ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಅನುಮಾನ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದ ಜಿಲ್ಲೆಗಳಿಂದ ರಾಜ್ಯದ ಪ್ರಮುಖ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿರುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಲು ನಿರಾಕರಿಸಿದೆ.

ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಸಮಿತಿಯ 48ನೇ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯೂಐಐ) ಪ್ರತಿನಿಧಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿ ಹಾಗೂ ವನ್ಯಜೀವಿ ವಿಭಾಗದ ಪ್ರತಿನಿಧಿಯನ್ನೊಳಗೊಂಡ ಸಮಿತಿ ಸ್ಥಳ ಪರಿಶೀಲನೆ ನಡೆಸಿ 30 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸಮಿತಿ ನಿರ್ದೇಶನ ನೀಡಿದೆ.

ಸಭೆಯ ನಡಾವಳಿ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಸೂಕ್ಷ್ಮ ಪರಿಸರ ವ್ಯವಸ್ಥೆಯ ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗಲಿರುವ ಈ ರೈಲು ಮಾರ್ಗದಿಂದ ಇಡೀ ಪರಿಸರ ವ್ಯವಸ್ಥೆಗೆ ಭಾರಿ ಧಕ್ಕೆ ಉಂಟಾಗಲಿದೆ. ವನ್ಯಜೀವಿಗಳಿಗೂ ಅಪಾಯವಿದೆ’ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.

‘ಮೂರು ಆನೆ ಕಾರಿಡಾರ್‌ಗಳ 595.64 ಹೆಕ್ಟೇರ್ ಅರಣ್ಯ ಭೂಮಿ ಈ ಯೋಜನೆಗೆ ಬಳಕೆಯಾಗಲಿದೆ. ಈ ಯೋಜನೆಗೆ ಮುಖ್ಯ ವನ್ಯಜೀವಿ ವಾರ್ಡನ್‌ ನೇತೃತ್ವದ ಸಮಿತಿ ಷರತ್ತುಬದ್ಧ ಅನುಮತಿ ನೀಡಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಿಂದ ವರದಿ ತರಿಸಿಕೊಂಡು ಅರಣ್ಯ ನಾಶ ತಡೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಈ ಯೋಜನೆಗೆ ಒಪ್ಪಿಗೆ ನೀಡಿಲ್ಲ’ ಎಂದು ಕೇಂದ್ರ ಅರಣ್ಯ ಸಚಿವಾಲಯದ ಐಜಿಎಫ್‌ (ವನ್ಯಜೀವಿ) ಗಮನ ಸೆಳೆದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ದಟ್ಟವಾಗಿದೆ. ಪಶ್ಚಿಮಘಟ್ಟ ಹಾದುಹೋಗಿರುವ ಇದು ಪಾರಂಪರಿಕ ತಾಣವೂ ಹೌದು. ಹುಲಿ ಸಂತತಿ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದೆ. ಒಂದು ವೇಳೆ ಈ ಯೋಜನೆ ಅನುಷ್ಠಾನಗೊಳಿಸಿದರೆ, ಹುಲಿ ಸಂರಕ್ಷಣೆ ಕಾರ್ಯಕ್ಕೆ ಹಿನ್ನಡೆಯಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಈ ರೈಲು ಮಾರ್ಗ ನಿರ್ಮಾಣದ ವೇಳೆ 2 ಲಕ್ಷಕ್ಕೂ ಅಧಿಕ ಮರಗಳ ಹನನ ಆಗಲಿದೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ಕಳೆದ ವರ್ಷ ಏಪ್ರಿಲ್‌ನಲ್ಲಿ ಅಭಿಪ್ರಾಯಪಟ್ಟಿತ್ತು. ಬಳಿಕ ಷರತ್ತುಬದ್ಧ ಅನುಮತಿ ನೀಡಿತ್ತು.

ಹಳಿಗೆ ಏರದ ಯೋಜನೆ: 1998ರಲ್ಲಿ ಈ ರೈಲು ಮಾರ್ಗದ ಯೋಜನೆ ಸಿದ್ಧವಾಗಿತ್ತು. ಬಳ್ಳಾರಿ ಮತ್ತು ಹೊಸಪೇಟೆಯ ಕಬ್ಬಿಣದ ಅದಿರು ಗಣಿಗಳಿಂದ ಅದಿರು ಸಾಗಿಸುವುದಕ್ಕಾಗಿ ಈ ಯೋಜನೆ ರೂಪಿಸಲಾಗಿತ್ತು.

ಈ ಯೋಜನೆಯನ್ನು ವಿರೋಧಿಸಿ ರಾಜ್ಯದ ಸರ್ಕಾರೇತರ ಸಂಘಟನೆಗಳಾದ ಪರಿಸರ ಸಂರಕ್ಷಣಾ ಕೇಂದ್ರ ಮತ್ತು ವೈಲ್ಡರ್‌ನೆಸ್‌ ಕ್ಲಬ್‌ಗಳು 2006ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಯೋಜನೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು.

ಸುಪ್ರೀಂ ಕೋರ್ಟ್‌ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಈ ಯೋಜನೆಗೆ ಅನುಮೋದನೆ ನೀಡಲು 2015ರಲ್ಲಿ ನಿರಾಕರಿಸಿತ್ತು. ‘ಈ ಮಾರ್ಗ ನಿರ್ಮಾಣದಿಂದ ಪಶ್ಚಿಮ ಘಟ್ಟಗಳ ಅರಣ್ಯ, ವನ್ಯಜೀವಿಗಳು ಮತ್ತು ಜೀವ ವೈವಿಧ್ಯದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ. ಸರಿಪಡಿಸಲಾಗದಷ್ಟು ಹಾನಿ ಆಗಲಿದೆ’ ಎಂದು ಸಿಇಸಿ ಹೇಳಿತ್ತು.

ಎನ್‌ಜಿಟಿ ಹಸಿರು ನಿಶಾನೆ:‌ ಈ ಯೋಜನೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳು ಮತ್ತು ಸಿಇಸಿಯ ಅಭಿಪ್ರಾಯಗಳನ್ನು 2015ರ ಅಕ್ಟೊಬರ್‌ 5ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಸುಪ್ರೀಂ ಕೋರ್ಟ್‌ ವರ್ಗಾಯಿಸಿತ್ತು. ಮಾರ್ಗ ನಿರ್ಮಾಣಕ್ಕೆ ಎನ್‌ಜಿಟಿ 2016ರ ಫೆಬ್ರುವರಿ 10ರಂದು ಹಸಿರು ನಿಶಾನೆ ತೋರಿತ್ತು.

‘ಅರಣ್ಯ (ಸಂರಕ್ಷಣೆ) ಕಾಯ್ದೆ 1980ರ ಸೆಕ್ಷನ್‌ 2ರ ಪ್ರಕಾರ, ರಾಜ್ಯ ಸರ್ಕಾರ ಭೂಪರಿವರ್ತನೆ ಆದೇಶ ಹೊರಡಿಸಬಹುದು. ಆದರೆ, ಅದಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು’ ಎಂದು ಅದು ತಿಳಿಸಿತ್ತು.

ಈ ಯೋಜನೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವಂತೆ 2016ರ ಅಕ್ಟೋಬರ್ 24ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಬಳಿಕ ಸಚಿವಾಲಯವು ಸಮಿತಿ ರಚಿಸಿತ್ತು.

ಯೋಜನೆಗೆ ಬಳಕೆಯಾಗಲಿರುವ ಅರಣ್ಯ ಭೂಮಿ

ವಲಯ; ಹೆಕ್ಟೇರ್‌; ಎಷ್ಟು ಮರ ಕಡಿತ
ಕಾರವಾರ; 249.58; 71,266
ಯಲ್ಲಾ‍ಪುರ; 304.05; 1,19,439
ಧಾರವಾಡ; 42; 11,745

ಈ ಪ್ರದೇಶದ ಪ್ರಮುಖ ವನ್ಯಜೀವಿಗಳು

ಹುಲಿ, ಆನೆ, ಜಿಂಕೆ, ಕಡವೆ, ಕಾಡುಕೋಣ, ಮುಳ್ಳು ಹಂದಿ, ಚಿರತೆ, ಮಳೆ ಹಕ್ಕಿ (ಹಾರ್ನ್‌ಬಿಲ್‌), ನವಿಲು, ಕಾಳಿಂಗ ಸರ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT