ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಇ.ಎಸ್‌ಗೆ ಮತದಾರರು ಬುದ್ಧಿ ಕಲಿಸಲಿದ್ದಾರೆ

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ
Last Updated 20 ಏಪ್ರಿಲ್ 2018, 4:59 IST
ಅಕ್ಷರ ಗಾತ್ರ

ಖಾನಾಪುರ: ‘ಆರು ದಶಕಗಳಿಂದ ಕ್ಷೇತ್ರದ ಮತದಾರರಲ್ಲಿ ಭಾಷಾ ವೈಷಮ್ಯವನ್ನು ಬಿತ್ತಿ ವೈಯಕ್ತಿಕ ಸ್ವಾರ್ಥಕ್ಕಾಗಿ ಅಮಾಯಕರಿಗೆ ಮೋಸ ಮಾಡಿ ಅಧಿಕಾರ ಅನುಭವಿಸುತ್ತಿರುವ ಎಂ.ಇ.ಎಸ್ ಗೆ ಈಗ ನಡೆಯುವ ಚುನಾವಣೆಯಲ್ಲಿ ಮತದಾರರು ತಕ್ಕ ಬುದ್ಧಿ ಕಲಿಸಲಿದ್ದಾರೆ’ ಎಂದು ಶಾಸಕ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲೇ ಅತೀ ಹೆಚ್ಚು ಅರಣ್ಯ ಪ್ರದೇಶ, ಸಮೃದ್ಧ ನದಿಗಳು, ಬೆಟ್ಟಗುಡ್ಡಗಳು, ದಟ್ಟ ಕಾಡು ಮತ್ತು ಅಪರೂಪದ ವನ್ಯಜೀವಿಗಳನ್ನು ಒಳಗೊಂಡ ಖಾನಾಪುರ ಅಭಿವೃದ್ಧಿಯಲ್ಲಿ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿದೆ. ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಲ್ಲ ಎಂ.ಇ.ಎಸ್ ಶಾಸಕರು ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದರಿಂದ ಇಂದಿಗೂ ಭಾಷಾ ವಿವಾದದಿಂದ ನರಳುತ್ತಿರುವುದು ವಿಪರ್ಯಾಸ’ ಎಂದರು.

ಅಧಿಕಾರ ಅನುಭವಿಸಲು ಎಂಇಎಸ್‌ನವರು ಕ್ಷೇತ್ರದ ಮತದಾರರಿಗೆ ಯಾವ ರೀತಿ ಮೋಸ ಮಾಡುತ್ತಿದ್ದಾರೆ ಎಂಬುದನ್ನು ಪಕ್ಷದ ಕಾರ್ಯಕರ್ತರು ತಿಳಿಸಬೇಕು ಮತ್ತು ಕಾಂಗ್ರೆಸ್ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ತಿಳಿಹೇಳಬೇಕು ಎಂದರು. ಪಕ್ಷದ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ವೀರಕುಮಾರ ಪಾಟೀಲ, ‘ಇದುವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಹೇಳಿಕೊಳ್ಳುವ ಸಾಧನೆ ಮಾಡದಿರುವುದು ಬೇಸರದ ಸಂಗತಿ. ಮುಂದಿನ ಚುನಾವಣೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಕ್ಷೇತ್ರದಲ್ಲಿ ಕಾಂಗ್ರೆಸ್ ದಾಖಲೆಯ ಜಯ ಗಳಿಸುವಂತೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.ತಾಲ್ಲೂಕಿನ ವಿವಿಧ ಗ್ರಾಮಗಳ ಜೆಡಿಎಸ್, ಎಂಇಎಸ್, ಬಿಜೆಪಿ ಪಕ್ಷಗಳ ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪ್ರವೇಶಿಸಿದರು.

ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಾ.ಅಂಜಲಿ ನಿಂಬಾಳಕರ ಹೊಸದಾಗಿ ಸೇರ್ಪಡೆ
ಗೊಂಡವರನ್ನು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.ಸಭೆಯಲ್ಲಿ ಲಕ್ಷ್ಮಣರಾವ್ ಚಿಂಗಳೆ, ಗೌಸಲಾಲ್ ಪಟೇಲ, ಎನ್.ಐ. ಕೊಡೊಳಿ, ಮಲ್ಲೇಶಿ ಪೋಳ, ಚಂಬಣ್ಣ ಹೊಸಮನಿ, ಮಹಾದೇವ ಕೋಳಿ, ರಾಮಚಂದ್ರ ಪಾಟೀಲ, ಭಾರತಿ ಪಾಟೀಲ, ಶಫಿ ಖಾಜಿ ಇದ್ದರು. ದೇಮಣ್ಣ ಬಸರಿಕಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT