ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸೀಮೆಸುಣ್ಣದ ಕಲೆ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶಿಕ್ಷಕರಿಗೂ ಸೀಮೆಸುಣ್ಣಕ್ಕೂ ಅವಿನಾಭವ ಸಂಬಂಧ. ನಿತ್ಯ ಸೀಮೆಸುಣ್ಣದ ದೂಳು ಸೇವಿಸಿ ಆರೋಗ್ಯ ಕ್ಷೀಣಿಸುತ್ತದೆ ಎಂದು ಕೆಲವರು ಗೊಣಗಿದರೆ, ಮತ್ತೆ ಕೆಲವರು ಕ್ಲಾಸ್‌ರೂಂಗಳ ಆಚೆಗೂ ಸೀಮೆಸುಣ್ಣದ ನಂಟನ್ನು ಕಳೆದುಕೊಳ್ಳದೇ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಳ್ಳುತ್ತಾರೆ. ನಾಗೇಂದ್ರ ಎನ್‌.ವಿ. ಅವರ ಸೀಮೆಸುಣ್ಣದ ಕಲಾಕೃತಿಗಳು ಈ ಮಾತಿಗೆ ಸಾಕ್ಷಿ.

ಹುಬ್ಬಳ್ಳಿ ಮೂಲದ ನಾಗೇಂದ್ರ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್‌ ಪದವೀದರರು. ಅಲ್ಲಿಯೇ ಕೆಲ ವರ್ಷ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ತರಗತಿ ಮುಗಿದ ಬಳಿಕ ಸ್ಟಾಫ್‌ ರೂಂನಲ್ಲಿ ಕುಳಿತು ಪೆನ್ಸಿಲ್ ಬಳಿಸಿ ಸೀಮೆಸುಣ್ಣದಿಂದ ಕಲಾಕೃತಿಗಳನ್ನು ರಚಿಸುತ್ತಿದ್ದರು. ಸಹೋದ್ಯೋಗಿಗಳ ಸಲಹೆ ಮತ್ತು ಪ್ರೋತ್ಸಾಹದಿಂದಾಗಿ ಅದನ್ನು ಹವ್ಯಾಸವಾಗಿ ರೂಢಿಸಿಕೊಂಡರು.

ನಾಗೇಂದ್ರ ಅವರಿಗೆ ಐದನೇ ವಯಸ್ಸಿನಲ್ಲಿಯೇ ಸೀಮೆಸುಣ್ಣ ಕಲೆಯ ಆಸಕ್ತಿ ಮೊಳೆಯಿತು. ಅದನ್ನು ವೃತ್ತಿಯಾಗಿ ಸ್ವೀಕರಿಸುವ ಅವಕಾಶ ಒದಗಿದ್ದು ಈಚೆಗೆ. ಮೆಚ್ಚಿನ ಪ್ರವೃತ್ತಿಯನ್ನು ವೃತ್ತಿಯಾಗಿ ಸ್ವೀಕರಿಸುವ ಉದ್ದೇಶದಿಂದಲೇ ತಮ್ಮ ಪ್ರಾಧ್ಯಾಪಕ ವೃತ್ತಿಯನ್ನೇ ತ್ಯಜಿಸಿ ಸದ್ಯ ನಗರದ ಸಂಜಯನಗರದಲ್ಲಿ ನೆಲೆಸಿದ್ದಾರೆ. ಸೀಮೆಸುಣ್ಣ ಕಲಾಕೃತಿಗಳ ರಚನೆಯನ್ನು ಉದ್ಯೋಗವಾಗಿಯೂ ರೂಢಿಸಿಕೊಂಡಿದ್ದಾರೆ.

ಸೀಮೆಸುಣ್ಣದಿಂದ ಕಲಾಕೃತಿ ರಚಿಸುವುದು ಹೊಸ ಕಲೆ ಅಲ್ಲ. ಆದರೆ, 2 ಸೆಂ.ಮೀ. ಉದ್ದದ ಚಾಕ್‌‍ಪೀಸ್‌ ಮೇಲೆ ವ್ಯಕ್ತಿಯೊಬ್ಬನ ಮುಖಭಾವವನ್ನು ಮೂಡಿಸುವುದು ಸವಾಲೇ ಸರಿ. ನಾಗೇಂದ್ರ ಅವರೀಗ ಸೀಮೆಸುಣ್ಣದ ಕಲಾಕೃತಿ ರಚನೆಯನ್ನು ಹವ್ಯಾಸವಾಗಿ ಮಾತ್ರವಲ್ಲದೆ ವ್ಯವಹಾರವಾಗಿಯೂ ರೂಢಿಸಿಕೊಂಡಿದ್ದಾರೆ. ಹಾಗಂತ ಸುಲಭವಾಗಿ ಒಲಿಯುವ ಕಲೆ ಇದಲ್ಲ. ಹೆಚ್ಚೇನೂ ಕಚ್ಚಾವಸ್ತುಗಳನ್ನು ಬೇಡದ ಈ ಕಲೆಗೆ ಅಪಾರ ತಾಳ್ಮೆ, ಅಮೂಲ್ಯ ಸಮಯ ಬೇಕು. ಜೊತೆಗೆ ಅನೇಕ ವರ್ಷಗಳ ಅಭ್ಯಾಸವೂ ಅಗತ್ಯ. ಈ ಕಲೆಗೆ ಸೀಮೆಸುಣ್ಣ, ಉತ್ತಮ ಗುಣಮಟ್ಟದ ಪೆನ್ಸಿಲ್ ಸಾಕಾಗುತ್ತದೆ.

ನಾಗೇಂದ್ರ ಅವರು ಪ್ರಾರಂಭದ ದಿನಗಳಲ್ಲಿ ಸೀಮೆಸುಣ್ಣ ಬಳಸಿ ಪೆನ್ಸಿಲ್‌ನಿಂದ ಕಲಾಕೃತಿ ರಚಿಸಿ ಆಪ್ತವಲಯಕ್ಕೆ ನೀಡುತ್ತಿದ್ದರು. ಆದರೆ ಈ ಕಲಾಕೃತಿಗಳು ಅತಿ ಬೇಗ ಬಣ್ಣ ಮಾಸುತ್ತವೆ, ಹಾಳಾಗುತ್ತವೆ ಎನ್ನುವ ದೂರುಗಳ ಸ್ನೇಹಿತರ ವಲಯದಲ್ಲಿ ಕೇಳಿಬಂತು. ಸೂಕ್ಷ್ಮವಾದ ಕಲೆಯಿಂದ ಮೂಡಿದ ಕಲಾಕೃತಿಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಸವಾಲಿನ ಕೆಲಸ. ಹಾಗಾಗಿಯೇ ನಂತರದ ದಿನಗಳಲ್ಲಿ ಸಿದ್ಧವಾದ ಕಲಾಕೃತಿಗೆ ಲ್ಯಾಮಿನೇಷನ್‌ ಮಾಡಿಸಿ, ಗಿಫ್ಟ್‌ ಗ್ಲಾಸ್‌ ಜಾರ್‌ಗಳಲ್ಲಿ ಹಾಕಿ ನೀಡುವುದನ್ನು ಅಭ್ಯಾಸ ಮಾಡಿಕೊಂಡರು. ಈ ಪಾರದರ್ಶಕ ಬಾಟಲ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಾರೆ. 100 ಬಾಟಲ್‌ಗಳಿಗೆ ₹3,000 ಬಲೆ ಇದೆ. ಒಂದು ಕಲಾಕೃತಿ ರಚನೆಗೆ ₹2000 ಖರ್ಚಾಗುತ್ತದೆ.

ಮೊದಲು ಪೆನ್ಸಿಲ್‌ ಬಳಸಿ ಕೆತ್ತಿ, ನಂತರ ಬಣ್ಣಗಳನ್ನು ತುಂಬಬಹುದು ಅಥವಾ ಬಣ್ಣದ ಸೀಮೆಸುಣ್ಣಗಳಿಂದಲೇ ಕಲಾಕೃತಿ ರಚಿಸಬಹುದು. ಆದರೆ ಅವಿರತ ಅಭ್ಯಾಸ ಇರದಿದ್ದರೆ ಮಧ್ಯದಲ್ಲಿಯೇ ಹಾಳಾಗುವ ಸಾಧ್ಯತೆ ಇರುತ್ತದೆ.


ನಾಗೇಂದ್ರ

ನಾಗೇಂದ್ರ ಅವರು ತಮ್ಮ ಕೈಚಳಕದಲ್ಲಿ ಬೆಕ್ಕು, ನಾಯಿ ಸೇರಿದಂತೆ ವಿವಿಧ ಪ್ರಾಣಿಗಳು, ಐಫೆಲ್ ಟವರ್‌, ದೇವರು, ವಿವಿಧ ವಿನ್ಯಾಸಗಳು ಹಾಗೂ ವ್ಯಕ್ತಿಗಳ ಮುಖಭಾವಗಳನ್ನು ಮೂಡಿಸಿದ್ದಾರೆ. ಇದರೊಂದಿಗೆ ಪೇಂಟಿಂಗ್‌ನಲ್ಲಿಯೂ ಆಸಕ್ತಿ ಹೊಂದಿರುವ ಇವರು ಅದನ್ನು ಜೊತೆಯಾಗಿಯೇ ರೂಢಿಸಿಕೊಂಡು ಹೋಗುತ್ತಿದ್ದಾರೆ.

‘ಸ್ಕೆಚಿಂಗ್ ಮೈಲೈಫ್‌’ ಎನ್ನುವ ಫೇಸ್‌ಬುಕ್ ಪುಟದ ಮೂಲಕ ಕಲಾಕೃತಿಗಳ ಮಾರಾಟವನ್ನೂ ಮಾಡುತ್ತಿದ್ದಾರೆ.

‘ಈ ಕಲೆ ಸಂಪೂರ್ಣವಾಗಿ ಪ್ರತಿಭೆಯನ್ನು ಆಧರಿಸಿದ ಕಾರಣ ತರಬೇತಿ ಶಿಬಿರ, ಕೋರ್ಸ್‌ ಅಥವಾ ಗುರುಗಳ ಮೂಲಕ ಕಲಿತುಕೊಳ್ಳಲು ಸಾಧ್ಯವಿಲ್ಲ. ಆಸಕ್ತಿ ಮತ್ತು ಸ್ವ ಅನುಭವವೇ ಕಲಿಕೆಗಿರುವ ಏಕೈಕ ಮಾರ್ಗ’ ಎನ್ನುವುದು ನಾಗೇಂದ್ರ ಅವರ ಅನುಭವದ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT