ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧೆ

ರಾಜ್ಯದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ: ಹಕಾರೆ
Last Updated 20 ಏಪ್ರಿಲ್ 2018, 4:57 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಪಕ್ಷದಿಂದ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಳಿಸಲಾಗುವುದು. ಈಗಾಗಲೇ ಬಾಗಲಕೋಟೆ ಮತ್ತು ಜಮಖಂಡಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ’ ಎಂದು ಶಿವಸೇನೆ ಪಕ್ಷದ ಮುಖಂಡ ಕುಮಾರ ಹಕಾರೆ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏ.21 ರಂದು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಬಾಗಲಕೋಟೆ ಕ್ಷೇತ್ರಕ್ಕೆ ಡಾ.ಬಾಬುರಾಜೇಂದ್ರ ನಾಯಕ ಹಾಗೂ ಜಮಖಂಡಿ ಕ್ಷೇತ್ರಕ್ಕೆ ವಾಸುದೇವ ಪಾರಸ್ ಅವರುಗಳು ಸ್ಪರ್ಧಿಸಲಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕನಿಷ್ಠ ಎರಡು ಕಡೆ ಶಿವಸೇನೆ ಅಭರ್ಥಿಗಳು ಗೆಲವು ಸಾಧಿಸಲಿದ್ದಾರೆ. ರಾಜ್ಯದ ವಿಧಾನಸಭೆಯಲ್ಲಿ ಶಿವಸೇನೆಯ ಕೇಸರಿ ಧ್ವಜ ಹಾರಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಬೆಳಗಾವಿ ಅಷ್ಟೇ ಅಲ್ಲ ರಾಜ್ಯದ ಒಂದಿಂಚು ಜಾಗವನ್ನು ಸಹ ನಾವು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಈ ಕುರಿತು ಶಿವಸೇನೆ ನಾಯಕರಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದರು.

ಡಾ.ಬಾಬುರಾಜೇಂದ್ರ ನಾಯಕ ಮಾತನಾಡಿ, ‘ಬಾಗಲಕೋಟೆ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಆಡಳಿತ ನಡೆಸಿದವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಮುಳುಗಡೆ ಸಂತ್ರಸ್ತರಿಗೆ ನಿವೇಶನ ಮತ್ತು ಹಕ್ಕುಪತ್ರಗಳನ್ನು ನೀಡಿಲ್ಲ. ಅಭಿವೃದ್ಧಿ ಮಾಡಿದ್ದೇನೆ ಎಂದು ಸುಮ್ಮನೆ ತಮ್ಮ ಬೆನ್ನು ತಾವು ಚಪ್ಪರಿಸಿಕೊಳ್ಳುವ ಇಂತಹ ರಾಜಕಾರಣಿಗಳಿಗೆ ಮತದಾರರು ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು’ ಎಂದು ಹೇಳಿದರು.

‘ಇಲ್ಲಿನ ರಾಜಕೀಯ ಪಕ್ಷದ ಮುಖಂಡರಿಗೆ ಕ್ಷೇತ್ರದ ಅಭಿವೃದ್ಧಿ ಬೇಕಿಲ್ಲ, ರಾಜಕೀಯ ಮಾಡುವುದರಲ್ಲಿಯೇ ಅವರಿಗೆ ಹೆಚ್ಚಿನ ಆಸಕ್ತಿ. ಆದರೆ, ನನಗೆ ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’ ಎಂದರು.

‘ಕ್ಷೇತ್ರದ ಪ್ರಜ್ಞಾವಂತ ಮತದಾರರು ರಾಜಕೀಯ ನಾಯಕರ ಯಾವುದೇ ರೀತಿಯ ಆಮಿಷಕ್ಕೆ ಬಲಿಯಾಗದೆ ಒಳ್ಳೆಯವರಿಗೆ ಮತದಾನ ಮಾಡಿ, ಪ್ರಾಮಾಣಿಕ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡುವವರನ್ನು ಆಯ್ಕೆ ಮಾಡಬೇಕು. ಸರಿಯಾಗಿ ಯೋಚಿಸಿ ಮತ ಹಾಕಿ’ ಎಂದರು.

‘ಏ.21 ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ನಾಲ್ಕು ಬೃಹತ್ ರ್‍ಯಾಲಿಗಳನ್ನು ಮಾಡಲು ನಿರ್ಧರಿಸಲಾಗಿದೆ. ಬಾಗಲಕೋಟೆ, ಜಮಖಂಡಿ, ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ಜರುಗುವ ನಾಲ್ಕು ರ್‍ಯಾಲಿಗಳಲ್ಲಿ ಡಾ.ಪ್ರವೀಣಭಾಯಿ ತೊಗಾಡಿಯಾ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಅವರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಸುದೇವ ಪಾರಸ್, ಆನಂದ ಜಂಬಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT