ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪರ–ವಿರುದ್ಧ ಪ್ರತಿಭಟನೆ: ಧ್ವಜಕ್ಕೆ ಬೆಂಕಿ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧವಾಗಿ ಮತ್ತು ಪರವಾಗಿ ಇಲ್ಲಿನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನೆ ವೇಳೆ ಕೆಲವು ಸಂಘಟನೆಗಳ ಸದಸ್ಯರು ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಹರಿದು ಸುಟ್ಟುಹಾಕಿದರು.

ಭಾರತದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಖಂಡಿಸುವ ಉದ್ದೇಶದಿಂದ ಕೆಲವು ಸಂಘಟನೆಗಳು ಪ್ರಧಾನಿ ಮೋದಿ ಎದುರು ತಮ್ಮ ಪ್ರತಿಭಟನೆ ದಾಖಲಿಸಲು ಇಲ್ಲಿ ಸೇರಿದ್ದವು. ಪ್ರತ್ಯೇಕ ಖಲಿಸ್ತಾನಕ್ಕೆ ಒತ್ತಾಯಿಸಿ ಕೆಲವರು ಪ್ರತಿಭಟನೆ ನಡೆಸಿದರು. ಕಾಶ್ಮೀರ ಪ್ರತ್ಯೇಕತಾವಾದಿಗಳೂ ಪ್ರತಿಭಟನೆ ನಡೆಸಿದರು. ‘ಮೋದಿ ಉಗ್ರ’, ‘ಮೋದಿ ನಿಮ್ಮ ಕೈಗೆ ರಕ್ತ ಅಂಟಿಕೊಂಡಿದೆ, ಇಲ್ಲಿಂದ ಹೋಗಿ’ ಎಂದು ಈ ಸಂಘಟನೆಗಳ ಸದಸ್ಯರು ಘೋಷಣೆ ಕೂಗಿದರು.

ಇದೇ ವೇಳೆ ಪ್ರಧಾನಿ ಮೋದಿ ಪರವಾಗಿಯೂ ಕೆಲವರು ಮೆರವಣಿಗೆ ನಡೆಸಿದರು. ಮೋದಿ ಅವರ ಚಿತ್ರಗಳಿದ್ದ ಫಲಕಗಳನ್ನು ಹಿಡಿದಿದ್ದ ಅವರು, ‘ಪ್ರಧಾನಿಗೆ ಸ್ವಾಗತ’, ‘ಜೈ ಹಿಂದ್’ ಎಂದು ಘೋಷಣೆ ಕೂಗಿದರು.

ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಕಾಮನ್‌ವೆಲ್ತ್‌ ದೇಶಗಳ ಧ್ವಜಗಳನ್ನು ನೆಟ್ಟಿದ್ದ ಸ್ಥಳಕ್ಕೆ ನುಗ್ಗಿದ ಕೆಲವರು ಭಾರತದ ಧ್ವಜಸ್ತಂಭವನ್ನು ಉರುಳಿಸಿ, ತ್ರಿವರ್ಣ ಧ್ವಜವನ್ನು ಹರಿದು ಚಿಂದಿಮಾಡಿದರು. ಮತ್ತೂ ಕೆಲವರು ಅವನ್ನೆಲ್ಲಾ ಒಟ್ಟು ಮಾಡಿ ಬೆಂಕಿ ಹಚ್ಚಿದರು. ‘ಆದರೆ ಸ್ಥಳದಲ್ಲಿದ್ದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಧ್ವಜ ಹರಿಯುತ್ತಿದ್ದವರನ್ನು ತಡೆಯಲಿಲ್ಲ’ ಎಂದು ಕೆವಲರು ಆರೋಪಿಸಿದ್ದಾರೆ.

ಧ್ವಜ ಹರಿದವರು ಯಾವ ಸಂಘಟನೆಯವರು ಎಂಬುದು ಬಹಿರಂಗವಾಗಿಲ್ಲ. ಆದರೆ ಈಗಾಗಲೇ ಹೊಸ ಧ್ವಜವನ್ನು ಹಾಕಲಾಗಿದೆ ಎಂದು ಮೂಲಗಳು ಹೇಳಿವೆ.

‘ಭಾರತ್‌ ಕಿ ಬಾತ್‌’ನಲ್ಲಿ ನಿರ್ದಿಷ್ಟ ದಾಳಿಯ ಉಲ್ಲೇಖ
ಲಂಡನ್/ಇಸ್ಲಾಮಾಬಾದ್:
ಇಲ್ಲಿ ಬುಧವಾರ ನಡೆದ ‘ಭಾರತ್‌ ಕಿ ಬಾತ್‌, ಸಬ್‌ಕೆ ಸಾಥ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ನಿರ್ದಿಷ್ಟ ದಾಳಿ’ಯ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಪಾಕಿಸ್ತಾನವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘2016ರಲ್ಲಿ ಗಡಿ ನಿಯಂತ್ರಣಾ ರೇಖೆ ಬಳಿ ನಮ್ಮ ಸೈನಿಕರು ನಡೆಸಿದ ನಿರ್ದಿಷ್ಟ ದಾಳಿಯ ವಿಚಾರವನ್ನು ಭಾರತೀಯರಿಗೆ ತಿಳಿಸುವ ಮುನ್ನವೇ, ಆ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಬೇಕು ಎಂದು ನಾವು ನಿರ್ಧಿರಿಸಿದ್ದೆವು. ನಾವು ಅಂದು ಬೆಳಿಗ್ಗೆ 11 ಗಂಟೆಯಿಂದ ಅವರಿಗೆ ಫೋನ್‌ ಕರೆ ಮಾಡುತ್ತಲೇ ಇದ್ದೆವು. ಆದರೆ ಅವರು ಕರೆ ಸ್ವೀಕರಿಸಲು ಹೆದರಿದ್ದರು. ಅವರು ಕರೆ ಸ್ವೀಕರಿಸಿದಾಗ ಮಧ್ಯಾಹ್ನ 12 ದಾಟಿತ್ತು. ಪಾಕಿಸ್ತಾನಕ್ಕೆ ಮಾಹಿತಿ ನೀಡಿದ ನಂತರವಷ್ಟೇ ನಮ್ಮ ಮಾಧ್ಯಮಗಳಿಗೆ ಆ ವಿಚಾರವನ್ನು ಬಹಿರಂಗಪಡಿಸಿದೆವು’ ಎಂದು ಮೋದಿ ಹೇಳಿದ್ದರು.

‘ಸುಳ್ಳನ್ನು ಪದೇ ಪದೇ ಹೇಳುತ್ತಿ ದ್ದರೆ ಅದು ನಿಜವಾಗುವುದಿಲ್ಲ. ನಿರ್ದಿಷ್ಟ ದಾಳಿ ನಡೆದೇ ಇಲ್ಲ’ ಎಂದು ಪಾಕಿಸ್ತಾನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT