ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಯಕಯೋಗಿ’ ಜಯಂತಿಗೆ ನಗರ ಸಜ್ಜು

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಬಸವೇಶ್ವರ ಪುತ್ಥಳಿ ಆವರಣ
Last Updated 18 ಏಪ್ರಿಲ್ 2018, 8:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಾಯಕಯೋಗಿ’ ಬಸವಣ್ಣನವರ 885ನೇ ಜಯಂತಿ ಯನ್ನು ಅದ್ಧೂರಿಯಾಗಿ ಆಚರಿಸಲು ಬಸವ ಜಯಂತಿ ಉತ್ಸವ ಸಮಿತಿಯು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಲ್ಕು ದಿನ ಜಯಂತಿ ಆಚರಿಸಲಾಗುತ್ತಿದ್ದು, ಏ.18 ರಂದು ಭವ್ಯ ಮೆರವಣಿಗೆ ಜರುಗಲಿದೆ. ಜಗತ್ ವೃತ್ತದ ಮಧ್ಯದಲ್ಲಿ ಕೇಸರಿ, ಬಿಳಿ ಬಟ್ಟೆಗಳಿಂದ ಅಲಂಕಾರ ಮಾಡ ಲಾಗಿದ್ದು, ಬಸವೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ಪುತ್ಥಳಿ ಆವರಣದ ಸುತ್ತಲೂ ಬಸವೇಶ್ವರರ ಭಾವಚಿತ್ರವುಳ್ಳ ಧ್ವಜಗಳನ್ನು ಕಟ್ಟಲಾಗಿದೆ. ಸೇಡಂ ರಸ್ತೆಯ ಶ್ಯಾಮಸುಂದರ ವೃತ್ತದಿಂದ ಅನ್ನಪೂರ್ಣಾ ಕ್ರಾಸ್‌ವರೆಗಿನ ರಸ್ತೆ ವಿಭಜಕದಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿವೆ.

ನಗರದ ವಿವಿಧ ಬಡಾವಣೆಗಳ 40 ಬಸವ ಸಮಿತಿ ತಂಡಗಳು ಬಸವೇಶ್ವರ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ರಾಮಮಂದಿರದ ಬಸವ ಮಿತ್ರ ಮಂಡಳಿ, ಎಂ.ಬಿ.ನಗರ, ಪ್ರಗತಿ ಕಾಲೊನಿ, ಜಯನಗರ, ಮಕ್ತಂಪುರ, ಗಾಜಿಪುರ, ಸೂಪರ್ ಮಾರ್ಕೆಟ್ ಪ್ರದೇಶ, ಚನ್ನಮಲ್ಲೇಶ್ವರ ನಗರ, ಶಹಾಬಜಾರ್ ಸೇರಿ ವಿವಿಧ ಬಡಾವಣೆಗಳಿಂದ ಹೊರಡುವ ಮೆರವಣಿಗೆಯು ಜಗತ್ ವೃತ್ತ ತಲುಪಲಿದೆ. ಯುವಕರಿಂದ ಬೈಕ್ ರ್‍ಯಾಲಿ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಡೋಹರ ಕಕ್ಕಯ್ಯ, ಮಾದರ ಚೆನ್ನಯ್ಯ ಸೇರಿ ಎಲ್ಲಾ ಕಾಯಕ ಶರಣರ ಛದ್ಮವೇಷದಲ್ಲಿ ಮಕ್ಕಳು ಗಮನ ಸೆಳೆಯಲಿದ್ದಾರೆ.

ಬಸವಾಭಿಮಾನಿಗಳ ಒತ್ತಾಸೆಯಂತೆ ಜಗತ್ ವೃತ್ತದ ಬಸವೇಶ್ವರ ಪುತ್ಥಳಿ ಆವರಣದ ಸೌಂದರ್ಯೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 15 ಅಡಿ ಎತ್ತರದ ನೀರಿನ ಕಾರಂಜಿ ನಿರ್ಮಿ ಸಲಾಗಿದ್ದು, 21 ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಹುಲ್ಲು ಹಾಸು, ಅಲಂಕಾರಿಕ ಗಿಡಗಳಿಂದ ಇಡೀ ಆವರಣ ಕಂಗೊಳಿಸುತ್ತಿದೆ. ಮೊದಲ ಹಂತದಲ್ಲಿ ₹50 ಲಕ್ಷ ಮತ್ತು ಎರಡನೇ ಹಂತದಲ್ಲಿ ₹50 ಲಕ್ಷ ಸೇರಿ ಒಟ್ಟು ₹1ಕೋಟಿ ವೆಚ್ಚದಲ್ಲಿ ಸೌಂದರ್ಯೀಕರಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.

‘ಜಗತ್ ವೃತ್ತದಲ್ಲಿ ಸುಮಾರು 35 ವರ್ಷಗಳ ಹಿಂದೆ ಬಸವಣ್ಣನವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಂದಿನ ಶಾಸಕರಾಗಿದ್ದ ನೀಲಕಂಠರಾವ ಪಾಟೀಲ ಮತ್ತು ನಗರಸಭೆ ಅಧ್ಯಕ್ಷರಾಗಿದ್ದ ಚಂದ್ರಶೇಖರ ಬಿಲಗುಂದಿ ಅವರು ಪುತ್ಥಳಿ ಸ್ಥಾಪನೆಗೆ ನೆರವಾಗಿದ್ದರು’ ಎಂದು ಸಮಿತಿ ಅಧ್ಯಕ್ಷ ಸುರೇಶ ಪಾಟೀಲ ಜೋಗೂರ ಹೇಳುತ್ತಾರೆ.

‘ವಚನ ಫಲಕಗಳ ಅಳವಡಿಕೆ ಅಪೂರ್ಣ’

ಬಸವೇಶ್ವರ ಪುತ್ಥಳಿ ಆವರಣದ ಸೌಂದರ್ಯೀಕರಣ ಕಾಮಗಾರಿ ಪೂರ್ಣ ಗೊಂಡಿದೆ. ಆದರೆ ಬಸವಣ್ಣನವರ ವಚನಗಳನ್ನು ಒಳಗೊಂಡ ಫಲಕ ಅಳವಡಿಕೆ ಕಾಮಗಾರಿ ಬಾಕಿ ಉಳಿದುಕೊಂಡಿದೆ’ ಎಂದು ಬಸವ ಜಯಂತಿ ಉತ್ಸವ ಸಮಿತಿ ಗೌರವ ಅಧ್ಯಕ್ಷ ಅರುಣಕುಮಾರ ಪಾಟೀಲ ಬೇಸರ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಪುತ್ಥಳಿ ಹಿಂಭಾಗದಲ್ಲಿ ಬಸವ ಸಾಂಸ್ಕೃತಿ ಕೇಂದ್ರ ನಿರ್ಮಾಣ ಮಾಡಬೇಕು ಎಂಬುದು ಬಸವಾಭಿಮಾನಿಗಳ ಕನಸಾಗಿದೆ. ಆದರೆ ಅದಕ್ಕೆ ಇನ್ನೂ ಚಾಲನೆ ದೊರೆತಿಲ್ಲ. ಗ್ರಂಥಾಲಯ ಸ್ಥಾಪನೆ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ.
ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಷಟಸ್ಥಲ ಧ್ವಜಾರೋಹಣ

ಅಂದು ಬೆಳಿಗ್ಗೆ 8ಗಂಟೆಗೆ ಜಿಲ್ಲಾಡಳಿತ ವತಿಯಿಂದ ಬಸವ ಜಯಂತಿ ಆಚರಿಸಲಾಗು ತ್ತಿದೆ.ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶಿ ಕೇಂದ್ರ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು.

ಗಣ್ಯರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡು ವರು. ಹುಮನಾಬಾದ್‌ನ ಶರಣ ಸಾಹಿತಿ ಡಾ. ಸೋಮನಾಥ ಯಾಳವಾರ ವಿಶೇಷ ಉಪನ್ಯಾಸ ನೀಡುವರು. ಆನಂತರ ಆಕಾಶವಾಣಿ ಕಲಾವಿದ ರೇವಯ್ಯ ವಸ್ತ್ರದಮಠ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಲಿದೆ.

ಶರಣರ ಭಾವಚಿತ್ರಗಳ ಮೆರವಣಿಗೆ

ನಗರದ ನೆಹರೂ ಗಂಜ್‌ನ ನಗರೇಶ್ವರ ಶಾಲಾ ಆವರಣದಿಂದ ಸಂಜೆ 5ಗಂಟೆಗೆ ಆರಂಭವಾಗುವ ಮೆರವಣಿಗೆಗೆ ಮುಗಳಖೋಡ ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡುವರು. ಕಾಯಕ ಶರಣರ ಭಾವಚಿತ್ರಗಳ ವರ್ಣರಂಜಿತ ಮೆರವಣಿಗೆ ನಡೆಯಲಿದೆ.

ನಗರೇಶ್ವರ ಶಾಲೆಯಿಂದ ಮುಖ್ಯರಸ್ತೆ ಮಾರ್ಗವಾಗಿ ಹೊರಡುವ ಮೆರವಣಿಗೆ ಜಗತ್ ವೃತ್ತದ ಬಸವೇಶ್ವರ ಪುತ್ಥಳಿ ಆವರಣದ ಬಳಿ ಸಮಾಪ್ತಿಗೊಳ್ಳಲಿದೆ. ಅನುಭವ ಮಂಟಪದ ದೃಶ್ಯಾವಳಿ, ಡೊಳ್ಳು, ಕೋಲಾಟ, ನಂದಿಕೋಲ ಹಾಗೂ ಇತರೆ ಜಾನಪದ ಕಲಾತಂಡಗಳು ಮೆರವಣಿಗೆ ಕಳೆ ತರಲಿವೆ.

**

ಬಸವ ಜಯಂತಿ ಅಂಗವಾಗಿ ಎಲ್ಲಾ ಕಾಯಕ ಶರಣರ ಭಾವಚಿತ್ರಗಳ ಅದ್ಧೂರಿ ಮೆರವಣಿಗೆ ಜರುಗಲಿದೆ. 40 ಬಡಾವಣೆಗಳ ಬಸವ ಸಮಿತಿ ಪದಾಧಿಕಾರಿಗಳು ಭಾಗವಹಿಸುವರು – ಸುರೇಶ ಪಾಟೀಲ ಜೋಗೂರ, ಅಧ್ಯಕ್ಷ, ಬಸವ ಜಯಂತಿ ಉತ್ಸವ ಸಮಿತಿ.

**

ಎಲ್ಲರೂ ಸೇರಿ ಒಗ್ಗಟ್ಟಿನಿಂದ ಬಸವ ಜಯಂತಿಯನ್ನು ಆಚರಿಸುತ್ತಿದ್ದೇವೆ. ಎಲ್ಲರೂ ಒಂದಾಗಿ ಹೋಗುತ್ತೇವೆ. ಬಸವಣ್ಣನವರ ಕಾಯಕ ತತ್ವವನ್ನು ಪಾಲಿಸುತ್ತೇವೆ – ರವೀಂದ್ರ ಶಾಬಾದಿ, ಕಾರ್ಯದರ್ಶಿ, ಬಸವ ಜಯಂತಿ ಉತ್ಸವ ಸಮಿತಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT