ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಸ್ವಂತೀಗೆ ಇನ್ನೊಂದು ಫೋನ್

ವಿವೊ ವಿ 9
Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ತುಂಬಿತುಳುಕುತ್ತಿದೆ. ಇಲ್ಲಿರುವ ಹಲವು ಕಂಪನಿಗಳಲ್ಲಿ ವಿವೊ ಕೂಡ ಒಂದು. ಈ ಅಂಕಣದಲ್ಲಿ ವಿವೊ ಕಂಪನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆ ನೀಡಲಾಗಿತ್ತು. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆ ವಿವೊ ಕಂಪನಿಯ ಫೋನ್‌ಗಳ ವಿನ್ಯಾಸ ಮತ್ತು ದೇಹದ ಗುಣಮಟ್ಟ ಕೂಡ ಉತ್ತಮವಾಗಿವೆ.

ಸ್ವಂತೀಪ್ರಿಯರಿಗೆಂದೇ ತಯಾರಾದ ವಿವೊ ವಿ7 ಫೋನಿನ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಈಗ ಅದೇ ಮಾಲಿಕೆಯಲ್ಲಿ ಹೊಸದಾಗಿ ಬಂದ ವಿವೊ ವಿ9 (Vivo V9) ಸ್ಮಾರ್ಟ್‌ಫೋನ್ ವಿಮರ್ಶೆ ಇಲ್ಲಿದೆ.

ನಾನು ಇದುತನಕ ವಿಮರ್ಶೆ ಮಾಡಿದ ಎಲ್ಲ ವಿವೊ ಫೋನ್‌ಗಳಲ್ಲಿ ಗಮನಿಸಿದ ಒಂದು ಪ್ರಮುಖ ಅಂಶವೆಂದರೆ ಅವುಗಳ ರಚನೆ ಮತ್ತು ವಿನ್ಯಾಸ ಉತ್ತಮವಾಗಿವೆ. ಈ ಫೋನ್ ಕೂಡ ಅಂತೆಯೇ ಉತ್ತಮ ರಚನೆ ಮತ್ತು ವಿನ್ಯಾಸ ಉಳ್ಳದ್ದಾಗಿದೆ. ಹಿಂಭಾಗ ಸ್ವಲ್ಪ ಉಬ್ಬಿದ್ದು ತಲೆದಿಂಬಿನಾಕಾರದಲ್ಲಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿಗಳಿವೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಮತ್ತು ಮೆಮೊರಿ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಮತ್ತು ಒಂದು ಮೈಕ್ರೊಸಿಮ್ ಕಾರ್ಡ್ ಹಾಕಬಹುದು. ಇತ್ತೀಚೆಗಿನ ಬಹುತೇಕ ಫೋನ್‌ಗಳಂತೆ ಇದು ಕೂಡ ಅಂಚುರಹಿತ (bezelless) ಫೋನ್. ಪರದೆ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮವಾಗಿದೆ. ಅಷ್ಟು ಮಾತ್ರವಲ್ಲ ಇದರ ಪರದೆಯ ಮೇಲ್ಭಾಗದಲ್ಲಿ ಮಧ್ಯ ಭಾಗದಲ್ಲಿ ಸ್ವಲ್ಪ ಜಾಗ ಬಿಟ್ಟರೆ ಇದರ ಪರದೆ ಬಹುತೇಕ ದೇಹವನ್ನು ಬಳಸಿಕೊಂಡಿದೆ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಇಂತಹ ಪರದೆ ವಿನ್ಯಾಸಕ್ಕೆ notch ಎನ್ನುತ್ತಾರೆ.

ಬೆರಳಚ್ಚು ಸ್ಕ್ಯಾನರ್ ಹಿಂಭಾಗದಲ್ಲಿದೆ. ಹಿಂಭಾಗದ ಮೂಲೆಯಲ್ಲಿ ಎರಡು ಕ್ಯಾಮೆರಾ ಮತ್ತು ಫ್ಲಾಶ್ ಇವೆ. ಹಿಂಬದಿಯ ಕವಚ ತೆಗೆಯಲಿಕ್ಕಾಗುವುದಿಲ್ಲ. ಈ ಕವಚ ಸ್ವಲ್ಪ ನಯವಾಗಿದೆ. ಕೈಯಿಂದ ಜಾರಿಬೀಳದಂತೆ ಅಧಿಕ ಕವಚ ಹಾಕಿಕೊಂಡರೆ ಉತ್ತಮ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ ಹಿಡಿದಾಗ ಮೇಲ್ದರ್ಜೆಯ ಫೋನ್ ಹಿಡಿದುಕೊಂಡ ಭಾಸವಾಗುತ್ತದೆ. ಈ ವಿಭಾಗದಲ್ಲಿ ಇತರೆ ವಿವೊ ಫೋನ್‌ಗಳಂತೆ ಇದಕ್ಕೂ ಪೂರ್ತಿ ಮಾರ್ಕು ನೀಡಬಹುದು.
ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು ಬೆಂಚ್‌ಮಾರ್ಕ್ 89,960 ಇದೆ. ಅಂದರೆ ಇದು ಮಧ್ಯಮ ಶ್ರೇಣಿಯಲ್ಲಿ ಮೇಲ್ಮಟ್ಟದ ವೇಗದ ಫೋನ್. ಒಂದು ಮಟ್ಟಿಗೆ ಎಲ್ಲ ನಮೂನೆಯ ಆಟಗಳನ್ನು ಮತ್ತು ಮೂರು ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ.
ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೊ ಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವಿಡಿಯೊ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಇತರೆ ವಿವೊ ಫೋನ್‌ಗಳಂತೆ ಇದರ ಆಡಿಯೊ ಇಂಜಿನ್ ಕೂಡ ಚೆನ್ನಾಗಿದೆ. ಇಯರ್‌ಫೋನ್ ನೀಡಿದ್ದಾರೆ. ಈ ಇಯರ್‌ಫೋನಿನ ವಿನ್ಯಾಸ ಸ್ವಲ್ಪ ವಿಭಿನ್ನವಾಗಿದೆ. ಅದು ಇಯರ್‌ಫೋನ್ ಮತ್ತು ಇಯರ್‌ಬಡ್‌ಗಳ ಸಂಮಿಶ್ರಣದಂತಿದೆ. ಇದಕ್ಕೆ ಕುಶನ್ ಜೋಡಿಸುವಂತಿಲ್ಲ. ಇಯರ್‌ಫೋನಿನ ಮೂತಿಯೇ ಕಿವಿ ಕಾಲುವೆಯೊಳಗೆ ಹೋಗುತ್ತದೆ. ಚೆನ್ನಾಗಿ ಕೇಳಲೆಂದು ಒತ್ತಿದರೆ ಇದು ಸ್ವಲ್ಪ ನೋವು ಮಾಡುತ್ತದೆ. ಆದರೆ ಇದರ ಧ್ವನಿಯ ಗುಣಮಟ್ಟ ಉತ್ತಮವಾಗಿದೆ.

ಇದರಲ್ಲಿ 16 ಮತ್ತು 5 ಮೆಗಾಪಿಕ್ಸೆಲ್‌ಗಳ ಎರಡು ಪ್ರಾಥಮಿಕ ಕ್ಯಾಮೆರಾಗಳಿವೆ. ಜೊತೆಗೆ 24 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾ ಇದೆ. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಎಂದಿನಂತೆ ಹಲವು ಆಯ್ಕೆಗಳಿವೆ. ಮ್ಯಾನ್ಯುವಲ್ ಆಯ್ಕೆ ಕೂಡ ಇದೆ. ಪ್ರಾಥಮಿಕ ಕ್ಯಾಮೆರಾದಲ್ಲಿ ತೆಗೆದ ಫೋಟೊಗಳ ಗುಣಮಟ್ಟ ಚೆನ್ನಾಗಿವೆ. ಕೆಲವು ಸಂದರ್ಭಗಳಲ್ಲಿ ಇದು ನಿಖರವಾಗಿ ಫೋಕಸ್ ಮಾಡಲು ಒದ್ದಾಡುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಫೋಟೊಗಳು ಅಷ್ಟು ಚೆನ್ನಾಗಿ ಮೂಡಿಬರುವುದಿಲ್ಲ. ವಿ7ನಲ್ಲಿದ್ದಂತೆ ಇದರಲ್ಲೂ ವಿಶೇಷ ಸ್ವಂತೀ ಕ್ಯಾಮೆರಾ ಇದೆ. ಅದು 24 ಮೆಗಾಪಿಕ್ಸೆಲ್‌ನದು. ಅತ್ಯುತ್ತಮ ಸ್ವಂತೀ (selfie) ಬೇಕು ಎನ್ನುವವರಿಗೆ ಇದು ಉತ್ತಮ ಕ್ಯಾಮೆರಾ ಫೋನ್ ಎನ್ನಬಹುದು. ವಿ7ನಂತೆ ಇದೂ ನಿಮ್ಮನ್ನು ಅತಿಯಾಗಿ ಅತಿಯಾಗಿ ಸುಂದರ ಮಾಡುತ್ತದೆ. ಪ್ರಾಥಮಿಕ ಕ್ಯಾಮೆರಾವೂ ಚೆನ್ನಾಗಿರುವ ಕಾರಣ ನೀಡುವ ಹಣಕ್ಕೆ ತೃಪ್ತಿ ನೀಡುವ ಕ್ಯಾಮೆರಾ ಫೋನ್ ಬೇಕು ಎನ್ನುವವರು ಇದನ್ನು ಕೊಳ್ಳಬಹುದು.

ಈ ಫೋನಿಲ್ಲಿ ಮುಖವನ್ನು ಗುರುತು ಹಿಡಿಯುವ ಸವಲತ್ತಿದೆ. ಅಂದರೆ ನಿಮ್ಮ ಮುಖವನ್ನೇ ಪಾಸ್‌ವರ್ಡ್ ಮಾದರಿಯಲ್ಲಿ ಬಳಸಬಹುದು. ನಾನು ಕನ್ನಡಕ ಹಾಕಿದಾಗ ಅದು ಮುಖವನ್ನು ಗುರುತು ಹಿಡಿಯಲಿಲ್ಲ. ಕನ್ನಡಕ ತೆಗೆದಾಗ ಮಾತ್ರ ಗುರುತು ಹಿಡಿಯಿತು!

ಬ್ಯಾಟರಿ ಪರವಾಗಿಲ್ಲ. ಸುಮಾರು ಎರಡೂವರೆ ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಇಡೀ ದಿನ ಬಾಳಿಕೆ ಬರುತ್ತದೆ. ಬೆಲೆಯ ವಿಷಯಕ್ಕೆ ಬಂದಾಗ ಸ್ವಲ್ಪ ಜಾಸ್ತಿ ಆಯಿತು ಎಂದೆನಿಸುತ್ತದೆ. ಸುಮಾರು 18-20 ಸಾವಿರಕ್ಕೆ ನೀಡಿದರೆ ಇದು ನಿಜಕ್ಕೂ ಉತ್ತಮ ಎನ್ನಬಹುದು.
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT