ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಎಸ್‌ಕೆ ಮೌನ, ಅಕ್ರಮ ಕಲ್ಲು ಗಣಿಗಳ ಆರ್ಭಟ

ಪರಿಹಾರ ಕಾಣದ ಪಾಂಡವಪುರ ಒಳಚರಂಡಿ ಸಮಸ್ಯೆ, ಆರಂಭವಾಗದ ಹೂವು, ತರಕಾರಿ ಮಾರುಕಟ್ಟೆ
Last Updated 20 ಏಪ್ರಿಲ್ 2018, 9:17 IST
ಅಕ್ಷರ ಗಾತ್ರ

ಮಂಡ್ಯ: ಅನಧಿಕೃತ ಕಲ್ಲು ಗಣಿಗಳ ಸದ್ದು, ಮೌನವಾದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ, ನನೆಗುದಿಗೆ ಬಿದ್ದ ಪಾಂಡವಪುರ ಪಟ್ಟಣದ ಒಳಚರಂಡಿ ಕಾಮಗಾರಿ, ಗ್ರಾಮೀಣ ರಸ್ತೆಗಳ ದುರವಸ್ಥೆ, ಕನಸಾಗಿಯೇ ಉಳಿದ ಹೂವು–ತರಕಾರಿ ಮಾರುಕಟ್ಟೆ. ಇವು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ‘ಇನ್ನೂ ಕಾಡುತ್ತಿರುವ ಸಮಸ್ಯೆ’ಗಳು.

ಪಾಂಡವಪುರ ತಾಲ್ಲೂಕು ಮೇಲುಕೋಟೆ ವೈರಮುಡಿ ಉತ್ಸವದ ಮೂಲಕ ವಿಶ್ವಖ್ಯಾತಿ ಗಳಿಸಿದೆ. ರಾಮಾನುಜಾಚಾರ್ಯರು ಕಾಲಿಟ್ಟ ಸ್ಥಳವಿದು. ಇಂತಹ ಪುರಾಣ ಪ್ರಸಿದ್ಧ ಸ್ಥಳದಲ್ಲಿ ಅಪಾರ ಪ್ರಾಕೃತಿಕ ಸಂಪನ್ಮೂಲವಿದೆ. ಆದರೆ ಪ್ರಭಾವಿಗಳ ಅಕ್ರಮ ಕಲ್ಲು ಗಣಿಗಳು ತಾಲ್ಲೂಕಿನಾದ್ಯಂತ ಸದ್ದು ಮಾಡುತ್ತಿದ್ದು ನಿಸರ್ಗ ಸಂಪನ್ಮೂಲ ಬಂಡವಾಳಶಾಹಿಗಳ ಪಾಲಾಗುತ್ತಿದೆ. ಐತಿಹಾಸಿಕ ಬೇಬಿ ಬೆಟ್ಟ ಪ್ರದೇಶ ವ್ಯಾಪ್ತಿಯ, ಮೈಸೂರು ಮಹಾರಾಜರ ಅಮೃತ್‌ಮಹಲ್‌ ಕಾವಲು ಎನ್ನಲಾದ ಪ್ರದೇಶದಲ್ಲಿ ಅನಧಿಕೃತವಾಗಿ ನೂರಾರು ಕಲ್ಲು ಗಣಿಗಳು ತಲೆಎತ್ತಿವೆ. ಗಣಿ ದೂಳು ಅಕ್ಕಪಕ್ಕದ ಗ್ರಾಮಗಳ ಜನರ ಆರೋಗ್ಯ ಕೆಡಿಸಿದೆ. ಕೃಷಿ ಭೂಮಿಯನ್ನು ಹಾಳುಗೆಡವಿದೆ.

ಬೇಬಿ ಬೆಟ್ಟದ ಅಕ್ರಮ ಕಲ್ಲುಗಣಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಗಣಿ ಕಾರ್ಮಿಕರ ನಿಗೂಢ ಸಾವಿನ ಪ್ರಕರಣಗಳು ಮಾನವ ಹಕ್ಕುಗಳ ಆಯೋಗಕ್ಕೂ ತಲುಪಿವೆ. ಬೇಬಿ ಬೆಟ್ಟದ ಮಾಲೀಕತ್ವದ ಬಗ್ಗೆಯೇ ಗೊಂದಲಗಳಿದ್ದು ಇದು ಗಣಿ ಮಾಲೀಕರಿಗೆ ವರವಾಗಿದೆ. ಒಂದೆಡೆ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್‌ ಅವರು ತಮ್ಮ ಹೆಸರಿಗೆ ಅಮೃತ್‌ ಮಹಲ್‌ ಕಾವಲು ಪ್ರದೇಶವನ್ನು ಖಾತೆ ಮಾಡಿಕೊಡುವಂತೆ ಹಲವು ಪತ್ರಗಳನ್ನು ಬರೆದಿದ್ದಾರೆ. ಇನ್ನೊಂದೆಡೆ ಅಕ್ರಮ ಗಣಿಗಾರಿಕೆ ವಿರುದ್ಧ ಸಿಐಡಿ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ. ಇವುಗಳ ನಡುವೆ ಅಡೆತಡೆ ಇಲ್ಲದೆ ಗಣಿಗಾರಿಕೆ ನಡೆಯುತ್ತಿದೆ.

‘ಪಾಂಡವಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಇಡೀ ಜಿಲ್ಲೆಗೆ ಕೆಟ್ಟ ಹೆಸರು ತಂದಿದೆ. ರಾಜಮನೆತನದ ಸದಸ್ಯರು ಈಗಲೂ ಬೇಬಿ ಬೆಟ್ಟದಲ್ಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಅವರು ಬಂದಾಗ ಅಲ್ಲಿರುವ ಗಣಿ ಯಂತ್ರಗಳನ್ನು ಕಂಡು ಮರುಕಪಡುತ್ತಾರೆ. ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಗಣಿ ಯಂತ್ರಗಳು ಬೇಬಿಬೆಟ್ಟವನ್ನು ಕಿತ್ತು ತಿನ್ನುತ್ತಿವೆ. ಇದರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ’ ಎಂದು ರೈತ ಮುಖಂಡ ಬೋರೇಗೌಡ ಹೇಳಿದರು.

ಮೌನವಾದ ಪಿಎಸ್‌ಎಸ್‌ಕೆ: ಸಹಕಾರಿ ತತ್ವದ ಮೇಲೆ ನಡೆಯುತ್ತಿದ್ದ ರೈತರ ಜೀವನಾಡಿ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯ ಸದ್ದಡಗಿದೆ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಐತಿಹಾಸಿಕ ಕಾರ್ಖಾನೆ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಸುತ್ತಮುತ್ತಲ ರೈತರು ಕಬ್ಬು ಪೂರೈಸಲು ಸಿದ್ಧವಿದ್ದರೂ ಕಾರ್ಖಾನೆ ನಡೆಯುತ್ತಿಲ್ಲ. ನಷ್ಟದ ಕೂಪದಿಂದ ಮೇಲೇಳಲು ಸಾಧ್ಯವಾಗದ ಕಾರ್ಖಾನೆಗೆ ಮರು ಜೀವ ನೀಡುವ ಪ್ರಯತ್ನ ನಡೆಯದೇ ಇರುವುದು ವಿಪರ್ಯಾಸ.

‘ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಲು ಪಿಎಸ್‌ಎಸ್‌ಕೆ ಹಾಗೂ ಮಂಡ್ಯದ ಮೈಷುಗರ್‌ ಕಾರ್ಖಾನೆ ನಿಂತದ್ದೇ ಪ್ರಮುಖ ಕಾರಣ. ಪಿಎಸ್‌ಎಸ್‌ ಕಾರ್ಖಾನೆ ನಡೆದರೆ ಮಾತ್ರ ರೈತರು ಬದುಕುತ್ತಾರೆ. ಇಲ್ಲದಿದ್ದರೆ ಅವರ ಜಂಘಾಬಲವೇ ಕುಸಿದು ಬೀಳುತ್ತದೆ’ ಎಂದು ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಹೇಳಿದರು.

ಬಗೆಹರಿಯದ ಒಳಚರಂಡಿ ವ್ಯವಸ್ಥೆ: ಪಾಂಡವಪುರ ಒಳಚರಂಡಿ ಕಾಮಗಾರಿ ನನೆಗುದಿಗೆ ಬಿದ್ದದ್ದು ಹಲವು ವರ್ಷಗಳೇ ಕಳೆದಿವೆ. ಪೈಪ್‌ಲೈನ್‌ ಕಾಮಗಾರಿಗಾಗಿ ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದು ಪಟ್ಟಣದೆಲ್ಲೆಡೆ ಗುಂಡಿಗಳು ರಾರಾಜಿಸುತ್ತಿವೆ. ಒಳಚರಂಡಿ ನೀರು ಶುದ್ಧೀಕರಣ ಘಟಕ ನಿರ್ಮಾಣ ಕುರಿತು ಉಂಟಾದ ಗೊಂದಲ ಇನ್ನೂ ಬಗೆಹರಿದಿಲ್ಲ. ಘಟಕಕ್ಕಾಗಿ 5.20 ಎಕರೆ ಜಮೀನನ್ನು ₹ 2.75 ಕೋಟಿಗೆ ಖರೀದಿ ಮಾಡಲಾಗಿದೆ. ಆದರೆ ಅಷ್ಟು ಹಣ ನೀಡಲು ಪುರಸಭೆಯ ಬಳಿ ಹಣವಿಲ್ಲ. ಹೀಗಾಗಿ ಇದು ಸರ್ಕಾರದ ಹಂತದಲ್ಲಿ ಸಮಸ್ಯೆ ಬಗೆಹರಿಸಬೇಕಿದೆ.

ಹಣ ನೀಡುವಂತೆ ಸರ್ಕಾರದ ಮುಂದೆ ಪ್ರಸ್ತಾವ ಸಲ್ಲಿಕೆಯಾಗಿದೆ. ಆದರೆ ಈಗ ಚುನಾವಣೆ ಬಂದಿದ್ದು ಹೊಸ ಸರ್ಕಾರ ರಚನೆಯಾದ ನಂತರವಷ್ಟೇ ಯೋಜನೆ ಹೊಸ ರೂಪ ಪಡೆಯಲಿದೆ. ಅಲ್ಲಿಯವರೆಗೂ ಪಾಂಡವಪುರ ಪಟ್ಟಣದ ಜನರು ಪೈಪ್‌ಲೈನ್‌ ಕಾಮಗಾರಿಯಿಂದ ಹಳ್ಳವಾಗಿರುವ ರಸ್ತೆಯಲ್ಲೇ ತಮ್ಮ ಸವಾರಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಳಚರಂಡಿ ಶುದ್ಧೀಕರಣ ಘಟಕ ನಿರ್ಮಾಣವಾಗದ ಹೊರತು ಈ ಸಮಸ್ಯೆ ಬಗೆಹರಿಯದು ಎಂದು ಅಧಿಕಾರಿಗಳು ಹೇಳುತ್ತಾರೆ.

ಕುಡಿಯುವ ನೀರಿನ ಸಮಸ್ಯೆ: ಪಾಂಡವಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಶಾಶ್ವತ ಕ್ರಮಕ್ಕೆ 3ನೇ ಹಂತದ ಕಾಮಗಾರಿ ಆರಂಭಿಕ ಹಂತದಲ್ಲಿ ಇತ್ತು. ಕೆಆರ್‌ಎಸ್‌ ಜಲಾಶಯದಿಂದ ನೇರವಾಗಿ ಪಟ್ಟಣಕ್ಕೆ ನೀರು ಪೂರೈಸುವ ಕಾಮಗಾರಿ ಆರಂಭವಾಗಬೇಕಿದೆ. ಟೆಂಡರ್‌ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿತ್ತು, ಆದರೂ ಕಾಮಗಾರಿ ಆರಂಭಗೊಳ್ಳಲಿಲ್ಲ. ಈ ಬಾರಿ ಈ ಕಾಮಗಾರಿ ಮುಗಿಯುತ್ತದೆ ಎಂದು ಕನಸು ಕಂಡಿದ್ದ ಜನರ ಕನಸು ನನಸಾಗದೇ ಉಳಿದಿದೆ. ₹ 4.5 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.

ಆರಂಭಗೊಳ್ಳದ ಮಾರುಕಟ್ಟೆ: ಕೆಆರ್‌ಎಸ್‌ ಮುಳುಗಡೆಯಿಂದ ನಿರಾಶ್ರಿತರಾದ 25ಕ್ಕೂ ಹೆಚ್ಚು ಹಳ್ಳಿಗಳ ಜನರು ಹಿನ್ನೀರಿನಲ್ಲಿ ಹೂವು ಹಾಗೂ ತರಕಾರಿ ಬೆಳೆಯುತ್ತಾರೆ. ಇಲ್ಲಿಯ ಹೂವು ವಿವಿಧ ಮಾರುಕಟ್ಟೆಗಳಿಗೆ ರವಾನೆಯಾಗುತ್ತದೆ. ಬನ್ನಂಗಾಡಿ, ಗಿರಿಯಾರಹಳ್ಳಿ, ಅಂತನಹಳ್ಳಿ, ಕನ್ನಂಬಾಡಿ, ಹೊಸ ಸಾಯಪನಹಳ್ಳಿ ಸೇರಿ ವಿವಿಧ ಹಳ್ಳಿಗಳ ಜನರು ಹೂವಿನಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಹೂವು ಬೆಳೆಯುವ ರೈತರಿಗೆ ಸಾಗಣೆ ವೆಚ್ಚ ಅಧಿಕವಾಗುತ್ತಿದ್ದು ಇಲ್ಲಿಯೇ ಒಂದು ಸುಸಜ್ಜಿತ ಮಾರುಕಟ್ಟೆ ಸ್ಥಾಪನೆ ಮಾಡುವಂತೆ ಬಹುಕಾಲದಿಂದಲೂ ಒತ್ತಾಯಿಸುತ್ತಿದ್ದಾರೆ. ಆದರೂ ಬೇಡಿಕೆ ಈಡೇರಿಲ್ಲ.

ಅಲ್ಲದೆ ಜಕ್ಕನಹಳ್ಳಿ, ಮೋಲುಕೋಟೆ ಸುತ್ತಲಿನ ರೈತರು ಹೆಚ್ಚಾಗಿ ತರಕಾರಿ ಬೆಳೆಯುತ್ತಾರೆ. ಹೀಗಾಗಿ ಜಕ್ಕನಹಳ್ಳಿಯಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ಆರಂಭಿಸಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದೆ. ಇದೂ ಬೇಡಿಕೆಯಾಗಿಯೇ ಉಳಿದಿದೆ. ಅಲ್ಲದೆ ಜಕ್ಕನಹಳ್ಳಿಗೆ ಒಂದು ಸರ್ಕಾರ ಆಸ್ಪತ್ರೆ ಆರಂಭಗೊಳ್ಳಬೇಕು ಎಂಬ ಕನಸೂ ಈಡೇರಿಲ್ಲ.

ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರ‌

‘ಪಾಂಡವಪುರ ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಗ್ರಾಮೀಣ ರಸ್ತೆಗಳು ದುರಸ್ತಿ ಕಾಣದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ರಾತ್ರಿಯ ವೇಳೆಯಲ್ಲಿ ಈ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಳ್ಳಿಗಳು ಮೂಲಭೂತ ಸೌಲಭ್ಯ ಕಾಣದೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ. ಸರ್ಕಾರದ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಅರ್ಹರನ್ನು ಗುರುತಿಸಿಲ್ಲ. ಹೀಗಾಗಿ ಬಡವರು ಸ್ವಂತ ಸೂರಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸ ಮಾಡಿಲ್ಲ. ಕ್ಷೇತ್ರದಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿದ್ದು ಅವುಗಳನ್ನು ಗುರುತಿಸಿ ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವ ಕುರಿತು ಯಾವುದೇ ಪ್ರಯತ್ನಗಳು ನಡೆದಿಲ್ಲ’ ಎಂದು ಜೆಡಿಎಸ್‌ ಅಭ್ಯರ್ಥಿ, ಸಂಸದ ಸಿ.ಎಸ್‌.ಪುಟ್ಟರಾಜು ಹೇಳಿದರು.

ರಸ್ತೆಗಳು ದುರಸ್ತಿ ಕಂಡಿಲ್ಲ

ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಪಾಂಡವಪುರ ಪಟ್ಟಣದ ರಸ್ತೆಗಳು ಗುಂಡಿಬಿದ್ದು ಹದಗೆಟ್ಟುಹೋಗಿವೆ. ಒಳಚರಂಡಿ ನಿರ್ಮಿಸಿದ್ದರೂ ಕೊಳಚೆ ನೀರು ಶೇಖರಣೆಗೊಂಡು ಗಬ್ಬುವಾಸನೆ ಬೀರುತ್ತಿದೆ. ಅಲ್ಲಲ್ಲಿ ಅಶುಚಿತ್ವ ಎದ್ದುಕಾಣುತ್ತಿದೆ. ಪಟ್ಟಣದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ – ಖುಷ್‌ವಂತ್ ಲಾಲ್‌, ವ್ಯಾಪಾರಿ

ಅಭಿವೃದ್ಧಿ ಕೆಲಸಗಳಾಗಿವೆ

‘ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆದಿವೆ. ಗ್ರಾಮೀಣ ಸಂಪರ್ಕ ರಸ್ತೆಗಳು ಅಭಿವೃದ್ದಿಗೊಂಡಿವೆ. 66 ಹ‌ಳ್ಳಿಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ದೊರಕಿದೆ. ಪಟ್ಟಣದಲ್ಲಿ ಕಿರಿಯ ಮತ್ತು ಹಿರಿಯ ಸಿವಿಲ್‌ ನ್ಯಾಯಾಲಯದ ಸಂಕೀರ್ಣ ನಿರ್ಮಾಣಗೊಂಡಿದ್ದು, 5 ನ್ಯಾಯಾಲಯಗಳು ಕೆಲಸ ನಿರ್ವವಹಿಸುತ್ತಿವೆ – ಎಸ್‌.ಎ.ಅಂತೋನಿ, ಸಾಮಾಜಿಕ ಸೇವಾ ಕಾರ್ಯಕರ್ತ

ಯುವಜನರಿಗೆ ಉದ್ಯೋಗ ಇಲ್ಲ

ಒಬ್ಬ ಜನಪ್ರತಿನಿಧಿಗೆ ತನ್ನ ಕ್ಷೇತ್ರದ ಕೊರತೆಗಳ ಬಗ್ಗೆ ಜ್ಞಾನ ಇರಬೇಕು. ಮುಂದಿನ 5 ವರ್ಷಗಳಲ್ಲಿ ಏನೆಲ್ಲಾ ಅಭಿವೃದ್ದಿ ಮಾಡುತ್ತೇನೆ ಎನ್ನುವ ಬಗ್ಗೆ ನೀಲಿನಕ್ಷೆ ತಯಾರಿಸಿ ಅದನ್ನು ಮತದಾರರ ಮುಂದಿಡಬೇಕು, ಕ್ಷೇತ್ರದಲ್ಲಿ ಶಿಕ್ಷಣ, ತಾಂತ್ರಿಕ ಪರಿಣಿತಿ, ವಯಸ್ಸು, ಲಿಂಗ ಆಧರಿಸಿ ಉದ್ಯೋಗ ಕಲ್ಪಿಸುವ ದೂರದೃಷ್ಠಿ ಇರಬೇಕು. ಆದರೆ ನಮ್ಮ ಕ್ಷೇತ್ರದಲ್ಲಿ ಈ ಕೆಲಸವನ್ನು ಯಾರೂ ಮಾಡಿಲ್ಲ – ರೇಹಾನ್‌ ಅಹಮದ್‌, ವಿದ್ಯಾರ್ಥಿ

ನೀರಾವರಿ ಯೋಜನೆ ಜಾರಿ

ಕ್ಷೇತ್ರದಲ್ಲಿ ರಸ್ತೆ, ನೀರಾವರಿ ಕಾಮಗಾರಿಗಳು ನಡೆದಿವೆ, ಬರಗಾಲ ಇರುವ ಕಾರಣ ಯುವಕರು ಮಹಿಳೆಯರು ಗುಳೆ ಹೋಗುವುದನ್ನು ತಪ್ಪಿಸಲು ಗಾರ್ಮೆಂಟ್ಸ್ ನಂತಹ ಒಂದೆರಡು ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ದೊರೆಯುವಂತಾಗಬೇಕು – ಎಚ್.ಎಂ.ಪ್ರಭಾವತಿ, ಅಧ್ಯಕ್ಷರು ಸ್ವಾಭಿಮಾನಿ ಮಹಿಳೆಯರ ಸಹಕಾರ ಸಂಘ

ಹೆಚ್ಚು ಅನುದಾನ ತರಲು ಸಫಲ

‘ನಮ್ಮ ತಂದೆ ದಿವಂಗತ ಕೆ.ಎಸ್‌.ಪುಟ್ಟಣ್ಣಯ್ಯ ಅವರು ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ತಂದಿದ್ದಾರೆ. ಪಾಂಡವಪುರ ತಾಲ್ಲೂಕಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಹಲವು ದಶಕಗಳಿಂದ ನನೆಗುಗಿದೆ ಬಿದ್ದಿದ್ದ ಗಡಿ ಪ್ರದೇಶ ದುದ್ದ ಹೋಬಳಿಗೆ ಕುಡಿಯುವ ನೀರು ತರಲು ನಮ್ಮ ತಂದೆ ಅಪಾರ ಕಷ್ಟಪಟ್ಟಿದ್ದಾರೆ. ಈಗ ಅವರ ಕಷ್ಟಕ್ಕೆ ಫಲ ಸಿಕ್ಕಿದೆ. ಅವರು ಮೃತಪಟ್ಟ ನಂತರ ಮುಖ್ಯಮಂತ್ರಿಗಳು ದುದ್ದ ಕುಡಿಯುವ ನೀರಿನ ಯೋಜನೆಗೆ ಸಹಿ ಹಾಕಿದ್ದಾರೆ. ಆ ಭಾಗದ ಬಹುದಿನಗಳ ಕನಸು ಈಡೇರಿದೆ. ಇದರ ಜೊತೆಗೆ ರೈತರ ಕಷ್ಟ ಸುಖಗಳಲ್ಲಿ ನಮ್ಮ ತಂದೆ ಪಾಲುದಾರರಾಗಿದ್ದಾರೆ. ಅದೇ ಹಾದಿಯಲ್ಲಿ ನಾನೂ ಮುನ್ನಡೆಯುತ್ತಿದ್ದೇನೆ. ರೈತರು ಬ್ಯಾಂಕ್‌ಗಳಲ್ಲಿ ಅಡವಿಟ್ಟಿರುವ ಚಿನ್ನದ ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿದ್ದೇವೆ’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT