ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಪ್ಪಟ್ಟಾದ ಸುವರ್ಣ ಸೌಧ ನಿರ್ಮಾಣ ವೆಚ್ಚ!

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಕಾ ನೀಲ ನಕಾಶೆ, ಸಮಗ್ರ ಯೋಜನೆ ಇಲ್ಲದೆ ಬೆಳಗಾವಿ ಸುವರ್ಣಸೌಧ ನಿರ್ಮಾಣ ಕೆಲಸಕ್ಕೆ ಕೈಹಾಕಿದ್ದರಿಂದ ಕಾಮಗಾರಿ ವೆಚ್ಚ ₹ 230 ಕೋಟಿಯಿಂದ ₹ 430.8 ಕೋಟಿಗೆ ಹೆಚ್ಚಿತು. .’

ಸುವರ್ಣಸೌಧದ ನಿರ್ಮಾಣ ವೆಚ್ಚ ಹೆಚ್ಚಳ ಕುರಿತು ವಿಚಾರಣೆ ನಡೆಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ನೀಡಿರುವ ವರದಿಯಲ್ಲಿ ಈ ಮಾಹಿತಿ ಇದೆ.

41 ಪುಟಗಳ ವರದಿ (ಅನುಬಂಧಗಳೂ ಸೇರಿ) ನೀಡಿರುವ ಅವರು, ಇಷ್ಟು ದೊಡ್ಡ ಯೋಜನೆ ಕೈಗೊಳ್ಳುವ ಪೂರ್ವದಲ್ಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದರೆ ವೆಚ್ಚ ಹೆಚ್ಚಳ ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕಟ್ಟಡ ಕಾಮಗಾರಿ ಆರಂಭವಾದಾಗಿನಿಂದ ಪೂರ್ಣಗೊಳ್ಳುವವರೆಗೂ ಅಂದಿನ ಸ್ಪೀಕರ್‌, ಸಭಾಪತಿ, ಮುಖ್ಯಮಂತ್ರಿ, ಜಿಲ್ಲಾ ಸಚಿವರು, ಲೋಕೋಪಯೋಗಿ ಸಚಿವರು, ಹಿರಿಯ ಅಧಿಕಾರಿಗಳ ಸಲಹೆ, ಸೂಚನೆ ಮೇಲೆ ಪದೇ ಪದೇ ವಿನ್ಯಾಸ ಹಾಗೂ ಯೋಜನೆಯನ್ನು ಮಾರ್ಪಾಡು ಮಾಡಲಾಯಿತು. ಇದು ವೆಚ್ಚ ಏರಿಕೆಗೆ ಕಾರಣವಾಯಿತು‘ ಎಂದಿದ್ದಾರೆ.

ವೆಚ್ಚ ಏರಿಕೆಗೆ ಯಾರನ್ನೂ ಅವರು ಹೊಣೆ ಮಾಡಿಲ್ಲ. ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದೂ ಖಚಿತಪಡಿಸಿದ್ದಾರೆ. ಆದರೆ, ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ವೇಳೆ, ಅವಸರದಲ್ಲಿ ಸಿದ್ಧಪಡಿಸಿದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಒಪ್ಪಿಗೆ  ಕೊಡಬಾರದು. ಸುವರ್ಣಸೌಧಕ್ಕೂ ರೇಖಾ ಅಂದಾಜಿನ ಮೇಲೆ ಒಪ್ಪಿಗೆ ಕೊಡಲಾಗಿತ್ತು. ಅಲ್ಲದೆ, ಪ್ರತಿ ಚದರ ಮೀಟರ್‌ ವೆಚ್ಚದ ಆಧಾರದಲ್ಲಿ ಕಟ್ಟಡ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಇದು ಸರಿಯಲ್ಲ ಎಂದು ಸೂಚ್ಯವಾಗಿ ಆಕ್ಷೇಪಿಸಿದ್ದಾರೆ.

ವಿಧಾನಸೌಧದ ಪ್ರತಿರೂಪದಂತಿರುವ ಸುವರ್ಣಸೌಧಕ್ಕೆ ₹230 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಿ 2009ರ ಜುಲೈನಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಯಿತು.‌ ಇದರಲ್ಲಿ 57,485 ಚದರ ಮೀಟರ್‌ ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ ಪ್ರತಿ ಚದರ ಮೀಟರ್‌ಗೆ ₹ 22,000 ದಂತೆ ₹ 196 ಕೋಟಿ, ಭೂಸ್ವಾಧೀನ ಪರಿಹಾರ ಮತ್ತು ರಸ್ತೆ ನಿರ್ಮಾಣದ ಖರ್ಚು ₹ 34 ಕೋಟಿ ಸೇರಿತ್ತು

2012ರ ಅಕ್ಟೋಬರ್‌ನಲ್ಲಿ ಕಟ್ಟಡ ಉದ್ಘಾಟನೆಯಾಯಿತು. ಆ ವೇಳೆಗೆ ವೆಚ್ಚದ ಮೊತ್ತ ₹430 ಕೋಟಿಗೆ ತಲುಪಿತ್ತು.‘ತಜ್ಞರು, ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮನ್ವಯ ಸಭೆಯನ್ನು ಆರಂಭದಲ್ಲೇ ನಡೆಸಿ, ಸಲಹೆಗಳನ್ನು ಪಡೆದಿದ್ದರೆ ಪದೇ ಪದೇ ಯೋಜನೆ ಬದಲಾವಣೆ ಆಗುವುದನ್ನು ತಪ್ಪಿಸಬಹುದಿತ್ತು’ ಎಂದೂ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆ ಸಭಾಂಗಣ, ಪರಿಷತ್‌ ಸಭಾಂಗಣ, ಸಚಿವ ಸಂಪುಟ ಸಭಾಂಗಣ, ಮಂತ್ರಿಗಳು, ಕಾರ್ಯದರ್ಶಿಗಳ ಕೊಠಡಿಗಳ ಒಳಾಲಂಕಾರ, ಪೀಠೋಪಕರಣ, ನೀರು ಪೂರೈಕೆ, ಲ್ಯಾಂಡ್‌ ಸ್ಕೇಪಿಂಗ್‌, ವಿಧಾನಸೌಧದ ಸುತ್ತಲೂ ಕಾಂಪೌಂಡ್‌ ನಿರ್ಮಾಣ, ವಿದ್ಯುತ್‌ ಕಾಮಗಾರಿಗಳನ್ನು ಮೂಲ ಅಂದಾಜು ಯೋಜನೆಯಲ್ಲಿ ಸೇರಿಸದಿದ್ದರಿಂದ ಈ ಉದ್ದೇಶಗಳಿಗೆ ಆನಂತರ ₹ 60 ಕೋಟಿಗೆ ಅನುಮೋದನೆ ನೀಡಲಾಯಿತು ಎಂದೂ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಮೂಲ ದರಗಳ ಮೇಲೆ ಪ್ರತಿಶತ 26.82ರಷ್ಟು ಹೆಚ್ಚು ದರ ಕೊಡುವ ಒಪ್ಪಂದವನ್ನು ಗುತ್ತಿಗೆದಾರರೊಂದಿಗೆ ಮಾಡಲಾಗಿತ್ತು. ಆನಂತರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೇರಿದ್ದ ಸಭೆಯಲ್ಲಿ ಅಂದಾಜು ಮೊತ್ತವನ್ನು ₹350 ಕೋಟಿಗೆ ಪರಿಷ್ಕರಿಸಿ, ಸಚಿವ ಸಂಪುಟಕ್ಕೆ ‍ಪ್ರಸ್ತಾವ ಕಳುಹಿಸಲಾಯಿತು. ಈ ಪರಿಷ್ಕರಣೆಗೆ ಕಾರಣಗಳನ್ನು ‍ಪಟ್ಟಿ ಮಾಡಲಾಯಿತು.

ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್‌. ಶಂಕರಮೂರ್ತಿ 2011ರಲ್ಲಿ ಸುವರ್ಣಸೌಧಕ್ಕೆ ಭೇಟಿ ನೀಡಿದ ವೇಳೆ ಕೆಲವು ಸೂಚನೆಗಳನ್ನು ನೀಡಿದ್ದರಿಂದ ಕಾಮಗಾರಿ ಅಂದಾಜನ್ನು ಮತ್ತೆ ‍₹370 ಕೋಟಿಗೆ ಪರಿಷ್ಕರಿಸಲಾಯಿತು. ಇವೆರಡೂ ಪ್ರಸ್ತಾವನೆಗಳಿಗೆ ಸರ್ಕಾರ ಅನುಮೋದನೆ ನೀಡಲಿಲ್ಲ. ಬದಲಿಗೆ ಇವನ್ನು ಗುಣ ನಿಯಂತ್ರಣ ಕಾರ್ಯಪಡೆಯ ಪರಿಶೀಲನೆಗೆ ಒಪ್ಪಿಸಿತ್ತು.

ಗುಣ ನಿಯಂತ್ರಣ ಕಾರ್ಯಪಡೆ ಅಂತಿಮವಾಗಿ ಸುವರ್ಣಸೌಧದ ಪರಿಷ್ಕೃತ ಅಂದಾಜನ್ನು ₹391 ಕೋಟಿಗೆ ನಿಗದಿಪಡಿಸಿತು. ಈ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ 2011ರ ಸೆಪ್ಟೆಂಬರ್‌ನಲ್ಲಿ ಅನುಮೋದನೆ ನೀಡಿತು. ಈ ಎಲ್ಲ ಅಂದಾಜುಗಳನ್ನು ಮೀರಿ ಅಂತಿಮವಾಗಿ ₹430.8 ಕೋಟಿ ವೆಚ್ಚವಾಗಿದೆ ಎಂದು ವರದಿ ಹೇಳಿದೆ.

ವಿಜಯ ಭಾಸ್ಕರ್‌ ವರದಿಯನ್ನು ಒಪ್ಪಿಕೊಂಡಿರುವ ಸಚಿವ ಸಂಪುಟ ಹೆಚ್ಚುವರಿ ಹಣ ಪಾವತಿಸಲೂ ಸಮ್ಮತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT