ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಪರು ಪರೀಕ್ಷೆಗೆ ಒಪ್ಪದ ನವೀನ್

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್‌ ಕುಮಾರ್, ‘ಪೊಲೀಸರು ನನ್ನನ್ನು ಬಲವಂತವಾಗಿ ತಪಾಸಣೆಗೆ ಕರೆತಂದಿದ್ದಾರೆ’ ಎಂದು ಗುಜರಾತ್ ಎಫ್‌ಎಸ್‌ಎಲ್‌ ತಜ್ಞರಿಗೆ ಹೇಳುವ ಮೂಲಕ ಮಂಪರು ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ.

ಆತನನ್ನು ಮಂಪರು ಪರೀಕ್ಷೆಗೆ ಕರೆದೊಯ್ಯಲು ನ್ಯಾಯಾಲಯ ಮಾರ್ಚ್ 12ರಂದು ಅನುಮತಿ ನೀಡಿತ್ತು.

‘ಏ.15 ರಿಂದ ಏ.30ರ ನಡುವೆ ಯಾವಗಲಾದರೂ ಪರೀಕ್ಷೆಗೆ ಕರೆ ತನ್ನಿ’ ಎಂದು ಗುಜರಾತ್ ಎಫ್‌ಎಸ್‌ಎಲ್‌ ತಜ್ಞರು ಸೂಚಿಸಿದ್ದರಿಂದ, ಡಿಸಿಪಿ ಜೀನೇಂದ್ರ ಖಣಗಾವಿ ನೇತೃತ್ವದ ತಂಡ ಏ.14ರಂದೇ ಆತನನ್ನು ಅಲ್ಲಿಗೆ ಕರೆದೊಯ್ದಿತ್ತು.

ಅಲ್ಲಿ ಪರೀಕ್ಷೆಗೆ ಅಸಹಕಾರ ವ್ಯಕ್ತಪಡಿಸಿರುವ ನವೀನ್, ಪೊಲೀಸರು ಬಲವಂತದಿಂದ ಕರೆದುಕೊಂಡು ಬಂದಿರುವುದಾಗಿ ಹೇಳಿದ್ದಾನೆ. ಅದಕ್ಕೆ ಎಫ್‌ಎಸ್‌ಎಲ್‌ ತಜ್ಞರು, ‘ಆತನಿಗೆ ಇಷ್ಟವಿಲ್ಲದೆ ಪರೀಕ್ಷೆಗೆ ಒಳ‍ಪಡಿಸುವುದು ಸರಿಯಲ್ಲ. ಒಂದು ವೇಳೆ ಪರೀಕ್ಷೆ ಮಾಡಿದರೂ, ನಿಖರ ಫಲಿತಾಂಶ ಸಿಗುವುದಿಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ, ಪೊಲೀಸರು ಆರೋಪಿಯನ್ನು ನಗರಕ್ಕೆ ವಾಪಸ್ ಕರೆತಂದಿದ್ದಾರೆ.

‘ಮಂಪರು ಪರೀಕ್ಷೆಗೆ ಒಪ್ಪದಿದ್ದರೆ ನ್ಯಾಯಾಲಯ ಜಾಮೀನು ಮಂಜೂರು ಮಾಡುವುದಿಲ್ಲ ಎಂದು ಪೊಲೀಸರು ಹೆದರಿಸಿದ್ದರು. ಆ ಕಾರಣಕ್ಕಷ್ಟೇ ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದೆ. ನನಗೆ ಪರೀಕ್ಷೆಗೆ ಒಳಪಡಲು ಇಷ್ಟವಿಲ್ಲ. ದಯವಿಟ್ಟು ಎಸ್‌ಐಟಿ ತಂಡದೊಂದಿಗೆ ನನ್ನನ್ನು ಕಳುಹಿಸಬೇಡಿ’ ಎಂದು ನವೀನ್ ಏ.13ರಂದು ಜೈಲು ಅಧಿಕಾರಿಗಳಿಗೂ ಪತ್ರ ಬರೆದಿದ್ದ.

‘ಗೌರಿ ಹತ್ಯೆಗೆ ಸಂಚು ರೂಪಿಸಿದ್ದು ಹೇಗೆ? ಕೊಲೆ ಹಿಂದಿನ ಉದ್ದೇಶವೇನು? ಕೃತ್ಯದ ಹಿಂದೆ ಇನ್ನೂ ಯಾರ‍್ಯಾರು ಇದ್ದಾರೆ?.. ಸೇರಿದಂತೆ 15 ರಿಂದ 20 ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇತ್ತು. ಆದರೆ, ಅಲ್ಲಿಗೆ ಹೋಗುತ್ತಿದ್ದಂತೆಯೇ ನಾಟಕ ಶುರು ಮಾಡಿದ. ಸತತ ನಾಲ್ಕು ದಿನ ಮನವೊಲಿಸಿದರೂ ಪ್ರಯೋಜನವಾಗಿಲಿಲ್ಲ’ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT