ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠೆಯ ಕ್ಷೇತ್ರದಲ್ಲಿ ನೀರಿಗೆ ಬರ

Last Updated 19 ಏಪ್ರಿಲ್ 2018, 19:31 IST
ಅಕ್ಷರ ಗಾತ್ರ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವುದರಿಂದ ಇಲ್ಲಿನ ವಿದ್ಯಮಾನಗಳು ರಾಜ್ಯದ ಗಮನ ಸೆಳೆಯುತ್ತಿವೆ. ಅರಮನೆ ನಗರಿಗೆ ಹೊಂದಿಕೊಂಡಂತೆ ಇರುವ ಕ್ಷೇತ್ರದಲ್ಲಿ ಕುಡಿಯುವ ನೀರಿನ ಬವಣೆ ಇನ್ನೂ ನೀಗದಿರುವುದು ಮತದಾರರಲ್ಲಿ ಅಸಮಾಧಾನದ ಅಲೆ ಎಬ್ಬಿಸಿದೆ.

ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟಿರುವ ಕ್ಷೇತ್ರ ಹಲವು ಸಮಸ್ಯೆಗಳ ಸೆರಗು ಹೊದ್ದು ಮಲಗಿದೆ. ರಿಂಗ್‌ ರಸ್ತೆಯ ಆಸುಪಾಸಿನ ಹಳ್ಳಿಗಳು ಹಾಗೂ ಹೊರವಲಯದ ಬಡಾವಣೆಗಳು ಸೇರಿದ್ದರಿಂದ ಸಮಸ್ಯೆಗಳ ಸ್ವರೂಪವೂ ಭಿನ್ನವಾಗಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಕಬಿನಿ ಜಲಾಶಯದ ನೀರು ಪೂರೈಕೆಯಾಗುತ್ತಿದ್ದರೆ, ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ರಾಮಗಳು ಈಗಲೂ ಕೊಳವೆ ಬಾವಿ ಅವಲಂಬಿಸಿವೆ.

ಹೂಟಗಳ್ಳಿ, ರಮಬಾಯಿನಗರ, ಶಂಕರಲಿಂಗೇಗೌಡ ಬಡಾವಣೆ ಆರ್‌.ಟಿ.ನಗರ, ಶ್ರೀರಾಂಪುರ, ಪರಸಯ್ಯನಹುಂಡಿ ಸೇರಿ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಈಗಲೂ ಸಮಸ್ಯೆ ಇದೆ. ನಗರಕ್ಕೆ ಅಂಟಿಕೊಂಡಂತೆ ಇರುವ ಹಲವು ಬಡಾವಣೆಗಳಿಗೆ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿಲ್ಲ. ಈ ಕುರಿತು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲೂ ಹಲವು ಬಾರಿ ಚರ್ಚೆ ನಡೆದಿದೆ. ಬಹುದಿನಗಳ ಈ ಸಮಸ್ಯೆಗೆ ಪರಿಹಾರ ಕಾಣದಿರುವ ಮುನ್ನವೇ ಚುನಾವಣೆ ಎದುರಾಗಿದೆ.

ಜಯಪುರ ಹಾಗೂ ಇಲವಾಲ ಹೋಬಳಿ ವ್ಯಾಪ್ತಿಯಲ್ಲಿಯೂ ನೀರಿಗೆ ತೊಂದರೆ ಇದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಯುತ್ತಿದೆ. ತಳ್ಳೂರು ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಂಡಿದ್ದರಿಂದ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ಬವಣೆ ಇಲ್ಲ. ಇನ್ನೂ ಎರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ನಿಧಾನಗತಿಯಲ್ಲಿ ನಡೆಯುತ್ತಿದೆ. ಕೆಆರ್‌ಎಸ್‌ ಜಲಾಶಯಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿಯೂ ಈ ಬವಣೆ ನೀಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ರಮ್ಮನಹಳ್ಳಿ, ಬೆಲವತ್ತ, ಶಾದನಹಳ್ಳಿ ಸೇರಿ ರಿಂಗ್‌ ರಸ್ತೆಯ ಹೊರಗಿರುವ ಗ್ರಾಮಗಳು ಬೆಳೆಯುತ್ತಿವೆ. ಸ್ವಚ್ಛನಗರಿ ಎಂಬ ಖ್ಯಾತಿ ಪಡೆದ ಮೈಸೂರಿನ ಹೊರವಲಯದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಚರಂಡಿ ನಿರ್ಮಾಣವಾಗದ ಪರಿಣಾಮ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಕ್ಷೇತ್ರ ವ್ಯಾಪ್ತಿಯ ರೈತರು ಹೊಸದೊಂದು ಬಿಕ್ಕಟ್ಟಿಗೆ ಸಿಲುಕಿದ್ದಾರೆ. ರಿಯಲ್‌ ಎಸ್ಟೇಟ್‌ ಏಜೆಂಟರು ತೋರಿಸಿದ ಹಣದ ಆಸೆಗೆ ಜಮೀನು ಕಳೆದುಕೊಂಡು ಪರದಾಡುತ್ತಿದ್ದಾರೆ. ಲಿಂಗಾಂಬುಧಿ, ಪರಸಯ್ಯನಹುಂಡಿ, ಗುರೂರು ಸೇರಿ ಹಲವು ಗ್ರಾಮಗಳ ರೈತರು ಜಮೀನು ಮಾರಾಟ ಮಾಡಿದ್ದಾರೆ. ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಕೂಲಿ ಅರಸಿಕೊಂಡು ನಗರದತ್ತ ಮುಖ ಮಾಡುತ್ತಿದ್ದಾರೆ. ಭೂಮಿ ಕಳೆದುಕೊಂಡ ರೈತರು ಹಾಗೂ ಅವರ ಮಕ್ಕಳಿಗೆ ಉದ್ಯೋಗ ಒದಗಿಸಬೇಕು ಎಂಬ ಕೂಗು ಹಲವೆಡೆ ಕೇಳಿಬರುತ್ತಿದೆ.

ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಗುಂಡಿಬಿದ್ದ ರಸ್ತೆಗಳು, ಹೂಳು ತುಂಬಿದ ಚರಂಡಿಗಳು ಕಾಣುತ್ತವೆ. ಚುನಾವಣೆ ಘೋಷಣೆಯಾಗುವುದಕ್ಕೂ ಕೆಲ ತಿಂಗಳ ಮುಂಚೆ ಆರಂಭವಾದ ಬಹುತೇಕ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.

ಕ್ಷೇತ್ರದಲ್ಲಿ ಉಳಿದು ಕೆಲಸ ಮಾಡಿದ್ದೇನೆ
ಐದು ವರ್ಷವೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಉಳಿದು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಉಳಿದ ಶಾಸಕರಂತೆ ಒಮ್ಮೆಯೂ ದೇಶ ಹಾಗೂ ವಿದೇಶ ಪ್ರವಾಸಕ್ಕೆ ತೆರಳಿಲ್ಲ. ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರ ನೀಡಿದ ಸುಮಾರು ₹ 350 ಕೋಟಿಯನ್ನು ಸಮರ್ಪಕವಾಗಿ ಬಳಕೆ ಮಾಡಿದ ತೃಪ್ತಿ ಇದೆ. ರಸ್ತೆ, ಚರಂಡಿ ನಿರ್ಮಾಣ, ಸ್ವಚ್ಛತೆಗೆ ಆದ್ಯತೆ ನೀಡಿದ್ದೇನೆ. ಕೆಆರ್‌ಎಸ್‌ ಜಲಾಶಯದಿಂದ ನೀರು ಪೂರೈಕೆ ಮಾಡುವ ಉಂಡವಾಡಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಲಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ನೀರಿಗೆ ಸಮಸ್ಯೆ ಇದೆ. ರಮಾಬಾಯಿನಗರ, ಜಟ್ಟಿಹುಂಡಿ ಸೇರಿ ಹಲವೆಡೆ ಕೊಳವೆ ಬಾವಿ ಕೊರೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ.

ಜಿ.ಟಿ.ದೇವೇಗೌಡ, ಶಾಸಕ ಜೆಡಿಎಸ್‌ ಅಭ್ಯರ್ಥಿ

ವಿಶೇಷ ಒತ್ತು ನೀಡಿದ್ದೇನೆ
ರಾಜಕೀಯ ಜೀವನಕ್ಕೆ ಆಶ್ರಯ ನೀಡಿದ ಕ್ಷೇತ್ರ ಚಾಮುಂಡೇಶ್ವರಿ. ಮುಖ್ಯಮಂತ್ರಿಯಾದ ಬಳಿಕ ಇಲ್ಲಿಗೆ ವಿಶೇಷ ಒತ್ತು ಕೊಟ್ಟಿದ್ದೇನೆ. ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದ್ದೇನೆ. ಹೆಚ್ಚುವರಿ ಅನುದಾನ ನೀಡಿ ಕುಡಿಯುವ ನೀರಿನ ಸೌಲಭ್ಯ, ರಸ್ತೆ, ಚರಂಡಿ ವ್ಯವಸ್ಥೆಗೆ ಅನುವು ಮಾಡಿಕೊಟ್ಟಿದ್ದೇನೆ. ಆದರೆ, ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ. ಕ್ಷೇತ್ರದ ಶಾಸಕರು ಅಭಿವೃದ್ಧಿಯ ಕುರಿತು ಕಾಳಜಿ ತೋರಿಲ್ಲ. ನನ್ನನ್ನು ಒಮ್ಮೆಯೂ ಭೇಟಿ ಮಾಡಿ ಚರ್ಚೆ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿಯ ಕುರಿತು ಅಧಿವೇಶನದಲ್ಲಿ ಒಮ್ಮೆಯೂ ಮಾತನಾಡಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಅಭ್ಯರ್ಥಿ

ಕಾಲೇಜು ಸ್ಥಾಪಿಸಿ

ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವೆ. ಬಹುತೇಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯ ಬಳಿಕ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಕಾಲೇಜು ಮೆಟ್ಟಿಲು ತುಳಿಯಲು ಮೈಸೂರಿಗೆ ಹೋಗುವುದು ಅನಿವಾರ್ಯವಾಗಿದೆ. ಹೆಣ್ಣುಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದ ಸಮೀಪ ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜು ಸ್ಥಾಪಿಸಿದರೆ ಹೆಣ್ಣುಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುತ್ತದೆ.

ಮೂರ್ತಿ, ಮಾರ್ಬಳ್ಳಿ

ಆಸ್ಪತ್ರೆ ಇದೆ, ವೈದ್ಯರಿಲ್ಲ

ಜಯಪುರದಲ್ಲಿ ದೊಡ್ಡದೊಂದು ಆಸ್ಪತ್ರೆ ನಿರ್ಮಿಸಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಎಲ್ಲ ನೌಕರರು ಮೈಸೂರಿನಲ್ಲಿ ವಾಸವಾಗಿದ್ದಾರೆ. ಸಂಜೆ 5ರ ಬಳಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಲಭ್ಯವಾಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಸುತ್ತಲಿನ ಗ್ರಾಮಸ್ಥರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಮಹೇಶ್‌, ಟಿ.ಕಾಟೂರು

ಜಾನುವಾರುಗಳಿಗೆ ಮೇವು ಇಲ್ಲ

ಕೃಷಿ ಭೂಮಿ ಬಡಾವಣೆಗಳಾಗಿ ಪರಿವರ್ತನೆ ಹೊಂದಿವೆ. ಬರಗಾಲ ಘೋಷಣೆಯಾಗಿದ್ದರಿಂದ ಕಳೆದ ವರ್ಷ ಉಚಿತವಾಗಿ ಮೇವು ವಿತರಣೆ ಮಾಡಲಾಗಿತ್ತು. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಬಹುತೇಕ ಕುಟುಂಬಗಳು ಇದರಿಂದ ತೊಂದರೆ ಅನುಭವಿಸುತ್ತಿವೆ. ಹಸು, ಕುರಿ, ಮೇಕೆ ಸಾಕಾಣಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಮಹಿಳೆಯರು ಸಮಸ್ಯೆಗೆ ಸಿಲುಕಿದ್ದೇವೆ.

ಗೌರಮ್ಮ, ಪರಸಯ್ಯನಹುಂಡಿ

ಉದ್ಯೋಗ ನೀಡಿ

ಮೈಸೂರು ಬೆಳೆದಂತೆ ಬಹುತೇಕರ ಊರುಗಳು ನಗರ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಜಮೀನು ಬಡಾವಣೆಗಳಾಗಿ ಪರಿವರ್ತನೆ ಹೊಂದುತ್ತಿದ್ದು, ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಹತ್ತು ಎಕರೆ ಭೂಮಿಯ ಒಡೆಯರಾಗಿದ್ದವರೂ ಕೂಲಿ ಅರಸಿ ನಗರಕ್ಕೆ ಹೋಗುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರೂ ಕೆಲಸ ಸಿಗುತ್ತಿಲ್ಲ. ಮಾನಸಗಂಗೋತ್ರಿಯಲ್ಲಿ ಓದಿದವರೂ ನಿರುದ್ಯೋಗಿಗಳಾಗಿದ್ದಾರೆ. ಇಂತಹ ವಿದ್ಯಾವಂತರಿಗೆ ಉದ್ಯೋಗ ನೀಡಿ.

ತಮ್ಮಯ್ಯ, ಕೋಟೆ ಹುಂಡಿ

ಕುಡಿಯುವ ನೀರಿಗೆ ಸಮಸ್ಯೆ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ, ಚರಂಡಿ ಕಾಮಗಾರಿಗಳು ಈಗಷ್ಟೇ ಪೂರ್ಣಗೊಂಡಿವೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಎರಡು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಅರ್ಧಗಂಟೆ ಮಾತ್ರ ಬರುವ ನೀರು ಕುಟುಂಬಕ್ಕೆ ಸಾಕಾಗುವುದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೆ, ಇದು ಈವರೆಗೂ ಜಾರಿಯಾಗಿಲ್ಲ.

ಶಂಕರ್, ಕೋಟೆಹುಂಡಿ

ಈಗಷ್ಟೇ ಡಾಂಬರು ಬಂದಿದೆ

ಗ್ರಾಮದ ರಸ್ತೆಗಳನ್ನು ಸರಿಪಡಿಸುವಂತೆ ಹಲವು ಬಾರಿ ಕೋರಿಕೊಂಡರೂ ಸ್ಪಂದಿಸಿರಲಿಲ್ಲ. ಚುನಾವಣೆ ಸಮೀಪಿಸಿದಂತೆ ಒಂದೊಂದೇ ಕಾಮಗಾರಿ ಆರಂಭವಾಗಿವೆ. ಕಾಂಕ್ರೀಟ್‌ ರಸ್ತೆ, ಡಾಂಬರು ರಸ್ತೆ ನಿರ್ಮಾಣ ಕಾಮಗಾರಿ ಕೆಲದಿನಗಳ ಹಿಂದೆ ಶುರುವಾಗಿದೆ. ಶಾಸಕ ಜಿ.ಟಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಾಚನೆಗೆ ಊರಿಗೆ ಬರುತ್ತಿದ್ದಾರೆ. ಇಬ್ಬರಿಗೂ ಗ್ರಾಮದ ಅಹವಾಲು ಸಲ್ಲಿಸಿದ್ದೇವೆ.

ಪ್ರಕಾಶ್‌, ಕಳವಾಡಿ

ಮೂಲಸೌಲಭ್ಯ ಚೆನ್ನಾಗಿದೆ

ಸಿದ್ದರಾಮಯ್ಯ ಅವರು ಸುಮಾರು 25 ವರ್ಷ ಚಾಮುಂಡೇಶ್ವರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ನಮ್ಮ ಸಮಕಾಲೀನರೂ ಆಗಿರುವ ಮುಖ್ಯಮಂತ್ರಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದರು. ಎರಡು ದಶಕಗಳಿಂದ ಮರೀಚಿಕೆಯಾಗಿದ್ದ ಮೂಲಸೌಲಭ್ಯ ಐದು ವರ್ಷಗಳಿಂದ ಈಚೆಗೆ ಸಿಕ್ಕಿದೆ. ಕಬಿನಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನೀರನ ಬವಣೆ ಬಹುತೇಕ ನೀಗಿದೆ. ರಸ್ತೆ, ಚರಂಡಿ ನಿರ್ಮಾಣವಾಗಿವೆ

ವೆಂಕಟಯ್ಯ, ಕೋಟೆ ಹುಂಡಿ ಗೇಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT