ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಕೊರತೆಯ ನಾನಾ ಮಜಲು

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

₹ 1,000 ಮತ್ತು ₹ 500 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ 2016ರ ನವೆಂಬರ್‌ 8ರಂದು ರದ್ದು ಮಾಡಿದ ನಂತರ ದೇಶದ ಎಟಿಎಂಗಳ ಮುಂದೆ ಕೆಲವು ದಿನಗಳವರೆಗೆ ‘ನೋ ಕ್ಯಾಷ್’ (ನಗದು ಇಲ್ಲ) ಫಲಕ ಕಾಣಿಸಿದ್ದು ವಿಶೇಷವೇನೂ ಆಗಿರಲಿಲ್ಲ. ನೋಟು ರದ್ದತಿ ಎನ್ನುವುದು ಇಂದಿನ ತಲೆಮಾರಿಗೆ ಸಂಪೂರ್ಣ ಹೊಸದಾಗಿತ್ತು. ಹಾಗೆಯೇ ಎಟಿಎಂ ಘಟಕಗಳ ಎದುರು ಉದ್ದನೆಯ ಸಾಲುಗಳನ್ನು ಕಾಣುವುದೂ ಆ ಸಂದರ್ಭದಲ್ಲಿ ವಿಶೇಷವೇ ಆಗಿತ್ತು. ಆರಂಭದಲ್ಲಿ ವಿಶೇಷ ಆಗಿದ್ದ ಈ ಚಿತ್ರಣ, ಕೆಲವು ದಿನಗಳ ನಂತರ ಸಹಜ ಎಂಬಂತೆ ಆಯಿತು. ನಂತರ, ಸ್ಮೃತಿಪಟಲದಿಂದ ತುಸು ಹಿಂದಕ್ಕೆ ಸರಿಯಿತು.

ಆದರೆ ಈ ವಾರ ದೇಶದ ಹಲವು ರಾಜ್ಯಗಳಲ್ಲಿ ಕಂಡುಬಂದ ನಗದು ಕೊರತೆ, ನೋಟು ರದ್ದತಿಯ ನಂತರದ ದಿನಗಳನ್ನು ಪುನಃ ನೆನಪಿಸಿತು. ಎಟಿಎಂಗಳಲ್ಲಿ ನಗದು ಸಿಗದೆ ಜನ ತೊಂದರೆ ಅನುಭವಿಸಿದರು, ವಿರೋಧ ಪಕ್ಷಗಳು ಸರ್ಕಾರವನ್ನು ಮಾತಿನಿಂದ ತಿವಿದವು. ಆದರೆ, ನೋಟು ರದ್ದತಿ ನಂತರ ಎದುರಾದ ಸಮಸ್ಯೆಗೂ, ಈಗ ಎದುರಾಗಿರುವ ಸಮಸ್ಯೆಗೂ ಒಂದು ವ್ಯತ್ಯಾಸ ಇದೆ. ನೋಟು ರದ್ದತಿ ನಂತರ, ಬ್ಯಾಂಕ್‌ಗಳಲ್ಲಿ ಕೂಡ ಕೇಳಿದಷ್ಟು ನಗದು ಸಿಗುತ್ತಿರಲಿಲ್ಲ. ಈಗ, ನಗದು ಸಿಗುತ್ತಿಲ್ಲದಿರುವುದು ಎಟಿಎಂ ಕೇಂದ್ರಗಳಲ್ಲಿ. ಬ್ಯಾಂಕ್‌ ಶಾಖೆಗಳಲ್ಲಿ ನಗದು ಕೊಡುತ್ತಿಲ್ಲ ಎಂಬ ದೂರುಗಳು ವರದಿಯಾಗಿಲ್ಲ.

ಯಾವೆಲ್ಲ ರಾಜ್ಯಗಳಲ್ಲಿ ನಗದು ಕೊರತೆ?

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಎಟಿಎಂಗಳಲ್ಲಿ ನಗದು ಸಿಗುತ್ತಿಲ್ಲ ಎಂಬ ದೂರುಗಳು ವರದಿಯಾಗಿವೆ. ಒಂದೆರಡು ತಿಂಗಳ ಹಿಂದೆ ಮೈಸೂರು ಮತ್ತು ತುಮಕೂರಿನಲ್ಲಿ ಕೂಡ ಎಟಿಎಂಗಳಲ್ಲಿ ನಗದು ಸಿಗುತ್ತಿಲ್ಲ ಎಂಬ ದೂರುಗಳು ಕೇಳಿದ್ದವು. ಆದರೆ ಅವು ಈಗಿನಷ್ಟು ಸುದ್ದಿ ಮಾಡಲಿಲ್ಲ!

ಈ ಕೊರತೆಗೆ ಸರ್ಕಾರ ನೀಡುತ್ತಿರುವ ಕಾರಣ ಏನು?

‘ಅಗತ್ಯಕ್ಕಿಂತ ಹೆಚ್ಚು ನಗದು ಚಲಾವಣೆಯಲ್ಲಿ ಇದೆ. ಬ್ಯಾಂಕ್‌ಗಳಲ್ಲಿಯೂ ನಗದು ಲಭ್ಯವಿದೆ. ನೋಟುಗಳ ಬೇಡಿಕೆ ಕೆಲವು ಭಾಗಗಳಲ್ಲಿ ದಿಢೀರನೆ ಹಾಗೂ ಅಸಹಜವೆಂಬಂತೆ ಹೆಚ್ಚಾಗಿದೆ. ಈ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲಾಗುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆದರೆ, ಹಠಾತ್ತಾಗಿ, ಅಸಹಜವಾಗಿ ಎಂದು ಹೇಳುವ ಬಗೆಯಲ್ಲಿ ನಗದು ಬೇಡಿಕೆಯ ಹೆಚ್ಚಳ ಆಗಿದ್ದು ಏಕೆ ಎಂಬುದನ್ನು ಅವರು ತಿಳಿಸಿಲ್ಲ.

ಇತರ ಕಾರಣಗಳು ಏನಿದ್ದಿರಬಹುದು?

ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ಸಂದರ್ಭದಲ್ಲಿ ದೇಶದಲ್ಲಿ ಚಲಾವಣೆಯಲ್ಲಿ (ಸಾರ್ವಜನಿಕರ ಬಳಿ ಮತ್ತು ಬ್ಯಾಂಕ್‌ಗಳ ಬಳಿ) ಇದ್ದ ನಗದಿನ ಮೊತ್ತ ₹ 17.97 ಲಕ್ಷ ಕೋಟಿ. ನೋಟು ರದ್ದು ಕ್ರಮ ಕೈಗೊಂಡು ಈಗಾಗಲೇ ಒಂದು ವರ್ಷ ಐದು ತಿಂಗಳು ಸಂದಿವೆ. ಈ ವರ್ಷದ ಏಪ್ರಿಲ್‌ ಮೊದಲ ವಾರದಲ್ಲಿ ಚಲಾವಣೆಯಲ್ಲಿದ್ದ ನಗದಿನ ಮೊತ್ತ ₹ 18.42 ಲಕ್ಷ ಕೋಟಿ. ಅಂದರೆ, ನೋಟು ರದ್ದತಿ ನಂತರದ ಅವಧಿಯಲ್ಲಿ ಚಲಾವಣೆಯಲ್ಲಿರುವ ನಗದಿನ ಮೊತ್ತದಲ್ಲಿ ಆಗಿರುವ ಹೆಚ್ಚಳ ಶೇಕಡ 2.5ರಷ್ಟು. ಇದೇ ಅವಧಿಯಲ್ಲಿ ದೇಶದ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರದ ಪ್ರಮಾಣ ಶೇಕಡ 5.7ರಷ್ಟಕ್ಕಿಂತ ಹೆಚ್ಚೇ ಇದೆ. ಚಲಾವಣೆಯಲ್ಲಿರುವ ನೋಟುಗಳ ಹೆಚ್ಚಳವು, ಜಿಡಿಪಿ ಬೆಳವಣಿಗೆ ದರಕ್ಕೆ ಸಮನಾಗಿ ಇಲ್ಲದಿರುವುದು ಕೂಡ ನಗದು ಕೊರತೆಗೆ ಒಂದು ಕಾರಣ ಆಗಿದ್ದಿರಬಹುದು ಎಂಬ ವಾದ ಇದೆ.

ದೇಶದಲ್ಲಿ ನಗದು ಕೊರತೆ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಾಗೂ ಕೇಂದ್ರ ಹಣಕಾಸು ಸಚಿವಾಲಯ ಹೇಳಿದ್ದರೂ, ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಿದ್ಧಪಡಿಸಿರುವ ವರದಿ, ನಗದು ಕೊರತೆ ಇರುವುದನ್ನು ತೋರಿಸುತ್ತಿದೆ. ಜಿಡಿಪಿ ಬೆಳವಣಿಗೆ ದರ, ಇದಕ್ಕೆ ಪೂರಕವಾಗಿ ಚಲಾವಣೆಯಲ್ಲಿ ಇರಬೇಕಾದ ನೋಟುಗಳ ಮೌಲ್ಯವನ್ನು ಲೆಕ್ಕಹಾಕಿ ದೇಶದಲ್ಲಿನ ನೋಟುಗಳ ಕೊರತೆಯು ₹ 70 ಸಾವಿರ ಕೋಟಿ ಆಗಿರಬಹುದು ಎಂದು ಎಸ್‌ಬಿಐ ಅಂದಾಜಿಸಿದೆ. ಈ ಮೊತ್ತವು ದೇಶದಲ್ಲಿ ಒಂದು ತಿಂಗಳಲ್ಲಿ ಎಟಿಎಂಗಳ ಮೂಲಕ ನಗದು ಪಡೆಯುವ ಒಟ್ಟು ಮೊತ್ತದ ಮೂರನೆಯ ಒಂದು ಭಾಗಕ್ಕೆ ಸಮ ಎನ್ನಲಾಗಿದೆ.

ಹೊಸದಾಗಿ ಮುದ್ರಿಸಿರುವ ₹ 200 ಮುಖಬೆಲೆಯ ನೋಟುಗಳನ್ನು ವಿತರಿಸಲು ಎಲ್ಲ ಎಟಿಎಂಗಳಲ್ಲಿ ಸೂಕ್ತ ಮಾರ್ಪಾಡು ಮಾಡಿಲ್ಲದಿರುವುದು ಕೂಡ ನಗದು ಲಭ್ಯತೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

ಚುನಾವಣೆ, ಡಿಜಿಟಲ್‌ ಪಾವತಿ ವ್ಯವಸ್ಥೆಗಳ ಬಳಕೆಯಲ್ಲಿ ಕುಸಿತ ಕೂಡ ನಗದು ಕೊರತೆಗೆ ಕಾರಣ ಆಗಿರಬಹುದೇ?

ಕರ್ನಾಟಕ ವಿಧಾನಸಭೆಗೆ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದೆ. ಚುನಾವಣೆ ಸಂದರ್ಭದಲ್ಲಿ ನಗದು ಹಣದ ಬಳಕೆ ಹೆಚ್ಚಿರುತ್ತದೆ, ಆ ಕಾರಣದಿಂದಾಗಿ ಕರ್ನಾಟಕದಲ್ಲಿ ಹಾಗೂ ಕರ್ನಾಟಕದ ನೆರೆಯ ರಾಜ್ಯಗಳ ಎಟಿಎಂಗಳಲ್ಲಿ ನಗದು ಕೊರತೆ ಕಂಡುಬಂದಿರಬಹುದು ಎಂಬ ವಾದ ಕೂಡ ಇದೆ. ಆದರೆ, ಈ ವಾದವನ್ನು ಪುಷ್ಟೀಕರಿಸುವಂತಹ ಅಂಕಿ–ಅಂಶಗಳು ಇಲ್ಲ. ಅಲ್ಲದೆ, ದೂರದ ಬಿಹಾರ, ರಾಜಸ್ಥಾನ ರಾಜ್ಯಗಳಲ್ಲಿ ಏಕೆ ನಗದು ಕೊರತೆ ಸೃಷ್ಟಿಯಾಗಿದೆ ಎಂಬ ಪ್ರಶ್ನೆಗೆ ಈ ವಾದ ಸಮರ್ಪಕ ಉತ್ತರ ನೀಡಲಾರದು.

ಆರ್‌ಬಿಐ ನೀಡಿರುವ ಅಂಕಿ–ಅಂಶಗಳನ್ನು ಆಧರಿಸಿ ಇಂಡಿಯಾಸ್ಪೆಂಡ್‌ ಜಾಲತಾಣ ಪ್ರಕಟಿಸಿರುವ ವರದಿಯೊಂದು ಇಲ್ಲಿ ಉಲ್ಲೇಖಾರ್ಹ. ನೋಟು ರದ್ದತಿ ನಂತರ, ಅಂದರೆ 2017ರ ಮಾರ್ಚ್‌ನಲ್ಲಿ, ಒಟ್ಟು ₹ 149.6 ಲಕ್ಷ ಕೋಟಿ ಮೊತ್ತದ ಡಿಜಿಟಲ್‌ ವಹಿವಾಟಿಗೆ ದೇಶ ಸಾಕ್ಷಿಯಾಗಿತ್ತು. ಆದರೆ ಡಿಜಿಟಲ್‌ ಪಾವತಿ ವ್ಯವಸ್ಥೆಗಳ ಮೂಲಕ ನಡೆದ ವಹಿವಾಟಿನ ಮೊತ್ತ ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ₹ 115.5 ಲಕ್ಷ ಕೋಟಿಗೆ ಕುಸಿದಿದೆ. ಡಿಜಿಟಲ್‌ ಪಾವತಿಗಳ ಮೊತ್ತ ಕುಸಿದಿರುವುದು, ಭಾರತದ ಜನ ನಗದು ಹಣದ ಮೇಲೆ ಮತ್ತೆ ಹೆಚ್ಚು ಅವಲಂಬಿತರಾಗಿರುವುದನ್ನು ಸೂಚಿಸುತ್ತಿರಬಹುದು. ಇದು ಕೂಡ ನಗದು ಕೊರತೆಗೆ ಒಂದು ಕಾರಣ ಆಗಿರಬಹುದು.

ಎಷ್ಟು ನಗದು ಹಣ ಬೇಕು ಎಂಬುದನ್ನು ಆರ್‌ಬಿಐ ಹೇಗೆ ತೀರ್ಮಾನಿಸುತ್ತದೆ?

ದೇಶದ ವಾರ್ಷಿಕ ನಗದು ಬೇಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಆರ್‌ಬಿಐ ಅಧಿಕಾರಿಗಳು ವರ್ಷಕ್ಕೊಮ್ಮೆ ಸಭೆ ಸೇರುತ್ತಾರೆ. ಆ ಹಂತದಲ್ಲಿ (ಸಭೆ ನಡೆಯುವ ಸಂದರ್ಭದಲ್ಲಿ) ಚಲಾವಣೆಯಲ್ಲಿರುವ ನೋಟುಗಳು, ನಾಶಪಡಿಸಿದ ನೋಟುಗಳು, ಡಿಜಿಟಲ್‌ ಪಾವತಿ ವ್ಯವಸ್ಥೆ ಮೂಲಕ ನಡೆಯುವ ವಹಿವಾಟುಗಳ ಮೊತ್ತ, ಹಣದುಬ್ಬರ ಹೆಚ್ಚಳದ ಅಂದಾಜು ಪ್ರಮಾಣ, ಜಿಡಿಪಿ ಬೆಳವಣಿಗೆ ದರದ ಅಂದಾಜು ಪ್ರಮಾಣಗಳನ್ನು ಗಮನದಲ್ಲಿ ಇರಿಸಿಕೊಂಡು ದೇಶಕ್ಕೆ ಎಷ್ಟು ಹೊಸ ನೋಟುಗಳು ಬೇಕು, ಅವುಗಳ ಮೌಲ್ಯ ಎಷ್ಟಿರಬೇಕು ಎಂಬುದನ್ನು ಆರ್‌ಬಿಐ ತೀರ್ಮಾನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT