ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿಯ ಮಾಲೆ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಣಿನಾ ವಲಯಂ ವಲಯೇನ ಮಣಿರ್ಮಣಿನಾ
ವಲಯೇನ ವಿಭಾತಿ ಕರಃ
ಕವಿನಾ ಚ ವಿಭುರ್ವಿಭುನಾ ಚ ಕವಿಃ ಕವಿನಾ
ವಿಭುನಾ ಚ ವಿಭಾತಿ ಸಭಾ |

ಶಶಿನಾ ಚ ನಿಶಾ ನಿಶಯಾ ಚ ಶಶೀ ಶಶಿನಾ
ನಿಶಯಾ ಚ ವಿಭಾತಿ ನಭಃ
ಪಯಸಾ ಕಮಲಂ ಕಮಲೇನ ಪಯಃ ಪಯಸಾ
ಕಮಲೇನ ವಿಭಾತಿ ಸರಃ ||

ಇದರ ತಾತ್ಪರ್ಯ: ‘ಬಳೆಯು ಮಣಿಕಟ್ಟಿಗೆ ಅಲಂಕಾರ; ಮಣಿಕಟ್ಟು ಬಳೆಗೆ ಆಸರೆ; ಎರಡೂ ಸೇರಿ ಕೈಗೆ ಶೋಭೆ. ಕವಿಯಿಂದ ಆಶ್ರಯದಾತ ರಾಜನಿಗೂ ರಾಜನಿಂದ ಕವಿಗೂ ಶೋಭೆ; ಕವಿ ಮತ್ತು ರಾಜರಿಂದ ಸಭೆಗೆ ಶೋಭೆ. ಚಂದ್ರನಿಂದ ರಜನಿಗೂ ರಜನಿಯಿಂದ ಚಂದ್ರನಿಗೂ, ಅಂತೆಯೇ ಚಂದ್ರ–ರಜನೀ ಸಂಯೋಗದಿಂದ ಮುಗಿಲಿಗೂ ಶೋಭೆ. ನೀರಿನಿಂದ ಕಮಲಕ್ಕೂ ಕಮಲದಿಂದ ನೀರಿಗೂ, ಅವೆರಡರ ಸಂಯೋಗದಿಂದ ಸರೋವರಕ್ಕೂ ಶೋಭೆ.’

ನಮ್ಮ ಇಂದಿನ ಸಮಾಜಕ್ಕೂ ಕುಟುಂಬಗಳಿಗೂ ಖಂಡಿತವಾಗಿಯೂ ಬೇಕಾಗಿರುವ ವಿವೇಕವನ್ನು ಸೊಗಸಾದ ರೀತಿಯಲ್ಲಿ ಈ ಪದ್ಯ ವಿವರಿಸಿದೆ.‌

ಕೈಗೆ ಮಣಿಕಟ್ಟಿದೆ ಎಂದು ಬಳೆ ತಯಾರಾಗುತ್ತದೆ; ಬಳೆ ಇದೆಯೆಂದು ಮಣಿಕಟ್ಟು ಅದನ್ನು ಅಲಂಕರಿಸಿಕೊಳ್ಳುತ್ತದೆ. ಆದರೆ ಇವೆರಡರ ಕೂಡುವಿಕೆಯಿಂದ ಸೊಗಸು ಲಭಿಸುವುದು ಕೈಗೆ ಅಲ್ಲವೆ? ಹೀಗೆ ಜಗತ್ತಿನಲ್ಲಿ ಹಲವು ವಿವರಗಳು ಇವೆ – ಪರಸ್ಪರ ಆಶ್ರಯದಿಂದ ಒದಗುವ ಅತಿಶಯ ಸೊಗಸು, ಶಕ್ತಿ, ಅರ್ಥಗಳನ್ನು ಈ ಬೆಸುಗೆ ಧ್ವನಿಸುತ್ತಿದೆ. ಬಳ್ಳಿಗೆ ಆಸರೆ ಮರ; ಮರಕ್ಕೆ ಒದಗಿದ ಅಲಂಕಾರ ಬಳ್ಳಿ. ಇವೆರಡರ ಸಂಲಗ್ನದಿಂದ ಆ ಪರಿಸರಕ್ಕೆ ವಿಶೇಷ ಕಳೆ ಲಭಿಸುತ್ತದೆ.

ಆದರೆ ಹೀಗೆ ‘ಒಂದಾಗಿ’ ಯೋಚಿಸುವ, ಒಂದಾಗುವ ಮೂಲಕ ಸೊಬಗನ್ನೂ ಪರಿಪೂರ್ಣೆಯನ್ನೂ ಬಲವನ್ನೂ ಪಡೆಯುವ ವಿವೇಕದೃಷ್ಟಿ ಇಂದು ನಮ್ಮಲ್ಲಿ ಕಡಿಮೆಯಾಗುತ್ತದೆ. ನನ್ನಿಂದಲೇ ಮನೆ – ಎಂದು ಸಂಪಾದಿಸುವ ಮಗ ಯೋಚಿಸುತ್ತಾನೆ. ಆದರೆ ತಂದೆ–ತಾಯಿಯ ಕಾರಣದಿಂದಲೇ ಅವನಿಂದ ಸಂಪಾದಿಸುವಷ್ಟು ಬೆಳೆದಿರುವುದು ಎನ್ನುವುದನ್ನು ಮರೆಯುತ್ತಾನೆ. ಹೆತ್ತವರಿಂದ ನಾನು; ಈಗ ನನ್ನಿಂದ ಹೆತ್ತವರು ಎಂದು ಯೋಚಿಸುವ ಮಗನಿದ್ದರೆ ಆ ಮನೆಯೇ ಆನಂದನಿಲಯವಾಗುತ್ತದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಇಂಥ ಬೆಸುಗೆಯ ಪಾಕ ಹರಿಯಬೇಕು.

ವಿದ್ಯಾರ್ಥಿಗಳಿಂದ ಕಾಲೇಜು; ಕಾಲೇಜಿನಿಂದ ವಿದ್ಯಾರ್ಥಿಗಳು. ಆದರ್ಶ ಕಾಲೇಜು–ವಿದ್ಯಾರ್ಥಿಗಳಿಂದ ಸಮಾಜಕ್ಕೆ ಶೋಭೆ. ಹೆಂಡತಿಯಿಂದ ಗಂಡ; ಗಂಡನಿಂದ ಹೆಂಡತಿ. ಇವರಿಬ್ಬರ ಸಮರಸದಿಂದ ಇಡಿಯ ಕುಟುಂಬಕ್ಕೆ ಶೋಭೆ. ಹೀಗೆಯೇ ಜನರಿದ್ದಾರೆಂದು ಮಂತ್ರಿ; ಮಂತ್ರಿಯ ಆಶ್ರಯವಿದೆಯೆಂದು ಜನರು ಅಲ್ಲಿರಲು ಬಯಸುತ್ತಾರೆ. ಮಂತ್ರಿ ಮತ್ತು ಜನರ ಸೌಹಾರ್ದ ಸಂಬಂಧದಿಂದ ಇಡಿಯ ರಾಜ್ಯಕ್ಕೇ ಶೋಭೆ.

ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ – ಎಂಬ ಮಾತನ್ನು ನಾವು ಕೇಳಿದ್ದೇವೆ. ಅಂತೆಯೇ ನಮ್ಮ ಜೀವನ ಕೇವಲ ನಮ್ಮೊಬ್ಬರಿಂದಲೇ ಸಾಗುವಂಥದ್ದಲ್ಲ. ಸೃಷ್ಟಿಯಲ್ಲಿಯೇ ಸಹಕಾರತತ್ತ್ವವೂ ಸಹಬಾಳ್ವೆಯ ಸಂದೇಶವೂ ಅಡಗಿದೆ. ಆದರೆ ನಾವು ಈ ವಿವೇಕಕ್ಕೆ ಕುರುಡಾಗಿದ್ದೇವೆ. ‘ನನ್ನಿಂದಲೇ ಎಲ್ಲವೂ’ ಎಂಬ ಅಹಂಕಾರ ಇಂದಿನ ನಡವಳಿಕೆಯ ಸೂತ್ರವಾಗುತ್ತಿದೆ. ಈ ಕಾರಣದಿಂದಾಗಿ ‘ನಾನೊಬ್ಬನೇ ಬದುಕಬೇಕು’ ಎಂಬ ಸ್ವಾರ್ಥವೂ ಬಲಿಯುತ್ತಿದೆ. ಆದರೆ ನಮ್ಮ ಜೀವನವನ್ನು ನಾವು ಸೂಕ್ಷ್ಮವಾಗಿ ಒಂದೇ ಒಂದು ಕ್ಷಣ ಯೋಚಿಸಿದರೂ ಇಂಥ ಪ್ರತ್ಯೇಕಬುದ್ಧಿಗೆ ವಿಶ್ವದಲ್ಲಿ ನೆಲೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಮಾತು ನಮ್ಮ ಸಂಸ್ಕೃತಿಯ ಭಾಗವಾಗಿದೆ.

ನಾವು ಮನೆಯಲ್ಲಿರುವಾಗ, ರಸ್ತೆಯಲ್ಲಿ ವಾಹನ ಚಲಿಸುವಾಗ, ಕಚೇರಿಯಲ್ಲಿ ಕೆಲಸ ಮಾಡುವಾಗ – ಇವೆಲ್ಲವೂ ನನ್ನಿಂದಲೇ ಇರುವುದು ಎಂಬ ಬುದ್ಧಿ ಮುನ್ನೆಲೆಗೆ ಬಂದರೆ ಆಗ ಮನೆ, ರಸ್ತೆ, ಕಚೇರಿಗಳೇ ದುರಂತದ ಸ್ಥಳಗಳಾಗಿ ಮಾರ್ಪಾಡಾಗುತ್ತವೆ; ಹೀಗಲ್ಲದೆ ಮನೆಗೂ ನನಗೂ, ರಸ್ತೆಗೂ ನನಗೂ, ಕಚೇರಿಗೂ ನನಗೂ ಇರುವುದು ಕೊಡು–ಪಡೆ ಸಂಬಂಧ ಎಂದು ಅರಿವಾಗಿ ಅದರಂತೆ ನಾವು ನಡೆದುಕೊಂಡರೆ ಈ ಎಲ್ಲ ತಾಣಗಳೂ ಸ್ವರ್ಗಸದೃಶ ನೆಲೆಗಳಾಗುತ್ತವೆ. ಯಾವುದೇ ಹೂವಾದರೂ ಅದು ಮಾಲೆಯಾಗಲು ದಾರ ಬೇಕೆ ಬೇಕು; ನಾರಿನಿಂದ ಹೂವಿಗೆ ಸೊಗಸು; ಹೂವಿನಿಂದ ನಾರಿಗೆ ಮನ್ನಣೆ. ಇವೆರಡರ ಸಂಯೋಗದಿಂದ ಸಿದ್ಧವಾಗುವುದು ಸಂಸ್ಕೃತಿಯ ಮಾಲೆ. ಸಂಸ್ಕೃತಿಯ ಮೊದಲ ಪಾಠವೇ ಸಹಜೀವನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT