ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಭಾರತದ ಕಾಲದಲ್ಲೇ ಭಾರತದಲ್ಲಿ ಇಂಟರ್ನೆಟ್,ಸ್ಯಾಟಲೈಟ್‌ ಇತ್ತು!

Last Updated 17 ಸೆಪ್ಟೆಂಬರ್ 2019, 11:31 IST
ಅಕ್ಷರ ಗಾತ್ರ

ತ್ರಿಪುರಾ: ಭಾರತದಲ್ಲಿ ಲಕ್ಷ ವರುಷಗಳ ಹಿಂದೆಯೇ ಇಂಟರ್ನೆಟ್ ಇತ್ತು, ಮಹಾಭಾರತದ ಅವಧಿಯಲ್ಲಿಯೇ ಸ್ಯಾಟಲೈಟ್ ತಂತ್ರಜ್ಞಾನ ಬಳಕೆಯಲ್ಲಿತ್ತು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹೇಳಿದ್ದಾರೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ನ ಪ್ರಾದೇಶಿಕ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಅಮೆರಿಕ ಅಥವಾ ಇತರ ಪಾಶ್ಚಿಮಾತ್ಯ ದೇಶಗಳ ಇಂಟರ್ನೆಟ್‍ನ್ನು ಕಂಡುಹಿಡಿದಿಲ್ಲ. ಲಕ್ಷ ವರುಷಗಳ ಹಿಂದೆಯೇ ಭಾರತದಲ್ಲಿ ಇಂಟರ್ನೆಟ್ ಕಂಡು ಹಿಡಿಯಲಾಗಿತ್ತು.
ಕೆಲವರು ಈ ಸತ್ಯವನ್ನು ಒಪ್ಪಲ್ಲ, ಆದರೆ ಇಂಟರ್ನೆಟ್ ಇಲ್ಲದೇ ಇದ್ದರೆ ಕುರುಕ್ಷೇತ್ರದಲ್ಲಿ ಯುದ್ಧವನ್ನು ಸಂಜಯ ವಿವರಿಸುವಾಗ ಧೃತರಾಷ್ಟ್ರ ಅದನ್ನು ನೋಡಿದ್ದು ಹೇಗೆ? ಇದರರ್ಥ ಇಂಟರ್ನೆಟ್ ಇತ್ತು, ಸ್ಯಾಟಲೈಟ್ ಮತ್ತು ಅದರ ತಂತ್ರಜ್ಞಾನ ಆಗಿನ ಕಾಲದಲ್ಲೇ ಭಾರತದಲ್ಲಿ ಇತ್ತು ಎಂದು ದೇಬ್ ಹೇಳಿರುವುದಾಗಿ ತ್ರಿಪುರಾ ಇನ್ಫೋವೇ ವರದಿ ಮಾಡಿದೆ.

ಇಷ್ಟೊಂದು ಉತ್ಕೃಷ್ಟ ತಂತ್ರಜ್ಞಾನ ಹೊಂದಿರುವ ದೇಶದಲ್ಲಿ ನಾನು ಹುಟ್ಟಿದ್ದೇನೆ ಎಂಬುದರ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ತಂತ್ರಜ್ಞಾನದಲ್ಲಿ ಪ್ರಗತಿ ಹೊಂದಿದ್ದೇವೆ ಎಂದು ಹೇಳುವ ದೇಶಗಳು ಅಲ್ಲಿನ ಸಾಫ್ಟ್ ವೇರ್‍‍ಗಳನ್ನು ಅಪ್‍ಗ್ರೇಡ್ ಮಾಡಲು ಭಾರತದ ಪ್ರತಿಭೆಗಳಿಗೆ ಉದ್ಯೋಗ ನೀಡುತ್ತಿವೆ ಎಂದಿದ್ದಾರೆ ದೇಬ್.

ಮಣಿಪುರ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‍ನ ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಾಗಾರವು ಅಗರ್ತಲಾದ ಪ್ರಗ್ನಾ ಭವನದಲ್ಲಿ ನಡೆದಿತ್ತು.

ಬಿಜೆಪಿ ನೇತಾರರ ಅಸಂಬದ್ಧ ಹೇಳಿಕೆಗಳು
ಮಹಾಭಾರತದ ಕಾಲದಲ್ಲೇ ಇಂಟರ್ನೆಟ್ ಇತ್ತು ಎಂದು ಹೇಳುವ ಮೂಲಕಬಿಜೆಪಿ ನೇತಾರ, ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ನಗೆಪಾಟಲಿಗೀಡಾಗಿದ್ದಾರೆ. ಆದರೆ ಇಂಥಾ ಅಸಂಬದ್ಧ ಹೇಳಿಕೆ ನೀಡಿದವರ ಪಟ್ಟಿಯಲ್ಲಿ ದೇಬ್ ಅವರೇ ಮೊದಲಿಗರಲ್ಲ. ಈ ಹಿಂದೆ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಚಾರ್ಲ್ಸ್ ಡಾರ್ವಿನ್‌ ಅವರ 'ಮಾನವ ವಿಕಾಸ' ಸಿದ್ಧಾಂತ ವೈಜ್ಞಾನಿಕವಾಗಿ ಸರಿ ಇಲ್ಲ ಎಂದು ವಾದಿಸಿದ್ದರು.

ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಹೇಳಿದ್ದೇನು?

ಚಾರ್ಲ್ಸ್ ಡಾರ್ವಿನ್‌ ಅವರ 'ಮಾನವ ವಿಕಾಸ' ಸಿದ್ಧಾಂತ ವೈಜ್ಞಾನಿಕವಾಗಿ ಸರಿ ಇಲ್ಲ. ಆದ್ದರಿಂದ ಶಾಲೆ ಹಾಗೂ ಕಾಲೇಜುಗಳ ಪಠ್ಯಕ್ರಮದಲ್ಲಿ ಅದನ್ನು ಬದಲಾಯಿಸುವ ಅಗತ್ಯವಿದೆ. ಮಾನವ ಭೂಮಿ ಮೇಲೆ ಕಾಣಿಸಿಕೊಂಡಂದಿನಿಂದ ಮಾನವನಾಗಿಯೇ ಇದ್ದಾನೆ ಎನ್ನುವ ಮೂಲಕ ಡಾರ್ವಿನ್ ಸಿದ್ಧಾಂತ ತಪ್ಪು ಎಂದು ವಾದಿಸಿದ್ದ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಅವರಿಗೆ ವಿಜ್ಞಾನಿಗಳು ಪತ್ರ ಬರೆದಿದ್ದರು.

ಔರಂಗಾಬಾದ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದ್ದ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಹಾಯಕ ಸಚಿವ ಸಿಂಗ್‌, ಮಂಗ ಮಾನವನಾಗಿ ಪರಿವರ್ತನೆಗೊಂಡಿದ್ದನ್ನು ನೋಡಿದ್ದೇವೆ ಎಂದು ನಮ್ಮ ಪೂರ್ವಿಕರು ಲಿಖಿತ ಅಥವಾ ಮೌಖಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ನಾವು ಓದಿದ ಪುಸ್ತಕದಲ್ಲಿ ಅಥವಾ ನಮ್ಮ ಹಿರಿಯರು ನಮಗೆ ಹೇಳಿದ ಕಥೆಗಳಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ ಎಂದು ವಾದಿಸಿದ್ದರು.

ನಗದು ರಹಿತ ವಹಿವಾಟು ದ್ವಾಪರ ಯುಗದಲ್ಲೇ ಇತ್ತು ಎಂದಿದ್ದರು ಆದಿತ್ಯನಾಥ!
ನಗದು ರಹಿತ ವಹಿವಾಟು ದ್ವಾಪರ ಯುಗದಲ್ಲಿಯೇ ಇತ್ತು. ಇದಕ್ಕೆ ಉದಾಹರಣೆ ಹಿಂದೂ ಪುರಾಣದಲ್ಲಿ ಸಿಗುತ್ತವೆ. ಪುರಾಣ ಕತೆ ಪ್ರಕಾರ ಸುಧಾಮ ದ್ವಾರಕೆಯಲ್ಲಿರುವ ಶ್ರೀಕೃಷ್ಣನ ಬಳಿ ಧನ ಸಹಾಯ ಬೇಡಲು ಹೋಗಿದ್ದನು. ಆಗ ಸುಧಾಮನನ್ನು ಪ್ರೀತಿಯಿಂದ ಬರಮಾಡಿಕೊಂಡ ಶ್ರೀಕೃಷ್ಣ ಆತನಿಗೆ ಯಾವುದೇ ಧನ ಸಹಾಯ ಮಾಡಲಿಲ್ಲ. ಆದರೆ ಸುಧಾಮ ಮರಳಿ ಊರಿಗೆ ಬಂದಾಗ ಆತನ ಜೀವನವೇ ಬದಲಾಗಿ ಬಿಟ್ಟಿತ್ತು. ಸುಧಾಮ ಬಯಸಿದ್ದಕ್ಕಿಂತ ಹೆಚ್ಚಿನದ್ದನ್ನು ಶ್ರೀಕೃಷ್ಣ ಕೊಟ್ಟಿದ್ದನು. ಇಲ್ಲಿ ಶ್ರೀಕೃಷ್ಣ, ಸುಧಾಮನಿಗೆ ಯಾವುದೇ ರೀತಿಯ ನಗದು ವಹಿವಾಟು ಮಾಡದೆಯೇ ಸಹಾಯ ಮಾಡಿದ್ದನು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT