ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಜಾಣ ಗಾಯನ; ನವಿಲು ನರ್ತನ, ಇದು ಜೈವಿಕ ಉದ್ಯಾನ

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕಾಜಾಣಗಳ ಇಂಪಾದ ಗಾನ‌ ಕೇಳಲು, ನವಿಲುಗಳ ನರ್ತನ ನೋಡಲು, ವನಸುಮಗಳ ಸೌಂದರ್ಯ ಸವಿಯಲು, ಸ್ಚಚ್ಛಂದವಾಗಿ ವಿಹರಿಸಲು ಈ ಜೈವಿಕ ಉದ್ಯಾನ ಪ್ರಶಸ್ತ ಸ್ಥಳ. ಇಲ್ಲಿನ ತಂಪು ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ಹಚ್ಚ ಹಸಿರಿನ ಪರಿಸರ ಕಣ್ಮನ ಸೆಳೆಯುತ್ತದೆ.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಈ ಸುಂದರ ಜೈವಿಕ ಉದ್ಯಾನ ವಲಸೆ ಪಕ್ಷಿಗಳು, ಚಿಟ್ಟೆಗಳ ವಾಸಸ್ಥಾನವಾಗಿದೆ. ಶ್ರೀಗಂಧ, ಬಿಳಿಜಾಲಿ, ಕರಿಜಾಲಿ, ಹತ್ತಿ, ಅರಳೆ, ಗೋಣಿಮರ, ಬಸರಿ, ನೇರಳೆ ಸೇರಿದಂತೆ ಅಪರೂಪದ ಗಿಡ–ಮರಗಳ ದಟ್ಟ ಕಾನನವಾಗಿ ಬೆಳೆಯುತ್ತಿದೆ.

ಇಲ್ಲಿನ ಪ್ರದೇಶವನ್ನು ಮಧುವನ, ಚರಕವನ, ಸಂಜೀವಿನಿವನ, ಸಹ್ಯಾದ್ರಿವನ ಎಂದು ವಿಂಗಡಿಸಿ ಅಳಲೇಕಾಯಿ, ಬೆಟ್ಟದ ನಲ್ಲಿಕಾಯಿ ಬೆಳೆಸಲಾಗಿದೆ. ದಾಳಿಂಬೆ, ಬೋರೆಹಣ್ಣು ಸೇರಿದಂತೆ ಆರ್ಯುವೇದ ಬಳಕೆಯ ಫಲ ನೀಡುವ ಗಿಡಗಳು ಇಲ್ಲಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರದಿಂದ ಅ‌ಪ್ಪೆಮಿಡಿ ಮಾವಿನ ಸಸಿಗಳನ್ನು ತಂದು ನೆಡಲಾಗಿದೆ.

ಇಲ್ಲಿನ ಚರಕವನದಲ್ಲಿ ಕೆಲ ಸ್ವಯಂಸೇವಾ ಸಂಸ್ಥೆಗಳು ಬುದ್ಧಿಮಾಂದ್ಯ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಔಷಧೀಯ ಗುಣಗಳುಳ್ಳ ಸಸ್ಯರಾಶಿಯ ನಡುವೆ ಮಕ್ಕಳು ದಿನವಿಡೀ ಕಾಲ ಕಳೆಯುವುದು ಮನಕ್ಕೆ ಮುದ ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳಿತು.

ಎಸ್‌ಎಸ್‌ಎಲ್‌ಸಿ ‌ಹಾಗೂ ಕಾಲೇಜು ವಿದ್ಯಾರ್ಥಿಗಳು ಈ ಉದ್ಯಾನದಲ್ಲಿ ಚಾರಣ ಕೈಗೊಳ್ಳಲು ಅವಕಾಶವಿದೆ. ನಗರದ ಹಲವು ಶಾಲಾ – ಕಾಲೇಜು ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುವ ಪರಿಪಾಠ ಇದ್ದು, ಪರಿಸರದ ಸೂಕ್ಷ್ಮ ವಿಚಾರ ಅರಿತುಕೊಳ್ಳುತ್ತಾರೆ.

150‌ ಜಾತಿಯ ಪಕ್ಷಿ ಸಂಕುಲ, 200 ಪ್ರಭೇದದ ಚಿಟ್ಟೆಗಳು, 100 ನವಿಲುಗಳು ಇಲ್ಲಿವೆ.

ಇದು ಪ್ರಕೃತಿ ಪ್ರಿಯರ ಅಚ್ಚುಮೆಚ್ಚಿನ ಸ್ಥಳವೂ ಆಗಿದೆ. ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಇಲ್ಲಿನ ಚಿಟ್ಟೆಸಂಕುಲದ ಬಗ್ಗೆಯೇ ಅಧ್ಯಯನ ನಡೆಸಿ ಪಿಎಚ್‌.ಡಿ ಪದವಿ ಗಳಿಸಿದ್ದಾರೆ.

‘ಈ ಉದ್ಯಾನ ವ್ಯಾಪ್ತಿಯಲ್ಲಿ ಜಲಮರು ಪೂರಣ ಯೋಜನೆಗಾಗಿ ಸಣ್ಣ ಪ್ರಮಾಣದ ಚೆಕ್‌ ಡ್ಯಾಂಗಳು, ಕೆರೆಗಳನ್ನು ನಿರ್ಮಿಸಲಾಗಿದೆ. ನೀರು ಸಂಗ್ರಹಗೊಂಡು ಸುತ್ತಲಿನ ಪರಿಸರ ಹಸಿರಿನಿಂದ ನಳನಳಿಸುತ್ತಾ ತಂಪಾದ ವಾತಾವರಣ ಸೃಷ್ಟಿಯಾಗಿದೆ. ಈಗೊಂದು ಉದ್ಯಾನ ರೂಪಗೊಳ್ಳಲು 20 ವರ್ಷಗಳ ಶ್ರಮ ಅಡಗಿದೆ’ ಎನ್ನುತ್ತಾರೆ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ಬಯೋ ಪಾರ್ಕ್ ಸಂಯೋಜನಾಧಿಕಾರಿ ಪ್ರೊ.ಟಿ.ಜೆ.ರೇಣುಕಾ ಪ್ರಸಾದ್.

‘ಬೆಂಗಳೂರು ಬೆಂಗಾಡಾಗಿ ಬೆಳೆಯುತ್ತಿದೆ. ಈ ಕಾಂಕ್ರಿಟ್ ಕಾಡಿನಲ್ಲಿ ಕಾಜಾಣಗಳು ಹಾಡಬೇಕಾದರೆ ಪರಿಸರ ಉಳಿಸುವ ಪ್ರಯತ್ನ ಪ್ರತಿಯೊಬ್ಬರ ಬದ್ಧತೆಯಾಗಬೇಕು’ ಎಂಬುದು ಅವರ ಮನದ ಮಾತು.

ಉದ್ಯಾನದ ರೂವಾರಿ

ನನ್ನ ಜೀವನಗಾಥೆಯು 1995ರಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ‘ಹಸಿರುಹಾದಿ’ ಸರಣಿಯಾಗಿ ಪ್ರಕಟವಾಗಿತ್ತು. ಲೇಖನಗಳಿಂದ ಪ್ರಭಾವಿತರಾದ ಅಂದಿನ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿದ್ದ‍ಪ್ಪ ಅವರ ಸಲಹೆ ಮೇರೆಗೆ ಕ್ಯಾಂಪಸ್‌ನಲ್ಲಿ ಗಿಡಗಳನ್ನು ನೆಡುವ ನಿರ್ಧಾರ ಮಾಡಲಾಯಿತು.

ಸುಮಾರು ಒಂದು ಸಾವಿರ ಎಕರೆ ವಿಸ್ತೀರ್ಣದ ಈ ಕ್ಯಾಂಪಸ್‌ ಕೆಲ ವರ್ಷಗಳ ಹಿಂದೆ ಶ್ರೀಗಂಧ ಕಾವಲು ಪ್ರದೇಶ ಆಗಿತ್ತು. ವೃಷಭಾವತಿ ನದಿ ಸ್ವಚ್ಛಂಧವಾಗಿ ಹರಿಯುತ್ತಿತ್ತು. ಕಾಲಾಂತರದಲ್ಲಿ ಈ ಪ್ರದೇಶ ಬೊಳಾಯಿತು. ಅರಣ್ಯ ಇಲಾಖೆ ಸಹಯೋಗದಲ್ಲಿ 300 ಎಕರೆ ಪ್ರದೇಶದಲ್ಲಿ ಒಂದೂವರೆ ಲಕ್ಷ ಸಸಿಗಳನ್ನು ನೆಡಲಾಯಿತು.

ನಾನು ಆಗಷ್ಟೇ ಸೇವೆಯಿಂದ ನಿವೃತ್ತನಾಗಿದ್ದೆ. ಪಿಂಚಣಿಯಿಂದ ಬಂದ ₹5ಲಕ್ಷ ಹಾಗೂ ದಾನಿಗಳಿಂದ ₹50 ಲಕ್ಷ ಹಣ ಸಂಗ್ರಹಿಸಿ ಉದ್ಯಾನ ನಿರ್ಮಾಣಕ್ಕೆ ಹಣ ಹೊಂದಿಸಿಕೊಂಡೆ. ಈಗ ಬೆಳೆದು ನಿಂತಿರುವ ಶ್ರೀಗಂಧದ ಮರಗಳು ಸೇರಿದಂತೆ ಅರಣ್ಯ ಸಂಪತ್ತಿನ ಬೆಲೆ ₹10 ಸಾವಿರ ಕೋಟಿ. ಆದರೆ, ವಿಶ್ವವಿದ್ಯಾಲಯಕ್ಕೆ ಈ ಬಗ್ಗೆ ಲಕ್ಷ್ಯವೇ ಇಲ್ಲ. ಅಂದಿನ ಕುಲಪತಿ ಡಾ.ಸಿದ್ದಪ್ಪ, ನಂತರ ಬಂದ ಪ್ರೊ.ತಿಮ್ಮಪ್ಪ ಅವರ ಕಾಲದಲ್ಲಿ ಸ್ವಲ್ಪ ನಿಗಾ ಇರುತ್ತಿತ್ತು. ನಂತರ ಬಂದವರಲ್ಲಿ ಅಂಥ ಆಸಕ್ತಿ ಕಾಣಲಿಲ್ಲ. ಸಂಶೋಧನೆಗೆ ಸಾಕಷ್ಟು ಸರಕು ಇಲ್ಲಿದೆ. ಆದರೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಕೌತುಕ ಇಲ್ಲ.

ಪರಿಸರ ಪ್ರೇಮಿಗಳ ನೆರವಿನಿಂದ ಈ ಸುಂದರ ಉದ್ಯಾನ ನಿರ್ಮಾಣಗೊಂಡಿದೆ. ಇದು ಸಾರ್ವಜನಿಕರ ಆಸ್ತಿ. ಲಾಲ್‌ಬಾಗ್‌ ಮತ್ತು ಕಬ್ಬನ್ ಪಾರ್ಕ್‌ ಬಿಟ್ಟರೆ ಬೆಂಗಳೂರಿನ ಅತಿದೊಡ್ಡ ಉದ್ಯಾನ ಇದು. 80ರ ಇಳಿವಯಸ್ಸಿನಲ್ಲೂ ಹಾಗಾಗ ಉದ್ಯಾನಕ್ಕೆ ಭೇಟಿ ನೀಡುತ್ತೇನೆ.

-ಡಾ. ಯಲ್ಲಪ್ಪರೆಡ್ಡಿ, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT