ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಶ್ಚೇತನಕ್ಕೆ ನಿಷ್ಕಾಳಜಿ, ‘ಯೋಜನೆ’ಗೆ ಒಲವು

ಬರಪೀಡಿತ ಜಿಲ್ಲೆಯ ಜಲಮೂಲ ರಕ್ಷಣೆಗೆ ಜನಪ್ರತಿನಿಧಿಗಳ ಅಸಡ್ಡೆ; 5 ವರ್ಷದಲ್ಲಿ 384 ಕೆರೆಗಳ ಅಭಿವೃದ್ಧಿ
Last Updated 20 ಏಪ್ರಿಲ್ 2018, 5:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪಂಚಗಿರಿ ಶ್ರೇಣಿಯ ಮಡಿಲಲ್ಲಿ ಹಿಂದೆ ಮೈದುಂಬಿ ಹರಿಯುತ್ತಿದ್ದ ಎಂಟು ನದಿಗಳು ನಾಲ್ಕು ದಶಕಗಳಿಂದ ಇತ್ತೀಚೆಗೆ ಕ್ಷೀಣಿಸುತ್ತ ಬಂದು ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡು ಗತಕಾಲದ ಪುಟ ಸೇರಿವೆ. ಆದರೆ ಆರೂವರೆ ದಶಕಗಳ ಹಿಂದೆ ಜನ್ಮತಳೆದ ಸಾರ್ವತ್ರಿಕ ಚುನಾವಣೆ ಎಂಬ ನದಿ ಮಾತ್ರ ಜಿಲ್ಲೆಯಲ್ಲಿ ಐದು ವರ್ಷಕ್ಕೊಮ್ಮೆ ‘ಪ್ರವಾಹೋಪಾದಿ’ಯಲ್ಲಿ ಹರಿಯುತ್ತಿದೆ.

ರಾಜಕಾರಣಿಗಳು ಮತ್ತದೇ ತಮ್ಮ ಹಳೆಯ ‘ವರಸೆ’ಯಲ್ಲಿ ‘ನೀರಾವರಿ’ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆಶ್ವಾಸನೆಗಳಲ್ಲಿ ಸದ್ಯ ನೀರಿಗೆ ಮೊದಲ ಸ್ಥಾನ. ‘ಇನ್ನೇನು ಕೆಲ ವರ್ಷಗಳಲ್ಲೇ ಈ ಭಾಗಕ್ಕೆ ಹೊಳೆ ಬಂದು ಬಯಲು ಸೀಮೆ ಮಲೆನಾಡಿನ ರೂಪದಲ್ಲಿ ಮೈದಳೆಯುತ್ತದೆ’ ಎಂಬ ‘ಬಣ್ಣ’ದ ಮಾತುಗಳು ಗಲ್ಲಿ ಗಲ್ಲಿಗಳಲ್ಲಿ ಅನುರಣಿಸುತ್ತವೆ. ‘ವಾಸ್ತವ’ ಮಾತ್ರ ಭಯಾನಕ ಸ್ಥಿತಿಯತ್ತ ತೆವಳುತ್ತಿದೆ.

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳು ಮತ್ತು ನಿಸರ್ಗ ನಿರ್ಮಿತ ಕಾಲುವೆಗಳ ಜಾಲ ಹೊಂದಿರುವ ಪ್ರದೇಶದ ಭಾಗವಾಗಿರುವ ಜಿಲ್ಲೆ ಯಲ್ಲಿ ಅನೇಕ ದಶಕಗಳ ಹಿಂದೆ ಕಣ್ಣು ಹಾಯಿಸಿದೆಡೆಯೆಲ್ಲ ನೀಲ ಹಾಸಿಗೆ ಯಂತೆ ಗೋಚರಿಸುತ್ತಿದ್ದ ಸಾವಿರಾರು ಕೆರೆಗಳಿದ್ದವು. ಅವು ಇವತ್ತು ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಸಡ್ಡೆ, ಅನಾದರದಿಂದ ‘ಗುಟುಕು ಜೀವ’ ಹಿಡಿದ ರೋಗಿಯಂತಾಗಿವೆ.

ಜಿಲ್ಲೆಯಲ್ಲಿ ಕಳೆದ ಕೆಲ ದಶಕಗಳಿಂದ ‘ಶಾಶ್ವತ ನೀರಾವರಿ’ ಹೆಸರಿನಲ್ಲಿ ಈವರೆಗೆ ನಡೆದ ಚಳವಳಿ, ಪ್ರತಿಭಟನೆ, ಮುತ್ತಿಗೆ, ಧರಣಿ ಸತ್ಯಾಗ್ರಹಗಳಿಗೆ ಲೆಕ್ಕ ಇಟ್ಟವರಿಲ್ಲ. ಇಷ್ಟಾದರೂ ಈ ಭಾಗದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮಾತ್ರ ನೀರಿನ ವಿಚಾರದಲ್ಲಿ ಗಂಭೀರ ಚಿಂತನೆ ನಡೆಸದಿರುವುದು ಭವಿಷ್ಯದ ದೃಷ್ಟಿಯಿಂದ ಕಳವಳ ಹುಟ್ಟಿಸುವಂತಿದೆ.

ಕಳೆದ ಮೂರು ದಶಕ ಗಳಲ್ಲಿ ಅತಿಯಾದ ನೀರಿನ ದುರ್ಬಳಕೆ ಯಿಂದಾಗಿ ಇವತ್ತು ಜನರು ದಿನಬಳಕೆಯ ನೀರಿಗಾಗಿ ಪರಿತಪಿಸುವ ದುರ್ಭಿಕ್ಷ ಕಾಲ ತಂದೊಡ್ಡಿದೆ. ಕೆಲ ಪ್ರದೇಶಗಳಲ್ಲಿ 2,000 ಅಡಿ ತೂತು ಕೊರೆದರೂ ‘ಜೀವಜಲ’ ಉದ್ಭವಿಸುತ್ತಿಲ್ಲ. ಕಾಯಂ ಅತಿಥಿಯಂತಾಗಿರುವ ‘ಬರ’ ಅಂತರ್ಜಲ ಕುಸಿತದ ಮೇಲೆ ಎಳೆಯುತ್ತಿರುವ ‘ಬರೆ’ ಅಷ್ಟಿಷ್ಟಲ್ಲ. ಜತೆಗೆ ‘ದುರ್ಭಿಕ್ಷದಲ್ಲಿ ಅಧಿಕ ಮಾಸ’ ಎಂಬ ಗಾದೆಯಂತೆ ಫ್ಲೋರೈಡ್‌ ಹಾವಳಿ. ಆಗಂತುಕನನ್ನು ಆಹ್ವಾನಿಸಿಕೊಂಡಂತಿದೆ.

ಜಿಲ್ಲೆಯಲ್ಲಿ ನೀರಿನ ವಿಚಾರ ದಲ್ಲಿ ಸಮಸ್ಯೆಗಳು ಹಾಸಿ ಹೊದ್ದುಕೊಳ್ಳು ವಷ್ಟಿದ್ದರೂ ಜನಪ್ರತಿನಿಧಿ ಗಳು ಮಾತ್ರ ‘ಯೋಜನೆ’ಗಳನ್ನು ಹೊದ್ದುಕೊಂಡು ಗಡದ್ದು ನಿದ್ದೆಗೆ ಜಾರಿದ್ದಾರೆ. ಪ್ರತಿಯೊಬ್ಬ ರಾಜಕಾರಣಿ ‘ನೀರಾವರಿ’ ಪದ ಕನವರಿಸುತ್ತಿದ್ದಾರೆ. ಆದರೆ ಲಭ್ಯವಿರುವ ಸಾವಿರಾರು ಕೆರೆಗಳು, ಕಾಲುವೆಗಳ ಒತ್ತುವರಿ ತೆರೆವುಗೊಳಿಸುತ್ತಿಲ್ಲ. ಹೂಳು ತೆಗೆಸಿ, ಪುನಶ್ಚೇತನದ ಮೂಲಕ ಮಳೆ ನೀರು ಸಂಗ್ರಹಿಸುವ ಯೋಜನೆ ರೂಪಿಸುತ್ತಿಲ್ಲ. ಅಂತರ್ಜಲ ಹೆಚ್ಚಿಸುವ ಕೆಲಸಕ್ಕೆ ಆಸಕ್ತಿ ತೋರುತ್ತಿಲ್ಲ ಎನ್ನುವುದು ಪ್ರಜ್ಞಾವಂತರ ಅಳಲು.

ಒಂದೆಡೆ ಬತ್ತಿ ಬರಿದಾಗಿ ಒತ್ತುವರಿಗೆ ನಲುಗುತ್ತಿರುವ ಕೆರೆ, ಕುಂಟೆ, ಕಾಲುವೆಗಳ ಗಡಿ ಗುರುತಿಸಿ, ಅತಿಕ್ರಮಣ ತೆರವು ಮಾಡಿ ಪುನಶ್ಚೇತನಗೊಳಿಸುವ ಕೆಲಸ ನಡೆಯುತ್ತಿಲ್ಲ. ಇನ್ನೊಂದೆಡೆ ಮಿತಿಮೀರಿ ಕೊಳವೆಬಾವಿಗಳ ಕೊರೆತ ಹೆಚ್ಚುತ್ತಿದೆ. ಇದರ ದುಷ್ಪರಿಣಾಮ ಈಗಾಗಲೇ ಗೋಚರಿಸಲು ಆರಂಭಗೊಂಡಿದೆ.

ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊರೆದ ಸುಮಾರು 4,500 ಕೊಳವೆಬಾವಿಗಳ ಪೈಕಿ 1,500 ಬಾವಿಗಳು ‘ಒಣ ಹುಡಿ’ ಹೊರಹಾಕಿವೆ! ಇನ್ನು ಕೃಷಿ, ನಗರ ಪ್ರದೇಶ ಮತ್ತು ಖಾಸಗಿಯವರು ಕೊರೆಯಿಸಿದ ಬಾವಿಗಳ ಪೈಕಿ ಎಷ್ಟು ವಿಫಲಗೊಂಡಿವೆ ಎನ್ನುವ ಕಳವಳ ಹುಟ್ಟಿಸಬಹುದಾದ ಮಾಹಿತಿ ಅಧಿಕಾರಿಗಳ ಅಂಕೆಗೆ ಸಿಗುವುದೇ ಇಲ್ಲ.

ಭೂತಕಾಲದ ಸಿಂಹಾವಲೋಕನ ಮಾಡಿ ವರ್ತಮಾನದಲ್ಲಿ ಎಚ್ಚೆತ್ತುಕೊ ಳ್ಳದೆ ಕಾಲನ ಕುದುರೆಯನೇರಿ ಕಣ್ಮಚ್ಚಿ ಸಾಗಿದರೆ ಭವಿಷ್ಯದಲ್ಲಿ ನಾವು ಭಾರಿ ಬೆಲೆ ತೆರಬೇಕಾಗುತ್ತದೆ. ಅದಕ್ಕಾಗಿ ಹೊತ್ತು ಹೋಗುವ ಮುನ್ನವೇ ಎಚ್ಚೆತ್ತುಕೊಂಡು ಅಮೂಲ್ಯವಾದ ಮಳೆ ನೀರು ಸಂಗ್ರಹಿಸುವ ಕೆಲಸದಲ್ಲಿ ಪ್ರತಿಯೊಬ್ಬರನ್ನು ತೊಡಗಿಸಿ ಕೊಳ್ಳ ಬೇಕಾದದ್ದು ಇಂದಿನ ತುರ್ತು ಅಗತ್ಯ ಎನ್ನುತ್ತಾರೆ ಪರಿಸರ ತಜ್ಞರು.

‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?’

ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಿದ್ದರೂ ನೀರಿಗಾಗಿ ಮಹಾನಗರದ ಕೊಳಚೆ ನೀರು ಆಶ್ರಯಿಸುವ ಸ್ಥಿತಿ ಬಂದಿರುವುದು ನೋಡಿ ಜನರು ‘ಅಂಗೈಯಲ್ಲಿ ತುಪ್ಪ, ಬೆಣ್ಣೆಗಾಗಿ ಅಲೆದಾಟ’ ಎಂಬ ಗಾದೆ ಮೆಲುಕು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,402 ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 201 ಹೀಗೆ ಒಟ್ಟು 1,603 ಕೆರೆಗಳಿವೆ. ಗುರುವಾರದ ವರೆಗೆ ಲಭ್ಯವಾದ ಮಾಹಿತಿಯಂತೆ ಕಳೆದ ಐದು ವರ್ಷಗಳಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಡಿ 373 ಕೆರೆಗಳಲ್ಲಿ ಮತ್ತು ಸಣ್ಣ ನೀರಾವರಿ ಇಲಾಖೆ ಅಡಿ ಕೇವಲ 11 ಕೆರೆಗಳಲ್ಲಿ ಮಾತ್ರ ‘ಅಭಿವೃದ್ಧಿ’ಪಡಿಸುವ ‘ಶಾಸ್ತ್ರ’ ನಡೆದಿದೆ. ಉಳಿದ 1,219 ಕೆರೆಗಳನ್ನು ತಿರುಗಿ ನೋಡುವವರೇ ಇಲ್ಲ!

ಎತ್ತಿನಹೊಳೆ ಯೋಜನೆಗೆ ₹ 13 ಸಾವಿರ ಕೋಟಿ, ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳನ್ನು ತುಂಬುವ ಏತ ನೀರಾವರಿ ಯೋಜನೆಗೆ ₹ 900 ಕೋಟಿ ಎಂದೆಲ್ಲ ಭಾಷಣ ಮಾಡುವ ಜನಪ್ರತಿನಿಧಿಗಳು ಅಪ್ಪಿತಪ್ಪಿಯೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಮೂಲಗಳ ಅಭಿವೃದ್ಧಿಗೆ ಎಷ್ಟು ಖರ್ಚು ಮಾಡಿದ್ದೇವೆ ಎಂದು ಉಸಿರು ಎತ್ತುವುದಿಲ್ಲ!

ಎರಡೇ ನೀರಾವರಿ ಯೋಜನೆಗೆ ₹ 21 ಸಾವಿರ ಕೊಟ್ಟಿದ್ದೇವೆ ಎಂದು ‘ಬಡಾಯಿ’ ಕೊಚ್ಚಿಕೊಳ್ಳುವ ನಮ್ಮ ಜನಪ್ರತಿನಿಧಿಗಳಿಗೆ ಜಿಲ್ಲೆಯ 1,603 ಕೆರೆಗಳ ಅಭಿವೃದ್ಧಿ ವಿಚಾರದಲ್ಲಿ ಕಳೆದ ಐದು ವರ್ಷಗಳಲ್ಲಿ ಖರ್ಚಾದ್ದದ್ದು ಬರೀ ₹ 8.22 ಕೋಟಿ ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ.

‘ನೀರಾವರಿ’ ಎಂಬ ಪದ ಪ್ರತಿದಿನ ಪ್ರತಿಧ್ವನಿಸುವ ಜಿಲ್ಲೆಯಲ್ಲಿ ಜಲಮೂಲಗಳ ವಿಚಾರದಲ್ಲಿ ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದ ‘ಅಂಗೈ ಹುಣ್ಣಿಗೆ’ ಕೈಗನ್ನಡಿ ಹಿಡಿಯುವ ಕೆಲಸವನ್ನು ಇವತ್ತು ಪ್ರಜ್ಞಾವಂತರು ಮಾಡಬೇಕಿದೆ.

ತೆರಿಗೆ ಹಣ ಲೂಟಿ

ನೆರೆಯ ಆಂಧ್ರಪ್ರದೇಶದಲ್ಲಿ 2015 ಅಕ್ಟೋಬರ್‌ನಲ್ಲಿ ಗೋದಾವರಿ ಮತ್ತು ಕೃಷ್ಣಾ ನದಿ ಜೋಡಿಸುವ ₹ 1,427 ಕೋಟಿ ಯೋಜನೆ ಕೇವಲ ಆರೂವರೆ ತಿಂಗಳಲ್ಲಿ ಪೂರ್ಣಗೊಳಿಸಿದೆ.

80 ಟಿಎಂಸಿ ಅಡಿ ನೀರನ್ನು ರಾಯಲಸೀಮಾ ಪ್ರದೇಶಕ್ಕೆ ಹರಿಸಲಾಗಿದೆ. ಅಲ್ಲಿ ನೀರಾವರಿ ಸಚಿವರೇ ಮುಂದೆ ನಿಂತು ಕಾಮಗಾರಿ ಪರಿಶೀಲಿಸುತ್ತಿದ್ದರು. ಹೀಗಾಗಿ ಅಲ್ಲಿನ ಜನರು ನೀರಿಗಾಗಿ ಬೀದಿಗೆ ಇಳಿಯುವ ಪರಿಸ್ಥಿತಿ ಬರಲಿಲ್ಲ. ಅಂತಹ ಕಾಳಜಿ ನಮ್ಮ ರಾಜಕಾರಣಿಗಳಲ್ಲಿ ಇಲ್ಲ. ಬದಲು ಸಲ್ಲದ ಯೋಜನೆಗಳ ಹೆಸರಿನಲ್ಲಿ ವ್ಯವಸ್ಥಿತವಾಗಿ ನಮ್ಮ ತೆರಿಗೆ ಹಣ ಕೊಳ್ಳೆ ಹೊಡೆಯಲಾಗುತ್ತಿದೆ.

ಮಳೆಗಾಲದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲೇ 11 ಟಿಎಂಸಿ ಅಡಿ ಮಳೆ ನೀರು ಹರಿದು ಹೋಗುತ್ತದೆ. ಎತ್ತಿನಹೊಳೆ ಮತ್ತು ಏತ ನೀರಾವರಿ ಯೋಜನೆಗಳಿಗೆ ಖರ್ಚು ಮಾಡುವ ₹ 21 ಸಾವಿರ ಕೋಟಿಯ ಪೈಕಿ ನಾಲ್ಕನೆಯ ಒಂದು ಭಾಗ ಖರ್ಚು ಮಾಡಿದರೆ ಜಿಲ್ಲೆಯ ಎಲ್ಲಾ ಕೆರೆಗಳು ಮತ್ತು ರಾಜಕಾಲುವೆಗಳ ದುರಸ್ತಿ ಮಾಡಿ ಪುನಶ್ಚೇತನಗೊಳಿಸಿ ಆ ನೀರು ಸಂಗ್ರಹಿಸಬಹುದಿತ್ತು. ಆಗ ಅಂತರ್ಜಲ ಇಷ್ಟೊಂದು ಕುಸಿಯುತ್ತಿರಲಿಲ್ಲ. ನಾವು ಕೊಳಚೆ ನೀರಿಗೆ ಎದುರು ನೋಡುವ ಸ್ಥಿತಿ ಬರುತ್ತಿರಲಿಲ್ಲ – ಯಲುವಹಳ್ಳಿ ಸೊಣ್ಣೆಗೌಡ, ಸಾಮಾಜಿಕ ಹೋರಾಟಗಾರ

ಪ್ರತಿಭಟಿಸಿದರೂ ಪ್ರಗತಿ ಕಾಣಲಿಲ್ಲ

ನಮ್ಮಲ್ಲಿರುವ ಬಹುತೇಕ ಕೆರೆಗಳು ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ ಶೇ 50ರಷ್ಟು ಹೂಳು ತುಂಬಿಕೊಂಡಿದೆ. ಹೀಗಾಗಿ ನೀರು ಸಂಗ್ರಹಿಸುವ ಸಾಮರ್ಥ್ಯ ಕುಗ್ಗಿದೆ.

ಒತ್ತುವರಿ ಮಿತಿ ಮೀರಿದೆ. ಇದರ ಬಗ್ಗೆ ನಾಲ್ಕೈದು ವರ್ಷಗಳ ಹಿಂದೆ ಹೋರಾಟ ನಡೆಸಲಾಗಿತ್ತು. ಆಗ ಹಂತ ಹಂತವಾಗಿ ಕೆರೆಗಳ ಹೂಳು ತೆಗೆಯತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಪ್ರಗತಿ ಮಾತ್ರ ಏನೂ ಆಗಲಿಲ್ಲ.

ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಜನಪ್ರತಿನಿಧಿಗಳಿಗೆ ಜನರ ಬದುಕು ಹಸನು ಮಾಡಬೇಕೆಂಬ ಇಚ್ಛಾಶಕ್ತಿ ಇದ್ದರೆ ಮೊದಲು ಕೆರೆಗಳಲ್ಲಿರುವ ಹೂಳು ತೆಗೆದು, ಕಾಲುವೆಗಳ ಪುನಶ್ಚೇತನಗೊಳಿಸಿ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಬೇಕು. ಅದಕ್ಕಾಗಿಯೇ ಸರ್ಕಾರದಿಂದ ವಿಶೇಷ ಅನುದಾನ ತರಲು ಮುಂದಾಗಬೇಕು – ಎಂ.ಪಿ.ಮುನಿವೆಂಕಟಪ್ಪ, ಸಿಪಿಎಂ ಮುಖಂಡ

**

ಪೈಪ್‌ಲೈನ್‌ ಹೆಸರಿನಲ್ಲಿ ಲೂಟಿ ಮಾಡುವ ಯೋಜನೆಗಳಿಗೆ ತೋರುವಷ್ಟು ಕಾಳಜಿ ನಮ್ಮ ಜನಪ್ರತಿನಿಧಿಗಳು ಕೆರೆಗಳ ಅಭಿವೃದ್ಧಿ ವಿಚಾರದಲ್ಲಿ ತೋರುತ್ತಿಲ್ಲ –  ಚಂದ್ರಶೇಖರ್ , ಸಾಮಾಜಿಕ ಕಾರ್ಯಕರ್ತ. 

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT