಟಗೊಳ್ಳುತ್ತಿದೆ.

ನುಡಿದಂತೆ ನಡೆಯುವ ವ್ಯಕ್ತಿಗಳನ್ನು ಪ್ರಜೆಗಳು ಆಯ್ಕೆ ಮಾಡಬೇಕು. ಜನರಿಂದ ನಾಯಕನೇ ಹೊರತು, ಜನರಿಲ್ಲದಿದ್ದರೆ ಯಾರೂ ನಾಯಕರಲ್ಲ ಎಂಬ ಅರಿವು ಇರಬೇಕು. ತಮ್ಮ ಕುಟುಂಬದಂತೆ ಸಮಾಜವನ್ನೂ ಕಾಣಬೇಕು. ಆಗ ಮಾತ್ರ ಸುಧಾರಣೆ ಸಾಧ್ಯ.

ಅಂದು ವಚನಗಳೇ ಪ್ರಮಾಣವಾಗಿತ್ತು. ಇಂದು, ಕನಿಷ್ಠ ಪಕ್ಷ ‘ಪ್ರಮಾಣ ವಚನ’ಕ್ಕೆ ಮೋಸ ಮಾಡದ ಅಭ್ಯರ್ಥಿಗಳು ಬೇಕಾಗಿದೆ. ಸಾಮಾಜಿಕ ಬದ್ಧತೆಯೂ ಇರಬೇಕು. ಅಂದಮಾತ್ರಕ್ಕೆ, ಶರಣರಂತೆ ಶಾಸಕರನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಶಾಸಕರಿಗೆ ಶರಣರ ನಡೆ –ನುಡಿಗಳು ಆದರ್ಶವಾಗಬೇಕು. ಅನುಭವ ಮಂಟಪದ ಪಾಲನೆ ಮಾಡಲು ಪ್ರಯತ್ನಿಸಬೇಕು. ಜಾತಿ, ಧರ್ಮ, ಹಣ ಮತ್ತಿತರ ಭೋಗಕ್ಕಿಂತ ವಿಚಾರಧಾರೆ, ವ್ಯಕ್ತಿತ್ವಗಳು ಮುಖ್ಯವಾಗಬೇಕು.

ಪ್ರತಿ ಪ್ರಜೆಯೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕಾಯಕದ ಮೂಲಕ ನಾಯಕತ್ವ ನೀಡುವವರನ್ನು ಆರಿಸಬೇಕು. ದೇಶದ ಧರ್ಮ ಗ್ರಂಥವಾದ ‘ಸಂವಿಧಾನ‘ಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವವರು ಬೇಕು. ಮತ ಮಾರಾಟಕ್ಕಲ್ಲ. ಮತದಾನ ಮಾಡದೇ ಇರುವುದೂ ಒಂದು ರೀತಿಯಲ್ಲಿ ಭ್ರಷ್ಟಾಚಾರವೇ ಆಗುತ್ತದೆ. ಹೀಗಾಗಿ, ಒಳ್ಳೆಯ ವ್ಯಕ್ತಿಗೆ ಮತ ಹಾಕಬೇಕು. ಅದುವೇ, ನಮ್ಮ ಸ್ವಾತಂತ್ರ್ಯ ಮತ್ತು ಕರ್ತವ್ಯ ಎಂದು ಹಕ್ಕು ಚಲಾಯಿಸಬೇಕು – ಬಸವ ಶಾಂತಲಿಂಗ ಸ್ವಾಮೀಜಿ ಚರಮೂರ್ತಿ, ಹೊಸಮಠಬಸವ ಕೇಂದ್ರ, ಹಾವೇರಿ

**

ವಿಧಾನಸೌಧ ಅಥವಾ ಸಂಸತ್ ಭವನದ ಒಳಗೆ ಒಬ್ಬ ಪ್ರಜೆ ಹೋಗಬೇಕಾದರೆ, ಹಲವು ಬಾರಿ ಪರಿಶೀಲಿಸುತ್ತಾರೆ. ಹಾಗಿದ್ದರೆ, ಐದು ವರ್ಷಗಳ ಕಾಲಕ್ಕೆ ನೀವು ಕಳುಹಿಸುವ ವ್ಯಕ್ತಿಯ ಬಗ್ಗೆ ಪರಿಶೀಲಿಸುವುದಿಲ್ಲವೇ?  – ಬಸವಶಾಂತಲಿಂಗ ಸ್ವಾಮೀಜಿ. 

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT