ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಐದು ನಾಮಪತ್ರ ಸಲ್ಲಿಕೆ

Last Updated 20 ಏಪ್ರಿಲ್ 2018, 10:40 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಗುರುವಾರ ಒಟ್ಟು ಐದು ನಾಮಪತ್ರಗಳು ಸಲ್ಲಿಕೆಯಾಗಿವೆ. ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ನರಸಿಂಹನಾಯಕ ಅವರು ಬಿಜೆಪಿಯಿಂದ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ ಇದೇ ಪಕ್ಷದಿಂದ ತಿಮ್ಮಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಶಹಾಪುರ ಕ್ಷೇತ್ರದಲ್ಲಿ ಶರಣಬಸಪ್ಪಗೌಡ ದರ್ಶನಾಪೂರ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ ಬಾಬುರಾವ್ ಚಿಂಚನಸೂರ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

ಅರ್ಧ ತಾಸು ಕಾದು ಕುಳಿತ ದರ್ಶನಾ‍ಪುರ

ಶಹಾಪುರ: ಶಹಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ ಗುರುವಾರ ಪಕ್ಷದ ನೀಡಿದ ‘ಬಿ’ ಫಾರಂ ಜತೆಯಲ್ಲಿ ಚುನಾವಣೆ ಅಧಿಕಾರಿ ನವೀನ್ ಜೋಸೆಫ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಶುಭ ದಿನವೆಂದು ಭಾವಿಸಿ ದರ್ಶನಾಪುರ ಅವರ ಜೊತೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಅರಬೋಳ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗನಗೌಡ ದೇಸಾಯಿ, ಶರಣಪ್ಪ ಸಲಾದಪುರ ಹಾಗೂ ಸಯ್ಯದ ಮುಸ್ತಾಫ್ (ಬಾಂಬೆಸೇಠ) ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದರು.

ಶರಣಬಸಪ್ಪ ದರ್ಶನಾಪುರ ಅವರು ಬೆಳಿಗ್ಗೆ 10.30ಗಂಟೆಗೆ ನಾಮಪತ್ರ ಸಲ್ಲಿಸಲು ತಹಶೀಲ್ ಕಚೇರಿಗೆ ಆಗಮಿಸಿದರು. ಆಗ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಕೆಗೆ ಬಂದಿರುವ ಕುರಿತು ಮಾಹಿತಿ ನೀಡಿದರು. ಆಗ ಚುನಾವಣೆ ಅಧಿಕಾರಿಯು ನಾಮಪತ್ರ ಸಲ್ಲಿಸುವ ಸಮಯ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ಅವಧಿಯಾಗಿದೆ. ನಿಗದಿತ ಸಮಯಕ್ಕೆ ಕೊಠಡಿಗೆ ಬಂದು ನಾಮಪತ್ರ ಸಲ್ಲಿಸಲು ಸೂಚಿಸಿದರು. ಇದರಿಂದ ಅನಿವಾರ್ಯವಾಗಿ ದರ್ಶನಾಪುರ ಅವರು ಅರ್ಧಗಂಟೆ ತಹಶೀಲ್ ಕಚೇರಿಯಲ್ಲಿ ಕುಳಿತು ನಂತರ ನಾಮಪತ್ರ ಸಲ್ಲಿಸಿ ಹೊರಬಂದರು.

ಪೂಜೆ ಬಳಿಕ ನಾಮಪತ್ರ ಸಲ್ಲಿಸಿದ ರಾಜೂಗೌಡ

ಸುರಪುರ: ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಅವರು ಸುರಪುರ ಮೀಸಲು ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಗುರುವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಸುರೇಶ ಅಂಕಲಗಿ, ಚುನಾವಣಾ ಶಿರಸ್ತೇದಾರ್ ಅಶೋಕ ಸುರಪುರಕರ ಇದ್ದರು.

ಬಿಜೆಪಿ ಮುಖಂಡರಾದ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ಗದ್ದೆಪ್ಪ ಪೂಜಾರಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಮರಣ್ಣ ಹುಡೇದ್, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಸ್ಥಾವರಮಠ, ಪ್ರಮುಖರಾದ ಎಚ್.ಸಿ. ಪಾಟೀಲ್, ಸಂಗನಗೌಡ ಪಾಟೀಲ್ ವಜ್ಜಲ್, ನಿಂಗಾನಾಯ್ಕ ರಾಠೋಡ, ದೇವಿಂದ್ರಪ್ಪ ವಾಗಣಗೇರಾ, ಭೀಮಣ್ಣ ಚಿಕ್ಕನಳ್ಳಿ, ಗೋವಿಂದರಾಜ್ ಶಹಾಪುರಕರ್, ವಕೀಲರಾದ ಅಪ್ಪಾಸಾಹೇಬ ಪಾಟೀಲ್ ಹಗರಟಗಿ, ಪ್ರಕಾಶ ಕವಲಿ ಇದ್ದರು.

ನಾಮಪತ್ರ ಸಲ್ಲಿಕೆಗೆ ಮುನ್ನ ರಾಜೂಗೌಡ ಅವರು ನಾರಾಯಣಪುರ ಸಮೀಪದ ದೇವರಗಡ್ಡಿಯ ಗದ್ದೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಾರಾಯಣಪುರದ ಗಣೇಶ ದೇವಸ್ಥಾನ, ಕೊಡೇಕಲ್ ಬಸವಣ್ಣ ದೇವಸ್ಥಾನ ಮತ್ತು ದೇವಾಪುರದ ಜಡಿಶಾಂತಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಂದರು.

ತಿಮ್ಮಮ್ಮ ನಾಮಪತ್ರ:
ರಾಜೂಗೌಡ ಅವರ ತಾಯಿ ತಿಮ್ಮಮ್ಮ ಶಂಭನಗೌಡ ಅವರೂ ಗುರುವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಸುರಪುರ: ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ರಾಜೂಗೌಡ ಕುರಿ ಸಾಕಾಣಿಕೆ ಮಾಡುತ್ತಿದ್ದು , 5 ಸಾವಿರ ಕುರಿ ಇರುವುದಾಗಿ ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ.

ಬೆಂಗಳೂರಿನ ಎಸ್.ಬಿ.ಐ. ನಲ್ಲಿ ₹2.90 ಲಕ್ಷ, ಅಪೆಕ್ಸ್ ಬ್ಯಾಂಕಿನಲ್ಲಿ ₹49 ಸಾವಿರ, ಸುರಪುರ ಕರ್ನಾಟಕ ಬ್ಯಾಂಕಿನಲ್ಲಿ ₹3.8 ಲಕ್ಷ, ತಾಳಿಕೋಟಿ ಕರ್ನಾಟಕ ಬ್ಯಾಂಕಿನಲ್ಲಿ ₹6 ಸಾವಿರ ಉಳಿತಾಯ ಖಾತೆಯಲ್ಲಿದೆ.

ತಾಲ್ಲೂಕಿನ ರಾಯನಗೋಳಾದಲ್ಲಿ 15ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಕೊಡೇಕಲ್‌ನಲ್ಲಿ 150X180 ಅಳತೆಯ ಮನೆ, ಬೆಂಗಳೂರಿನಲ್ಲಿ 66X40 ಮತ್ತು 50X80 ಅಳತೆಯ ನಿವೇಶನ ಇವೆ.

ಕ್ರೇನ್ ಮೆಲ್ಟೋ ಫಿಲ್‌ಫೈನ್ ಕಂಪೆನಿಯಲ್ಲಿ ₹8 ಲಕ್ಷ, ರಾಕಸ್ಟಾರ್ ಕಂಪೆನಿಯಲ್ಲಿ ₹1 ಲಕ್ಷ ಹಣ ತೊಡಗಿಸಿದ್ದಾರೆ.675 ಗ್ರಾಂ ಬಂಗಾರ ಇದೆ. ಪತ್ನಿಯ ಬಳಿ 800 ಗ್ರಾಂ. ಪುತ್ರನ ಬಳಿ 200 ಗ್ರಾಂ ಬಂಗಾರ ಇದೆ. ಒಟ್ಟು 3.66 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ಮೈತ್ರಾ ಅವರ ಒಟ್ಟು ಆಸ್ತಿ ಮೌಲ್ಯ ₹26 .58ಲಕ್ಷ.

ಬೆಂಗಳೂರು ಎಕ್ಸಿಸ್ ಬ್ಯಾಂಕಿನಲ್ಲಿ ₹8 ಸಾವಿರ ಉಳಿತಾಯ ಖಾತೆಯಲ್ಲಿ ಹಣ ಹೊಂದಿದ್ದು, ಹಿಂದುಸ್ ಲ್ಯಾಂಡ್ ಸಾಲುಶನ್ಸ್ ಕಂಪೆನಿಯಲ್ಲಿ ₹50 ಸಾವಿರ ತೊಡಗಿಸಿದ್ದಾರೆ. ಪತ್ನಿ ಕೈಯಲ್ಲಿ ₹2 ಲಕ್ಷ ನಗದು ಇದೆ.

ರಾಜೂಗೌಡ ಅವರ ಕೈಯಲ್ಲಿ ₹15 ಲಕ್ಷ ನಗದು ಹಣ ಇದೆ. ಅವರು 2017-18ನೇ ಸಾಲಿನಲ್ಲಿ 31.97 ಲಕ್ಷ ಆದಾಯ ಘೋಷಿಸಿಕೊಂಡಿದ್ದಾರೆ.

ಶಹಾಪುರ: ಶರಣಬಸಪ್ಪ ದರ್ಶನಾಪುರ ಅವರ ಚರಾಸ್ತಿಯ ಮೌಲ್ಯ ₹33ಲಕ್ಷ ಹಾಗೂ ಸ್ಥಿರಾಸ್ತಿ ಮೌಲ್ಯ ₹2.73ಕೋಟಿ ಇದೆ. ಪತ್ನಿ ಭಾರತಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ ₹1.12ಕೋಟಿ ಹಾಗೂ ಸ್ಥಿರಾಸ್ತಿ ಮೌಲ್ಯ ₹1.30ಕೋಟಿ. ಹಾಗೂ ಮಗಳು ಸೌಜನ್ಯ ಹೆಸರಿನಲ್ಲಿ ಚರಾಸ್ತಿ ಮೌಲ್ಯ ₹ 7.86ಲಕ್ಷ. ಸ್ಥಿರಾಸ್ತಿ ₹ 62ಲಕ್ಷ ಇದೆ.

ಅಲ್ಲದೆ ಎಚ್‌ಡಿಎಫ್ ಬ್ಯಾಂಕ್ ಕಲಬುರ್ಗಿಯ ಹಾಗೂ ಇತರ ಬ್ಯಾಂಕಿನಲ್ಲಿ ಒಟ್ಟು 90 ಲಕ್ಷ ಸಾಲವಿದೆ. ಪತ್ನಿ ಅವರು ರಾಜಶೇಖರ ಪಾಟೀಲ್ ಅವರ ಬಳಿ₹10 ಲಕ್ಷ ಕೈಸಾಲ ಪಡೆದುಕೊಂಡ ಬಗ್ಗೆ ಅಸ್ತಿ ವಿವರ ಘೋಷಿಸಿಕೊಂಡಿದ್ದಾರೆ.

ಶರಣಬಸಪ್ಪ ದರ್ಶನಾಪುರ ಅವರ ಬಳಿ ಕೈಯಲ್ಲಿರುವ ನಗದು ₹50,000 ಪತ್ನಿ ಭಾರ ಹಾಗೂ ಮಗಳು ಸೌಜನ್ಯ ಬಳಿ ಯಾವುದೇ ನಗದು ಹಣವಿಲ್ಲ. ದರ್ಶನಾಪುರ ಅವರ ಎಸ್‌ಬಿಐ ಶಹಾಪುರ ಬ್ಯಾಂಕ್ ಖಾತೆಯಲ್ಲಿ ₹4.14ಲಕ್ಷ, ವಿಶ್ವೇಶ್ವರಯ್ಯ ಬ್ಯಾಂಕಿನಲ್ಲಿ ₹18.43ಲಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ವಿಧಾನ ಸೌಧ ಶಾಖೆ ಬೆಂಗಳೂರಿನಲ್ಲಿ ₹26 ಸಾವಿರ. ವಿಜಯ ಬ್ಯಾಂಕ್ ಬೆಂಗಳೂರಿನಲ್ಲಿ ₹9.87ಲಕ್ಷ ನಗದು ಹೊಂದಿದ್ದಾರೆ.

ವಿಶ್ವೇಶ್ವರಯ್ಯ ಬ್ಯಾಂಕಿನಲ್ಲಿ ₹11ಸಾವಿರ ಪೇರು, ಮಾತ್ರೋಶ್ರಿ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರ ನಿಯಮಿತ ಶಹಾಪುರ ₹ 25.00 ಹೂಡಿಕೆ ಮಾಡಿದ್ದಾರೆ.

ಪತ್ನಿಯ ಹೆಸರಿನಲ್ಲಿ ವಿಜಯ ಬ್ಯಾಂಕ್ ಬೆಂಗಳೂರಿನಲ್ಲಿ ನಗದು ₹7.8ಲಕ್ಷ ವಿಶ್ವೇಶ್ವರಯ್ಯ ಬ್ಯಾಂಕಿನಲ್ಲಿ ₹1.52ಲಕ್ಷ ಹಾಗೂ ಎಸ್‌ಬಿಐ ಬ್ಯಾಂಕ್ ಕಲಬುರ್ಗಿ ₹1.31 ಲಕ್ಷ ನಗದು ಇದೆ.

ಅಲ್ಲದೇ ಷೇರು ಮತ್ತು ಹೂಡಿಕೆ ಹಣ ವಿನಿಯೋಗಿಸಿದಂತೆ ವಿಶ್ವೇಶ್ವರಯ್ಯ ಬ್ಯಾಂಕ್ ಕಲಬುರ್ಗಿ 1,000 ಮೌಲ್ಯದ (10 ಷೇರು) ಸರ್ಟಿಫಿಕೇಟ್. ಮಾತೋಶ್ರೀ ಹೇಮರಡ್ಡಿ ಮಲ್ಲಮ್ಮ ಶಹಾಪುರ ಶಾಖೆಯಲ್ಲಿ 2500 ಷೇರುಗಳು. ಎನ್ಎಫ್ಎ ಖಾಸಗಿ ಕಂಪನಿಯಲ್ಲಿ 10 ಮುಖ ಬೆಲೆಯ 1ಲಕ್ಷ ಷೇರುಗಳು. (ಸದಸ್ಯ ಮಾರುಟ್ಟೆಯ ಬೆಲೆ 10ಲಕ್ಷ) ನೆಕೆಸ್ಟ್ ಫ್ಯಾಷನ್ ಅಫೆರಲ್ಸ್ ಬೆಳಗಾವಿಯಲ್ಲಿ ₹42ಮೌಲ್ಯದ ಹಣ ಹೂಡಿಕೆ ಮಾಡಿದ್ದಾರೆ.

ಮಗಳು ಸೌಜನ್ಯ ವಿಶ್ವೇಶ್ವರಯ್ಯ ಹೆಸರಿನಲ್ಲಿ ಬ್ಯಾಂಕ್ ಕಲಬುರ್ಗಿ ₹15ಸಾವಿರ. ಎಸ್‌ಬಿಐ ಬ್ಯಾಂಕ್ ಕಲಬುರ್ಗಿ ₹1ಲಕ್ಷ. ಐಸಿಐಸಿ ಬ್ಯಾಂಕ್ ಬೆಂಗಳೂರಿನಲ್ಲಿ ₹78 ಸಾವಿರ. ಕೃಷಿ ಭೂಮಿ ಹಾರಣಗೇರಾ ಹಾಗೂ ದರ್ಶನಾಪುರ ಗ್ರಾಮದಲ್ಲಿ ಒಟ್ಟು ಆಸ್ತಿ 48 ಎಕರೆ 1ಗುಂಟೆ ಇದೆ. ಅದರ ಅಂದಾಜು ಮೌಲ್ಯ ₹75,00,000. ಕೃಷಿಯೇತರ ಭೂಮಿಯ ಮೌಲ್ಯ ₹ 40ಲಕ್ಷ ಇದೆ.

ಪತ್ನಿ ಭಾರತಿ ಹೆಸರಿನಲ್ಲಿ ಹೊಂಡಾಸಿಟಿ ಕಾರ್ ಇದೆ.15,00 ಗ್ರಾಂ ಬಂಗಾರದ ಆಭರಣಗಳು. (ಮೌಲ್ಯ ₹4,38,0000) ಬೆಳ್ಳಿ ನಾಲ್ಕು ಕೆ.ಜಿ (ಅಂದಾಜು ಮೊತ್ತ ₹1,56,0000) ತಾಯಿಯಿಂದ ಬಂದಿದ್ದು. ಮಗಳು ಸೌಜನ್ಯ ಹೆಸರಿನಲ್ಲಿ 200 ಗ್ರಾಂ ಂಬಗಾರದ ಒಡವೆಗಳು ಮೊತ್ತ ₹6ಲಕ್ಷ) ತಾಯಿಯಿಂದ ಬಂದಿದ್ದು. ವಸತಿ ಕಟ್ಟಡಗಳು ಕಲಬುರ್ಗಿ ಕೆ.ಎಚ್‌.ಬಿ ಕಾಲೊನಿಯಲ್ಲಿ ಅಂದಾಜು ₹45ಲಕ್ಷ ಮೌಲ್ಯದ ಮನೆ. ಅಪಾರ್ಟ್ ಮೆಂಟ್ ಅಂದಾಜು ಮೌಲ್ಯ ₹39ಲಕ್ಷ. ಪತ್ನಿ ಭಾರತಿ ಹೆಸರಿನಲ್ಲಿ ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಮನೆ. ಮಗಳು ಹೆಸರಿನಲ್ಲಿ ಕಲಬುರ್ಗಿಯಲ್ಲಿ ₹39ಲಕ್ಷ ಮೌಲ್ಯದ ಮಹಡಿ ಇದೆ ಎಂದು ಆಸ್ತಿ ಘೋಷಣೆಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT