ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ದಶಕಗಳಿಂದ ಒಕ್ಕಲಿಗರದ್ದೇ ಪಾರುಪತ್ಯ

ಶ್ರವಣಬೆಳಗೊಳ ಕ್ಷೇತ್ರ: ಹ್ಯಾಟ್ರಿಕ್ ಗೆಲುವು ಸೇರಿ ನಾಲ್ಕು ಬಾರಿ ಜಯಗಳಿಸಿದ್ದ ಶ್ರೀಕಂಠಯ್ಯ
Last Updated 20 ಏಪ್ರಿಲ್ 2018, 7:18 IST
ಅಕ್ಷರ ಗಾತ್ರ

ಹಾಸನ: ಜೈನಕಾಶಿ ಒಳಗೊಂಡ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕರು. ಹಾಗಾಗಿ ಅದೇ ಸಮುದಾಯದವರೇ ಹಲವು ದಶಕಗಳಿಂದ ಶಾಸಕರಾಗಿ ಆಯ್ಕೆಯಾಗುತ್ತಿರುವುದು ವಿಶೇಷ.

ಹಾಲಿ ಶಾಸಕ ಸಿ.ಎನ್‌.ಬಾಲಕೃಷ್ಣ ಎರಡನೆ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಉಳಿದಂತೆ ಎಚ್‌.ಸಿ.ಶ್ರೀಕಂಠಯ್ಯ ಮತ್ತು ಸಿ.ಎಸ್‌.ಪುಟ್ಟೇಗೌಡ ಏಳು ಬಾರಿ ಕಣಕ್ಕಿಳಿದಿದ್ದರು.

ಶ್ರೀಕಂಠಯ್ಯ ಅವರು ಹ್ಯಾಟ್ರಿಕ್‌ ಸಾಧನೆಯೊಂದಿಗೆ ನಾಲ್ಕು ಬಾರಿ ವಿಜಯ ಸಾಧಿಸಿದರೆ, ಪುಟ್ಟೇಗೌಡರು ಮೂರು ಬಾರಿ ಗೆದ್ದಿದ್ದಾರೆ.
ಚನ್ನರಾಯಪಟ್ಟಣದ ಕ್ಷೇತ್ರದ ಪ್ರಥಮ ಶಾಸಕರಾಗಿ 1952ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಲಕ್ಕಪ್ಪ (10723) ಆಯ್ಕೆಯಾದರು. ಕೆಎಂಪಿಪಿ ಅಭ್ಯರ್ಥಿ ಎನ್‌.ಜಿ.ನರಸಿಂಹೇಗೌಡ 7828 ಪಡೆದು ಸೋತರು.

ಎರಡನೇ ಚುನಾವಣೆಯಲ್ಲಿ ಚನ್ನರಾಯಪಟ್ಟಣ ಕ್ಷೇತ್ರವು ಶ್ರವಣಬೆಳಗೊಳ ಕ್ಷೇತ್ರವಾಗಿ ಬದಲಾಯಿತು. 1957ರಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯ ಎನ್‌.ಜಿ.ನರಸಿಂಹೇಗೌಡ 16,923 ಮತ ಪಡೆದು ಕಾಂಗ್ರೆಸ್‌ನ ಕೆ.ಲಕ್ಕಪ್ಪ ಅವರನ್ನು ಸೋಲಿಸಿದರು.

1962ರ ಚುನಾವಣೆಯಲ್ಲಿ ಇಬ್ಬರೇ ಸ್ಪರ್ಧಿಗಳಿದ್ದರಿಂದ ನೇರ ಹಣಾಹಣಿ ಏರ್ಪಟ್ಟಿತ್ತು. ಎಚ್‌.ಡಿ.ದೇವೇಗೌಡರ ಮಾರ್ಗದರ್ಶಕರಾಗಿದ್ದ ಎಸ್‌.ಶಿವಪ್ಪ ಅವರು ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. 1976ರಲ್ಲೂ ಶಿವಪ್ಪ ಗೆಲುವಿನ ನಾಗಾಲೋಟ ಮುಂದುವರಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್‌.ಸಿ.ಶ್ರೀಕಂಠಯ್ಯ ಪರಾಜಿತರಾದರು.

1975ರಲ್ಲಿ ಕಾಂಗ್ರೆಸ್‌ಗೆ ಮರಳಿ ದೇವರಾಜಅರಸು ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದರು. ನಂತರ ಸಹಕಾರ, ನಗರಾಭಿವೃದ್ಧಿ, ಲೋಕೋಪಯೋಗಿ, ಅರಣ್ಯ, ಕಂದಾಯ ಸೇರಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು.

ಎಸ್‌.ಶಿವಪ್ಪ ಅವರು ಮೂರು ಚುನಾವಣೆಯಲ್ಲಿ ಸ್ಪರ್ಧಿಸಿ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದ್ದರು. ಆದರೆ, ಶ್ರೀಕಂಠಯ್ಯ ಅವರು ಸತತ ಮೂರು ಚುನಾವಣೆಯಲ್ಲಿ ಜಯಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದ ದಾಖಲೆ ಹೊಂದಿದ್ದಾರೆ.

1999ರ ನಂತರ ಶ್ರೀಕಂಠಯ್ಯ ಮತ್ತೆ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಹ್ವಾನದ ಮೇರೆಗೆ ಬಿಜೆಪಿ ಸೇರ್ಪಡೆಯಾಗಿದ್ದ ಅವರು ಕೊನೆ ದಿನಗಳಲ್ಲಿ ಕಾಂಗ್ರೆಸ್‌ಗೆ ಹಿಂದಿರುಗಲು ಯತ್ನಿಸಿದಾಗ ಕೆಲವರು ವಿರೋಧ ವ್ಯಕ್ತಪಡಿಸಿದರು.

ಎರಡು ಚುನಾವಣೆಯಲ್ಲಿ ಪರಾಭವಗೊಂಡಿದ್ದ ಜನತಾ ಪಕ್ಷದ ಎನ್‌.ಗಂಗಾಧರ್‌ 1985ರ ಚುನಾವಣೆ ಯಲ್ಲಿ ಗೆಲುವಿನ ಸಿಹಿ ಸವಿದರು.
1989ರಲ್ಲಿ ಎಚ್.ಸಿ.ಶ್ರೀಕಂಠಯ್ಯ ಲೋಕಸಭೆಗೆ ಸ್ಪರ್ಧಿಸಿದಾಗ ತಮ್ಮ ಬೀಗರಾದ ಡಾ.ಎನ್‌.ಬಿ.ನಂಜಪ್ಪ ಅವರನ್ನು ಬೆಳಗೊಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿ, ಯಶಸ್ವಿಯಾದರು.

ದೇವೇಗೌಡರ ಬೆಂಬಲಿಗರಾದ ಸಿ.ಎಸ್‌.ಪುಟ್ಟೇಗೌಡರು 1999ರಲ್ಲಿ ಮತ್ತೊಮ್ಮೆ ಜನತಾ ಪಕ್ಷದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಎಚ್‌.ಸಿ.ಶ್ರೀಕಂಠಯ್ಯ ಅವರನ್ನು ಸೋಲಿಸಿದರು. 1999ರಲ್ಲಿ ಶ್ರೀಕಂಠಯ್ಯ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡರು.

2004ರಲ್ಲಿ ಶ್ರೀಕಂಠಯ್ಯ ಲೋಕ ಸಭೆಗೆ ಸ್ಪರ್ಧಿಸಲು ತೀರ್ಮಾನಿಸಿ ತಮ್ಮ ಪುತ್ರ ಎಚ್‌.ಎಸ್‌.ವಿಜಯಕುಮಾರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿದರು. ಆದರೆ, ಜೆಡಿಎಸ್‌ನ ಪುಟ್ಟೇಗೌಡರ ವಿರುದ್ಧ ಗೆಲುವು ಸಾಧಿಸಲು ಆಗಲಿಲ್ಲ.

ಶ್ರೀಕಂಠಯ್ಯ ಅವರು 2008ರಲ್ಲಿ ಕೊನೆ ಬಾರಿಗೆ ಚುನಾವಣೆ ಎದುರಿಸಿದರು. ಆಗಲೂ ಪುಟ್ಟೇಗೌಡರ ಎದುರು ಸೋಲು ಕಾಣಬೇಕಾಯಿತು.
2013ರಲ್ಲಿ ತಮ್ಮ ಶಾಸಕ ಸ್ಥಾನದ ಅವಧಿ ಕೊನೆಗೊಳ್ಳುತ್ತಿದ್ದ ಸಮಯದಲ್ಲಿ ಟಿಕೆಟ್‌ ದೊರಕುವುದಿಲ್ಲ ಎನ್ನುವುದು ಖಚಿತಗೊಂಡಿದ್ದರಿಂದ ಪುಟ್ಟೇಗೌಡರು ಕಾಂಗ್ರೆಸ್‌ ಸೇರ್ಪಡೆಯಾದರು.

ಅದೇ ಪಕ್ಷದಿಂದ ಕಣಕ್ಕಿಳಿದು ಜೆಡಿಎಸ್‌ನ ಸಿ.ಎನ್‌.ಬಾಲಕೃಷ್ಣ ವಿರುದ್ಧ ಸೋತರು. ಬಾಲಕೃಷ್ಣ 87,185 ಮತ ಪಡೆದು ಶಾಸನಸಭೆ ಪದಾರ್ಪಣೆ ಮಾಡಿದರು.

ಜಿಲ್ಲೆಯ ರಾಜಕಾರಣದಲ್ಲಿ ಹಿರೀಸಾವೆ ಅಣ್ಣಯ್ಯ ಎಂದೇ ಹೆಸರಾದ ಎಚ್‌.ಸಿ.ಶ್ರೀಕಂಠಯ್ಯ ಅವರು 1972ರಲ್ಲಿ ಮೊದಲ ಗೆಲುವು ಕಂಡರು. ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಯಶಸ್ಸು ಕಂಡರು.

ನಾಲ್ಕು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ಅವರು ಜನಪರವಾದ ನಿಲುವುಗಳಿಂದ ಮತದಾರರ ವಲಯದಲ್ಲಿ ಉತ್ತಮ ವರ್ಚಸ್ಸು ಹೊಂದಿದ್ದರು. 1980ರಲ್ಲಿ ಕಾಂಗ್ರೆಸ್‌ನ ಅತಿ ಹೆಚ್ಚು ಶಾಸಕರ ಬೆಂಬಲ ಹೊಂದಿದ್ದ ಅವರು ಮುಖ್ಯಮಂತ್ರಿ ಹುದ್ದೆ ಸಮೀಪಕ್ಕೆ ಹೋಗಿದ್ದರು. ಆರ್‌.ಗುಂಡೂರಾವ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ತೀರ್ಮಾನಿಸಿದ್ದರಿಂದ ಅವಕಾಶ ತಪ್ಪಿತ್ತು.

1994ರ ವಿಧಾನಸಭೆ ಮತ್ತು 1998ರ ಲೋಕಸಭೆ ಚುನಾವಣೆಗಳಲ್ಲಿ ಸೋತು ಹಿನ್ನಡೆ ಅನುಭವಿಸಿದ್ದ ಶ್ರೀಕಂಠಯ್ಯ 1999ರಲ್ಲಿ ಸಾಧಿಸಿದ ಗೆಲುವು ಅವರ ಜೀವನದ ಕೊನೆ ಜಯವಾಗಿತ್ತು.

ಒಟ್ಟು ಮತದಾರರು
198781

ಪುರುಷರು
99542

ಮಹಿಳೆಯರು
99239

ಮತಗಟ್ಟೆಗಳು
271

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT