ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಬಂಡಾಯ ಬೂದಿಮುಚ್ಚಿದ ಕೆಂಡ

ಯಾದಗಿರಿ ಮತಕ್ಷೇತ್ರದಲ್ಲಿ ಹೆಚ್ಚು ಅಸಮಾಧಾನಿಗಳು; ಟಿಕೆಟ್‌ ವಂಚಿತರ ಸಂತೈಸಲು ಅಭ್ಯರ್ಥಿ ಹೈರಾಣ
Last Updated 18 ಏಪ್ರಿಲ್ 2018, 11:45 IST
ಅಕ್ಷರ ಗಾತ್ರ

ಯಾದಗಿರಿ: ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಜಿಲ್ಲೆಯ ಮಟ್ಟಿಗೆ ನಾಲ್ಕು ಮತಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಆದರೆ, ಉಳಿದ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಹೆಚ್ಚು ಅಸಮಾಧಾನಗೊಂಡ ವ್ಯಕ್ತಿಗಳು ಕಾಣಿಸಿಕೊಂಡಿದ್ದು, ಮೂಲ ಪಕ್ಷ ಸಂಘಟಕರಿಗೆ, ಮಹಿಳೆಯರಿಗೆ ಟಿಕೆಟ್‌ ನೀಡಿಲ್ಲ ಎಂಬ ತೀವ್ರ ಅಸಮಾಧಾನ ಹೊರಬಿದ್ದಿದೆ.

ಯಾದಗಿರಿ ಮತಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿತರ ಪಟ್ಟಿಯಲ್ಲಿ ಪ್ರಮುಖವಾಗಿ ಡಾ.ಶರಣಭೂಪಾಲರೆಡ್ಡಿ, ಡಾ.ಭೀಮಣ್ಣ ಮೇಟಿ, ಡಾ.ವೀರಬಸಂತರೆಡ್ಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ದೇವರಾಜ ನಾಯಕ್ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಬಿಜೆಪಿ ಸೇರಿದ ಲಲಿತಾ ಅನಪೂರ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಆರು ಮಂದಿಗೂ ಬಿಜೆಪಿ ಟಿಕೆಟ್‌ ನೀಡದೆ ಗುರುಮಠಕಲ್ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಯಾದಗಿರಿಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಿರುವುದು ಆರು ಮಂದಿಯ ಅಸಮಾಧಾನಕ್ಕೆ ಕಾರಣವಾಗಿದೆ.

ಕ್ಷೇತ್ರ ಬದಲಾವಣೆ ಸಮೀಕರಣದಿಂದಾಗಿ ಬೇಸತ್ತಿರುವ ಈ ಅಷ್ಟೂ ಮಂದಿ ಈಗ ಪಕ್ಷದ ವರಿಷ್ಠರ ತೀರ್ಮಾನದ ವಿರುದ್ಧ ಸಿಡಿದೇಳುವ ಸಂಭವವೂ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ. ಆದರೆ, ಟಿಕೆಟ್‌ ಪಡೆದಿರುವ ವೆಂಕಟರೆಡ್ಡಿ ಮುದ್ನಾಳ ಅಸಮಾಧಾನಿಗಳನ್ನು ಸಂತೈಸುತ್ತಿದ್ದಾರೆ.

ಸೋಮವಾರ ರಾತ್ರಿ ಡಾ.ಶರಣಭೂಪಾಲ ರೆಡ್ಡಿ ನಾಯ್ಕಲ್ ಅವರ ನಿವಾಸಕ್ಕೆ ತೆರಳಿದ ವೆಂಕಟರೆಡ್ಡಿ ಮುದ್ನಾಳ ಒಂದುಗಂಟೆ ಮಾತುಕತೆ ನಡೆಸುವ ಮೂಲಕ ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ಶರಣಭೂಪಾಲರೆಡ್ಡಿ ಮತ್ತು ವೆಂಕಟರೆಡ್ಡಿ ಮುದ್ನಾಳ ಅವರ ಬೆಂಬಲಿಗರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಈ ಘಟನೆಯಿಂದಾಗಿ ಬಿಜೆಪಿಯಲ್ಲಿ ಬಂಡಾಯ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಡಾ.ಭೀಮಣ್ಣ ಮೇಟಿ, ಲಲಿತಾ ಅನಪೂರ, ದೇವರಾಜ ನಾಯಕ ಅವರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಂಡಾಯ ಏಳುವ ಮೊದಲು ವರಿಷ್ಠರು ಟಿಕೆಟ್ ನಿರ್ಣಯವನ್ನು ಪುನರ್‌ ಪರಿಶೀಲಿಸುವಂತೆ ಒತ್ತಡ ಹೇರಲು ಈ ನಾಲ್ವರು ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅತ್ತ ಬಿಜೆಪಿ ಗುರುಮಠಕಲ್‌ನಲ್ಲಿ ಕೋಲಿ ಸಮಾಜದ ಸಾಯಿಬಣ್ಣ ಬೋರಬಂಡಾ ಅವರಿಗೆ ಟಿಕೆಟ್ ನೀಡಿದ್ದು, ರಾಜ್ಯ ಘಟಕದ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ಅವರಿಗೂ ಟಿಕೆಟ್‌ ಕೈತಪ್ಪಿದೆ. ಅವರೂ ಸಹ ಪಕ್ಷದ ವಿರುದ್ಧ ಬಂಡಾಯ ಏಳುವ ಕುರಿತು ಸುಳಿವು ನೀಡಿಲ್ಲ.

ಕಾಂಗ್ರೆಸ್‌ನಲ್ಲಿ ಯಾದಗಿರಿ ಮತಕ್ಷೇತ್ರದಲ್ಲಿ ಈ ಬಾರಿ ಚನ್ನಾರೆಡ್ಡಿ ಪಾಟೀಲ ತುನ್ನೂರ ಟಿಕೆಟ್‌ ಪಡೆಯಲು ತೀವ್ರ ಕಸರತ್ತು ನಡೆಸಿದ್ದರು. ಆದರೆ, ಅಂತಿಮವಾಗಿ ಡಾ.ಎ.ಬಿ.ಮಾಲಕರೆಡ್ಡಿ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್ ಅವಕಾಶ ನೀಡಿದೆ. ಇದರಿಂದ ಚನ್ನಾರೆಡ್ಡಿ ಪಾಟೀಲ ತುನ್ನೂರ ನಿರಾಸೆಗೊಂಡಿದ್ದಾರೆ. ಆದರೆ, ಬಂಡಾಯದ ಬಗ್ಗೆ ಅವರು ತುಟಿ ಬಿಚ್ಚಿಲ್ಲ. ಯಾವುದೇ ಸುಳಿವು ನೀಡಿಲ್ಲ.

ಜೆಡಿಎಸ್ ನಲ್ಲಿ ಯಾದಗಿರಿ ಮತಕ್ಷೇತ್ರದಲ್ಲಿ ಮೊದಲ ಬಾರಿಗೆ ಹಣಮೇಗೌಡ ಬೀರನಕಲ್‌ ಟಿಕೆಟ್‌ ಆಕಾಂಕ್ಷಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಅಂತಿಮವಾಗಿ ಜೆಡಿಎಸ್ ವರಿಷ್ಠರು ಎ.ಸಿ.ಕಾಡ್ಲೂರ ಅವರಿಗೆ ಟಿಕೆಟ್ ನೀಡಿದ್ದಾರೆ. ಟಿಕೆಟ್‌ ಘೋಷಣೆಯ ತಕ್ಷಣ ಹಣಮೇಗೌಡ ಬೀರನಕಲ್‌ ಅವರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಕೂಡ ನಡೆಸಿದ್ದರು. ನಾನು ಬಂಡಾಯ ಅಭ್ಯರ್ಥಿ ಎಂದೂ ಅವರು ಹೇಳಿಕೊಂಡಿದ್ದರು. ಇದರಿಂದ ಪುನಃ ಜೆಡಿಎಸ್ ನೆಲಕಚ್ಚಲಿದೆ ಎಂದೇ ಸುದ್ದಿ ಹರಡಿತ್ತು. ಆದರೆ, ಎಚ್.ಡಿ.ಕುಮಾರಸ್ವಾಮಿ ಮಧ್ಯೆ ಪ್ರವೇಶಿಸಿ ಅಸಮಾಧಾನ ಶಮನಗೊಳಿಸಿದ್ದಾರೆ. ಈಗ ಹನುಮೇಗೌಡ ಬೀರನಕಲ್‌ ಪಕ್ಷದಲ್ಲಿಯೇ ಉಳಿದಿದ್ದಾರೆ.

ಫಲಿತಾಂಶದ ಮೇಲೆ ಪರಿಣಾಮ?

ಯಾದಗಿರಿ ಮತಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆಯೇ ಎಂಬುದಾಗಿ ಕಾರ್ಯಕರ್ತರು ಲೆಕ್ಕಾಚಾರ ಶುರು ಮಾಡಿದ್ದಾರೆ. ಅಸಮಾಧಾನಿಗಳು ಪಕ್ಷದಲ್ಲೇ ಉಳಿದರೆ ಬಹು ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಡಾ.ಎ.ಬಿ.ಮಾಲಕರಡ್ಡಿ ಅವರನ್ನು ಮಣಿಸಬಹುದು. ಒಂದು ವೇಳೆ ಅಸಮಾಧಾನಿಗಳು ಒಟ್ಟಾಗಿ ಬಂಡಾಯ ಎದ್ದರೆ ಕಾಂಗ್ರೆಸ್‌ನ ಡಾ.ಎ.ಬಿ.ಮಾಲಕರಡ್ಡಿ ಅವರ ಗೆಲುವು ಸುಲಭವಾಗುತ್ತದೆ ಎಂಬುದಾಗಿ ಬಿಜೆಪಿ ಕಾರ್ಯಕರ್ತರು ಲೆಕ್ಕಾಚಾರ ಹೇಳುತ್ತಾರೆ.

ಮಗಳ ಮೇಲೆ ಆಣೆ ಪ್ರಮಾಣ ಮಾಡಿದ್ದರು..

ಬಿ.ಎಸ್‌.ಯಡಿಯೂರಪ್ಪ ನಿಮಗೇ ಟಿಕೆಟ್‌ ನೀಡುವುದಾಗಿ ನನ್ನ ಮಗಳ ಮೇಲೆ ಆಣೆ ಪ್ರಮಾಣ ಮಾಡಿದ್ದರು. ಕಾಂಗ್ರೆಸ್‌ನಲ್ಲಿ ಅನ್ಯಾಯಕ್ಕೊಳಗಾಗಿದ್ದೀರಿ. ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಅಂದಿನಿಂದ ಯಾದಗಿರಿ ಮತಕ್ಷೇತ್ರದಲ್ಲಿ ಪಕ್ಷಕ್ಕಾಗಿ ಸಾಕಷ್ಟು ದುಡಿದ್ದೇನೆ. ಖರ್ಚು ಮಾಡಿದ್ದೇನೆ. ಕಡೆ ಕ್ಷಣದವರೆಗೂ ಟಿಕೆಟ್‌ ನಿಮ್ಮದೇ ಅಂತ ಹೇಳುತ್ತಿದ್ದ ಯಡಿಯೂರಪ್ಪ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಇಂಥ ವಂಚನೆ ನನ್ನ ಶತ್ರುಗಳಿಗೂ ಆಗಬಾರದು ಎಂದು ಬಿಜೆಪಿಯ ಡಾ.ಶರಣಭೂಪಾಲ ರೆಡ್ಡಿ ಅಸಮಾಧಾನ ಹೊರಹಾಕಿದರು.

ಇದೆಲ್ಲಾ ಮಾಮೂಲಿ

ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ. ಟಿಕೆಟ್‌ ಕೈತಪ್ಪಿಲ್ಲ, ತಪ್ಪಿಸಿದ್ದಾರೆ. ನರೇಂದ್ರ ಮೋದಿ ಅಥವಾ ಅಮಿತ್‌ ಷಾ ಈ ರೀತಿ ಮಾಡಲ್ಲ. ಯಾದಗಿರಿ ಮತಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ ಒಬ್ಬರಿಗೂ ಟಿಕೆಟ್‌ ನೀಡದಿರುವುದರ ಹಿಂದೆ ಸ್ಥಳೀಯ ಮುಖಂಡರ ರಾಜಕೀಯ ಷಡ್ಯಂತ್ರ ಇದೆ. ರಾಜಕೀಯದಲ್ಲಿ ಇದೆಲ್ಲಾ ಸಾಮಾನ್ಯ, ಸಹಿಸಿಕೊಳ್ಳಲೇಬೇಕು ಎಂದು ಡಾ.ಭೀಮಣ್ಣ ಮೇಟಿ ಪ್ರತಿಕ್ರಿಯಿಸಿದರು.

ಪಕ್ಷಕ್ಕಾಗಿ ದುಡಿದವರಿಗೇ ಟಿಕೆಟ್ ನೀಡಬೇಕಿತ್ತು..

ನನಗೆ ನೀಡದಿದ್ದರೂ ಪರವಾಗಿರಲಿಲ್ಲ. ಆದರೆ, ಮೊದಲಿನಿಂದಲೂ ಮತಕ್ಷೇತ್ರದಲ್ಲಿ ದುಡಿದ ನಿಷ್ಠಾವಂತರಿಗೆ ವರಿಷ್ಠರು ಪರಿಗಣಿಸಿ ಟಿಕೆಟ್‌ ನೀಡಬೇಕಿತ್ತು. ಮುಖಂಡರು ಸುಮ್ಮನಾಗಬಹುದು. ಆದರೆ, ಕಾರ್ಯಕರ್ತರು ಹೆಚ್ಚು ಆಘಾತಕ್ಕೊಳಗಾಗಿದ್ದಾರೆ ಎಂದು ಲಲಿತಾ ಅನಪೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT