ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀರಶೈವ, ಲಿಂಗಾಯತ ತಂದೆ–ತಾಯಿ ಇದ್ದಂತೆ’

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಬಿಚ್ಚುನುಡಿ
Last Updated 20 ಏಪ್ರಿಲ್ 2018, 6:31 IST
ಅಕ್ಷರ ಗಾತ್ರ

ದಾವಣಗೆರೆ: ‘ಶ್ವಾಸ ಗುರು’ ಎಂದೇ ಜನಪ್ರಿಯರಾಗಿರುವ ವಚನಾನಂದ ಸ್ವಾಮೀಜಿ ಈಗ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ನೂತನ ಗುರು. ಬೆಳಗಾವಿ ಜಿಲ್ಲೆಯ ತಾಂವಶಿ ಎಂಬ ಹಳ್ಳಿ ಇವರ ಪೂರ್ವಾಶ್ರಮದ ಊರು. ಹರಿಹರದ ಹೊರವಲಯದಲ್ಲಿರುವ ಮಠದಲ್ಲಿ ಶುಕ್ರವಾರ ನಡೆಯಲಿರುವ ಸಮಾರಂಭದಲ್ಲಿ ಸ್ವಾಮೀಜಿಗೆ ಪಟ್ಟಾಭಿಷೇಕ ನಡೆಯಲಿದೆ. ಈ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ಅವರು ಮುಖಾಮುಖಿಯಾಗಿದ್ದಾರೆ.

ವೀರಶೈವ, ಲಿಂಗಾಯತ ಈಗ ಬೇರೆ, ಬೇರೆ ಆಗಿವೆ. ಇಂತಹ ಸಂದರ್ಭದಲ್ಲಿ ನೀವು ವೀರಶೈವ ಲಿಂಗಾಯತ ಪಂಚಮಸಾಲಿ ಎಂದು ಹೊರಟಿದ್ದೀರಿ?

ಕರ್ನಾಟಕದ ಬಹುತೇಕ ಮಠಗಳ ಭಕ್ತರು ಈ ಪಂಚಮಸಾಲಿಯವರು; ಈ ಎಲ್ಲಾ ಮಠಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳಿಗೆ ಪಂಚಮಸಾಲಿ ಭಕ್ತರೇ ಕಾರಣ. ವೀರಶೈವ, ಲಿಂಗಾಯತರು ನಮಗೆ ತಂದೆ–ತಾಯಿ ಇದ್ದ ಹಾಗೆ. ಕೆಲವರು ತಂದೆ–
ತಾಯಿಗೆ ವಿಚ್ಛೇದನ ಬೇಕು ಎನ್ನುತ್ತಿದ್ದಾರೆ. ನಮ್ಮದು ಮಗುವಿನ ಸ್ಥಿತಿ. ನಮಗೆ ಇಬ್ಬರೂ ಬೇಕು. ಇವರಿಬ್ಬರನ್ನು ಒಟ್ಟುಗೂ
ಡಿಸುವ ಕೆಲಸ ನಾವು ಮಾಡುತ್ತೇವೆ.

ಈ ಪೀಠದ ಹಿಂದಿರುವ ಸಮಸ್ಯೆಗಳ ಅರಿವು ನಿಮಗೆ ಇದೆಯೇ?

ಖಂಡಿತಾ ಇದೆ. ನಮ್ಮದೇ ಆದ ಕನಸುಗಳೂ ಇವೆ. ಅದೆಷ್ಟೇ ಕಷ್ಟಗಳು ಬರಲಿ, ಅವುಗಳನ್ನು ಇಷ್ಟ ಎಂದು ತಿಳಿದು ಮುಂದುವರಿಯುವ ಪ್ರವೃತ್ತಿ ನಮ್ಮದು. ಆದಿಚುಂಚನಗಿರಿ ಮಠ ಹಿಂದೆ ಅನಾಥವಾಗಿತ್ತು. ಅನಾಥವಾಗಿದ್ದ ನಾಥ ಪರಂಪರೆಗೆ ಒಂದು ಮೆರುಗು ತಂದಿದ್ದು ಬಾಲಗಂಗಾಧರನಾಥ ಸ್ವಾಮೀಜಿ. ಅವರು ನಮಗೆ ಆದರ್ಶ. ಶುದ್ಧ ಹಾಗೂ ರಾಜಕೀಯೇತರ ಮಠವಾಗಿರುವ ಶೃಂಗೇರಿ ಶಾರದಾ ಪೀಠ, ತ್ರಿಕಾಲ ಪೂಜೆ, ಅಕ್ಷರ ಹಾಗೂ ಅನ್ನ ದಾಸೋಹದ ಸಿದ್ಧಗಂಗಾ ಸ್ವಾಮೀಜಿ, ಕಾಯಕ ಜೀವಿ ಸಿದ್ದೇಶ್ವರ ಸ್ವಾಮಿ ಇವರೆಲ್ಲರೂ ನಮಗೆ ಆದರ್ಶ.‌

ಯೋಗ, ಧ್ಯಾನಗಳಿಗಿಂತ ಭಿನ್ನ ವ್ಯವಸ್ಥೆ ಮಠದಲ್ಲಿರುತ್ತದೆ. ಇದರ ನಿರ್ವಹಣೆ ನಿಮಗೆ ಸವಾಲಾಗುವುದಿಲ್ಲವೇ?

ಮಠದ ಪರಂಪರೆಯಲ್ಲೇ ಬಂದವನು ನಾನು. ಆಕಾಶದಲ್ಲಿ ಗಾಳಿಪಟ ಎಷ್ಟೇ ಎತ್ತರಕ್ಕೆ ಹಾರಾಡಿದರೂ ಅದಕ್ಕೆ ಒಂದು ಸೂತ್ರ ಇರುತ್ತದೆ. ಯೋಗ, ಜ್ಞಾನ ಎಲ್ಲರಿಗೂ ಬೇಕು. ಇಲ್ಲಿಯವರೆಗೂ ನಾಡಿನಲ್ಲಿ ಯೋಗದ ಮೂಲಕ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಈಗ ಜವಾಬ್ದಾರಿ ಹಾಗೂ ಕರ್ತವ್ಯ ಹೆಚ್ಚಾಗಿವೆ. ಒಂದು ದೊಡ್ಡ ಸಮಾಜ ಇದು. ಯೋಗ, ಧ್ಯಾನದ ಮೂಲಕ ಧಾರ್ಮಿಕ ಪರಂಪರೆ ಇಟ್ಟುಕೊಂಡು ಸಮಾಜ ಕಟ್ಟುವ ಕನಸಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪೀಠವನ್ನು ಮುಂದುವರಿಸಿಕೊಂಡು ಹೋಗುವುದು ನನಗೆ ಕಷ್ಟವಾಗುವುದಿಲ್ಲ.

ಯೋಗ ಕಾರ್ಯಕ್ರಮಗಳ ಮೂಲಕ ನಿರಂತರ ತಿರುಗಾಡಿಕೊಂಡು ಇದ್ದವರು ನೀವು, ಮಠದ ವ್ಯವಸ್ಥೆ ನಿಮಗೆ ಬಂಧನವಾಗುವುದಿಲ್ಲವೇ?

ಇದು ಹೊಸದಲ್ಲ. 28 ವರ್ಷಗಳ ಕಾಲ ಮಠ, ಆಶ್ರಮ, ಭಕ್ತರು ಎಲ್ಲವನ್ನೂ ನೋಡಿದ್ದೇನೆ. ಈ ವ್ಯವಸ್ಥೆಯೊಂದಿಗೆ ಒಡನಾಡಿದ್ದೇನೆ. ಇದು ಒಂದು ಮನಸ್ಥಿತಿ ಅಷ್ಟೇ. ಆರಂಭದಲ್ಲಿ ಸ್ವಲ್ಪ ತೊಂದರೆ ಆಗಬಹುದು. ಬಹಳಷ್ಟು ವರ್ಷಗಳ ಕಾಲ ನಾನು ಉತ್ತರ ಭಾರತದಲ್ಲಿದ್ದವನು. ಬೆಂಗಳೂರಿಗೆ ಬಂದಾಗ ಹೀಗೆ ಆಯಿತು. ಮುಂದೆ ವ್ಯವಸ್ಥೆಗೆ ಹೊಂದಿಕೊಂಡೆ. ಹಳ್ಳ ದಾಟಿಕೊಂಡು ಹೋಗಬೇಕು ಎಂದರೆ ಹಾವು, ಕಲ್ಲು ಬಂಡೆಗಳಿರುತ್ತವೆ. ಹಳ್ಳ ದಾಟಬೇಕು ಎಂದರೆ ಅವುಗಳನ್ನು ಎದುರಿಸಲೇಬೇಕು.

ಬಹಳಷ್ಟು ಸ್ವಾಮೀಜಿಗಳ ಸಂದರ್ಶನ ನಡೆಸಿ ಆಯ್ಕೆ ಸಮಿತಿ ನಿಮ್ಮನ್ನು ಆಯ್ಕೆ ಮಾಡಿದೆ? ನಿಮ್ಮ ಶಕ್ತಿ ಏನು?

ಆರೋಗ್ಯ, ಅಧ್ಯಾತ್ಮ ಬೇಡ ಎನ್ನುವವರು ಯಾರೂ ಇಲ್ಲ. ಸಮಿತಿ ನಮ್ಮ ಶಕ್ತಿ ಗುರುತಿಸಿದೆ. ಅದನ್ನು ಇನ್ನಷ್ಟು ಶಕ್ತಿಯುತಗೊಳಿಸಬೇಕು. ಈ ಸಮಾಜದಲ್ಲಿ ಹುಟ್ಟಿದ್ದೇವೆ. ಇದಕ್ಕೆ ಒಂದು ಅಳಿಲು ಸೇವೆ ಮಾಡಬೇಕು. ಸಮಾಜ ತಲೆ ಎತ್ತಿ ಬಾಳಬೇಕು. ನನ್ನೊಬ್ಬನ ತ್ಯಾಗದಿಂದ ಸಮಾಜದ ಬಡವ, ಶ್ರೀಮಂತ, ರೈತ, ಕೂಲಿ ಕಾರ್ಮಿಕರಿಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಅದಕ್ಕಿಂತ ಸೇವೆ ಇನ್ನೇನಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT