ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಿದ್ದಲ್ಲೇ ನಾದಲೀಲೆ!

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಆಯೀ...’

ಶಾಲೆಯಿಂದ ಯಾವುದೋ ಖುಷಿಯ ವಿಷಯ ಹಂಚಿಕೊಳ್ಳಲೆಂದು ಓಡೋಡಿ ಬಂದ ಆ ಹುಡುಗನಿಗೆ ಎದುರಾಗಿದ್ದು ಅಂಗಳದಲ್ಲಿ ತುಳಸಿಕಟ್ಟೆ ಎದುರು ಬಿಳಿ ಬಟ್ಟೆ ಹೊದಿಸಿದ್ದ ಅಮ್ಮನ ಮೃತದೇಹ. ಆ ಹುಡುಗನ ಕನಸುಕಂಗಳಲ್ಲಿ ಮಿನುಗುತ್ತಿದ್ದ ನಕ್ಷತ್ರಗಳೆಲ್ಲ ಒಮ್ಮಿಂದೊಮ್ಮೆಲೇ ನಿಸ್ತೇಜಗೊಂಡು ನೀರು ತುಂಬಿಕೊಂಡಿತು. ನಿನ್ನೆಯವರೆಗೆ ನನ್ನ ಜಗತ್ತೇ ಆಗಿದ್ದ ಜೀವವೊಂದು ಇಂದು, ಈ ಕ್ಷಣ ನಿರ್ಜೀವವಾಗಿ ಮಲಗಿದೆ. ನಾಭಿಯಾಳದಿಂದ ಹುಟ್ಟಿದ ನಡುಕವೊಂದು ಇಡೀ ದೇಹವನ್ನಾವರಿಸಿ ಕಂಪಿಸತೊಡಗಿತು. ಇನ್ನೇನು ಕುಸಿಯುತ್ತಿದ್ದ ಆ ಹುಡುಗನ ಹೆಗಲನ್ನು ಮತ್ತೊಂದು ನಡುಗುತ್ತಿರುವ ಕೈ ಬಿಗಿದಪ್ಪಿತ್ತು. ಅವಳು ಅಕ್ಕ ಗಂಗಾ. ಅಮ್ಮನನ್ನು ಕಳೆದುಕೊಂಡ ಆ ಮನೆಗೆ ಮುಂದಿನ ಎರಡು ವರ್ಷ ತಾಯಿಯಾಗಿ ಸಲಹಿದ್ದು ಅವಳೇ.

ತಾಯಿ ಕಳೆದುಕೊಂಡ ನೋವಿನಲ್ಲಿ ಮೂಕನಾಗಿ ಕೂತು ಆಗಸ ದಿಟ್ಟಿಸುತ್ತಿದ್ದ ಹುಡುಗನ ಕಿವಿಗಳಲ್ಲಿ ದೂರದ್ಯಾವುದೋ ತೀರದಿಂದ ಸಣ್ಣಗೆ ಚೆಂಡೆ ಮದ್ದಲೆಯ ಧ್ವನಿ ಮೊರೆಯತೊಡಗಿತು. ತೇಲಿಬರುತ್ತಿದ್ದ ಯಕ್ಷಗಾನದ ಹಾಡಿನ ಆಲಾಪದಲ್ಲಿ ಅಮ್ಮನನ್ನು ಕಂಡುಕೊಳ್ಳುವ ದಾರಿ ಇದೇ ಅನಿಸಿತು. ಮರುದಿನ ಸಂಜೆ ಅಪ್ಪ ‘ಬಾ ಭಜನೆಗೆ ಕೂರು’ ಎಂದು ಕರೆದಾಗ ಆ ಹುಡುಗ ಎಂದಿನಂತೆ ಒಲ್ಲೆ ಎಂದು ಹಟ ಮಾಡಲಿಲ್ಲ. ದೇವರೆದುರು ಕೂತು ಹಾರ್ಮೋನಿಯಂ ನುಡಿಸತೊಡಗಿದಾಗ ಮನದ ಶೂನ್ಯತೆಯೇ ಬೆರಳುಗಳನ್ನು ನಡೆಸುತ್ತಿವೆ ಎಂದು ಅನ್ನಿಸಿ ಕೊಂಚ ನಿರಾಳನಾದ. ಅಮ್ಮನಿಲ್ಲದ ನೋವಿಗೊಂದು ಮುಲಾಮು ಸಿಕ್ಕಿತ್ತು. ಅದರ ಹೆಸರು ಸಂಗೀತ!

***
ಇದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕನಕನಹಳ್ಳಿ ಎಂಬ ಪುಟ್ಟ ಊರಿನ ಶಿವರಾಮ ಭಾಗ್ವತ್ ಎಂಬ ದೇಸೀ ಪ್ರತಿಭೆ, ಬದುಕಿನ ಶೂನ್ಯತೆಯನ್ನು ಸಂಗೀತದ ಮೂಲಕ ತುಂಬಿಕೊಳ್ಳಲು ಹೊರಳಿಕೊಂಡ ಕಥೆ. ಇದು ಅವರ ಜೀವನಗಾಥೆಯ ಆರಂಭವಷ್ಟೆ. ಮುಂದೆ ಅವರ ಸಂಗೀತಾಸಕ್ತಿ ಹೊರಳಿಕೊಂಡ ಹೊರಳುಗಳು, ಚಿಗುರಿಕೊಂಡ ಕವಲುಗಳು ಅಚ್ಚರಿ ಹುಟ್ಟಿಸುವಂಥವು.

ಶಿವರಾಮ ಅವರ ಕುಟುಂಬದಲ್ಲಿ ಸಂಗೀತ ಆಳವಾಗಿಯೇ ಬೇರೂರಿತ್ತು. ತಾತ ಮುತ್ತಾತಂದಿರ ಕಾಲದಿಂದಲೂ ಯಕ್ಷಗಾನ ಭಾಗವತಿಕೆ ಮನೆತನದ ಹೆಮ್ಮೆಯ ಹವ್ಯಾಸವಾಗಿ ಮುಂದುವರಿದುಕೊಂಡು ಬಂದಿತ್ತು. ತಂದೆ ರಾಮ ಭಾಗ್ವತ್ ಅವರೂ ಯಕ್ಷಗಾನ ಭಾಗವತರಾಗಿ ಪ್ರಾದೇಶಿಕವಾಗಿ ಹೆಸರು ಮಾಡಿದ್ದವರು. ಮನೆಯಲ್ಲಿ ಪ್ರತಿದಿನ ಒಂದು ಗಂಟೆ ದೇವರ ಮುಂದೆ ಕೂತು ಭಜನೆ ಮಾಡುವುದು ಕಡ್ಡಾಯ. ದಿನಕ್ಕೊಂದು ಭಕ್ತಿಗೀತೆಯನ್ನು ಬಾಯಿಪಾಠ ಮಾಡಿಕೊಂಡು ತಂದೆ ಎದುರು ಒಪ್ಪಿಸಬೇಕಾಗಿತ್ತು. ಬಾಲ್ಯದಲ್ಲಿ ಶಿವರಾಮನ ಹುಡುಗಾಟಿಕೆಯ ಮನಸ್ಸಿಗೆ ಈ ನಿಯಮ ಬೇಸರ ಹುಟ್ಟಿಸುತ್ತಿತ್ತು. ಈ ಕಾರಣದಿಂದ ತಪ್ಪಿಸಿಕೊಳ್ಳಲು ಹೋಗಿ ತಂದೆಯ ಬಳಿ ಪೆಟ್ಟು ತಿಂದಿದ್ದೂ ಇದೆ. ಮಗನ ಈ ಬೇಸರವನ್ನು ನೋಡಿದಾಗಲೆಲ್ಲ ತಂದೆ ‘ನಿನಗೆ ಈಗ ಸಂಗೀತದ ಮಹತ್ವ ಗೊತ್ತಾಗುವುದಿಲ್ಲ. ಮುಂದೊಂದು ದಿನ ನೆನಪಿಸಿಕೊಂಡು ಕೃತಜ್ಞನಾಗುತ್ತೀಯಾ’ ಎನ್ನುತ್ತಿದ್ದರು. ತಮ್ಮ ಬದುಕಿನ ಕಥೆಯನ್ನು ಹೇಳುವಾಗ ತಂದೆ ಅಂದು ಹೇಳಿದ ಮಾತನ್ನು ಇಂದು ಪದೇ ಪದೇ ನೆನಪಿಸಿಕೊಳ್ಳುತ್ತಾರೆ ಶಿವರಾಮ.


 

ಒತ್ತಾಯದ ಕಾರಣದಿಂದಲೇ ಅಂಟಿಕೊಂಡ ಸಂಗೀತದ ನಂಟು ಕೆಲ ಕಾಲದ ನಂತರ ಆಸಕ್ತಿಯಾಗಿ ಬದಲಾಯಿತು. ಅಷ್ಟರಲ್ಲಿ ಬದುಕಿನ ಸಂಕಷ್ಟಗಳಿಗೆ ಸಿಕ್ಕು ಅವರ ಮನಸ್ಸೂ ಪಕ್ವಗೊಂಡಿತ್ತು. ಸಂಗೀತವೇ ತನ್ನೆಲ್ಲ ನೋವಿಗೆ ಔಷಧವಾಗಬಲ್ಲದು, ಅದರಿಂದಲೇ ನಾನೊಂದು ‘ಗುರ್ತು’ ಗಳಿಸಿಕೊಳ್ಳಬಹುದು ಎಂಬುದು ಅವರ ಮನಸ್ಸಿಗೆ ಖಾತ್ರಿಯಾಗಿತ್ತು. ಆದರೆ ಶಾಸ್ತ್ರೀಯವಾಗಿ ಸಂಗೀತ ಕಲಿಯುವುದು, ಅದರಲ್ಲಿಯೇ ತೊಡಗಿಕೊಳ್ಳುವುದು ಸಾಧ್ಯವಾಗಲಿಲ್ಲ. ಬಡತನದ ಕಾರಣಕ್ಕೆ ಎಸ್ಸೆಸ್ಸೆಲ್ಸಿ ನಂತರ ಶಿಕ್ಷಣ ಮುಂದುವರಿಸುವುದೂ ಸಾಧ್ಯವಾಗಲಿಲ್ಲ. ಅಮ್ಮ ತೀರಿಕೊಂಡ ಎರಡು ವರ್ಷಕ್ಕೆ ಅಕ್ಕ ಗಂಗಾ ಮದುವೆಯಾಗಿ ಗಂಡನ ಮನೆಗೆ ಹೋದಮೇಲೆ ಮನೆಗೆಲಸದ ಹೊಣೆಗಾರಿಕೆಯೂ ಅವರ ಮೇಲೆ ಬಿತ್ತು.

ಚಿಕ್ಕ ವಯಸ್ಸಿಗೇ ಇಷ್ಟೆಲ್ಲ ತಾಪತ್ರಯಗಳ ನೊಗ ಹೆಗಲಿಗೇರಿದ್ದರೂ ಭಾಗ್ವತ್ ಅವರ ಮನಸ್ಸು ಮಾತ್ರ ಸಂಗೀತದ ಮಂತ್ರ  ಜಪಿಸುತ್ತಿತ್ತು. ಯಕ್ಷಗಾನದ ಹಾಡುಗಳೊಟ್ಟಿಗೆ, ಭಾವಗೀತೆ, ಜನಪದ ಗೀತೆ, ಲಂಬಾಣಿ ಹಾಡುಗಳೆಲ್ಲ ಅವರ ನಾಲಿಗೆ ಮೇಲೆ ನಲಿದಾಡತೊಡಗಿದವು. ವಂಶಪಾರಂಪರ್ಯವಾಗಿ ಬಂದ ಅದ್ಭುತ ಕಂಠಸಿರಿಯೇ ಅವರ ಆಸ್ತಿಯಾಗಿತ್ತು. ತಾತನ ಕಾಲದಿಂದಲೂ ಬಂದಿದ್ದ ಹಾರ್ಮೋನಿಯಂ ವಾದನ ಅವರಿಗೆ ಅಮ್ಮನ ಮಡಿಲಲ್ಲಿನ ಬಿಸುಪು ನೀಡುತ್ತಿತ್ತು.

ಯಾರೋ ಸವೆಸಿದ ದಾರಿಯಲ್ಲಿಯೇ ನಡೆಯುತ್ತಿರುವುದು ಶಿವರಾಮ ಭಾಗ್ವತ್ ಅವರ ಜಾಯಮಾನ ಅಲ್ಲ. ಹಾಗಾಗಿಯೇ ಹಾಡುಗಾರಿಕೆ, ಹಾರ್ಮೋನಿಯಂ ಜತೆಗೆ ಮೃದಂಗ, ತಬಲಾಗಳನ್ನೂ ಕಲಿತರು. ಯುವಜನಮೇಳಗಳಲ್ಲಿ ಜಾನಪದ ಗೀತೆ, ಭಾವಗೀತೆ, ರಂಗಗೀತೆ, ಲಾವಣಿ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಭಾಗವಹಿಸತೊಡಗಿದರು. ಅಲ್ಲೆಲ್ಲ ಬಹುಮಾನಗಳೂ ದೊರೆತವು. ‘ಭಾಗ್ವತ್ ಇದಾನೆ ಅಂದ್ರೆ ಪ್ರಥಮ ಬಹುಮಾನ ಅವನಿಗೇ’ ಎನ್ನುವಷ್ಟರ ಮಟ್ಟಿಗೆ ಗುರ್ತು ಸಿಗತೊಡಗಿತು. ಸತತ 17 ಸಲ ವಿಭಾಗಮಟ್ಟದ ಯುವಜನ ಮೇಳದಲ್ಲಿ ‘ವೀರಾಗ್ರಣಿ’ಯಾಗಿಯೂ, ಮೂರು ಬಾರಿ ರಾಜ್ಯಮಟ್ಟದಲ್ಲಿ ‘ವೀರಾಗ್ರಣಿ’ಯಾಗಿಯೂ ಹೆಮ್ಮೆಯ ಮಂದಹಾಸ ಬೀರಿದರು.

ಯಕ್ಷಗಾನ, ಜಾನಪದ ಹೀಗೆ ಸಂಗೀತದ ಜ್ಞಾನ ಅವರಿಗಿದ್ದರೂ ಶಾಸ್ತ್ರೀಯವಾಗಿ ಅಧ್ಯಯನ ಮಾಡಿರಲಿಲ್ಲ. ಕುಟುಂಬದ ಪರಿಸ್ಥಿತಿಯ ಕಾರಣಕ್ಕೆ ಅವರಿಗದು ಸಾಧ್ಯವೂ ಆಗಿರಲಿಲ್ಲ. ಆದರೆ ಭಾಗ್ವತ್ ಅವರ ಪ್ರತಿಭೆಯನ್ನು ನೋಡಿ ದತ್ತಾತ್ರಯ ಹೆಗಡೆ, ಚಿಟ್ಟೆಪಾಲ ಅವರು ತಾವೇ ಮುಂದೆ ಶಾಸ್ತ್ರೀಯ ಸಂಗೀತದ ಪಾಠವನ್ನು ಹೇಳಿಕೊಟ್ಟರು. ಅವರ ಬಳಿ ಶಿವರಾಮ ಭಾಗ್ವತ್ ಎರಡು ವರ್ಷ ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ನಡೆಸಿದರು.

ಭಿನ್ನವಾಗುವ ಹಂಬಲ: ಸಾಂಪ್ರದಾಯಿಕ ಜನಪದ ಸಂಗೀತದ ಹಿನ್ನೆಲೆ, ಶಾಸ್ತ್ರೀಯ ಸಂಗೀತದ ಪರಿಚಯ ಇದ್ದರೂ ಶಿವರಾಮ ಭಾಗ್ವತ್ ಅವರಿಗೆ ಯಾರೂ ತುಳಿಯದ ಹಾದಿಯಲ್ಲಿ ಸಾಗುವ ಬಯಕೆ.  ಇದೇ ಉದ್ದೇಶದಿಂದ ಅವರು ಕಾರ್ಯಕ್ರಮಗಳಲ್ಲಿ ಹಾಡುವ ಹಾಡುಗಳಿಗೆ ಸ್ವತಃ ಸಂಗೀತ ಸಂಯೋಜಿಸುತ್ತಿದ್ದರು. ಕೆಲವೊಮ್ಮೆ ಸಾಹಿತ್ಯ ವನ್ನೂ ಅವರೇ ರಚಿಸಿಕೊಳ್ಳುತ್ತಾರೆ.

‘‘ಸಂಗೀತವನ್ನು ಕಲಿತು ಹಾಡುವುದು. ವಾದ್ಯಗಳನ್ನು ನುಡಿಸುವುದು’ ಇವನ್ನು ಎಲ್ಲರೂ ಮಾಡುತ್ತಾರೆ. ನಾನೇನಾದರೂ ಭಿನ್ನವಾದದ್ದನ್ನು ಮಾಡಬೇಕು. ಸಾಂಪ್ರದಾಯಿಕವಾದ ಸಂಗೀತದ ಚೌಕಟ್ಟನ್ನು ಮುರಿದು ಹೊಸತೇನಾದರೂ ಕಟ್ಟಲು ಸಾಧ್ಯವಾಗಬೇಕು. ಈ ಭಿನ್ನತೆಯ ಕಾರಣಕ್ಕಾಗಿಯೇ ನನ್ನನ್ನು ಜನರು ಗುರ್ತಿಸುವಂತಾಗಬೇಕು ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಆದರೆ ಏನು ಮಾಡಬೇಕು ಎಂಬುದು ಗೊತ್ತಿರಲಿಲ್ಲ. ನನ್ನ ಕೌಟುಂಬಿಕ, ಆರ್ಥಿಕ ಮಿತಿಯಲ್ಲಿಯೇ ಏನಾದರೂ ಮಾಡಬೇಕು ಎಂದು ಮನಸ್ಸು ಚಡಪಡಿಸುತ್ತಿತ್ತು’ ಎಂದು ಹೊಸತನಕ್ಕಾಗಿ ಹಂಬಲಿಸುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಹೀಗೆ ಒಂದು ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದಾಗ ಎರಡು ದಿನಗಳ ಕಾಲ ಹಿರಿಯ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳಬೇಕಾಗಿ ಬಂತು. ಅವರ ಮನೆಯಲ್ಲಿ ಒಂದು ಗಿಟಾರ್ ಇತ್ತು. ಶಿವರಾಮ್, ಕುತೂಹಲದಿಂದ ಸುಮ್ಮನೆ ಅದನ್ನು ಹಿಡಿದುಕೊಂಡರು. ಅವರು ಗಿಟಾರ್ ಹಿಡಿದುಕೊಂಡ ರೀತಿಯೇ ಸರಿ ಇರಲಿಲ್ಲ. ಸ್ನೇಹಿತರು ‘ಅದು ಹಿಡಿದುಕೊಳ್ಳುವುದು ಹಾಗಲ್ಲ’ ಎಂದು ತಿದ್ದಲು ಯತ್ನಿಸಿದರು. ‘ಹೀಗೆ ಯಾಕೆ ಹಿಡಿದುಕೊಳ್ಳಬಾರದು? ಹೀಗೆ ನುಡಿಸಿದರೆ ಸ್ವರ ಹೊರಡುವುದಿಲ್ಲವೇ?’ ಶಿವರಾಮ್ ಅವರ ಮನಸಲ್ಲಿ ಇಂಥದ್ದೊಂದು ಪ್ರಶ್ನೆ ಮಿಂಚಿ ಮರೆಯಾಯ್ತು. ಮುಂದಿನ ಎರಡು ದಿನಗಳ ಕಾಲ ಅವರು ಊಟ, ನಿದ್ದೆಗಳ ಸಮಯ ಹೊರತುಪಡಿಸಿ ಉಳಿದ ಸಮಯ ಆ ಗಿಟಾರ್ ಬಿಟ್ಟು ಕದಲಲಿಲ್ಲ. ಅವರ ಆಸಕ್ತಿಯನ್ನು ನೋಡಿ ಸ್ನೇಹಿತರು ಆ ಗಿಟಾರ್ ಅನ್ನು ಅವರಿಗೇ ಉಡುಗೊರೆಯಾಗಿ ನೀಡಿಬಿಟ್ಟರು. ಶಿವರಾಮ್ ಕಣ್ಣಲ್ಲಿ ಮಿಂಚಿದ ಕೋಲ್ಮಿಂಚಲ್ಲಿ ಹೊಸ ದಾರಿ ತೆರೆದುಕೊಳ್ಳುತ್ತಿರುವಂತೆ ತೋರಿತು.

ನಾಲ್ಕು ತಂತಿಗಳ ಗಿಟಾರ್!: ಮುಂದಿನ ಎರಡು ತಿಂಗಳ ಕಾಲ ಗಿಟಾರ್‌ ಅಭ್ಯಾಸವೇ ಅವರಿಗೆ ಧ್ಯಾನವಾಯ್ತು. ಹಾಗೆಂದು ಗಿಟಾರ್ ವಾದ್ಯದ ಶಾಸ್ತ್ರೀಯ ಶೈಲಿಯ ಅಧ್ಯಯನದಲ್ಲೇನೂ ಅವರು ತೊಡಗಿಕೊಳ್ಳಲಿಲ್ಲ. ಕಲಿಸುವ ಗುರುಗಳೂ ಅವರಿಗಿರಲಿಲ್ಲ. ಕಲಿಯುವ ಛಲ, ಸಂಗೀತವೆಂದರೆ ಕುಣಿಯುವ ಮನಸ್ಸು ಅಷ್ಟೇ ಅವರ ಬಳಿ ಇದ್ದಿದ್ದು.

‘ಹಿಂದಿನ ತಲೆಮಾರಿನವರು ಸಂಗೀತದಲ್ಲಿ ಹೊಸ ಹೊಸ ಸಂಗತಿಗಳನ್ನು ಕಂಡುಹಿಡಿದಿದ್ದರಿಂದಲೇ ಅದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಅಂದು ಹೊಸತಾಗಿದ್ದಿದ್ದೇ ಇಂದು ಸಾಂಪ್ರದಾಯಿಕ ಆಗಿದೆಯಲ್ಲವೇ? ಹಾಗೆಯೇ ನಾವು ಆ ಪೂರ್ವಸೂರಿಗಳು ರೂಪಿಸಿದ ಸಂಗೀತದ ತಳಹದಿಯ ಮೇಲೆ ಹೊಸತೇನಾದರೂ ಕಂಡು ಹಿಡಿಯಬೇಕಲ್ಲವೇ? ಆಗಲೇ ನಮ್ಮ ಸಂಗೀತ ಇನ್ನಷ್ಟು ವಿಸ್ತಾರಗೊಳ್ಳುವುದು ಸಾಧ್ಯ’ ಎನ್ನುವುದು ಶಿವರಾಮ ಅವರ ಅಭಿಮತ. ಗಿಟಾರ್ ಕೈಗೆತ್ತಿಕೊಂಡಾಗಲೂ ಅವರ ಮನಸ್ಸಿನಲ್ಲಿದ್ದಿದ್ದು ಇವೇ ಸಂಗತಿಗಳು. ‘ಗಿಟಾರ್ ಪಾಶ್ಚಾತ್ಯ ಸಂಗೀತ ವಾದ್ಯ. ಅದನ್ನು ಪಾಶ್ಚಾತ್ಯ ಶೈಲಿಯಲ್ಲಿಯೇ ನುಡಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಬದಲಿಗೆ ಅದರಿಂದ ನಮ್ಮ ಸಂಗೀತ ಪರಂಪರೆಗೆ ಹೊಸತೇನಾದರೂ ಸೇರಿಸಬಹುದೇ ಎಂಬ ಯೋಚನೆ ಮನಸಲ್ಲಿತ್ತು. ಇದೇ ಶೋಧನೆಯ ಹುಡುಕಾಟದಲ್ಲಿ ಗಿಟಾರ್‌ನಲ್ಲಿ ಸರಿಗಮಪ ನುಡಿಸಲು ಕಲಿತೆ. ಸರಿಗಮಪದನಿಸ ನುಡಿಸಬಹುದು ಅಂತಾದರೆ ಎಲ್ಲ ರಾಗಗಳೂ ಅದರಲ್ಲಿಯೇ ಇರುವುದಲ್ಲವೇ? ಎಲ್ಲ ರಾಗ ನುಡಿಸಬಹುದು ಎಂದರೆ ಎಲ್ಲ ಹಾಡುಗಳನ್ನೂ ನುಡಿಸಬಹುದಲ್ಲವೇ? ಇದೇ ಯೋಚನೆಯಲ್ಲಿ ಮುಂದುವರಿದೆ. ಗಿಟಾರ್‌ನಲ್ಲಿ ಆರು ತಂತಿಗಳಿರುತ್ತವೆ. ಅದು ಪಾಶ್ಚಾತ್ಯರ ಅವಶ್ಯಕತೆ. ನಮ್ಮ ಹಿಂದೂಸ್ತಾನಿ ಶೈಲಿಗೆ ಬದಲಾಯಿಸಿಕೊಳ್ಳಬೇಕಾದರೆ ನಾಲ್ಕು ತಂತಿ ಸಾಕು. ಹಾಗಾಗಿ ಅವುಗಳಲ್ಲಿ ಎರಡು ತಂತಿಗಳನ್ನು ಕಿತ್ತು ನಾಲ್ಕನ್ನು ಉಳಿಸಿಕೊಂಡೆ. ಎಲ್ಲ ಬೆರಳುಗಳ ಬದಲಿಗೆ ಒಂದೇ ಬೆರಳನ್ನು ಹೆಚ್ಚಾಗಿ ಬಳಸಿಕೊಂಡು ಅಭ್ಯಾಸ ಮಾಡಿದೆ’ ಎಂದು ಪಾಶ್ಚಾತ್ಯ ವಾದ್ಯವೊಂದನ್ನು ತಮ್ಮ ಶೈಲಿಗೆ ಒಲಿಸಿಕೊಂಡ, ಒಗ್ಗಿಸಿಕೊಂಡ ಅನುಭವವನ್ನು ಹಂಚಿಕೊಳ್ಳುತ್ತಾರೆ ಶಿವರಾಮ್.

ಇವರ ಪ್ರಯತ್ನವನ್ನು ನೋಡಿ ಹೊನ್ನಾವರದ ಹಿರಿಯರೊಬ್ಬರು ಸಂಗೀತ ಕಾರ್ಯಕ್ರಮದಲ್ಲಿ ಹತ್ತು ನಿಮಿಷಗಳ ಕಾಲ ಗಿಟಾರ್ ವಾದನಕ್ಕೆ ಅವಕಾಶ ಕೊಟ್ಟರು. ಅಲ್ಲಿ ಶಿವರಾಮ್ ನುಡಿಸಿದ ಸಂಗೀತ ಎಲ್ಲರನ್ನೂ ಅಚ್ಚರಿಗೆ ನೂಕಿತು. ಪರಿಣಾಮವಾಗಿ ಬೇರೆ ಬೇರೆ ಕಡೆಗಳಿಂದ ಕಾರ್ಯಕ್ರಮ ನೀಡುವಂತೆ ಕರೆ ಬರತೊಡಗಿತು. ಇದು ಶಿವರಾಮ್ ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು.

‘ಹೊಸ ಹೊಸ ವೇದಿಕೆಗಳಲ್ಲಿ ಅವಕಾಶಗಳು ಸಿಗುತ್ತ ಹೋದ ಹಾಗೆ ಹೊಸ ಹೊಸ ವ್ಯಕ್ತಿಗಳು ಪರಿಚಯವಾಗುತ್ತ ಹೋದರು. ಹೊಸ ವಿಷಯಗಳು ತಿಳಿಯುತ್ತ ಹೋದವು. ನಾನು ಸಂಗೀತದ ಎಷ್ಟೋ ಸಂಗತಿಗಳನ್ನು ವೇದಿಕೆಯ ಮೇಲೆಯೇ ಕಲಿತಿದ್ದು’ ಎಂದು ವಿನಯದಿಂದಲೇ ಅವರು ಹೇಳಿಕೊಳ್ಳುತ್ತಾರೆ.

‘ಮೆಲೋಡಿಕಾ’ ಮಾಧುರ್ಯಕ್ಕೆ ಮರುಳಾಗಿ...: ಇಂಥದ್ದೊಂದು ಕಾರ್ಯಕ್ರಮ ನೀಡಲು ಕುಂದಾಪುರಕ್ಕೆ ಹೋಗಿದ್ದಾಗ ಅವರನ್ನು ‘ಮೆಲೋಡಿಕಾ’ ಎನ್ನುವ ಇನ್ನೊಂದು ಪಾಶ್ಚಾತ್ಯ ವಾದ್ಯ ಆಕರ್ಷಿಸಿತು. ಬಾಯಿಯಲ್ಲಿ ಗಾಳಿ ಊದಿಕೊಂಡು ಕೈಗಳಲ್ಲಿ ಹಾರ್ಮೋನಿಯಂ ರೀತಿಯ ಮನೆಗಳನ್ನು ಬೆರಳುಗಳಲ್ಲಿ ಒತ್ತುತ್ತ ನುಡಿಸುವ ವಾದ್ಯ ಅದು. ಆ ವಾದ್ಯದಲ್ಲಿಯೂ ಅವರು ಹುಡುಕಿದ್ದು ಅದೇ ಹಿಂದೂಸ್ತಾನಿ ಸಂಗೀತದ ಬೀಜಾಕ್ಷರಗಳಾದ ‘ಸರಿಗಮಪದನಿಸ’ವನ್ನೇ.

‘ಹಾರ್ಮೋನಿಯಂ ನುಡಿಸಿ ಪರಿಚಯ ಇದ್ದ ನನಗೆ ಮೆಲೋಡಿಕಾ ಅಭ್ಯಾಸ ಮಾಡುವುದು ಕಷ್ಟ ಅನಿಸಲಿಲ್ಲ. ಅದನ್ನೂ ನಾನು ನಮ್ಮ ಶಾಸ್ತ್ರೀಯ ಸಂಗೀತದ ತಳಹದಿಯ ಮೇಲೆ ನನ್ನದೇ ಶೈಲಿಯಲ್ಲಿಯೇ ನುಡಿಸಲು ಕಲಿತಿದ್ದು. ಸ್ಯಾಕ್ಸೋಫೋನ್ ಸ್ವರವನ್ನು ನೆನಪಿಸುತ್ತದೆ. ಈಗ ಯಾವ ಸ್ವರವನ್ನೂ ಅದರ ಮೂಲಕ ಹೊರಡಿಸಬಲ್ಲೆ’ ಎಂದು ಅವರು ಈ ವಾದ್ಯದ ಮೇಲೆ ಹಿಡಿತ ಸಾಧಿಸಿದ ಪರಿಯನ್ನು ವಿವರಿಸುತ್ತಾರೆ.

ಜಲವಿಲ್ಲದೆ ಹೊಮ್ಮುವ ನಾದ ತರಂಗ!: ‘ಜಲತರಂಗ’ ಪ್ರಸಿದ್ಧವಾದ ಸಂಗೀತವಾದ್ಯ. ಆದರೆ ಈ ವಾದ್ಯವನ್ನು ಹೋಲುವ ಹಾಗೆ ಶಿವರಾಮ ಸ್ಟೀಲ್‌ ತಟ್ಟೆಗಳನ್ನು ಇಟ್ಟುಕೊಂಡು, ತರಕಾರಿ ಕತ್ತರಿಸುವ ಚಾಕುವಿನಿಂದ ಬಡಿದು ನಾದ ಹೊರಡಿಸುತ್ತಾರೆ. ಸದ್ಯ ಇವರ ಮನಸ್ಸನ್ನು ಆವರಿಸಿಕೊಂಡಿರುವುದು ಇದೇ ವಾದ್ಯ. ‘ರಾಜೀವ ಹೆಗ್ಗಾರ ಎಂಬ ಹಿರಿಯ ಜಲತರಂಗ ವಾದಕರಿದ್ದಾರೆ. ಅವರ ಮೂಲಕವೇ ನನಗೆ ಜಲತರಂಗ ವಾದ್ಯ ಪರಿಚಿತವಾಗಿದ್ದು. ಹಾಗೆಯೇ ಗೋಕರ್ಣದ ಗಣಪತಿ ಕುರ್ಸೆ ಎನ್ನುವ ಇನ್ನೊಬ್ಬ ಸ್ನೇಹಿತರು ಲೋಹತರಂಗ ಎಂಬ ಹೊಸ ವಾದ್ಯ ರೂಪಿಸಿದ್ದಾರೆ. ಅವರಿಬ್ಬರನ್ನು ನೋಡಿ ಅವರ ಮಾರ್ಗದರ್ಶನವನ್ನೂ ಪಡೆದುಕೊಂಡು ಸ್ಟೀಲ್‌ ಲೋಟಗಳ ಮೂಲಕ ನಾದ ಹೊರಡಿಸುವ ಹೊಸ ಶೋಧನೆಯಲ್ಲಿ ತೊಡಗಿದ್ದೇನೆ’ ಎಂದು ತಮ್ಮನ್ನು ಇತ್ತೀಚೆಗೆ ಆವರಿಸಿಕೊಂಡಿರುವ ಹೊಸ ಸಂಗೀತ ಸಂಗತಿಯ ಕುರಿತು ಹೇಳಿಕೊಳ್ಳುತ್ತಾರೆ.

‘ಇದು ಇನ್ನೂ ಶೋಧನೆಯ ಹಂತದಲ್ಲಿದೆ. ಜಲತರಂಗದಲ್ಲಿ ಪಿಂಗಾಣಿ ಪಾತ್ರೆಯಲ್ಲಿ ನೀರು ಹಾಕಿಕೊಂಡು ನುಡಿಸುತ್ತಾರೆ. ಆದರೆ ಇಲ್ಲಿ ಬರೀ ಸ್ಟೀಲ್ ತಟ್ಟೆಗಳನ್ನು ಬಳಸಿಕೊಂಡು ಸ್ವರ ಹೊರಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಒಂದೊಂದು ತಟ್ಟೆ ಒಂದೊಂದು ಸ್ವರ ಹೊರಡಿಸುತ್ತದೆ. ನೂರಾರು ತಟ್ಟೆಗಳಲ್ಲಿ ಒಂದೋ ಎರಡೋ ನಮಗೆ ಬೇಕಾದ ಸ್ವರ ಹೊರಡಿಸುವ ತಟ್ಟೆ ಸಿಗಬಹುದು. ಅವುಗಳನ್ನು ಸಂಗ್ರಹಿಸುತ್ತಿದ್ದೇನೆ. ಇನ್ನೂ ಕೆಲವು ಸ್ವರ ಹೊರಡಿಸುವ ತಟ್ಟೆ ಸಿಗಬೇಕಿದೆ. ಮುಂದೆ ಈ ಹೊಸ ಬಗೆಯ ವಾದ್ಯವನ್ನು ಸಮರ್ಥವಾಗಿ ರೂಪಿಸುವ ಕನಸಿದೆ’ ಎಂದು ಹೇಳಿಕೊಳ್ಳುತ್ತಾರೆ.

ಕನಸುಗಳ ಚುಂಗು ಹಿಡಿದು..: ಇದೇ ಅಲ್ಲ, ಬ್ಯಾಂಜೋ, ಮ್ಯಾಂಡೊಲಿನ್ ಸೇರಿ ದಂತೆ ಇನ್ನೂ ಹಲವು ವಾದ್ಯಗಳನ್ನು ಅವರು ‘ತಮ್ಮತನಕ್ಕೆ’ ಒಗ್ಗಿಸಿಕೊಂಡು ಆ ಮೂಲಕ ಸಂಗೀತಾಭಿವ್ಯಕ್ತಿಯ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ತಮ್ಮ ಸಂಗೀತದ ಪಯಣವನ್ನು ಹೀಗೆಯೇ ಮುಂದುವರಿಸಿ ಒಂದಿಷ್ಟು ಹೊಸ ಸಂಗೀತವಾದ್ಯಗಳನ್ನು ಕಂಡುಹಿಡಿಯಬೇಕು. ಅದನ್ನು ಸಾಧ್ಯವಾದಷ್ಟೂ ಪ್ರಚುರಪಡಿಸಬೇಕು ಎಂಬ ಹಂಬಲ ಭಾಗ್ವತ್ ಅವರಿಗಿದೆ. ಅಲ್ಲದೇ ತಾನು ಕಲಿತುಕೊಂಡಿದ್ದನ್ನು ತನ್ನ ಸುತ್ತಲಿನ ಸಮಾಜಕ್ಕೆ ಹಂಚಬೇಕು. ತನ್ನೂರಿನ ಜನರಲ್ಲಿ ಸಂಗೀತ ಅಭಿರುಚಿಯನ್ನು ಬೆಳೆಸಬೇಕು ಎಂಬ ಹೆಬ್ಬಯಕೆಯೂ ಅವರಿಗಿದೆ.

ಈಗಾಗಲೇ ಸಂಗೀತದ ಬೆನ್ನು ಹತ್ತಿ ಅವರು ಕರ್ನಾಟಕದ ಮೂಲೆಮೂಲೆಗಳಲ್ಲಿ ತಮ್ಮ ಸಂಗೀತದ ಪರಿಮಳವನ್ನು ಹರಡಿ ಬಂದಿದ್ದಾರೆ. ದೆಹಲಿ, ಗೋವಾ, ಕಾಶಿ, ಹರಿದ್ವಾರ, ಹೃಷಿಕೇಶ, ಕೇರಳಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ.

‘ನನಗೆ ಸಂಗೀತ ಎನ್ನುವುದು ಒಂದು ಸಿದ್ಧರೂಪದ ವಸ್ತು ಅಲ್ಲ. ಅದು ನನ್ನ ಬದುಕಿನಲ್ಲಿ, ಸುತ್ತಮುತ್ತಲಿನ ಪರಿಸರದಲ್ಲಿ, ಮನೆ, ಮಳೆ, ಕಾಡು ಹೀಗೆ ಎಲ್ಲದರಲ್ಲಿಯೂ ಮಿಳಿತಗೊಂಡಿರುವ ಸಂಗತಿ. ಅವುಗಳಿಂದ ನಾವು ಎಷ್ಟು ಬಾಚಿಕೊಳ್ಳುತ್ತೇವೆಯೋ ಅಷ್ಟು ನಮ್ಮ ಪಾಲಿಗೆ ದಕ್ಕುತ್ತದೆ. ನಾನು ಮಾಡುತ್ತಿರುವುದೂ ಅದನ್ನೇ. ನಾನು ಈ ಜಗತ್ತನ್ನು ನೋಡುವುದು ಸಂಗೀತದ ಕಣ್ಣುಗಳಿಂದಲೇ. ಈ ಜಗತ್ತಿಗೆ ನಾನು ಏನಾದರೂ ಕೊಡಲು ಸಾಧ್ಯವಾದರೆ ಅದೂ ಸಂಗೀತದ ಮೂಲಕವೇ’ ಎನ್ನುವ ಭಾಗ್ವತ್ ಅವರ ಮಾತುಗಳು ಅವರ ಶ್ರದ್ಧೆ, ಛಲದೊಟ್ಟಿಗೆ ನಾಳಿನ ಕನಸುಗಳ ಕುರಿತಾದ ಕೈಮರದಂತೆಯೂ ಗೋಚರಿಸುತ್ತದೆ.
**
ಕುಟುಂಬದ ಬೆಂಬಲ
ಶಿವರಾಮ ಭಾಗ್ವತ್ ಅವರ ಈ ಸಾಧನೆಯ ಹಿಂದೆ ಕುಟುಂಬದವರ ಸಹಕಾರವೂ ಹಿರಿದಿದೆ. ಶಿವರಾಮ ಅವರ ಅಕ್ಕ ಗಂಗಾ, ಉತ್ತರಕನ್ನಡದಲ್ಲಿ ಯಕ್ಷಗಾನ ಭಾಗವತಿಕೆ ಮಾಡುವ ಏಕೈಕ ಮಹಿಳೆ ಎಂದು ಹೆಸರು ಮಾಡಿದ್ದರು. ಈಗ ಹಲವು ಮಹಿಳೆಯರು ಯಕ್ಷಗಾನದಲ್ಲಿ ತೊಡಗಿಕೊಂಡಿದ್ದಾರೆ. ಅವರ ತಂದೆ ರಾಮ ಭಾಗ್ವತ್ ಕೂಡ ಯಕ್ಷಗಾನ ಭಾಗವತರು.

ಶಿವರಾಮ್ ಅವರ ಬಾಳ ಸಂಗೀತಕ್ಕೆ ಸಾಥ್ ನೀಡುತ್ತಿರುವ ಗೀತಾ ಅವರೂ ಸಂಗೀತದ ವಿದ್ಯಾರ್ಥಿನಿಯೇ. ಅವರು ಈಗಲೂ ಮನೆಯಲ್ಲಿಯೇ ಊರಿನ ಆಸಕ್ತರಿಗೆ ಸಂಗೀತ ತರಗತಿ ನಡೆಸುತ್ತಾರೆ. ಅವರಿಬ್ಬರ ಪ್ರೇಮದ ಫಲವಾದ ಎರಡು ವರ್ಷದ ಸುಧಾಮ ಕೂಡ ಅಪ್ಪನ ಸ್ವರಕ್ಕೆ ನಿಧಾನವಾಗಿ ತಾಳ ಹಾಕಲಾರಂಭಿಸಿದ್ದಾನೆ. ‘ಈ ಎಲ್ಲರೂ ನನ್ನ ಸಂಗೀತಯಾತ್ರೆಗೆ ಇಂಧನಗಳು’ ಎಂದು ಸ್ಮರಿಸಿಕೊಳ್ಳುತ್ತಾರೆ ಭಾಗ್ವತ್.
**
ಎಲ್ಲೆಲ್ಲೂ ಸಂಗೀತವೇ...
ಒಂದಿಷ್ಟು ಸ್ಟೀಲ್ ತಟ್ಟೆ, ಪಾತ್ರೆಗಳನ್ನು ಒಂದೆಡೆ ಎಸೆದರೆ ಅದೊಂದು ಕರ್ಕಶ ಶಬ್ದ. ಕೇಳಿಸಿಕೊಳ್ಳಲಾಗುವುದಿಲ್ಲ. ಆದರೆ ಅದನ್ನು ಸುಸಂಬದ್ಧವಾಗಿ ಹೊರಡಿಸಿದರೆ ಅದೇ ಸಂಗೀತವಾಗುತ್ತದೆ. ನಳದಿಂದ ಬೀಳುವ ಹನಿಗಳನ್ನೇ ಗಮನವಿಟ್ಟು ಕೇಳಿ. ನಿಯಮಿತವಾಗಿ ಬೀಳುವ ಹನಿಗಳಲ್ಲಿಯೂ ಒಂದು ತಾಳವಿರು ತ್ತದೆ. ಪ್ಲಾಸ್ಟಿಕ್ ಟಬ್‌ ಮಗುಚಿಟ್ಟು ಮೇಲಿಂದ ಒಂದೊಂದೇ ಹನಿ ಬೀಳುವಂತೆ ನೋಡಿಕೊಳ್ಳಿ. ಎಂಥ ಅದ್ಭುತ ರಿದಂ ಇರುತ್ತದೆ ನೋಡಿ. ನಮ್ಮ ನಿತ್ಯಬದುಕಿನ ಸಂಗತಿಗಳಲ್ಲಿಯೇ ಸಂಗೀತ ಇರುತ್ತದೆ. ಅದು ಅಸ್ತವ್ಯಸ್ತವಾಗಿರುತ್ತದೆ. ಅದನ್ನು ಸುಸಂಬದ್ಧವಾಗಿಸಿದರೆ ಅದೇ ಸಂಗೀತ. ಅದನ್ನು ಹುಡುಕುವ ಕಣ್ಣು ನಮಗೆ ಬೇಕು. 
**
ಫೇಸ್‌ಬುಕ್‌ನಲ್ಲಿಯೂ...
ತಮ್ಮ ಸಂಗೀತದ ಪ್ರಯೋಗಗಳನ್ನು ವಿಡಿಯೊ ಮಾಡಿ ಶಿವರಾಮ ಭಾಗ್ವತ್ ಫೇಸ್‌ಬುಕ್‌ನಲ್ಲಿನ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಈ ಸಂಗೀತದ ವಿಡಿಯೊಗಳನ್ನು ನೋಡಿಯೇ ಅವರಿಗೆ ಸಾಕಷ್ಟು ಅಭಿಮಾನಿಗಳೂ, ಸ್ನೇಹಿತರೂ ಸಿಕ್ಕಿದ್ದಾರೆ. ಅವರ ಫೇಸ್‌ಬುಕ್‌ ಖಾತೆಯ ಕೊಂಡಿ ಇಲ್ಲಿದೆ. bit.ly/2H1mKtT   

**
ಚಿತ್ರಗಳು: ಅಗಸ್ತ್ಯ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT