ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಮಂಡಳಿ ಸದಸ್ಯತ್ವ: ಭಾರತಕ್ಕೆ ಬಲ

ನಾರ್ಡಿಕ್‌ ಶೃಂಗಸಭೆ: ಐದು ದೇಶಗಳ ಮುಖ್ಯಸ್ಥರ ಜತೆ ಪ್ರಧಾನಿ ಮೋದಿ ಚರ್ಚೆ
Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಬೇಡಿಕೆಯನ್ನು ನಾರ್ಡಿಕ್‌ ದೇಶಗಳು (ಉತ್ತರ ಯುರೋಪ್‌ ಮತ್ತು ಉತ್ತರ ಅಟ್ಲಾಂಟಿಕ್‌ನ ದೇಶಗಳು) ಬೆಂಬಲಿಸಿವೆ. ಈ ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲು ಭಾರತ ಸೂಕ್ತ ಅಭ್ಯರ್ಥಿಯಾಗಿದೆ ಎಂದು ಈ ದೇಶಗಳು ಅಭಿಪ್ರಾಯಪಟ್ಟಿವೆ.

ನಾರ್ಡಿಕ್‌ ದೇಶಗಳಾದ ಸ್ವೀಡನ್‌, ಡೆನ್ಮಾರ್ಕ್‌, ಐಸ್‌ಲೆಂಡ್‌, ನಾರ್ವೆ ಮತ್ತು ಫಿನ್ಲೆಂಡ್‌ನ ಮುಖ್ಯಸ್ಥರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ–ನಾರ್ಡಿಕ್‌ ಮೊದಲ ಶೃಂಗಸಭೆಯಲ್ಲಿ ಭಾಗವಹಿಸಿದರು. ಬಳಿಕ ನೀಡಿದ ಹೇಳಿಕೆಯಲ್ಲಿ ನಾರ್ಡಿಕ್‌ ದೇಶಗಳು ಭಾರತಕ್ಕೆ ಬೆಂಬಲ ಘೋಷಿಸಿವೆ.

21ನೇ ಶತಮಾನದಲ್ಲಿ ಹೆಚ್ಚು ವಾಸ್ತವಿಕವಾದ ಮತ್ತು ಪರಿಣಾಮಕಾರಿಯಾದ ವಿಶ್ವಸಂಸ್ಥೆಯ ಅಗತ್ಯವಿದೆ. ಹಾಗಾಗಿ ಭದ್ರತಾ ಮಂಡಳಿಯ ವಿಸ್ತರಣೆ ಅಗತ್ಯ ಎಂದು ಈ ದೇಶಗಳು ಅಭಿಪ್ರಾಯಪಟ್ಟಿವೆ.

2030ರ ಹೊತ್ತಿಗೆ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ ಅನುಷ್ಠಾನ ಮತ್ತು ಹವಾಮಾನ ಬದಲಾವಣೆ ತಡೆಗಾಗಿ ರೂಪಿಸಲಾದ ಮಹತ್ವಾಕಾಂಕ್ಷೆಯ ಪ್ಯಾರಿಸ್‌ ಒಪ್ಪಂದ ಅನುಷ್ಠಾನಕ್ಕೂ ಬದ್ಧ ಎಂದು ಈ ದೇಶಗಳು ಹೇಳಿವೆ.

ವಿಶ್ವಸಂಸ್ಥೆಯಲ್ಲಿ ಸುಧಾರಣೆ ಅತ್ಯಗತ್ಯವಾಗಿದೆ. ಭದ್ರತಾ ಮಂಡಳಿಯ ಕಾಯಂ ಮತ್ತು ಕಾಯಂ ಅಲ್ಲದ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಲೇಬೇಕಿದೆ. ವಿಶ್ವಸಂಸ್ಥೆಯಲ್ಲಿನ ಪ್ರಾತಿನಿಧ್ಯ ವಿಸ್ತಾರಗೊಳ್ಳಬೇಕಿದೆ ಎಂದು ಶೃಂಗಸಭೆಯಲ್ಲಿ ಒತ್ತಾಯಿಸಲಾಗಿದೆ.

ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ) ಸದಸ್ಯತ್ವಕ್ಕೆ ಭಾರತ ನಡೆಸುತ್ತಿರುವ ಪ್ರಯತ್ನವನ್ನು ನಾರ್ಡಿಕ್‌ ದೇಶಗಳು ಸ್ವಾಗತಿಸಿವೆ. ಸಾಧ್ಯವಾದಷ್ಟು ಬೇಗನೆ ಸಕಾರಾತ್ಮಕ ಫಲಿತಾಂಶಕ್ಕಾಗಿ ಗುಂಪಿನೊಳಗೆ ಕೆಲಸ ಮಾಡುವುದಾಗಿಯೂ ಈ ದೇಶಗಳು ಹೇಳಿವೆ.

ಒಂದಾದ ಭಾರತ–ಬ್ರಿಟನ್
ಲಂಡನ್(ಪಿಟಿಐ):
ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ತಗ್ಗಿಸಲು ಭಾರತ ಮತ್ತು ಬ್ರಿಟನ್‌ ಒಮ್ಮತಕ್ಕೆ ಬಂದಿವೆ.

ಯೂರೋಪ್ ಪ್ರವಾಸದ ಭಾಗವಾಗಿ ಬ್ರಿಟನ್‌ಗೆ ಬಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ತೆರೆಸಾ ಮೇ ಬುಧವಾರ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವು ತನ್ನ ಸೇನಾ ಪ್ರಾಬಲ್ಯವನ್ನು ವಿಸ್ತರಿಸುತ್ತಿರುವ ಬಗ್ಗೆ ಇಬ್ಬರು ನಾಯಕರೂ ಕಳವಳ ವ್ಯಕ್ತಪಡಿಸಿದ್ದಾರೆ.

‘ದಕ್ಷಿಣ ಚೀನಾ ಸಮುದ್ರದಲ್ಲಿ ಸಮುದ್ರಯಾನವು ಮುಕ್ತವಾಗಿರಬೇಕು ಎಂಬುದು ಭಾರತ, ಬ್ರಿಟನ್ ಮತ್ತು ಅಂತರರಾಷ್ಟ್ರೀಯ ಸಮುದಾಯದ ಒತ್ತಾಸೆ’ ಎಂದು ಇಬ್ಬರೂ ಜಂಟಿ ಹೇಳಿಕೆ ನೀಡಿದ್ದಾರೆ.

‘ಸಮುದ್ರಮಾರ್ಗವು ಯಾವುದೋ ಒಂದು ದೇಶದ ಸ್ವಾಧೀನಕ್ಕೆ ಹೋಗುವುದು ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ವಿರುದ್ಧವಾದುದು. ಈ ನಿಯಮಾವಳಿಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಮತ್ತು ಅಸ್ಥಿರಗೊಂಡಿರುವ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸಲು ಎರಡೂ ದೇಶಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿವೆ ಹಾಗೂ ಪರಸ್ಪರ ಸಹಕಾರ ನೀಡಲಿವೆ’ ಎಂದು ಇಬ್ಬರೂ ಹೇಳಿದ್ದಾರೆ.

ಭಾರತದಿಂದ ಉದ್ಯೋಗ ಸೃಷ್ಟಿ: ಭಾರತ ಮತ್ತು ಬ್ರಿಟನ್‌ಗಳು ವಾಣಿಜ್ಯ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.

‘ಈ ಒಪ್ಪಂದದಿಂದ ಬ್ರಿಟನ್‌ನಲ್ಲಿ ಭಾರತೀಯರು ಭಾರಿ ಮೊತ್ತದ ಹೂಡಿಕೆ ಮಾಡಲಿದ್ದಾರೆ. ಇದರಿಂದ ಬ್ರಿಟನ್‌ನಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ತೆರೆಸಾ ಮೇ ಹೇಳಿದ್ದಾರೆ.

‘ಮೋದಿ ಜತೆ ನಡೆಸಿದ ಮಾತುಕತೆಯೆಲ್ಲವೂ ಫಲಪ್ರದವಾಗಿತ್ತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT