ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಬರ ನೀಗಲು ಭರದ ಕೆಲಸ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ರಾಜ್ಯಗಳ ಎಟಿಎಂಗಳಲ್ಲಿನ ನಗದು ಕೊರತೆ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಎಲ್ಲ ನಾಲ್ಕು ಮುದ್ರಣ ಘಟಕಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

₹70 ಸಾವಿರ ಕೋಟಿ ನಗದು ಕೊರತೆಯನ್ನು ಭರಿಸುವುದಕ್ಕಾಗಿ ಎಲ್ಲ ಮುದ್ರಣ ಘಟಕಗಳಲ್ಲಿಯೂ ₹500 ಮತ್ತು ₹200 ಮುಖಬೆಲೆ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಈ ಘಟಕಗಳಿಗೆ ವಿರಾಮವನ್ನೇ ನೀಡಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಈ ಮುದ್ರಣ ಘಟಕಗಳು ದಿನಕ್ಕೆ 18–19 ತಾಸು ಕೆಲಸ ಮಾಡುತ್ತವೆ. ಆದರೆ, ನೋಟು ಕೊರತೆ ಸಮಸ್ಯೆ ಎದುರಾದ ಬಳಿಕ ವಿರಾಮವೇ ಇಲ್ಲದೆ ಕೆಲಸ ಮಾಡುತ್ತಿವೆ.

ನೋಟು ರದ್ದತಿಯ ನಂತರದ ದಿನಗಳಲ್ಲಿ ಮಾತ್ರ ಮುದ್ರಣ ಯಂತ್ರಗಳು ಬಿಡುವಿಲ್ಲದೆ ಕೆಲಸ ಮಾಡಿದ್ದವು. ಆಗ ಸತತವಾಗಿ ₹2,000 ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡಲಾಗಿತ್ತು.

ಒಂದು ನೋಟು ಮುದ್ರಣದ ಪ್ರಕ್ರಿಯೆ ಪೂರ್ಣಗೊಳ್ಳಲು 15 ದಿನಗಳು ಬೇಕು. ಅಂದರೆ, ಈಗ ನೋಟು ಮುದ್ರಣ ಆರಂಭಿಸಿದರೆ 15 ದಿನದ ಬಳಿಕವಷ್ಟೇ ಅದು ಚಲಾವಣೆಗೆ ಬರುತ್ತದೆ. ಸಾಕಷ್ಟು ನೋಟುಗಳ ಸಂಗ್ರಹ ಇದೆ ಎಂದು ಆರ್‌ಬಿಐ ಮಂಗಳವಾರ ಹೇಳಿತ್ತು. ಹಾಗಿದ್ದರೂ ಮುದ್ರಣವನ್ನು ತ್ವರಿತಗೊಳಿಸಲಾಗಿದೆ. ₹200 ಮುಖಬೆಲೆಯ ನೋಟುಗಳ ಆಕಾರ ಸ್ವಲ್ಪ ಸಣ್ಣದಾಗಿರುವುದರಿಂದ ಈ ನೋಟುಗಳ ವಿತರಣೆ ಸಾಧ್ಯವಾಗುವಂತೆ ಎಟಿಎಂಗಳ ಮರು ಹೊಂದಾಣಿಕೆ ಕೆಲಸ ಪೂರ್ಣಗೊಂಡಿಲ್ಲ. ಅಲ್ಲದೆ, ಕಡಿಮೆ ಮುಖಬೆಲೆಯ ನೋಟುಗಳಿಂದಾಗಿ ಎಟಿಎಂಗಳು ಬೇಗ ಖಾಲಿಯಾಗುತ್ತಿವೆ. ಈ ಕಾರಣಗಳಿಂದ ನಗದು ಕೊರತೆ ಕಾಣಿಸಿಕೊಂಡಿದೆ ಎಂದು ಆರ್‌ಬಿಐ ತಿಳಿಸಿತ್ತು.

ಇಂದು ಸಮಸ್ಯೆ ಪರಿಹಾರ: ಎಸ್‌ಬಿಐ
ನಗದು ಕೊರತೆ ಎದುರಾಗಿರುವ ಪ್ರದೇಶಗಳಿಗೆ ನೋಟುಗಳ ಪೂರೈಕೆ ಮಾಡಲಾಗಿದೆ. ಹಾಗಾಗಿ ಶುಕ್ರವಾರದೊಳಗೆ ನಗದು ಕೊರತೆ ಪರಿಹಾರವಾಗಲಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ದೇಶದ ಕೆಲವು ಭಾಗಗಳಲ್ಲಿ ಮಾತ್ರ ನಗದು ಕೊರತೆ ಇದೆ. ತೆಲಂಗಾಣ ಮತ್ತು ಬಿಹಾರದಲ್ಲಿ ಹೆಚ್ಚು ಕೊರತೆ ಕಂಡು ಬಂದಿದೆ. ನೋಟುಗಳನ್ನು ಈಗಾಗಲೇ ಒದಗಿಸಲಾಗಿದೆ. ಅವು ಶುಕ್ರವಾರದೊಳಗೆ ಕೊರತೆ ಇರುವ ಪ್ರದೇಶ ತಲುಪಲಿವೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರತೆ: ಎಸ್‌ಬಿಐ ಸೇರಿ ಬೆಂಗಳೂರಿನ ವಿವಿಧ ಬ್ಯಾಂಕುಗಳಲ್ಲಿ ಗುರುವಾರವೂ ನಗದು ಕೊರತೆ ಮುಂದುವರಿದಿದೆ. ನಿತ್ಯದ ಅಗತ್ಯದ ಶೇ 25ರಷ್ಟು ನಗದು ಮಾತ್ರ ಪೂರೈಕೆ ಆಗುತ್ತಿದೆ. ₹40 ಲಕ್ಷ ಅಗತ್ಯ ಇರುವ ಶಾಖೆಗೆ ₹15 ಲಕ್ಷವಷ್ಟೇ ಪೂರೈಕೆ ಆಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿಒಎಸ್‌ ಯಂತ್ರ ಮೂಲಕ ₹2,000
ಪಿಒಎಸ್‌ ಯಂತ್ರಗಳ ಮೂಲಕ ಸಣ್ಣ ಪಟ್ಟಣಗಳಲ್ಲಿ ಜನರು ದಿನವೊಂದಕ್ಕೆ ₹2,000 ನಗದು ಪಡೆಯಬಹುದು. ಇದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಎಸ್‌ಬಿಐ ಹೇಳಿದೆ.

ಆರ್‌ಬಿಐ ನಿಯಮ ಪ್ರಕಾರ, 1 ಮತ್ತು 2ನೇ ಶ್ರೇಣಿಯ ನಗರಗಳಲ್ಲಿ ಪಿಒಎಸ್‌ ಯಂತ್ರಗಳ ಮೂಲಕ ₹1,000 ನಗದು ಪಡೆಯಬಹುದು. ಸಣ್ಣ ಪಟ್ಟಣಗಳಲ್ಲಿ ₹2,000 ಪಡೆಯಬಹುದು. ದೇಶದಾದ್ಯಂತ 4.78 ಲಕ್ಷ ಪಿಒಎಸ್‌ ಯಂತ್ರಗಳಿವೆ ಎಂದು ಎಸ್‌ಬಿಐ ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ನೀರಜ್‌ ವ್ಯಾಸ್‌ ತಿಳಿಸಿದ್ದಾರೆ.

ಈ ಯಂತ್ರಗಳಲ್ಲಿ ಯಾವುದೇ ಬ್ಯಾಂಕ್‌ನ ಡೆಬಿಟ್‌ ಕಾರ್ಡ್‌ ಬಳಸಬಹುದು.

ನಗದು ಲೆಕ್ಕಾಚಾರ

₹18.43 ಲಕ್ಷ ಕೋಟಿ – ಚಲಾವಣೆಯಲ್ಲಿರುವ ಒಟ್ಟು ನಗದು

₹6.70 ಲಕ್ಷ ಕೋಟಿ – ಚಲಾವಣೆಯಲ್ಲಿರುವ ನಗದಿನ ಪೈಕಿ ₹2,000 ನೋಟುಗಳ ಪಾಲು

35% – ಒಟ್ಟು ನಗದಿನಲ್ಲಿ ₹2,000 ನೋಟುಗಳ ಪ್ರಮಾಣ

₹17.97 ಲಕ್ಷ ಕೋಟಿ – ನೋಟು ರದ್ದತಿಗೆ ಮೊದಲು ಚಲಾವಣೆಯಲ್ಲಿದ್ದ ನಗದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT