ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 21–4–1968

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಂಗಳೂರಿನಲ್ಲಿ ಅನೇಕ ಬಾರಿ ಗೋಲಿಬಾರ್

ಮಂಗಳೂರು, ಏ. 20– ಮಂಗಳೂರು ಬಂದರು ಪ್ರದೇಶದಲ್ಲಿ ಇಂದು ಲೂಟಿ, ಗಲಭೆ, ಬೆಂಕಿ ಹಚ್ಚುವ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮುಂತಾದ ಯತ್ನಗಳಲ್ಲಿ ವಿಫಲರಾದ ಪೋಲೀಸರಿಂದ ಅನೇಕ ಸುತ್ತು ಗೋಲಿಬಾರ್, ಒಬ್ಬರು ಬಲಿ, 40 ಮಂದಿಗೆ ಗಾಯ.

ನಿನ್ನೆ ಎರಡು ವಿರುದ್ಧ ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯ ಪರಿಣಾಮವಾಗಿ ಉದ್ಭವಿಸಿದ ಉಗ್ರ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿನ್ನೆ ರಾತ್ರಿ ಸಹ ಪೋಲೀಸರಿಂದ ಎರಡು ಕಡೆ ಗೋಲಿಬಾರ್, ಆದರೂ ಇಂದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಶಾಂತಿ ಸಮಿತಿ ಸಭೆ ಸಮಾವೇಶಗೊಂಡ ನಂತರ ಈ ದಿನ ಸಂಜೆ 7 ಗಂಟೆಯಿಂದ ನಾಳೆ ಬೆಳಿಗ್ಗೆ 7 ಗಂಟೆಯವರೆಗೆ (12 ಗಂಟೆಗಳ ಕಾಲ) ಕರ್ಫ್ಯೂ ಜಾರಿಗೆ ತರಲಾಯಿತು.

ಟ್ರೈನ್‌ಗೆ ತಡೆ

ಕೋಟೇಕರ್, ಏ. 20– ಮಂಗಳೂರು ಗಲಭೆಗಳ ಕಾರಣದಿಂದ ‘ನಾನ್‌ಸ್ಟಾ‍ಪ್’ ಎಕ್ಸ್‌ಪ್ರೆಸ್ ಟ್ರೈನ್‌ಗಳನ್ನು ಉಲ್ಲಾಳದಲ್ಲಿ ತಡೆದು ನಿಲ್ಲಿಸಲಾಗಿದೆ. ಗಲಭೆಗಳಲ್ಲಿ ಒಂದು ಪಕ್ಷದ ಬೆಂಬಲಿಗರೆಂದು ಹೇಳಲಾಗಿರುವ ಮಲಬಾರ್‌ನಿಂದ ಬರುತ್ತಿದ್ದ ಒಂಬತ್ತು ಜನರನ್ನು ತಲಪಾಡಿಯಲ್ಲಿ ಬಂಧಿಸಲಾಗಿದೆ. ಮಲಬಾರ್‌ನಿಂದ ಬರುತ್ತಿರುವ ಎಲ್ಲ ಬಸ್ ಮತ್ತು ಕಾರ್‌ಗಳನ್ನು ಶೋಧಿಸಲಾಗುತ್ತಿದೆ.

ಹಿಂಸೆ ನಿಲ್ಲಿಸಿ ಶಾಂತಿ ಸ್ಥಾಪಿಸಿ: ಎಸ್ಸೆನ್

ಬೆಂಗಳೂರು, ಏ. 20– ‘ಹಿಂಸೆಯನ್ನು ನಿಲ್ಲಿಸಿ, ಶಾಂತಿಯನ್ನು ಸ್ಥಾಪಿಸಿ, ಕಾನೂನನ್ನು ಗೌರವಿಸಿ’ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಮತೀಯ ಗಲಭೆಯಿಂದ ಬಾಧಿತವಾಗಿರುವ ಮಂಗಳೂರಿನ ಜನತೆಯನ್ನು ಪ್ರಾರ್ಥಿಸಿಕೊಂಡಿದ್ದಾರೆ.

ಭಾರತ– ಪಾಕ್ ರಾಜಿಗೆ ಕೊಸಿಗಿನ್‌ರ ಹೊಸ ಯತ್ನ?

ರಾವಲ್ಪಿಂಡಿ, ಏ. 20– ಪಾಕಿಸ್ತಾನಕ್ಕೆ ಅಧಿಕೃತ ಭೇಟಿ ಕೊಟ್ಟು ಸ್ವದೇಶಕ್ಕೆ ಹೋಗುವ ಮಾರ್ಗದಲ್ಲಿ ನವದೆಹಲಿಗೆ ಭೇಟಿ ಕೊಡಲಿರುವ ರಷ್ಯ ಪ್ರಧಾನಿ ಕೊಸಿಗಿನ್ ಅವರು ಭಾರತ– ಪಾಕಿಸ್ತಾನ ನಡುವಣ ಬಾಂಧವ್ಯದ ಬಗ್ಗೆ ಮತ್ತೆ ಮಧ್ಯಸ್ಥಿಕೆ ಪ್ರಯತ್ನ ನಡೆಸಬಹುದೆಂದು ಇಲ್ಲಿ ಊಹಾ
ಪೋಹವೆದ್ದಿದೆ.

ಖಡಕ್‌ವಾಸ್ಲಾ ವರದಿ ಮೈಸೂರಿಗೆ ಅನುಕೂಲ?

ಬೆಂಗಳೂರು, ಏ. 20– ಇದೀಗ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿರುವ ಕೃಷ್ಣಾ ಜಲಪ್ರಮಾಣ ನಿರ್ಧಾರದ ಸಂಬಂಧದ ಖಡಕ್‌ ವಾಸ್ಲಾ ಜಲ ಸಂಶೋಧನಾ ಕೇಂದ್ರ ವರದಿಯು ಮೈಸೂರಿನ ನಿಲುವಿಗೆ ಅನುಕೂಲವಾಗಿದೆ ಎಂದು ಅಧಿಕೃತ ವಲಯಗಳು ಅಭಿಪ್ರಾಯಪಟ್ಟಿವೆ.

ರೈತರ ತೊಂದರೆ ತಪ್ಪಿಸುವ ಹೊಸ ರಶೀತಿ ಪಟ್ಟೆ

ಬೆಂಗಳೂರು, ಏ. 20– ರೈತರ ಜಮೀನು ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಹಾಯ ಮಾಡುವ ಹಾಗೂ ಅಲೆದಾಟ ಹಾಗೂ ತೊಂದರೆಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಸಿದ್ಧಗೊಳಿಸಿರುವ ಹೊಸ ರಶೀತಿ ಪಟ್ಟಿಗಳು (ಪಟ್ಟೆ) ಮೇ ಅಂತ್ಯದ ಹೊತ್ತಿಗೆ ಸಿದ್ಧವಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT