ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ಗಳ ಸ್ಥಳಾಂತರಕ್ಕೆ ಮೀನಮೇಷ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದೊಳಗೆ ಖಾಸಗಿ ಬಸ್‌ಗಳ ಪ್ರವೇಶ ನಿರ್ಬಂಧಿಸಲು ಕೋರಿ ಸಂಚಾರ ಪೊಲೀಸರು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನಿಗಮಗಳ ಅಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವ ಸಾರಿಗೆ ಇಲಾಖೆಯಲ್ಲೇ ದೂಳು ತಿನ್ನುತ್ತಿದೆ.

ಕೆಎಸ್ಆರ್‌ಟಿಸಿಯ 60 ಬಸ್‌ ಪೀಣ್ಯದ ಬಸವೇಶ್ವರ ನಿಲ್ದಾಣದಿಂದಲೇ ಈಗಾಗಲೇ ಸಂಚಾರ ಆರಂಭಿಸಿವೆ. ಖಾಸಗಿ ಬಸ್‌ಗಳು ಮಾತ್ರ ಮೆಜೆಸ್ಟಿಕ್‌ನಿಂದ ಸಂಚರಿಸುತ್ತಿದ್ದು, ಅವುಗಳ ಸ್ಥಳಾಂತರಕ್ಕೆ ಸಾರಿಗೆ ಇಲಾಖೆ ಮೀನಮೇಷ ಎಣಿಸುತ್ತಿದೆ. ಇದರಿಂದಾಗಿಯೇ ಪೀಣ್ಯ ನಿಲ್ದಾಣಕ್ಕೆ ಪ್ರಯಾಣಿಕರು ಬರುತ್ತಿಲ್ಲವೆಂಬುದು ಕೆಎಸ್ಆರ್‌ಟಿಸಿ ಅಧಿಕಾರಿಗಳ ಆರೋಪ.

‘ಪೀಣ್ಯದಿಂದ ಬಸ್ ಸಂಚಾರ ಆರಂಭವಾದ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಜತೆಗೆ, ಖಾಸಗಿ ಬಸ್‌ಗಳನ್ನು ತ್ವರಿತವಾಗಿ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದೇವೆ. ಅದಕ್ಕೆ ಇದುವರೆಗೂ ಉತ್ತರ ಬಂದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘2014ರಲ್ಲಿ ನಗರದೊಳಗೆ ಖಾಸಗಿ ಬಸ್‌ಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆಗ, ವಾಹನಗಳ ದಟ್ಟಣೆ ಕಡಿಮೆಯಾಗಿತ್ತು. ಆದರೆ, ಮೆಟ್ರೊ ಹಾಗೂ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಅದೇ ಕಾರಣ ನೀಡಿದ್ದ ಖಾಸಗಿ ಬಸ್‌ ಕಂಪನಿಗಳು, ನಿರ್ಬಂಧ ಹಿಂಪಡೆಯುವಂತೆ ಮಾಡಿದ್ದವು. ಮೆಟ್ರೊ ಹಾಗೂ ಬಸ್‌ ಸೌಕರ್ಯ ಚೆನ್ನಾಗಿದೆ. ಇದು ಸ್ಥಳಾಂತರಕ್ಕೂ ಸೂಕ್ತ ಸಮಯ’ ಎಂದು ಹೇಳಿದರು.

ಕಳೆದ ವರ್ಷವೇ ಪ್ರಸ್ತಾವ ಸಲ್ಲಿಸಿದ್ದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ, ‘ನಿತ್ಯವೂ ತುಮಕೂರು, ಬಳ್ಳಾರಿ, ಮೈಸೂರು ಹಾಗೂ ಹೊಸೂರು ರಸ್ತೆ ಮಾರ್ಗವಾಗಿ ನಗರಕ್ಕೆ ಸುಮಾರು 10,000 ಖಾಸಗಿ ಬಸ್‌ಗಳು ಬರುತ್ತವೆ. ಅಷ್ಟೇ ಬಸ್‌ಗಳು ನಗರದಿಂದ ಹೊರಡುತ್ತವೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಖಾಸಗಿ ಬಸ್‌ಗಳ ಓಡಾಟ ಜಾಸ್ತಿ ಇರುತ್ತದೆ. ಇವುಗಳ ಸಂಚಾರದಿಂದ ಬಹುತೇಕ ಸ್ಥಳಗಳಲ್ಲಿ ದಟ್ಟಣೆ ಉಂಟಾಗುತ್ತಿದೆ. ಅಂಥ ಬಸ್‌ಗಳ ಸಂಚಾರವನ್ನು ನಗರದಲ್ಲಿ ನಿರ್ಬಂಧಿಸಬೇಕು. ಹೊರವಲಯದಲ್ಲೇ ಅವುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದರು.

ಈ ಪ್ರಸ್ತಾವ ಬೆಂಬಲಿಸಿದ್ದ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳು, ತಮ್ಮ ಪ್ರಸ್ತಾವವನ್ನೂ ನೀಡಿದ್ದರು. ಮೂರು ಪ್ರಸ್ತಾವದ ಬಗ್ಗೆ ಇಲಾಖೆಯು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

‘ಪ್ರಜಾವಾಣಿ’ ಜತೆ ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ್, ‘ಖಾಸಗಿ ಬಸ್‌ ಸ್ಥಳಾಂತರ ಸಂಬಂಧ ಸಾರಿಗೆ ನಿಗಮಗಳು, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಅಧಿಕಾರಿಗಳು, ಪೊಲೀಸರು ಹಾಗೂ ಬಸ್‌ ಕಂಪನಿ ಪ್ರತಿನಿಧಿಗಳ ಸಭೆ ನಡೆಸಲಾಗಿತ್ತು. ಎರಡು ಸುತ್ತಿನ ಸಭೆಯಲ್ಲಿ ಸಾಕಷ್ಟು ವಿಷಯಗಳನ್ನು ಚರ್ಚಿಸಲಾಗಿತ್ತು. ಅದರ ಮುಂದುವರಿದ ಸಭೆ ನಡೆಸಬೇಕು ಎನ್ನುವಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಯಿತು’ ಎಂದರು.

ಕಂಪನಿ ಮಾಲೀಕರ ಒತ್ತಡ: ಖಾಸಗಿ ಬಸ್‌ ಕಂಪನಿಗಳು ಮೆಜೆಸ್ಟಿಕ್‌, ಕೆ.ಆರ್‌. ಮಾರುಕಟ್ಟೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಜಾಗ ಖರೀದಿಸಿ ನಿಲ್ದಾಣಗಳನ್ನು ನಿರ್ಮಿಸಿಕೊಂಡಿವೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ದಿಢೀರ್ ಬಸ್‌ಗಳನ್ನು ಸ್ಥಳಾಂತರಿಸಿದರೆ, ಕಂಪನಿಗಳಿಗೆ ನಷ್ಟವಾಗಲಿದೆ. ಅದೇ ಕಾರಣಕ್ಕೆ ಕಂಪನಿಗಳ ಮಾಲೀಕರು, ಪ್ರಸ್ತಾವ ಜಾರಿಗೊಳಿಸದಂತೆ ಜನಪ್ರತಿನಿಧಿಗಳ ಮೂಲಕ ಸಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ.

‘ಪ್ರಾಯೋಗಿಕವಾಗಿ 60 ಬಸ್‌ ಸ್ಥಳಾಂತರಿಸಿದ್ದೇವೆ. ಖಾಸಗಿ ಕಂಪನಿಗಳು ಅದನ್ನೇ ಪಾಲಿಸಬೇಕು. ಆ ಬಗ್ಗೆ ಸಾರಿಗೆ ಇಲಾಖೆ ಗಮನಹರಿಸಬೇಕು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಹೇಳಿದರು.

ಪ್ರಯಾಣ ದರಕ್ಕೂ ಬಿದ್ದಿಲ್ಲ ಕಡಿವಾಣ: ಖಾಸಗಿ ಕಂಪನಿ ಬಸ್‌ಗಳಿಗೆ ಕನಿಷ್ಠ ಹಾಗೂ ಗರಿಷ್ಠ ಪ್ರಯಾಣ ದರ ನಿಗದಿ ಪ‍ಡಿಸುವಂತೆ ಕೋರಿ ಸಾರಿಗೆ ಇಲಾಖೆ ಆಯುಕ್ತರು ಸಲ್ಲಿಸಿರುವ ಪ್ರಸ್ತಾವಕ್ಕೆ ಕಾರ್ಯದರ್ಶಿಯವರು ಇದುವರೆಗೂ ಒಪ್ಪಿಗೆ ನೀಡಿಲ್ಲ. ಇದರಿಂದಾಗಿ, ಹಬ್ಬ– ವಿಶೇಷ ದಿನಗಳಲ್ಲಿಪ್ರಯಾಣಿಕರಿಂದ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುವುದಕ್ಕೆ ಕಡಿವಾಣ ಬಿದ್ದಿಲ್ಲ.

ರಾಜ್ಯದಲ್ಲಿ 30 ಖಾಸಗಿ ಬಸ್‌ ಕಂಪನಿಗಳಿವೆ. ಈ ಬಸ್‌ಗಳ ಪ್ರಯಾಣ ದರವು ಸಾಮಾನ್ಯ ದಿನಗಳಲ್ಲಿ ₹400ರಿಂದ ₹1,800 ಇರುತ್ತದೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ₹600ರಿಂದ ₹3,800ರವರೆಗೆ ದರ ಇರುತ್ತದೆ. ಇದು ಅವೈಜ್ಞಾನಿಕ ಎನ್ನುವ ದೂರುಗಳು ಇವೆ.

ಪ್ರಯಾಣ ದರಕ್ಕೂ ಬಿದ್ದಿಲ್ಲ ಕಡಿವಾಣ
ಖಾಸಗಿ ಕಂಪನಿ ಬಸ್‌ಗಳಿಗೆ ಕನಿಷ್ಠ ಹಾಗೂ ಗರಿಷ್ಠ ಪ್ರಯಾಣ ದರ ನಿಗದಿಪ‍ಡಿಸುವಂತೆ ಕೋರಿ ಸಾರಿಗೆ ಇಲಾಖೆ ಆಯುಕ್ತರು ಸಲ್ಲಿಸಿರುವ ಪ್ರಸ್ತಾವಕ್ಕೆ ಕಾರ್ಯದರ್ಶಿಯವರು ಇದುವರೆಗೂ ಒಪ್ಪಿಗೆ ನೀಡಿಲ್ಲ. ಇದರಿಂದಾಗಿ, ಹಬ್ಬ– ವಿಶೇಷ ದಿನಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುವುದಕ್ಕೆ ಕಡಿವಾಣ ಬಿದ್ದಿಲ್ಲ.

ರಾಜ್ಯದಲ್ಲಿ ಸುಮಾರು 30 ಖಾಸಗಿ ಬಸ್‌ ಕಂಪನಿಗಳಿವೆ. ಇಂಥ ಬಸ್‌ಗಳ ಪ್ರಯಾಣ ದರವು ಸಾಮಾನ್ಯ ದಿನಗಳಲ್ಲಿ ₹400ರಿಂದ ₹1,800 ಇರುತ್ತದೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ₹600ರಿಂದ ₹3,800ರವರೆಗೆ ದರ ನಿಗದಿ ಮಾಡಲಾಗುತ್ತಿದೆ. ಈ ದರವು ಅವೈಜ್ಞಾನಿಕವಾಗಿದ್ದರಿಂದಲೇ ಕಂಪನಿಗಳ ಬಂಡವಾಳ ಹಾಗೂ ನಿರ್ವಹಣೆ ಮಾಹಿತಿ ಆಧರಿಸಿ ದರ ನಿಗದಿ ಮಾಡಲು ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಕಂಪನಿಗಳ ಮಾಲೀಕರು ತಮ್ಮ ಪ್ರಭಾವ ಬಳಸಿ ಪ‍್ರಸ್ತಾವದ ಮೇಲೆ ಚರ್ಚೆಯೂ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.

ಮೇಲ್ಸೇತುವೆಯಲ್ಲೇ ಸಂಚಾರ: ಆದೇಶಕ್ಕೆ ಕಿಮ್ಮತ್ತಿಲ್ಲ
‘ಮೆಜೆಸ್ಟಿಕ್‌ನಿಂದ ತುಮಕೂರಿನತ್ತ ಹೊರಡುವ ಖಾಸಗಿ ಬಸ್‌ಗಳು, ಗೊರಗುಂಟೆಪಾಳ್ಯದ ಮೇಲ್ಸೇತುವೆಯಲ್ಲೇ ಸಂಚರಿಸಬೇಕು. ಸರ್ವಿಸ್‌ ರಸ್ತೆಯಲ್ಲಿ ಹೋಗಬಾರದು’ ಎಂದು ಆರ್‌ಟಿಒ ಹಾಗೂ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದಕ್ಕೆ ಖಾಸಗಿ ಬಸ್‌ಗಳು ಕ್ಯಾರೆ ಎನ್ನುತ್ತಿಲ್ಲ.

‘ಕಾಂಟ್ರಾಕ್ಟ್‌ ಕ್ಯಾರೇಜ್‌ ಅಡಿ ಪರವಾನಗಿ ಪಡೆದ ಖಾಸಗಿ ಬಸ್‌ಗಳು, ಎರಡು ನಿಗದಿತ ಪಾಯಿಂಟ್‌ಗಳ ನಡುವಷ್ಟೇ ಸಂಚರಿಸಬೇಕು. ಮಧ್ಯದಲ್ಲಿ ಎಲ್ಲಿಯೂ ಬಸ್‌ ನಿಲ್ಲಿಸಬಾರದು. ಇದೇ ನಿಯಮ ಆಧರಿಸಿ ಹೊಸ ಆದೇಶ ಹೊರಡಿಸಿದ್ದೇವೆ’ ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು.

ಯಶವಂತಪುರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡ ನಂತರ, ಖಾಸಗಿ ಬಸ್‌ಗಳು ಗೊರಗುಂಟೆಪಾಳ್ಯದ ಮೇಲ್ಸೇತುವೆ ಹತ್ತಿ ನೆಲಮಂಗಲದತ್ತ ಹೋಗಬೇಕು. ಮೇಲ್ಸೇತುವೆ ಪಕ್ಕ ಸೂಚನಾ ಫಲಕ ಅಳವಡಿಸಿದ್ದೇವೆ. ಕೆಲ ಬಸ್‌ಗಳು ಸೇತುವೆಯಲ್ಲಿ ಸಂಚರಿಸುತ್ತಿಲ್ಲ. ಪಕ್ಕದ ಸರ್ವಿಸ್‌ ರಸ್ತೆಯಲ್ಲೇ ಓಡಾಡುತ್ತಿವೆ. ಇದು ಆದೇಶ ಉಲ್ಲಂಘನೆ. ಅಂಥ ಬಸ್‌ಗಳನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT