ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶಜೀವಿ ರಾಜ್

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅದು ಎಪ್ಪತ್ತರ ದಶಕ. ಹಳ್ಳಿಯಲ್ಲಿ ಅಪ್ಪನ ಅಂಕೆಯೊಳಗೇ ಬೆಳೆದಿದ್ದ ನಾನು ಓದಲೆಂದು ಬೆಂಗಳೂರಿಗೆ ಬಂದಿದ್ದೆ. ವಾರ್ಡನ್ ಇಲ್ಲದ ಉಚಿತ ವಸತಿ ನಿಲಯದಲ್ಲಿ ದಾರಿ ತಪ್ಪಲು ಹಲವು ಅವಕಾಶಗಳು ಇದ್ದವು. ನನ್ನಂಥ ಎಷ್ಟೋ ಹದಿಹರೆಯದವರು ದಾರಿ ತಪ್ಪದಂತೆ ತಡೆದದ್ದು ಅಣ್ಣಾವ್ರ ಚಿತ್ರಗಳು. ಅವರು ನಟಿಸಿದ ನಮ್ಮ ಸಂಸಾರ, ನನ್ನ ತಮ್ಮ, ದೇವರು ಕೊಟ್ಟ ತಂಗಿ, ಪುನರ್ಜನ್ಮ ಚಿತ್ರಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿವೆ. ನನ್ನ ತಮ್ಮ–ತಂಗಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಆ ಚಿತ್ರಗಳೇ ಕಾರಣ. ಆ ಕಾಲಕ್ಕೆ ಆಂಧ್ರದ ಒಂದು ಭಾಗವೇನೋ ಎಂಬಂತಿದ್ದ ಅವಿಭಜಿತ ಕೋಲಾರ ಜಿಲ್ಲೆಯ ನನ್ನಂತಹವನ ಎದೆಯಲ್ಲಿ ಕನ್ನಡ ಪ್ರೀತಿಯ ಜ್ಯೋತಿ ಬೆಳಗಿದ್ದು ಆ ಪುಣ್ಯಾತ್ಮ.

–ಎಸ್.ಸಿ.ಶ್ರೀನಿವಾಸ್, ದೇವಸಂದ್ರ, ಕೃಷ್ಣರಾಜಪುರ

ಅಣ್ಣಾವ್ರು ನನ್ನ ಪಾಲಿನ ದೇವರು

ರಾಜ್‌ಕುಮಾರ್ ನನ್ನ ಪಾಲಿನ ದೇವರು. ಅವರ ವ್ಯಕ್ತಿತ್ವ, ಸರಳತೆ ನನಗೆ ಇಷ್ಟ. ದೇವತಾ ಮನುಷ್ಯ, ಕಾಮನಬಿಲ್ಲು, ಬಂಗಾರದ ಮನುಷ್ಯ ಚಿತ್ರಗಳು ನನ್ನ ಮೇಲೆ ಪ್ರಭಾವ ಬೀರಿವೆ. ಆ ಸಿನಿಮಾಗಳ ಸಂದೇಶವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಒಳಿತು ಕಂಡಿದ್ದೇನೆ. ಅವರ ಚಿತ್ರಗಳು ಪ್ರತಿಯೊಬ್ಬರ ಬದುಕಿಗೆ ಆದರ್ಶನೀಯ, ಮಾನವಿಯತೆ, ಸಹನೆ,ತಾಳ್ಮೆ, ಛಲದ ಪ್ರತೀಕವಾಗಿವೆ.

–ಸಿ.ಜಗನ್ನಾಥ ನಾಯ್ಕ್

ಬಂಗಾರದ ಮನುಷ್ಯ ನನಗೆ ಸ್ಪೂರ್ತಿ

ನಾನು ರಾಜ್‌ಕುಮಾರ್ ಅವರ ಅಭಿಮಾನಿ. ಅಣ್ಣಾವ್ರ ಬಹುತೇಕ ಎಲ್ಲ ಚಿತ್ರಗಳನ್ನೂ ನೋಡಿದ್ದೇನೆ. ನನಗೆ ‘ಬಂಗಾರದ ಮನುಷ್ಯ’ ಮತ್ತು ‘ಭಾಗ್ಯವಂತರು’ ತುಂಬಾ ಇಷ್ಟವಾದ ಚಿತ್ರಗಳು. ಈ ಎರಡೂ ಚಿತ್ರಗಳು ನನ್ನ ಬದುಕಿಗೆ ಪ್ರೇರಣೆಯಾದವು. ಜೀವನದಲ್ಲಿ ಕಷ್ಟಪಟ್ಟರೆ ಯಶಸ್ಸು  ಸಿಗುತ್ತದೆ ಎಂಬುದನ್ನು ಈ ಚಿತ್ರಗಳು ಸಾರುತ್ತವೆ. ಸಂಬಂಧಗಳ ಮೌಲ್ಯ ಕುರಿತು ಅರಿವು ಮೂಡಿಸುತ್ತದೆ. ಪ್ರೀತಿ ಹಂಚುವುದು ಹಾಗೂ ವಿಶ್ವಾಸ ಉಳಿಸಿಕೊಳ್ಳುವುದನ್ನು ತಿಳಿಸಿಕೊಡುತ್ತವೆ. ಅವುಗಳನ್ನೇ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ.

–ಜಿ.ಎಲ್.ನಾಗರಾಜ್, ಪಟ್ಟೆಗಾರಪಾಳ್ಯ

ಶತಮಾನದ ಇತಿಹಾಸ ಪುರುಷ

ಒಂದೇ ನಾಡು, ಒಂದೇ ಕುಲ ಹಾಗೂ ಒಂದೇ ದೈವ ಎಂಬ ಮೂರು ತತ್ವಗಳನ್ನು ಮೈಗೂಡಿಸಿಕೊಂಡಿದ್ದ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕುವೆಂಪು ಅವರ ಸಾಲಿನಲ್ಲಿ ಅಣ್ಣವ್ರು ನಿಲ್ಲುತ್ತಾರೆ. ಕಂಠೀರವ ಸ್ಟುಡಿಯೊದಲ್ಲಿ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿತ್ತು. ಆಗ ಅಣ್ಣಾವ್ರನನ್ನು ನೋಡಲು ನಮ್ಮನ್ನು ಒಳಗೆ ಬಿಡಲಿಲ್ಲ. ಹೀಗಾಗಿ, ಬೇಲಿ ಹಾರಿ ಒಳಗೆ ಹೋದೆವು. ಆಗ ನಮ್ಮನ್ನು ನೋಡಿದ ರಾಜ್‌ಕುಮಾರ್ ಹತ್ತಿರ ಕರೆದು, ಇಡ್ಲಿ ತರಿಸಿ ನಮಗೆಲ್ಲರಿಗೂ ತಿನ್ನುಲು ಹೇಳಿದರು. ತಿಂಡಿ ತಿಂದ ನಂತರ ಕಳುಹಿಸಿದರು. ಅದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಅವರ ಎಲ್ಲ ಚಿತ್ರಗಳನ್ನು ನೋಡಿದ್ದೇನೆ. ಕುಟುಂಬದ ಸದಸ್ಯರ ಜೊತೆಗೆ ಜತೆ ಯಾವ ರೀತಿಯ ಒಡನಾಟ ಇಟ್ಟುಕೊಳ್ಳಬೇಕು ಎಂಬುದನ್ನು ಅವರಿಂದಲೇ ಕಲಿತೆ.

–ಜಿ.ಹನುಮಂತು, ನೆಲಮಂಗಲ

ಸೌಜನ್ಯದ ಮಾತಿಗೆ ಪ್ರತೀಕ

ಶಬ್ದವೇದಿ ಚಿತ್ರದ ದೃಶ್ಯವೊಂದರಲ್ಲಿ ಪಾತ್ರಧಾರಿಯೊಬ್ಬ ತಾಯಿ ಬಗ್ಗೆ ಅವಾಚ್ಯ ಪದ ಬಳಸುತ್ತಾರೆ. ಆಗ ರಾಜ್‌ಕುಮಾರ್ ಆ ವ್ಯಕ್ತಿಯ ಕಪಾಳಕ್ಕೆ ಹೊಡೆದು ಬುದ್ಧಿ ಕಲಿಸುತ್ತಾರೆ. ಆ ದೃಶ್ಯ ನನ್ನ ಮೇಲೆ ಅತ್ಯಂತ ಗಾಢವಾಗಿ ಪ್ರಭಾವ ಬೀರಿದೆ. ನಿಜ ಜೀವನದಲ್ಲಿ ಅವರು ಸೌಜನ್ಯಭರಿತ ಮಾತಿಗೆ ಪ್ರತೀಕವಾಗಿದ್ದರು. ಅಭಿಮಾನಿಗಳನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರ ನಡೆ–ನುಡಿಯಿಂದಾಗಿ ನಾನೂ ಸೌಜನ್ಯಭರಿತವಾಗಿ ಮಾತನಾಡುವುದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ.

–ಕೆ.ಶಿವಾನಂದ ಹಿರೇಮಠ, ಮಾಗಡಿ ರಸ್ತೆ

ಸದಾ ಜೀವಂತ

ರಾಜ್‌ಕುಮಾರ್ ಅಂದರೆ ನನ್ನ ಪಾಲಿಗೆ ಕನ್ನಡದ ಅಸ್ಮಿತೆ ಉದ್ಧರಿಸಿದ ಚೇತನ. ಕಾರ್ಯನಿಮಿತ್ತ ಅಣ್ಣವ್ರು ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನಕ್ಕೆ ಬಂದಿದ್ದರು. ಅದೇ ಸಂದರ್ಭದಲ್ಲಿ ನಾನೂ ಅಲ್ಲಿದ್ದೆ. ಜೊತೆಯಲ್ಲಿ ನಿಂತು ಚಿತ್ರ ತೆಗೆಸಿಕೊಳ್ಳಬೇಕು ಎಂಬ ನನ್ನ ಆಸೆಗೆ ಒಪ್ಪಿದ ಅವರು ನನ್ನ ಹೆಗಲ ಮೇಲೆ ಕೈಹಾಕಿ ನಿಂತರು. ‘ಅಣ್ಣಾ, ನಾನೂ ನಿಮ್ಮ ಹೆಗಲ ಮೇಲೆ ಕೈ ಹಾಕಲೆ?’ ಎಂದು ಸಂಕೋಚದಿಂದಲೇ ಕೇಳಿದೆ. ‘ಹಾಕಪ್ಪ, ಅದಕ್ಕೇನಂತೆ’ ಎಂದರು. ಅವರು ಮೈದಳೆದು ಬಂದ ಸೌಜನ್ಯಮೂರ್ತಿಯಂತೆ ಇದ್ದರು. ಕೊನೆಗೆ ನನ್ನ ಕಾಯಕದ ಬಗ್ಗೆ ಹೇಳಿಕೊಂಡೆ. ತಿಂಡಿ ಕೇಂದ್ರ ನಡೆಸುತ್ತಿರುವ ಬಗ್ಗೆ ಹೇಳಿದೆ. ಅವರ ಸ್ಫೂರ್ತಿಯಿಂದಲೇ ನಾನು ನೇತ್ರದಾನ, ಅಂಗಾಂಗದಾನ ಮತ್ತು ದೇಹದಾನ ಪ್ರಚಾರ ಕಾರ್ಯ ಆರಂಭಿಸಿದ್ದು.

–ಡಾ.ಕೃ.ವೆಂ.ರಾಮಚಂದ್ರ, ಕನ್ನಡದ ತಿಂಡಿ ಕೇಂದ್ರ, ಚಾಮರಾಜಪೇಟೆ

ರಾಜೀವನ ಪಾತ್ರದಿಂದ ಕೃಷಿ ಒಲವು

ಸಾವಿರಾರು ಯುವ ಜನರಿಗೆ ಸ್ಪೂರ್ತಿಯಾದ ಬಂಗಾರದಂಥ ಸಿನಿಮಾ ‘ಬಂಗಾರದ ಮನುಷ್ಯ’. ಆ ಚಿತ್ರದಲ್ಲಿ, ಕಲ್ಲು ಭೂಮಿಯನ್ನು ಛಲದಿಂದ ಕೃಷಿ ಭೂಮಿಯಾಗಿಸುವ ರಾಜೀವನ ಪಾತ್ರವು ನನ್ನ ಮೇಲೆ ಪ್ರಭಾವ ಬೀರಿದೆ. ಸಾಕಷ್ಟು ಬಾರಿ ಆ ಚಿತ್ರವನ್ನು ನೋಡಿದ್ದೇನೆ. ಅದೇ ಚಿತ್ರದಿಂದಾಗಿ ನನ್ನ ಚಿತ್ತ ಕೃಷಿಯತ್ತ ಹೋಯಿತು. ನಮ್ಮೂರಿನ ನರ್ಸರಿಯಲ್ಲಿ ₹10 ಸಾವಿರ ಮುಂಗಡವಾಗಿ ನೀಡಿ ಬೇರೆ ಬೇರೆ ಜಾತಿಯ 40 ಸಸಿಗಳನ್ನು ಖರೀದಿಸಿ ಅವುಗಳಿಗೆ ಅಣ್ಣಾವ್ರ ಚಿತ್ರಗಳ ಹೆಸರುಗಳನ್ನಿಟ್ಟು ಬೆಳೆಸಿದ್ದೇನೆ. ಕೃಷಿ ಬಗ್ಗೆ ಒಲವು ಮೂಡಲು ಅಣ್ಣಾವ್ರೇ ಕಾರಣ.

–ನಾಗರಾಜ್ ಲೇಖನ್

ನೀವು ಚೆನ್ನಾಗಿರಬೇಕು ಎಂದಿದ್ದೆ ರೋಮಾಂಚನ

2002ರಲ್ಲಿ ನಾನು ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಪುನೀತ್ ರಾಜ್‌ಕುಮಾರ್‌ ಅವರ ‘ಅಪ್ಪು’ ಸಿನಿಮಾದ ಶತದಿನೋತ್ಸವ ಸಂಭ್ರಮಕ್ಕೆ ಅಣ್ಣಾವ್ರು ಚಾಮರಾಜನಗರದ ಮೂಲಕ ಗಾಜನೂರಿಗೆ ಬಂದಿದ್ದರು. ಆಗ ನಾನು ಅವರ ಬೆಂಗಾವಲಿಗೆ ನಿಯೋಜನೆಗೊಂಡಿದ್ದೆ. ಮಗುವಿನ ಬಳಿಗೆ ತಾಯಿ ಓಡುವಂಥ ಧಾವಂತ ಅವರ ಮೊಗದಲ್ಲಿ ಕಾಣುತ್ತಿತ್ತು. ಏಕೆಂದರೆ ಅವರು ವೀರಪ್ಪನ್ ಕಪಿಮುಷ್ಠಿಯಿಂದ ಬಿಡುಗಡೆಗೊಂಡ ಬಳಿಕ ಮೊದಲ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ್ದರು. ಊರು, ಮನೆ ಕಂಡೊಡನೆ ಅವರ ಮೊಗದಲ್ಲಿ ನಗು ಮೂಡಿತ್ತು. ಅಲ್ಲಿ ನಮ್ಮನ್ನು ಜತೆಯಲ್ಲಿ ಕೂರಿಸಿಕೊಂಡು ‘ನೀವು ಪೊಲೀಸರು ಚೆನ್ನಾಗಿರಬೇಕು’ ಎಂದು ಹೇಳಿ ನಮಗೆ ಉಪಹಾರ ನೀಡಿದರು. ಆ ಕ್ಷಣ ನೆನೆದರೆ ಇಂದಿಗೂ ರೋಮಾಂಚನವಾಗುತ್ತದೆ.

ನೆಪ ಹೇಳಿ ನನ್ನಿಂದ ದೂರ ಹೋದ ಅವರು ತನ್ನ ತಂದೆ ಹೆಚ್ಚಾಗಿ ಇರುತ್ತಿದ್ದ ಆಲದಮರದ ಬಳಿ ಏಕಾಂಗಿಯಾಗಿ ಕೂತರು. ನಾನು ಅವರ ಬಳಿಗೆ ವಾಪಸ್ ಆದಾಗ ಅವರ ಕಣ್ಣಾಲಿಗಳು ತುಂಬಿದ್ದವು. ತಂದೆ-ತಾಯಿ ಮೇಲೆ ಅವರಿಗಿದ್ದ ಪ್ರೀತಿ, ನನ್ನನ್ನು ಈಗಲೂ ಜಾಗೃತಗೊಳಿಸುತ್ತಲೇ ಇದೆ.

–ಬಿ.ಬಿ.ಲಕ್ಷ್ಮೇಗೌಡ, ಡಿ.ಎಸ್.ಪಿ ಗುಪ್ತದಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT