ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಟ್ಟಿಯು ಬರಿದಾಗಿತ್ತು ಹರಕೆ ಮನತುಂಬಿತ್ತು!

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜನ್ಮದಿನದ ಹಬ್ಬದ ಸಂಭ್ರಮ. ಅದೇನೋ ಗೊತ್ತಿಲ್ಲ. ಎಲ್ಲರಿಗೂ ತುಂಬಾ ಸಂತಸದ ದಿನವೆಂದರೆ ಅದೇ. ಬೆಳಿಗ್ಗೆ ಬೇಗನೆದ್ದು ಮನೆಗೆಲಸ ಮುಗಿಸಿ, ಶುಭ್ರವಾಗಿ ದೇವಸ್ಥಾನಕ್ಕೆ ಹೊರಟಿದ್ದೆ. ಬಂಗಾರದ ಬಣ್ಣದ ಉದ್ದ ಲಂಗದ ಮೇಲೆ ಕೆಂಪು ಹೂವಿನ ಡಿಸೈನ್ ಇರುವ ಲೆಹಂಗಾ ತೊಟ್ಟಿದ್ದೆ.

ಎಲ್ಲರ ಹಾಗೇ ಚೂಡಿದಾರ ಸಿಕ್ಕಿಸಿಕೊಂಡು, ಕೂದಲು ಗಂಟುಕಟ್ಟಿ, ಹೀಲ್ಡ್ ಸ್ಲಿಪ್ಪರ್ ಮೆಟ್ಟಿ, ಸ್ಕೂಟಿಯನ್ನು ಸುಂಯ್ಯನೆ ಓಡಿಸಿಕೊಂಡು ಹೋಗುವ ಜಾಯಮಾನದವಳಲ್ಲ ನಾನು. ಹಳೆಯ ಕಾಲದ ಪದ್ಧತಿಗೆ ಇನ್ನೂ ಜೋತು ಬಿದ್ದಿದ್ದೇನೆ. ಅದೇನೋ ಗೊತ್ತಿಲ್ಲ, ಭಾರತೀಯರ ಸಂಪ್ರದಾಯಗಳು, ಪದ್ಧತಿಗಳು, ಆಚರಣೆಗಳು ತುಂಬಾ ಖುಷಿ ಕೊಡುತ್ತವೆ.

ಮೈತುಂಬಾ ಬಟ್ಟೆ ಕೈತುಂಬಾ ಬಳೆ, ಹಣೆಗೆ ಬಿಂದಿ, ನೋಡಿದರೆ ಎಂಥವರೂ ಗೌರವ ಕೊಡಬೇಕೆನಿಸುವ ಸಂಸ್ಕೃತಿ ನಮ್ಮದು. ಬಿತ್ತಿದ ಬೆಳೆಯನ್ನು, ಉತ್ತಮ ಮಣ್ಣನ್ನು, ಪ್ರಕೃತಿಯ ಜಾನುವಾರುಗಳನ್ನು ಪೂಜಿಸುವ ದೇಶ ನಮ್ಮದು.

ಅಮ್ಮ ಪಾಯಸ ಮಾಡಿ ದೇವರ ನೈವೇದ್ಯಕ್ಕೆಂದು ಡಬ್ಬಿ ತುಂಬಾ ಕೊಟ್ಟಿದ್ದರು. ನಾನು, ಹಣ್ಣು, ಕಾಯಿ, ಅಂಗಳದ ಹೂವು ತಂದು ಬುಟ್ಟಿಯಲ್ಲಿ ಜೋಡಿಸಿದೆ. ಹಾಗೇ ಹರಕೆಯ ಸೀರೆಯನ್ನು ಉಡಿ ತುಂಬಲು ಅಕ್ಕಿಯನ್ನು ತೆಗೆದುಕೊಂಡೆ. ಅಮ್ಮನಿಗೆ ಹೇಳಿ ದೇವಸ್ಥಾನಕ್ಕೆ ಹೊರಟೆ.

ದೇವಾಲಯವಿರುವುದು ಹೊಲದ ಮಧ್ಯದಲ್ಲಿ. ಶಾಂತ ಪರಿಸರ. ಅಕ್ಕಪಕ್ಕ ಹೊಲ ಗದ್ದೆಗಳು. ಅಲ್ಲಲ್ಲಿ ಜುಳು-ಜುಳು ಹರಿಯುವ ಚಿಕ್ಕ ತೊರೆಗಳು. ಮರ ಗಿಡಗಳು ಹೂ ತುಂಬಿ ನಿಂತಿದ್ದವು. ಹೇಳಿ ಕೇಳಿ ಮಲೆನಾಡಾದ್ದರಿಂದ ಹಸಿರು ತುಂಬಿ ತುಳುಕುತ್ತಿತ್ತು. ಹಕ್ಕಿಗಳ ಚಿಲಿಪಿಲಿಯೊಂದಿಗೆ ದುಂಬಿಗಳ ಝೇಂಕಾರ. ಮಲೆನಾಡ ಸೊಬಗು ಅನುಭವಿಸಿದವರಿಗೇ ಗೊತ್ತು.

ಗದ್ದೆಯ ಬದುವಿನ ಮೇಲೆ ಹೋಗುತ್ತಿದ್ದೆ. ನನಗೆ ತಲೆ ಮೇಲೆ ಸೆರಗು ಹಾಕಿ ಕೆಲಸ ಮಾಡುತ್ತಿದ್ದ ತಾಯವ್ವ ಕಾಣಿಸಿದಳು. ತುಂಬಾ ದಣಿದಂತೆ ಕಾಣುತ್ತಿದ್ದಳು. ಬುಟ್ಟಿಯಲ್ಲಿದ್ದ ಬಾಳೇಹಣ್ಣು ತೆಗೆದುಕೊಟ್ಟೆ, ಅವಳ ಮುಖದಲ್ಲಿ ನಗು ಮೂಡಿತು, ಹಾಗೇ ಮುನ್ನಡೆದೆ.

ಅಲ್ಲೊಂದು ಸಣ್ಣ ತೊರೆ ಹರಿಯುತ್ತಿತ್ತು. ಪೇಪರ್ ದೋಣಿ ತೇಲಿಬಿಟ್ಟೆ. ನಾವು ಎಷ್ಟೇ ದೊಡ್ಡವರಾಗಲಿ, ಉನ್ನತ ಹುದ್ದೆಯಲ್ಲಿರಲಿ ಬಾಲ್ಯದ ನೆನಪುಗಳು ನಮ್ಮನ್ನು ಕೆಲವೊಮ್ಮೆ ಚಿಕ್ಕ ಮಕ್ಕಳಂತೆ ಮಾಡಿಬಿಡುತ್ತವೆ. ಚಿಕ್ಕ ಮೀನೊಂದು ಕಾಲ ಹತ್ತಿರ ಬಂದು ಸರಕ್ಕನೆ ಮಾಯವಾಯ್ತು. ಇಲ್ಲೇ ಕುಳಿತರೆ ದೇವಸ್ಥಾನದ ಬಾಗಿಲು ಹಾಕಿ ಬಿಡಬಹುದೆಂದು ಅಲ್ಲಿಂದ ಹೊರಟೆ. ದೇವರು ಕಾಯಬಹುದು; ಪೂಜಾರಿ ಕಾಯಬೇಕಲ್ಲಾ? ಸ್ವಲ್ಪ ದೂರ ನಡೆದಾಗ ಒಬ್ಬ ಭಿಕ್ಷುಕಿ ಮಗುವನ್ನೆತ್ತಿಕೊಂಡು ಬಿಸಿಲಲ್ಲಿ ನಡೆದು ಬರುತ್ತಿದ್ದಳು. ‘ತಾಯಿ ಏನಾದರು ಕೊಡಿ’ ಎಂದು ಕೈ ಒಡ್ಡಿದಾಗ ಡಬ್ಬಿಯಲ್ಲಿದ್ದ ಪಾಯಸವನ್ನು ಅವಳ ಪಾತ್ರೆಗೆ ಸುರಿದೆ. ಚಪ್ಪರಿಸುತ್ತಾ ಕುಡಿದು, ಮಗುವಿಗೂ ಕುಡಿಸಿ, ‘ನಿನ್ನ ಹೊಟ್ಟೆ ತಣ್ಣಗಿರಲವ್ವ’ ಎಂದು ಹರಸಿದಳು. ನಗುತ್ತಾ ಮುಂದೆ ಸಾಗಿದೆ.

ಅಲ್ಲೊಂದು ಗುಡಿಸಲಿತ್ತು, ಒಬ್ಬ ಅಜ್ಜಿ ಯಾರದೋ ಬರುವಿಕೆಗಾಗಿ ಕಾಯುವಂತಿತ್ತು. ‘ಏನಜ್ಜೀ ಊಟ ಆಯ್ತಾ’ ಅಂದೆ. ‘ಅಕ್ಕಿ ತರಲು ಹೋದ ಮಗ ಇನ್ನು ಬಂದಿಲ್ಲ ಕಣಮ್ಮಾ’ ಅಂದಳು. ದೇವರ ಉಡಿ ತುಂಬಲು ತಂದಿದ್ದ ಅಕ್ಕಿಯನ್ನು ಅವಳ ಮಡಿಲಿಗೆ ಸುರಿದೆ. ಸೀರೆ ಹರಿದಿತ್ತು. ಹರಕೆಯ ಸೀರೆ ಅವಳ ಮೈಗೆ ಹೊದಿಸಿದೆ. ಅವಳಿಗೆ ಮಾತು ಬರದಾಗಿತ್ತು. ಕಣ್ಣೀರು ತುಂಬಿ ಬಂದಿತ್ತು. ದೇವಾಲಯಕ್ಕೆ ಹೋಗುವ ಹೊತ್ತಿಗೆ ಬುಟ್ಟಿ ಬರಿದಾಗಿತ್ತು. ಕೈ ಜೋಡಿಸಿ ನಿಂತಿದ್ದೆ. ದೇವಸ್ಥಾನದ ಅಂಗಳದ ಹೂವನ್ನೇ ಕಿತ್ತು ಪೂಜೆಗೆ ಕೊಟ್ಟಿದ್ದೆ. ದೇವರು ಬೇಡವೆನ್ನಲಿಲ್ಲ. ದೇವರ ಮುಖದಲ್ಲಿ ಸೌಮ್ಯ ಕಳೆಯಿತ್ತು. ನನ್ನ ಬಗ್ಗೆ ನನಗೇ ಹೆಮ್ಮೆಯಿತ್ತು.

ನನ್ನ ಹೆಸರಲ್ಲೇನೋ ಅರ್ಚನೆಯಾಯಿತು ನಿಜ. ಆದರೆ ನನ್ನ ಹರಸಿದ ಹೆಂಗಳೆಯರಲ್ಲಿ ನನಗೆ ದೇವರು ಕಂಡಿದ್ದಂತೂ ಸತ್ಯ. ನಾವು ಮಾಡುವ ಕೆಲಸದಲ್ಲಿ ನಮಗೆ ತೃಪ್ತಿಯಿರಬೇಕು. ಆಗ ಮಾಡಿದ ಕೆಲಸಕ್ಕೂ ಆರ್ಥ ಬರುತ್ತದೆ. ಆಶೀರ್ವಾದವಿರುತ್ತದೆ. ದೇವಸ್ಥಾನವೆಂದರೆ ಮನಸ್ಸನ್ನು ಶಾಂತಗೊಳಿಸುವ, ಮನಸ್ಸನ್ನು ಕೇಂದ್ರೀಕರಿಸುವ ಸ್ಥಳ. ಅಲ್ಲಿರುವ ಜಾಗೃತ ಶಕ್ತಿಯೇ ಬೇರೆ. ದೇವರು ಭಕ್ತಿಯನ್ನು ಬಿಟ್ಟರೆ ಬೇರೇನೂ ಕೇಳಲಾರ.

ಏನೇ ಇರಲಿ, ನನ್ನ ಹುಟ್ಟಿನ ದಿನ ಸಾರ್ಥಕತೆ ಪಡೆದಿತ್ತು. ಹಣ್ಣು-ಕಾಯಿ ಬುಟ್ಟಿ ಬರಿದಾಗಿತ್ತು. ಮನೆಯತ್ತ ಹೊರಟೆ.... ಏನೋ ಸಾಧಿಸಿದ ಭಾವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT