ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲೆ ವರಿಸಿದವನಿಗೆ 10 ವರ್ಷ ಶಿಕ್ಷೆ!

Last Updated 19 ಏಪ್ರಿಲ್ 2018, 20:09 IST
ಅಕ್ಷರ ಗಾತ್ರ

ಬೆಂಗಳೂರು: ಹದಿನಾಲ್ಕು ವರ್ಷದ ಬಾಲಕಿಯನ್ನು ಮದುವೆಯಾಗಿದ್ದವನಿಗೆ ಇಲ್ಲಿನ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ತಂಗಿಯನ್ನು ಮದುವೆ ಮಾಡಿಕೊಟ್ಟಿದ್ದನ್ನು ವಿರೋಧಿಸಿ ಅಣ್ಣ ತನ್ನ ತಂದೆ– ತಾಯಿ ಹಾಗೂ ಸಂಬಂಧಿಕರ ವಿರುದ್ಧವೇ ದೂರು ನೀಡಿದ್ದ.

ಬಾಲಕ ನೀಡಿದ್ದ ದೂರು ಆಧರಿಸಿ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ’ ಹಾಗೂ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ’ ಅಡಿ ಮೈಕೊ ಲೇಔಟ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ 55ನೇ ಸಿಟಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ವನಮಾಲಾ ಯಾದವ್‌, ಇಬ್ಬರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ.

ಅಪ್ರಾಪ್ತೆಯನ್ನು ಮದುವೆಯಾಗಿ ಅತ್ಯಾಚಾರ ಎಸಗಿದ್ದ ಅಪರಾಧಿ ಸೈಯದ್ ಮುಜ್ಜಾಮಿಲ್‌ (24) ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಬಾಲ್ಯ ವಿವಾಹಕ್ಕೆ ಸಹಕರಿಸಿದ್ದ ಅಪರಾಧಿ ಅಪ್ರುಶ್ ಪಾಷಾನಿಗೆ 40 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಸ್‌.ಎನ್‌.ಹಿರೇಮನಿ ವಾದಿಸಿದ್ದರು.

ಪ್ರಕರಣದ ವಿವರ: ಕೂಲಿ ಕಾರ್ಮಿಕರಾಗಿದ್ದ ದಂಪತಿಯು ತಮ್ಮ ಮಗಳಿಗೆ 14 ವರ್ಷವಾಗಿದ್ದನ್ನು ಮುಚ್ಚಿಟ್ಟು, 18 ವರ್ಷವಾಗಿರುವುದಾಗಿ ಮೌಲ್ವಿ ಅವರಿಗೆ ಸುಳ್ಳು ಹೇಳಿ ಸೈಯದ್‌ನಿಗೆ 2014ರ ಆಗಸ್ಟ್‌ 24ರಂದು ಮದುವೆ ಮಾಡಿಕೊಟ್ಟಿದ್ದರು. ತಾನು ಮದುವೆ ಮಾಡಿಕೊಳ್ಳುತ್ತಿರುವುದು ಅಪ್ರಾಪ್ತೆ ಎಂಬುದು ಸೈಯದ್‌ಗೂ ಗೊತ್ತಿತ್ತು. ಆ ವಿಷಯವನ್ನು ಆತ ಮೌಲ್ವಿ ಅವರಿಗೂ ಹೇಳಿರಲಿಲ್ಲ. ಮದುವೆಯಾದ ದಿನವೇ ಸಂಜೆ ಬಾಲಕಿಯನ್ನು ಗಂಡನ ಮನೆಗೆ ಕಳುಹಿಸಲಾಗಿತ್ತು. ಅಂದು ರಾತ್ರಿ ಆಕೆಯ ಮೇಲೆ ಆರೋಪಿಯು ಅತ್ಯಾಚಾರ ಎಸಗಿದ್ದ ಎಂದು ಹಿರೇಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮರುದಿನ ಅತ್ಯಾಚಾರದ ವಿಷಯ ಅಣ್ಣನಿಗೆ ಗೊತ್ತಾಗಿತ್ತು. ಜತೆಗೆ, ಸೈಯದ್‌ನಿಗೆ ಈ ಹಿಂದೆಯೇ ಮದುವೆಯಾಗಿತ್ತು. ಪತ್ನಿ ಆತನನ್ನು ಬಿಟ್ಟು ಹೋಗಿದ್ದಳು ಎಂಬುದು ಸಹ ತಿಳಿಯಿತು. ಆಗ ತಂದೆ–ತಾಯಿ ಜತೆ ಜಗಳ ಮಾಡಿದ್ದ ಬಾಲಕ, ‘ಪತ್ನಿ ಬಿಟ್ಟುಹೋದವನ ಜತೆ ನನ್ನ ತಂಗಿಯ ಮದುವೆ ಮಾಡಿಸಿ, ಆಕೆಯ ಜೀವನವನ್ನು ನೀವು ಹಾಳು ಮಾಡಿದ್ದಿರಾ. ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ’ ಎಂದು ಹೇಳಿದ್ದ.

ನಂತರ, ಆತನೇ ಮೈಕೊ ಲೇಔಟ್‌ ಠಾಣೆಗೆ ಬಂದು ದೂರು ಕೊಟ್ಟಿದ್ದ. ಅದರನ್ವಯ ತಂದೆ–ತಾಯಿ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, ಸೈಯದ್‌ ಹಾಗೂ ಅಪ್ರುಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು ಎಂದರು.

10 ಆರೋಪಿಗಳು ನಾಪತ್ತೆ: ದೂರು ದಾಖಲಾಗುತ್ತಿದ್ದಂತೆ 10 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇದುವರೆಗೂ ಅವರು ಪತ್ತೆಯಾಗಿಲ್ಲ ಎಂದು ಹಿರೇಮನಿ ಹೇಳಿದರು.

‘ಸದ್ಯ ಇಬ್ಬರ ಮೇಲಿನ ಆರೋಪಗಳು ಸಾಬೀತಾಗಿದ್ದು, ಶಿಕ್ಷೆಯೂ ಆಗಿದೆ. ನಾಪತ್ತೆಯಾಗಿರುವ ಉಳಿದ ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಆ ಆರೋಪಿಗಳು ಸಿಕ್ಕ ಬಳಿಕ ಪೊಲೀಸರು ಪ್ರತ್ಯೇಕವಾಗಿ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ಆ ಬಗ್ಗೆ ಪ್ರತ್ಯೇಕವಾಗಿಯೇ ವಿಚಾರಣೆ ನಡೆಯಲಿದೆ’ ಎಂದರು.

ಅಣ್ಣ– ತಂಗಿಯೂ ನಾಪತ್ತೆ
‘ಆರೋಪಿಗಳ ಬಂಧನವಾಗುತ್ತಿದ್ದಂತೆ ಅಣ್ಣ ಹಾಗೂ ತಂಗಿ ಸಹ ನಾಪತ್ತೆಯಾಗಿದ್ದಾರೆ. ಸಾಕ್ಷಿ ವಿಚಾರಣೆ ವೇಳೆ ಅವರು ಹಾಜರಾಗಿರಲಿಲ್ಲ’ ಎಂದು ಹಿರೇಮನಿ ಹೇಳಿದರು.

‘2015ರಿಂದಲೇ ಅಣ್ಣ–ತಂಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಮಾಜದ ಕೆಲವರು, ಅಣ್ಣನಿಗೆ ಬೆದರಿಕೆ ಹಾಕಿ ಕುಟುಂಬ ಸಮೇತ ಊರು ಬಿಡಿಸಿದ್ದಾರೆ ಎಂಬ ಮಾಹಿತಿ ಇದೆ. ಕಾನೂನು ಉಲ್ಲಂಘಿಸಿದ್ದ ಪೋಷಕರು,ಸಂಬಂಧಿಕರ ವಿರುದ್ಧವೇ ದೂರು ನೀಡಿದ್ದ ಆ ಬಾಲಕನ ಕೆಲಸವನ್ನು ಮೆಚ್ಚಲೇ ಬೇಕು. ಶಿಕ್ಷೆಯಾಗಿದ್ದನ್ನು ಆತನಿಗೆ ತಿಳಿಸಬೇಕಿದೆ. ಹೀಗಾಗಿ ಅವರಿಬ್ಬರನ್ನು ತ್ವರಿತವಾಗಿ ಹುಡುಕುವಂತೆ ಪೊಲೀಸರಿಗೆ ಹೇಳಲಾಗಿದೆ’ ಎಂದರು.

‘ಬಾಲಕಿಯ ಆರೋಗ್ಯ ಪರೀಕ್ಷೆ ಮಾಡಿದ್ದ ವೈದ್ಯರು ಹಾಗೂ ಮದುವೆ ಮಾಡಿಸಿದ್ದ ಜನರ ಹೇಳಿಕೆಗಳನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿ ನ್ಯಾಯಾಲಯವು ಈ ಮಹತ್ವದ ಆದೇಶ ನೀಡಿದೆ. ಅಪ್ರಾಪ್ತೆಯನ್ನು ಮದುವೆ ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ಈ ಆದೇಶ ತೋರಿಸಿಕೊಟ್ಟಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT