ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಷ್ಠ ಅಂತರದ ಗೆಲುವಿನ ದಾಖಲೆ ಸಿಂಧ್ಯರದ್ದು

ಸಾತನೂರು ಕ್ಷೇತ್ರದಲ್ಲಿ ಕೇವಲ 403 ಮತಗಳಿಂದ ಗೆದ್ದು ಬೀಗಿದ್ದರು ಶಿವಲಿಂಗೇಗೌಡರು
Last Updated 18 ಏಪ್ರಿಲ್ 2018, 10:43 IST
ಅಕ್ಷರ ಗಾತ್ರ

ರಾಮನಗರ: ಸದ್ಯ ನಾಮಪತ್ರ ಸಲ್ಲಿಕೆಗೂ ಮುನ್ನವೇ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದೆ. ತಮ್ಮ ನೆಚ್ಚಿನ ನಾಯಕರು ಭಾರಿ ಅಂತರ
ದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ಕಾರ್ಯಕರ್ತರದ್ದು. ಆದರೆ ಚುನಾವಣಾ ಕಣದಲ್ಲಿ ಗೆದ್ದೇ ಬಿಟ್ಟರು ಎನ್ನುವವರು ಭಾರಿ ಅಂತರದಿಂದ ಸೋಲು ಅನುಭವಿಸಿದ್ದಾರೆ. ಸೋತರು ಎಂದುಕೊಂಡವರು ಗೆದ್ದು ಬೀಗಿದ ಉದಾಹರಣೆಗಳು ಇವೆ.

ಜಿಲ್ಲೆಯ ಪ್ರಸ್ತುತ ನಾಲ್ಕು ವಿಧಾನಸಭಾ ಕ್ಷೇತ್ರ ಹಾಗೂ ಈ ಹಿಂದಿನ ಸಾತನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತಗಳ ಅಂತರದ ಗೆಲುವು ದಾಖಲಾಗಿರುವುದು ಕನಕಪುರ ಕ್ಷೇತ್ರದಲ್ಲಿ. ಅದು ಪಿ.ಜಿ.ಆರ್. ಸಿಂಧ್ಯ ಅವರ ಹೆಸರಿನಲ್ಲಿ. 1994ರಲ್ಲಿ ರಾಜ್ಯದಾದ್ಯಂತ ಜನತಾದಳದ ಪರ ಅಲೆ ಎದ್ದಿತ್ತು. ಅದೇ ಉತ್ಸಾಹದಲ್ಲಿ ಸ್ಪರ್ಧೆಗೆ ಇಳಿದಿದ್ದ ಸಿಂಧ್ಯ ಬರೋಬ್ಬರಿ 49,002 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಟಿ. ಚನ್ನಬಸವೇಗೌಡ ವಿರುದ್ಧ ಪ್ರಚಂಡ ಗೆಲುವು ದಾಖಲಿಸಿದ್ದರು.

ಆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಜನತಾದಳಕ್ಕೆ ಅಧಿಕಾರ ಭಾಗ್ಯ ಒಲಿಯಿತು. ಅದೇ ಚುನಾವಣೆಯಲ್ಲಿ ಪಕ್ಕದ ರಾಮನಗರ ಕ್ಷೇತ್ರದಿಂದ ಗೆದ್ದ ಎಚ್.ಡಿ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಜಿಲ್ಲೆಯಲ್ಲಿ ಕನಿಷ್ಠ ಅಂತರದ ಗೆಲುವು ದಾಖಲಿಸಿರುವುದು ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪರಿವಾರದ ಅಭ್ಯರ್ಥಿಯಾಗಿದ್ದ ಕೆ.ಎಲ್. ಶಿವಲಿಂಗೇಗೌಡರು. 1978ರ ಚುನಾವಣೆಯಲ್ಲಿ ಅವರ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿಕ್ಷಣ ತಜ್ಞ ಎಸ್. ಕರಿಯಪ್ಪ ಸ್ಪರ್ಧೆ ಒಡ್ಡಿದ್ದರು. ಅಂತಿಮವಾಗಿ 403 ಮತಗಳ ಅಂತರದಿಂದ ಶಿವಲಿಂಗೇಗೌಡರು ಗೆದ್ದು ಸಮಾಧಾನದ ನಿಟ್ಟುಸಿರು ಬಿಟ್ಟರು. ಕನಕಪುರದಿಂದ ಸಾತನೂರಿಗೆ ಕ್ಷೇತ್ರ ಬದಲಾವಣೆ ಮಾಡಿಕೊಂಡ ಕರಿಯಪ್ಪ ನಿರಾಸೆ ಅನುಭವಿಸಿದರು.

ಚನ್ನಪಟ್ಟಣ: ಕ್ಷೇತ್ರದಲ್ಲಿ ಗರಿಷ್ಠ ಮತಗಳ ಅಂತರದ ಗೆಲುವು ಗಳಿಸಿದ್ದು ಜೆಡಿಎಸ್‌ನ ಹುರಿಯಾಳು ಎಂ. ವರದೇಗೌಡರು. ಇದು ಸಾಧ್ಯವಾಗಿದ್ದು 1994ರ ಚುನಾವಣೆಯಲ್ಲಿ. ಅಂದು ಜನತಾದಳದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಗೌಡರು ಬರೋಬ್ಬರಿ 28,233 ಮತಗಳ ಅಂತರದಿಂದ ಕಾಂಗ್ರೆಸ್‌ನ ಸಾದತ್ ಅಲಿ ಖಾನ್ ಅವರನ್ನು ಮಣಿಸಿದರು. ಈ ಮೂಲಕ ಕಳೆದ ಚುನಾವಣೆಯಲ್ಲಿನ ಸೋಲಿನ ಸೇಡು ತೀರಿಸಿಕೊಂಡಿದ್ದರು.

ಕ್ಷೇತ್ರದಲ್ಲಿ ಕನಿಷ್ಠ ಅಂತರದ ಗೆಲುವು ದಾಖಲಿಸಿದ್ದು ಟಿ.ವಿ.ಕೃಷ್ಣಪ್ಪ ಅವರು. 1967ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಅವರು 1,884 ಮತಗಳ ಅಂತರದಿಂದ ಜಯಿಸುವ ಮೂಲಕ ಶಾಸಕ ಬಿ.ಜಿ. ಲಿಂಗೇಗೌಡರಿಗೆ ಸೋಲಿನ ರುಚಿ ತೋರಿಸಿದ್ದರು.

ರಾಮನಗರ: ಕ್ಷೇತ್ರದಲ್ಲಿ ಗರಿಷ್ಠ ಮತಗಳ ಅಂತರದ ಗೆಲುವು ಹಾಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೆಸರಿನಲ್ಲಿದೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಿದ್ದಕ್ಕೆ ಪ್ರತಿಯಾಗಿ ಮರು ಚುನಾವಣೆಯಲ್ಲಿಯೇ ಕ್ಷೇತ್ರದ ಜನತೆ ಋಣ ಸಂದಾಯ ಮಾಡಿದರು. 2008ರ ಚುನಾವಣೆಯಲ್ಲಿ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ರುದ್ರೇಶ್‌ ವಿರುದ್ಧ 47,300 ಮತಗಳ ಅಂತರದಿಂದ ಭಾರಿ ಗೆಲುವು ದಾಖಲಿಸಿದರು.

ಕ್ಷೇತ್ರದಲ್ಲಿ ಕನಿಷ್ಠ ಅಂತರದ ಗೆಲುವು ದಾಖಲಿಸಿರುವುದು ಜನತಾ ಪರಿವಾರದ ಪುಟ್ಟಸ್ವಾಮಿಗೌಡರು. 1985ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಲಿಂಗಪ್ಪ ವಿರುದ್ಧ 2004 ಮತಗಳಿಂದ ಪ್ರಯಾಸದ ಗೆಲುವು ದಾಖಲಿಸಿದರು. ಲಿಂಗಪ್ಪ ಮೊದಲ ಬಾರಿಗೆ ಶಾಸಕರಾಗುವ ಅವಕಾಶ ಕಳೆದುಕೊಂಡರು.

ಕನಕಪುರ: ಈ ಕ್ಷೇತ್ರದಲ್ಲಿ ಕನಿಷ್ಠ ಅಂತರದ ಜಯ ಲಭಿಸಿದ್ದು ಶಿಕ್ಷಣ ತಜ್ಞ ಎಸ್.ಕರಿಯಪ್ಪ ಅವರಿಗೆ. 1962ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 1593 ಮತಗಳ ಅಂತರದಿಂದ ಕಾಂಗ್ರೆಸ್‌ನ ಕೆ.ಟಿ. ತಿಮ್ಮೇಗೌಡರ ವಿರುದ್ಧ ಜಯ ಸಾಧಿಸಿದರು. ತಿಮ್ಮೇಗೌಡರು ಎರಡನೇ ಬಾರಿಯೂ ನಿರಾಸೆ ಅನುಭವಿಸಿದರು.

ಸಾತನೂರು: 2008ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದೊಂದಿಗೆ ವಿಲೀನವಾದ ಈ ಕ್ಷೇತ್ರದಲ್ಲಿ ಗರಿಷ್ಠ ಅಂತರದ ಗೆಲುವಿನ ನಗೆ ಬೀರಿರುವುದು ಕೆ.ಎಲ್. ಶಿವಲಿಂಗೇಗೌಡರು. 1985ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್‌.ಡಿ. ದೇವೇಗೌಡರು ಇಲ್ಲಿ ಹಾಗೂ ಹೊಳೆ ನರಸೀಪುರ ಕ್ಷೇತ್ರಗಳೆರೆಡರಲ್ಲೂ ಸ್ಪರ್ಧಿಸಿ ಜಯ ಗಳಿಸಿದರು.

ಸಾತನೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಜನತಾ ಪರಿವಾರದ ಅಭ್ಯರ್ಥಿಯಾದ ಕೆ.ಎಲ್‌. ಶಿವಲಿಂಗೇಗೌಡ 18,811 ಮತಗಳ ಅಂತರದಿಂದ ಕಾಂಗ್ರೆಸ್‌ನ ಮರಿಲಿಂಗಯ್ಯ ಅವರನ್ನು ಮಣಿಸಿದರು.

ಅಪ್ಪ–ಮಗನಿಗೆ ಜಯದ ಸವಿ
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಮತ್ತು ಕನಿಷ್ಠ ಅಂತರದ ಗೆಲುವುಗಳೆರಡು ಎಚ್.ಸಿ. ಬಾಲಕೃಷ್ಣರ ಕುಟುಂಬದವರ ಹೆಸರಿನಲ್ಲಿವೆ.

2008ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಬಾಲಕೃಷ್ಣ ಬಿಜೆಪಿ ಅಭ್ಯರ್ಥಿ ಪಿ. ನಾಗರಾಜು ವಿರುದ್ಧ 24,919 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿ ಸಂಭ್ರಮಿಸಿದ್ದರು. ಕಾಂಗ್ರೆಸ್‌ನ ನೀರಸ ಪ್ರಚಾರ ಇಲ್ಲಿ ಜೆಡಿಎಸ್‌ಗೆ ವರವಾಗಿತು.

ಬಾಲಕೃಷ್ಣರ ತಂದೆ ಎಚ್‌.ಜಿ. ಚನ್ನಪ್ಪ 1983ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಆ ಚುನಾವಣೆಯಲ್ಲಿ ಅವರು 1,670 ಮತಗಳ ಅಂತರದಿಂದ ಜನತಾ ಪರಿವಾರದ ಟಿ.ಎ. ರಂಗಯ್ಯರನ್ನು ಮಣಿಸಿ ಖುಷಿ ಪಟ್ಟರು.

ಡಿಕೆಶಿಗೆ ಸಮಾಧಾನದ ಜಯ
ಜಿಲ್ಲೆಯಲ್ಲಿ ಪ್ರಭಾವಿ ನಾಯಕರು ಎನಿಸಿಕೊಂಡವರೂ ಚುನಾವಣೆಗಳಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ. ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಅಂತೆಯೇ ಅಲ್ಪ ಅಂತರದಲ್ಲಿ ನಿರಾಸೆ ಅನುಭವಿಸಿದ್ದಾರೆ.

1994ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಪರಿಣಾಮ ಸ್ವತಂತ್ರರಾಗಿ ಕಣಕ್ಕೆ ಇಳಿದಿದ್ದರು. ಜನತಾದಳದ ಅಭ್ಯರ್ಥಿ ಯು.ಕೆ. ಸ್ವಾಮಿ ಅವರಿಂದ ತೀವ್ರ ಸ್ಪರ್ಧೆ ಎದುರಿಸಿದ ಅವರು 568 ಮತಗಳ ಅಲ್ಪ ಅಂತರದಿಂದ ಗೆದ್ದು ನಿಟ್ಟಿಸಿರು ಬಿಟ್ಟರು.

ಚನ್ನಪಟ್ಟಣದಲ್ಲಿ 2009ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಪಿ. ಯೋಗೇಶ್ವರ್‌ 2282 ಮತಗಳ ಅಂತರದಿಂದ ಜೆಡಿಎಸ್‌ನ ಎಂ.ಸಿ. ಅಶ್ವಥ್‌ ವಿರುದ್ಧ ಪರಾಭವಗೊಂಡು ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT