ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕ ಭಾಗದಲ್ಲಿ ಪವಾಡಗಳ ಮೂಲಕ ಮತ್ತು ಹಿಂದೂ–ಮುಸಲ್ಮಾನರ ಭಾವೈಕ್ಯವನ್ನು ಸಾರುವ ಮೂಲಕ ಜನಪ್ರಿಯರಾಗಿದ್ದ ಸಂತ ಶ್ರೀ ಮೌನೇಶ್ವರ. ಸಿನಿಮಾ ಮಾಧ್ಯಮದ ಮೂಲಕ ಅವರ ಪವಾಡಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ಹೊರಟಿದ್ದಾರೆ ಭೀಮರಾಜ್ ಎಸ್‌. ವಜ್ರದ್‌. ತಮ್ಮನ ಈ ಪ್ರಯತ್ನಕ್ಕೆ ಅಣ್ಣ ಚಂದ್ರಶೇಖರ್ ವಸ್ತ್ರದ್ ಧನ ಬೆಂಬಲ ನೀಡಿದ್ದಾರೆ.

ಚಿತ್ರೀಕರಣ ಪೂರ್ತಿಗೊಂಡು ಬಿಡುಗಡೆಗೆ ಸಿದ್ಧವಾಗಿರುವ ‘ಶ್ರೀ ಮೌನೇಶ್ವರ ಮಹಾತ್ಮೆ’ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಿಕ್ಕಾಗಿ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

‘ಇದು ಭಕ್ತಿಪ್ರಧಾನ ಸಿನಿಮಾ. ಭಕ್ತಿ ಎಂಬುದು ಪ್ರೀತಿಯ ಮತ್ತೊಂದು ಮುಖ. ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಗದಗ ಹೀಗೆ ಹಲವು ಪ್ರದೇಶಗಳಲ್ಲಿ ಮೌನೇಶ್ವರರು ಪವಾಡಗಳನ್ನು ಮಾಡಿದ್ದಾರೆ. ಆ ಪವಾಡಗಳನ್ನು ಆಧರಿಸಿಯೇ ಸಿನಿಮಾ ಮಾಡಿದ್ದೇವೆ. ಭಕ್ತಿಯೇ ಇಲ್ಲದವರಿಗೆ ಈ ಸಿನಿಮಾದಲ್ಲಿ ಮೌನೇಶ್ವರರ ಮಾತುಗಳಿಂದ ಜೀವನಸ್ಫೂರ್ತಿ ಸಿಗುತ್ತದೆ’ ಎಂಬುದು ನಿರ್ದೇಶಕ ಭೀಮರಾಜ್ ಅವರ ವಿವರಣೆ.


ಸ್ಪಂದನಾ ಪ್ರಕಾಶ್

ಹಾಗೆಂದು ಬರೀ ಪವಾಡಗಳ ತೋರಿಸುವುದರಲ್ಲಿಯಷ್ಟೇ ಈ ಚಿತ್ರ ಮುಗಿದುಹೋವುದಿಲ್ಲ. ‘ಪವಾಡಗಳನ್ನು ಒಂದು ಸಾಧನವಾಗಿ ಬಳಸಿಕೊಂಡು, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪ್ರಯತ್ನ ನಮ್ಮದು’ ಎಂದೂ ನಿರ್ದೇಶಕರು ಹೇಳುತ್ತಾರೆ.

ಮೌನೇಶ್ವರರ ಪಾತ್ರದಲ್ಲಿ ಮಹೇಶ್ ಎಂಬ ಹೊಸ ನಟ ನಟಿಸಿದ್ದಾರೆ. ಮಾಸ್ಟರ್ ಚಿನ್ಮಯ್ ಮೌನೇಶ್ವರರ ಬಾಲ್ಯಕಾಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ತಂದೆಯಾಗಿ ರಾಮಸ್ವಾಮಿ ಅವರೂ, ತಾಯಿಯಾಗಿ ಸ್ಪಂದನಾ ಪ್ರಸಾದ್ ಅವರೂ ನಟಿಸಿದ್ದಾರೆ. ಭಕ್ತ ಪರ್ವತಪ್ಪನಾಗಿ ಶಿವಕುಮಾರ್ ಆರಾಧ್ಯ ಅವರು ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿರುವ ಆರು ಹಾಡುಗಳಿಗೆ ಹರ್ಷ ಕೋಗೋಡ್ ಸಂಗೀತ ಸಂಯೋಜಿಸಿದ್ದಾರೆ. ಮಧು ಗೌಡ ಚಿತ್ರಕಥೆ ಬರೆದಿದ್ದಾರೆ. ಜಯಪ್ರಕಾಶ್‌ ಛಾಯಾಗ್ರಹಣ ಚಿತ್ರಕ್ಕಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ‘ಶ್ರೀ ಮೌನೇಶ್ವರ ಮಹಾತ್ಮೆ’ಯನ್ನು ತೆರೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT